ಹಿಂದಿನ ಬಿಜೆಪಿ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ, ಸಂಘ ಸಂಸ್ಥೆಗಳಿಗೆ ಧನ ಸಹಾಯ ಕ್ರಮ ಅತ್ಯಂತ ದೋಷ ಪೂರಿತವಾಗಿದ್ದು ಗೊಂದಲದ ಗೂಡಾಗಿದೆ. ಅದನ್ನು ಕೈಬಿಟ್ಟು ತಮ್ಮ ಹಿಂದಿನ ಸರಕಾರದ ಅವಧಿಯಲ್ಲಿ ಅನುಸರಿಸಿದ ಕ್ರಮವನ್ನೇ ಅನುಸರಿಸಲು ಸಂಭಂದ ಪಟ್ಟ ಸಚಿವರಿಗೆ ಮತ್ತು ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡ ಬೇಕೆಂದು ಕರ್ನಾಟಕ ರಾಜ್ಯ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟ (ರಿ) ಬೆಂಗಳೂರು ವತಿಯಿಂದ ಮನವಿ ಮಾಡಿಕೊಳ್ಳುತಿದ್ದೇವೆ. ನಾಡ ನುಡಿ, ಕಲೆ-ಸಂಸ್ಕೃತಿ ಸೇವೆ ಮಾಡಿಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದ ಸಂಘ ಸಂಸ್ಥೆಗಳಿಗೆ ಸರಕಾರವು ನೀಡುವ ಧನ ಸಹಾಯದ ಮೊತ್ತದಲ್ಲಿ ತಾರತಮ್ಯವಾಗಿದ್ದು, ಬಹುಸಂಖ್ಯೆಯಲ್ಲಿ ಸಂಘ ಸಂಸ್ಥೆಗಳಿಗೆ ಧನ ಸಹಾಯ ಲಭಿಸಿರುವುದಿಲ್ಲ. ಸಹಾಯ ಧನ ಬಿಡುಗಡೆಗೆ ಮುನ್ನ ಮೂರು ಕಾರ್ಯಕ್ರಮ ಆಯೋಜಿಸಲು ಹೇಳಿ, ಮೂರು ಕಾರ್ಯಕ್ರಮ ಸಂಘಟಿಸಿದೇ ಇದ್ದರೂ ಸಹಿತ ತಾವೇ ಮಾಡಿದ ನಿಯಮಾವಳಿ ಗಾಳಿಗೆ ತೂರಿ, ಧನ ಸಹಾಯ ನೀಡಲಾಗಿದೆ. ಹಿಂದಿನ ಬಿ.ಜೆ.ಪಿ. ಸರಕಾರದ ದೋಷಪೂರಿತ ನಿಯಮಾವಳಿಯಿಂದ ಅನೇಕ ಸಂಘ ಸಂಸ್ಥೆಗಳಿಗೆ ಅನ್ಯಾಯವಾಗಿದೆ. ಧನ ಸಹಾಯದ ತಾರತಮ್ಯ ನೀತಿಯನ್ನು ಪತ್ರಿಕೆಗಳು ಸರಕಾರದ ಗಮನ ಸೆಳೆದರೂ ಯಾವುದೇ ಕ್ರಮಜರುಗಿಸಿಲ್ಲ. ತಾವು ಮುಖ್ಯಮಂತ್ರಿಯಾಗಿದ್ದ ಹಿಂದಿನ ಸರಕಾರದ ಅವಧಿಯಲ್ಲಿ ಡಾ. ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀತಿ ರೂಪಿಸಲು ಸಮಿತಿ ರಚನೆ ಮಾಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರಿನಲ್ಲಿಯೂ ಬದಲಾವಣೆ ಮಾಡುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದನ್ನು ಸಂಘ ಸಂಸ್ಥೆಗಳು ಸ್ವಾಗತಿಸಿದ್ದವು ಕೂಡಾ. ಕಾರಣ, ತಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಂದು ಸ್ವರೂಪ ಕೊಟ್ಟು ಪ್ರಾಮಾಣಿಕ ಮತ್ತು ಸೇವಾ ಹಿರಿತನದ ಸಂಸ್ಥೆಗಳ ಹಿತರಕ್ಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಂಘ ಸಂಸ್ಥೆಗಳ ಒಕ್ಕೂಟವು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತಿದೆ. ನೀತಿ ನಿರೂಪಣೆಯಲ್ಲಿ ಸ್ಥಳೀಯಮಟ್ಟದಲ್ಲಿ ಆಗುವ ಅನ್ಯಾಯ ಪ್ರಾದೇಶಿಕ ತಾರತಮ್ಯ ಮತ್ತು ಧನ ಸಹಾಯ ಪಡೆಯುವುದಕ್ಕಾಗಿಯೇ ಹುಟ್ಟಿಕೊಂಡ ಸಂಸ್ಥೆಗಳ ಗುರುತಿಸುವಿಕೆಯಲ್ಲಿ ಆಗುತ್ತಿರುವ ಲೋಪಗಳ ಕುರಿತು, ತಾವು ಬಯಸಿದರೆ ನಮ್ಮ ಒಕ್ಕೂಟವು ಸಲಹೆ ನೀಡಲು ಸಿದ್ದವಿದೆ.ಮನವಿಗೆ ಸ್ಪಂದಿಸಲು ವಿನಂತಿಸಿದ್ದಾರೆ.