ಸಂವಿಧಾನ ಜಾರಿಯಾದ ಬಳಿಕ ಭಾರತದಲ್ಲಿ ಅಧಿಕೃತವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಯಿತು. ಬುದ್ಧ, ಬಸವಣ್ಣನವರ ಕಾಲದಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ನೆಲದಲ್ಲಿ ರೂಪುಗೊಂಡಿದೆ. ಸಂವಿಧಾನ ಜಾರಿ ಆಗುವ ಸಂದರ್ಭದಲ್ಲಿ ಪಾರ್ಲಿಮೆಂಟಿನಲ್ಲಿ ನಡೆದ ಚರ್ಚೆಗಳು ನಮ್ಮ ಸಂವಿಧಾನದ ಮಹತ್ವಕ್ಕೆ ಮತ್ತು ಸಂವಿಧಾನ ವಿರೋಧಿಗಳ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ.
ಪ್ರಜಾಪ್ರಭುತ್ವವು ತನ್ನ ಎಲ್ಲಾ ಪ್ರಜೆಗಳಿಗೆ ಸಮಾನ ಭಾಗವಹಿಸುವಿಕೆಯ ಅವಕಾಶ ಕಲ್ಪಿಸಿ, ಪ್ರತಿಯೊಬ್ಬರ ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಒಂದು ಅತ್ಯುತ್ತಮ ಆಡಳಿತ ಮಾರ್ಗ. ಪ್ರಜೆಗಳು, ಪ್ರಜೆಗಳಿಗಾಗಿ, ಪ್ರಜೆಗಳಿಂದಲೇ ನಿರ್ಮಾಣಗೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಈ ದಿನ ನಾವೆಲ್ಲ ಕೂಡಿ ಸಂಕಲ್ಪ ಮಾಡೋಣ. ಪ್ರಜಾಪ್ರಭುತ್ವದ ಗೆಲುವಿನಲ್ಲಿ ಭಾರತದ ಗೆಲುವನ್ನು ಕಾಣೋಣ.
ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ನಾಶಗೊಳಿಸಿ ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ. ಈ ಬಗ್ಗೆ ಎಚ್ಚರ ಮತ್ತು ಜಾಗೃತಿ ಇರಬೇಕು. ಸಂವಿಧಾನದ ನಾಶ ಮತ್ತು ಮನುಸ್ಮೃತಿಯ ಜಾರಿ ಎಂದರೆ ಶೇ.90 ರಷ್ಟು ಭಾರತೀಯರನ್ನು ಮತ್ತೆ ಗುಲಾಮಗಿರಿಗೆ ತಳ್ಳುವುದಾಗಿದೆ. ಇದಕ್ಕಾಗಿ ಬಹಳ ಕುತಂತ್ರಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರು ಹೇಳಿದರು.