Thursday, August 21, 2025
Homeಪದೇ ಪದೇ ಮಗನಿಗೆ ಕಾಲ್ ಕೊಡು ಎನ್ನುವಾಗ ಕರುಳು ಕಿತ್ತು ಬರುತಿತ್ತು, ಅದಕ್ಕೇ ಅವರ ನಂಬರ್...

ಪದೇ ಪದೇ ಮಗನಿಗೆ ಕಾಲ್ ಕೊಡು ಎನ್ನುವಾಗ ಕರುಳು ಕಿತ್ತು ಬರುತಿತ್ತು, ಅದಕ್ಕೇ ಅವರ ನಂಬರ್ ಬ್ಲಾಕ್ ಮಾಡಿದ್ದೇನೆ

ಅದು ಕೆನರಾ ಬ್ಯಾಂಕ್ ನ ಕ್ಯಾಶ್ ಕೌಂಟರ್ ರಶ್ ಇತ್ತು. ಅಲ್ಲಿ ಒಬ್ಬರು ಸುಮಾರು 75 ವರ್ಷದ ಅಜ್ಜ ಕೈಯ್ಯಲ್ಲಿ ಚೀಟಿ ಯೊಂದನ್ನು ಹಿಡಿದು ಬಂದಿದ್ದರ. ಕ್ಯಾಶಿಯರ್ ಅವರ ಅಕೌಂಟ್ ಚೆಕ್ ಮಾಡಿದ 660 ರೂ ಮಾತ್ರ ಇತ್ತು. ಕಳೆದ 2 ತಿಂಗಳಿಂದ 15 ಲಕ್ಷದ ಹೋಂ ಲೋನ್ ನ 14,000 ರೂ EMI ಕಟ್ಟಿರಲಿಲ್ಲ ಆ ಮನುಷ್ಯ. ಕ್ಯಾಶಿಯರ್ ಸಿಟ್ಟಲ್ಲಿದ್ದ.. “ಏನಜ್ಜ, 2 ತಿಂಗಳಿಂದ EMI ಕಟ್ಟಿಲ್ಲ ಅಕೌಂಟ್ ಅಲ್ಲಿ ಹಣ ಇಲ್ಲ ಏನಾಗಿದೆ ನಿಮಗೆ?” ಮತ್ತೆ ಕೂಗಿದ.. “ನೋಡಿ ಮಗ ಅಕೌಂಟ್ ಗೆ ಹಣ ಹಾಕಿರ್ತಾನೆ ಚೆಕ್ ಮಾಡಿ” ಅಜ್ಜ ಮೆಲ್ಲಗೆ ಹೇಳಿದಾಗ ಈ ಬಾರಿ ಕ್ಯಾಶಿಯರ್ ನ ಬಿಪಿ ಏರಿತ್ತು..
“ನೋಡಿ ಅಜ್ಜ ಆಗ ದಿಂದ ಹೇಳಿದ್ದೇ ಹೇಳುತ್ತೀರಲ್ವ, ತಲೆ ಸರಿ ಇಲ್ವಾ?, ಮಗ ಹಣ ಹಾಕಿಲ್ಲ, ಅಕೌಂಟ್ ಅಲ್ಲಿ ಹಣ ಇಲ್ಲ.. ಎಲ್ಲೆಲ್ಲಿಂದ ಬರ್ತೀರಾ ನೀವೆಲ್ಲ ?”….ಈ ಬಾರಿ ಜೋರಾಗಿ ಕೂಗಿದ. ಆ ಸ್ವರ ಇಡೀ ಬ್ಯಾಂಕ್ ಗೆ ಪ್ರತಿಧ್ವನಿಸಿತ್ತು. ಎಲ್ಲರೂ ಆ ವೃದ್ಧರನ್ನು ಅಸಹ್ಯವಾಗಿ ಕಂಡರು
ವೃದ್ಧರಿಗೂ ನಾಚಿಕೆಯಾಗಿದ್ದು, ಅಲ್ಲೇ ಸೈಡ್ ಗೆ ಹೋಗಿ ತಮ್ಮ ಮೊಬೈಲ್ ಅಲ್ಲಿ ಮಗನ ಸಂಖ್ಯೆಗೆ ಕಾಲ್ ಮಾಡುತಿದ್ದರು.. ಕಾಲ್ ತಾಗುತ್ತಿರಲಿಲ್ಲ. ಕ್ಯಾಶಿಯರ್ ನ ಸಿಟ್ಟು ತಗ್ಗಿರಲಿಲ್ಲ. “ನೋಡಿ ಅಜ್ಜ ನಿಮ್ಮ ಹೋಂ ಲೋನ್ ಮುಗಿಯಲು 7 ಒಟ್ಟು ಕಂತು ಬಾಕಿ ಇದೆ, ಈಗಾಗಲೇ 2 ಕಂತು ಕಟ್ಟಿಲ್ಲ, ಮುಂದಿನ ತಿಂಗಳು ಕಟ್ಟದಿದ್ದಲ್ಲಿ ಮನೆ ಜಪ್ತಿ ಮಾಡುತ್ತೇವೆ ನೋಡಿ, ಆಗಲೇ ನಿಮ್ಮಂಥವರಿಗೆ ಬುದ್ದಿ ಬರುವುದು” ಎಂದ ಸಿಟ್ಟಲ್ಲಿ.
‌ ‌ ‌ ‌ ಅಜ್ಜನ ಕಣ್ಣುಗಳು ಮಂಜಾಗಿದ್ದವು ಮತ್ತೆ ಮತ್ತೆ ಅದೇ ನಂಬರ್ ಗೆ ಕಾಲ್ ಮಾಡುತಿದ್ದರು ಅವರು .. ಇದನ್ನೆಲ್ಲಾ ವೀಕ್ಷಿಸುತಿದ್ದ ಅದೇ ಬ್ಯಾಂಕಿನ ಸಹೋದ್ಯೋಗಿಯೊಬ್ಬರು ಅಜ್ಜನಲ್ಲಿ ಬಂದರು.. ಅಜ್ಜನನ್ನು ಪಕ್ಕಕ್ಕೆ ಕರೆಸಿ ಅಜ್ಜನಲ್ಲಿ ಮಗನ ನಂಬರ್ ಕೇಳಿ ತಮ್ಮ ಫೋನ್ ಅಲ್ಲಿ ರಿಂಗ್ ಮಾಡಿದಾಗ ಆಶ್ಚರ್ಯ ಎಂಬಂತೆ ಫೋನ್ ರಿಂಗ್ ಆಗಿತ್ತು
ಹಲೋ ಎಂಬ ಹೆಂಗಸಿನ ಧ್ವನಿ ಅವರನ್ನು ಆಶ್ಚರ್ಯ ಗೊಳಿಸಿತ್ತು. ಅಜ್ಜ ಇದು ಮಗನ ನಂಬರ್ ಎಂದಿದ್ದರು. ತಕ್ಷಣ ಅವರು ಅಜ್ಜನ ವಿಷಯ ತಿಳಿಸಿದರು… ಆ ಹೆಂಗಸಿನ ಧ್ವನಿ ಬದಲಾಗಿತ್ತು ಆಕೆ ಅಳುತಿದ್ದಳು. ಒಂದು ಕ್ಷಣ ಸ್ತಬ್ದ ವಾಗಿದ್ದು. ಆಕೆ ಮುಂದುವರಿಸಿದಳು… “ಹಾ ನಾನು ರೂಪ, ಅವರು ನಮ್ಮ ಮಾವ.. ನನ್ನ ಗಂಡನ ತಂದೆ, ಅಲ್ಲಿ ಅವರ ಮನೆ ಕಟ್ಟಿದ್ದು, ತಂದೆ ತಾಯಿಯರನ್ನು ನೋಡಿ ಕೊಂಡಿದ್ದು, ಮನೆ ನೋಡಿ ಕೊಂಡಿದ್ದು, ಮನೆಯ ಹೋಂ ಲೋನ್ ಕಟ್ಟುತಿದ್ದದ್ದು ಎಲ್ಲವೂ ನನ್ನ ಗಂಡನೇ, ಆದರೆ ಕಳೆದ ತಿಂಗಳ ಹಿಂದೆ ನನ್ನ ಸಮು(ಸಮನ್ವಯ್ ).. ಬೈಕ್ ಆಕ್ಸಿಡೆಂಟ್ ಅಲ್ಲಿ ತೀರಿಕೊಂಡರು” … ಆಕೆಯ ಅಳು ಜೋರಾಗಿತ್ತು… “ಜೀವನದ ಕೊನೆ ತನಕ ನನ್ನೊಂದಿಗೆ ಇರುತ್ತೇನೆ ಎಂದವರು ಅರ್ಧಕ್ಕೆ ನೆನಪುಗಳು ಹಾಗೂ ನೋವುಗಳನ್ನಷ್ಟೇ ಬಿಟ್ಟು ಹೊರಟು ಹೋದರು” ಎನ್ನುವಾಗ ಆಕೆಯ ಅಳು ಮತ್ತಷ್ಟು ಜೋರಾಗಿತ್ತು…. “ಹಾ ನಮ್ಮ ಮಾವನವರಿಗೆ ಅವರು ಒಬ್ಬನೇ ಮಗ, ಈಗ ಯಾರೂ ಇಲ್ಲ ಅವರಿಗೆ, ಮಗ ಸತ್ತದ್ದು, ಮಗ ಇಲ್ಲ ಎನ್ನುವುದು ಯಾವುದೂ ನೆನಪಿಲ್ಲ ಅವರಿಗೆ… ಪದೇ ಪದೇ ಮಗನ ನಂಬರ್ ಗೆ ಫೋನ್ ಮಾಡುತಿದ್ದರು, ನನ್ನ ಎಲ್ಲಾ ಚಿನ್ನ ಬ್ಯಾಂಕಲ್ಲಿಟ್ಟಿದ್ದರು, ಆ ಮನೆಯ ಲೋನ್ ತೀರಿಸಲು, ಕೇಳಿದರೆ ನಿನ್ನ ಚಿನ್ನ ನಾನೇ ಇದ್ದೀನಲ್ಲ ಎನ್ನುತಿದ್ದರು… ಈಗ ಅವರೂ ಇಲ್ಲ ಚಿನ್ನವೂ ಇಲ್ಲ ,ಕಳೆದ 14 ವರ್ಷಗಳಿಂದ ಒಂದೇ ಒಂದು EMI ತಪ್ಪಿಸಿರಲಿಲ್ಲ ಈಗ ಅವರೇ ಇಲ್ಲ, ರಾಣಿ ತರ ಇದ್ದ ನನ್ನ ಜೀವನ ಹಾಳಾಗಿದೆ, ನಾನೀಗ ಇಬ್ಬರು ಮಕ್ಕಳೊಂದಿಗೆ ತವರು ಮನೆಯಲ್ಲಿದ್ದೇನೆ, ನನ್ನ ಮುಂದೆ ಮಕ್ಕಳ ಹಾಗೂ ನನ್ನ ಭವಿಷ್ಯವಿದೆ ಹಾಗಾಗಿ ಮಾವನವರಿಗೆ ನಾನೇನೂ ಮಾಡಲಾಗುತ್ತಿಲ್ಲ ಪದೇ ಪದೇ ಮಗನಿಗೆ ಕಾಲ್ ಕೊಡು ಎನ್ನುವಾಗ ಕರುಳು ಕಿತ್ತು ಬರುತಿತ್ತು, ಅದಕ್ಕೇ ಅವರ ನಂಬರ್ ಬ್ಲಾಕ್ ಮಾಡಿದ್ದೇನೆ” ಎನ್ನುವಾಗ ಆಕೆಯ ಅಳು ಮತ್ತಷ್ಟು ಹೆಚ್ಚಿತ್ತು . ಮತ್ತೆ ಮಾತಾಡುವ ಧೈರ್ಯ ಫೋನ್ ಮಾಡಿದವರಿಗೂ ಇರಲಿಲ್ಲ. ಅಷ್ಟರಲ್ಲಿ ಫೋನ್ ಕಟ್ ಆಗಿತ್ತು.. ಆ ಸಹೋದ್ಯೋಗಿಯ ಕಣ್ಣಲ್ಲೂ ನೀರಿತ್ತು. ಫೋನ್ ಹಿಡಿದು ಮಾತನಾಡುತ್ತಾ ಹೊರಗೆ ಬಂದ ಆತ ಒಳ ಹೋಗುತಿದ್ದಂತೆ ಬಾಗಿಲ ಬಳಿ ಕಾಯುತಿದ್ದ ವೃದ್ಧರು ” ಮಗ ಏನಂದ? “ಎನ್ನುತಿದ್ದರು ತೀವ್ರ ಕುತೂಹಲ ದಿಂದ..”ಬನ್ನಿ ಸರ್” ಎಂದು ಅವರನ್ನು ತಮ್ಮ ಕೌಂಟರ್ ನತ್ತ ಕರೆದೊಯ್ದರು ಇವರು..
ಮತ್ತೆ ಅಜ್ಜ ಬ್ಯಾಂಕ್ ನತ್ತ ಬಂದದ್ದು ನೋಡಿ ಆ ಕ್ಯಾಶಿಯರ್ ಗೆ ಸಿಟ್ಟು ಉಕ್ಕುತಿತ್ತು… ಸಹೋದ್ಯೋಗಿ ಕೇಳಿದ ಅವನಲ್ಲಿ… “ಅಜ್ಜನ ಲೋನ್ ಸ್ಟೇಟ್ಮೆಂಟ್ ಕೊಡಿ”ಎಂದು.. ಅಜ್ಜ ಮತ್ತೆ ಕೇಳಿದರು “ಸರ್ ಮಗ ಏನಂದ?”, ಈ ಬಾರಿ ಅವರ ಕಣ್ಣುಗಳಲ್ಲಿ ಆತಂಕವಿತ್ತು..

ಸ್ಟೇಟ್ಮೆಂಟ್ ಮೇಲೆ ಕಣ್ಣಾಡಿಸಿದ ಬ್ಯಾಂಕ್ ಸಹೋದ್ಯೋಗಿ..15 ಲಕ್ಷದ 15 ವರ್ಷದ ಲೋನ್ ಅದಾಗಿತ್ತು. 6 ತಿಂಗಳಷ್ಟೇ ಬಾಕಿ ಇತ್ತು, 2 ತಿಂಗಳು ಕಟ್ಟಿರಲಿಲ್ಲ.. ಕ್ಯಾಲ್ಕುಲೇಟರ್ ಹಿಡಿದು ಲೆಕ್ಕ ಹಾಕಿದರು, ಬಡ್ಡಿ ಕೂಡಿ 98ಸಾವಿರ ಅಷ್ಟೇ ಬಾಕಿ ಇತ್ತು. .. ನಗುತ್ತಾ ಅಜ್ಜನಲ್ಲಿ ಹೇಳಿದರು.. “ಅಯ್ಯೋ ಅಜ್ಜ ನಿಮ್ಮ ಮಗ ಈಗಷ್ಟೇ ಹಣ ಹಾಕಿದರು.. ನಿಮಗೆ ಇನ್ನೊಂದು ಗುಡ್ ನ್ಯೂಸ್ ಇದೆ ನಿಮ್ಮ ಬಾಕಿ ಇರುವ ಕಂತಿನ ಹಣವನ್ನು ಒಟ್ಟಾಗಿ ಹಾಕಿದ್ದಾನೆ, ನಿಮ್ಮ ಲೋನ್ ಕ್ಲೋಸ್ ಆಗಿದೆ, ನೀವಿನ್ನು ನಿಶ್ಚಿಂತೆಯಲ್ಲಿ ಮನೆಗೆ ಹೋಗಬಹುದು, ಲೋನ್ ಕ್ಲೀಯರೆನ್ಸ್ ಸರ್ಟಿಫಿಕೇಟ್ ಬ್ಯಾಂಕ್ ನಿಮ್ಮ ಮನೆಗೆ ಕಳಿಸುತ್ತದೆ”.. ಎಂದಾಗ ಅಜ್ಜ ನ ಆತಂಕದ ಮುಖದಲ್ಲಿ ನಗುವಿತ್ತು ಕೈ ಮುಗಿದು ನಿಂತರು…ತುಂಬಾ “ಉಪಕಾರ ಆಯಿತು ಸರ್” ಎಂದಾಗ, “ಉಪಕಾರ ನನಗಲ್ಲ ನಿಮ್ಮ ಮಗನಿಗೆ ಹೇಳಿ” ಎಂದು ನಕ್ಕರು ಆ ಸಹೋದ್ಯೋಗಿ .. ಅಜ್ಜ ನ ಮುಖದಲ್ಲಿ ಗೆಲುವಿನ ನಗುವಿತ್ತು..
ಅಲ್ಲೇ ಇದ್ದ ಕ್ಯಾಶಿಯರ್ ಈ ಬಾರಿ, ಭಾರಿ ಸಿಟ್ಟಲ್ಲಿದ್ದ ತನ್ನ ಸಹೋದ್ಯೋಗಿ ಮೇಲೆ.. “ನಿಂಗೇನು ಹುಚ್ಚು ಹಿಡಿದಿದ, ಹಣ ಅವರ ಮಗ ಹಾಕೇ ಇಲ್ಲ” ಎಂದಾಗ ಕೂಲ್ ಅಲ್ಲಿ ಉತ್ತರಿಸಿದ ಈತ.. ಈ ಬಾರಿ ಪೂರ್ತಿ ಬ್ಯಾಂಕ್ ಸಹೋದ್ಯೋಗಿ ಗಳು ನೋಡುತ್ತಿದ್ದುದು ಒಳಗಿಂದ ಮ್ಯಾನೇಜರ್ ಕೂಡಾ ಕೇಳುತ್ತಿದ್ದುದು ಗೊತ್ತಿತ್ತು ಆತನಿಗೆ ಈ ಬಾರಿ ಆತನ ಸ್ವರ ಜೋರಾಗಿತ್ತು…
ಕಿಸೆಯಲ್ಲಿದ್ದ,7000 ಟೇಬಲ್ ಮೇಲೆ ಇಟ್ಟಿದ್ದ ಈತ ಹೀಗೆ ಹೇಳಿದ “ನನಗೆ ಹುಚ್ಚು ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ತೀರಿಹೋಗಿದ್ದ ಮಗ ಇದ್ದಾನೆಂದು ಭಾವಿಸಿ ,ಆ ತಂದೆ ಮಗನ ಮೇಲೆ ಇಟ್ಟಿರುವ ವಿಶ್ವಾಸವನ್ನು ಆ ಕ್ಷಣದಲ್ಲಿ ಉಳಿಸುವುದು, ಆ ತಂದೆಯ ಕಣ್ಣು ಗಳಲ್ಲಿ ಇದ್ದ ಆಸೆಯನ್ನು ಹಾಗೇ ಉಳಿಸುವುದಷ್ಟೇ ಆ ಸಂದರ್ಭದಲ್ಲಿ ನನ್ನೆದುರಿದ್ದ ಸವಾಲಾಗಿತ್ತಯಾಕೆಂದರೆ ಆತ ನನ್ನೆದುರು ಕೇವಲ ಒಬ್ಬ ತಂದೆಯಾಗಿದ್ದ, ಯಾರ ತಂದೆ ಎನ್ನುವುದು ಮುಖ್ಯವಾಗಿರಲಿಲ್ಲ, ಮಗನ ಮೇಲಿಟ್ಟಿದ್ದ ಆ ವಿಶ್ವಾಸ ಉಳಿಸಿದ್ದು ಅದಕ್ಕೇ ಪ್ರತಿಯಾಗಿ ಆ ತಂದೆಯ ಕಣ್ಣಲ್ಲಿದ್ದ ಆ ಸಂತೋಷದೆದುರು, ಲಕ್ಷ ರೂಪಾಯಿ ಬಹಳ ಚಿಕ್ಕದಾಗಿತ್ತು ನನಗೆ, ನಾನು ಮಾಡಿದ ಕೆಲಸದಿಂದ ನಂಗೆ ಸಿಕ್ಕಿದ ನೆಮ್ಮದಿ ಬಹುಶಃ ಕೋಟಿ ರೂಪಾಯಿ ಸಿಕ್ಕಿದ್ದರೂ ನನಗೆ ಸಿಗಲು ಸಾಧ್ಯವೇ ಇಲ್ಲ ಎನ್ನಿಸಿತ್ತು” ಎಂದವನೇ ಮಿಕ್ಕುಳಿದ 90,000 ದ ಚೆಕ್ ಕೊಡಲು, ಚೆಕ್ ಬುಕ್ ತರಲು ಹೊರಗಡೆ ಹೋದ.. ಆತ ಚೆಕ್ ಪುಸ್ತಕ ತರುವಾಗ 20/22 ಜನರಿರುವ ಬ್ಯಾಂಕ್ ನ ಎಲ್ಲಾ ಸಿಬ್ಬಂದಿಗಳು ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ದರು ಅಲ್ಲಿ, ಅಷ್ಟರಲ್ಲಿ ಅವನ ಟೇಬಲ್ ಮೇಲೆ ಒಂದಷ್ಟು ಹಣ ತಂದು ಇಟ್ಟಿದ್ದರು ಸಿಬ್ಬoದಿಗಳು.. ಲೆಕ್ಕ ಮಾಡಿದ 17 ಜನ ಸಿಬ್ಬಂದಿಗಳು ಒಟ್ಟು ಬರೋಬ್ಬರಿ 73,000ರೂ ಇಟ್ಟಿದ್ದರು ಅಷ್ಟರಲ್ಲಿ ಆಗ ವೃದ್ಧರಿಗೆ ಬೈದಿದ್ದ ಕ್ಯಾಶಿಯರ್ 7000 ಕೊಟ್ಟಿದ್ದ, ಆಗ ಅಸಹಾಯಕ ವೃದ್ಧರಿಗೆ ಬೈದಿದ್ದ ಅವನ ಕಣ್ಣಲ್ಲಿ ಪಶ್ಚತ್ತಾಪದ ಕಣ್ಣೀರಿತ್ತು.
ಒಟ್ಟು ತನ್ನ 7000 ಕೂಡಿ 87000 ಸಂಗ್ರಹ ವಾಗಿತ್ತು, ಚೆಕ್ ತೆರೆದು ಉಳಿದ 11,000 ಬರೆಯಲು ಪೆನ್ನು ತೆಗೆದವನ ಹೆಗಲ ಮೇಲೆ ಕೈಯೊಂದು ಬಂತು, ತಿರುಗಿ ನೋಡಿದ ಅಲ್ಲಿ ಬ್ರಾಂಚ್ ಮ್ಯಾನೇಜರ್ ನಿಂತಿದ್ದರು, “ನನ್ನನ್ನು ಬಿಟ್ಟು ನೀವೇ ಎಲ್ಲಾ ಪುಣ್ಯ ಹಂಚಿಕೊಂಡರೆ ಹೇಗೆ ?ನನ್ನದೂ ಸ್ವಲ್ಪ ಪುಣ್ಯ ಇರಲಿ ಎಂದವರೇ 11,000 ಕೊಟ್ಟು ಚೆಕ್ ಪುಸ್ತಕ ಮಡಚಿ ಅವನ ಕಿಸೆಯೊಳಗೆ ಇಟ್ಟು ಬಿಟ್ಟರು .. “ಒಟ್ಟಿನಲ್ಲಿ
ಆ ತಂದೆ ಮಗನ ಮೇಲೆ ಇಟ್ಟಿದ್ದ ವಿಶ್ವಾಸವನ್ನು ಎಲ್ಲಾ ಒಟ್ಟಾಗಿ ಉಳಿಸಿ ಬಿಟ್ಟಿದ್ದರು…”

ಸಹಾಯ ಮಾಡುವ ಅವಕಾಶ ಭಗವಂತ ಪ್ರತಿಯೊಬ್ಬನಿಗೂ ಒದಗಿಸುತ್ತಾನೆ ಆ ಕ್ಷಣ ಉಪಯೋಗಿಸಿಕೊಂಡವನಿಷ್ಟೇ ಅದರ ನಿಜ ಸುಖದ ಅನುಭವವಾಗಲಿದೆ. ಇಲ್ಲಿ ಆ ಬ್ಯಾಂಕ್ ಸಹೋದ್ಯೋಗಿಗಳಿಗೆ ಆ ಕ್ಷಣ ಒದಗಿದೆ..
‌ ‌ ‌ ದಯವಿಟ್ಟು ನಿಮ್ಮ ಬ್ಯಾಂಕ್ ಗೆ ಬರುವ ಹಿರಿಯ ಜೀವಗಳಿಗೆ ನಿರಾಸೆ ಮಾಡಬೇಡಿ, ಅವಮಾನ ಮಾಡಲೇಬೇಡಿ. ಯಾಕೆಂದರೆ, ನಿಮ್ಮಲ್ಲಿ ಬರುವ ಹಿರಿಯ ಜೀವಗಳಿಗೆ ನೀವು ಕೊಡುವ ಆ ಹಣದ ಅವಶ್ಯಕತೆ ಅದೆಷ್ಟು ಇರುತ್ತದೋ ಯಾರಿಗೆ ಗೊತ್ತು ಅಲ್ಲವೇ?
ಆತ ಕೊಳೆಯಾದ ಅಂಗಿ, ಕೊಳೆಯಾದ ಪ್ಯಾಂಟ್, ಪೈಜಾಮ, ಲುಂಗಿ, ಹರಿದ ಚಪ್ಪಲಿ, ಚಪ್ಪಲಿ ಇಲ್ಲದ ಕಾಲು, ಹೇಗೇ ಬಂದಿರಲಿ ಪ್ರೀತಿಯಿಂದ ಸೌಜನ್ಯದಿಂದ ಮಾತಾಡಿ.. ಫಾರಂ ಫಿಲ್ ಮಾಡಲು ನೆರವಾಗಿ… ಯಾಕೆಂದರೆ….

“ನೆನಪಿರಲಿ….”ಯಾರದ್ದಾದರೇನು ? ತಂದೆ..ತಂದೆಯೇ ಅಲ್ಲವೇ??
~ ಜಯಲಕ್ಷ್ಮಿ.(ಇದು ನಿಜವೋ ಅಥವಾ ಕಥೆಯೋ ಗೊತ್ತಿಲ್ಲ.ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುತ್ತಿದೆ ಅದನ್ನು ಯಥಾವತ್ತಾಗಿ ಪ್ರಕಟಿಸಿದ್ದೇನೆ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments