(ಅಡಿಕೆ ಪತ್ರಿಕೆ ಅಕ್ಟೋಬರ್ 2023 I ಡಾ. ಮೋಹನ್ ತಲಕಾಲಕೊಪ್ಪ)
ಮೇಘಾಲಯ ವಿಜ್ಞಾನಿಗಳ ತಂಡ ಅಡಿಕೆ ಸಿಪ್ಪೆಯ ನಾರಿನಿಂದ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ತಯಾರಿಯಲ್ಲಿ ಭರವಸೆಯ ಹೆಜ್ಜೆಯಿಟ್ಟಿದೆ. ನಮ್ಮಲ್ಲಿ ಕೊಳೆತು ಮಣ್ಣಿಗೆ ಸೇರುವ ಅಡಿಕೆ ಸಿಪ್ಪೆಯನ್ನು ಇನ್ನಷ್ಟು ಒಳ್ಳೆಯ ಉಪಯೋಗಕ್ಕೆ ಹಚ್ಚುವ ಯತ್ನ ಗಂಭೀರವಾಗಿ ನಡೆಯಬೇಕಿದೆ.
ಆ ಎರಡು ಕೋಟು ಮತ್ತು ಚೀಲವನ್ನು ಕಂಡು ನಿಬ್ಬೆರಗಾಗಿ ಹೋದೆ. “ಯಾವ ಕಚ್ಚಾ ವಸ್ತುವಿನಿಂದ ಇವನ್ನು ಮಾಡಿದ್ದೀರಿ ಅಂದಿರಿ” ಅಂತ ಒಂದೇ ಪ್ರಶ್ನೆಯನ್ನು ಮತ್ತೆಮತ್ತೆ ಕೇಳಿದೆ.
“ಅಡಿಕೆ ಸಿಪ್ಪೆ ಸರ್, ನೋಡಿ ಈ ವಸ್ತು ನಿಮಗೆ ಗೊತ್ತಿರಬೇಕಲ್ಲಾ”, ಅನ್ನುತ್ತಾ ಆ ಯುವವಿಜ್ಞಾನಿ ಅಲ್ಲಿದ್ದ ಅಡಿಕೆ ಸಿಪ್ಪೆಯ ಒಂದು ಬುಟ್ಟಿಯನ್ನು ಎತ್ತಿ ನನ್ನೆದುರು ಹಿಡಿದರು.
ಇದು ನಡೆದದ್ದು ಮೇಘಾಲಯದ ತುರದಲ್ಲಿ. ನಮ್ಮ ಗೇರು ಸಂಶೋಧನಾ ಕೇಂದ್ರದ ವತಿಯಿಂದ ಅಲ್ಲಿನ ಸಮುದಾಯ ವಿಜ್ಞಾನ ಕಾಲೇಜಿನಲ್ಲಿ ಗೇರು ಕೃಷಿ ತರಬೇತಿ ಇತ್ತು. ಬಿಡುವು ಸಿಕ್ಕಾಗ ಕಾಲೇಜಿನ ವಿವಿಧ ವಿಭಾಗಗಳಿಗೆ ಭೇಟಿ ಮಾಡಿದ್ದೆ.
ಡಾ. ಅನುಪಮಾ ಮಿಶ್ರರ ಸ್ಪಿನ್ನಿಂಗ್ ಮತ್ತು ವೀವಿಂಗ್ ಘಟಕ ಅದು. ಅಡಿಕೆ ಸಿಪ್ಪೆಯ ನಾರಿನಿಂದ ತಯಾರಾದ ಹಲವಾರು ಉತ್ಪನ್ನಗಳನ್ನು ತೋರಿಸಿದರು. ಕೋಟು, ಬೆನ್ನಿಗೆ ಹಾಕುವ ಚೀಲ, ಪರ್ಸ್, ಸ್ಯಾನಿಟರಿ ನ್ಯಾಪ್ಕಿನ್, ಡೋರ್ ಮ್ಯಾಟ್ ಇತ್ಯಾದಿ. ಈ ರೀತಿಯ ಉತ್ಪನ್ನಗಳನ್ನು ನಾನು ಆ ವರೆಗೆ ನೋಡಿರಲಿಲ್ಲ!
“ಅಡಿಕೆ ಸಿಪ್ಪೆಯ ನಾರನ್ನು ಮೂರು ಮುಖ್ಯ ಉದ್ದೇಶಗಳಿಗೆ ಬಳಸಿದ್ದೇವೆ. ವಸ್ತ್ರ, ಸಂಯುಕ್ತ ವಸ್ತುಗಳು ಹಾಗೂ ಇನ್ನಿತರ ಉಪಯೋಗಗಳಿಗೆ”, ಡಾ. ಅನುಪಮಾ ವಿವರಿಸಿದರು. ಇವರು ಈ ಕಾಲೇಜಿನ ಬಟ್ಟೆ ಮತ್ತು ಸಿದ್ಧ ಉಡುಪು ತಯಾರಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್. ಕಾಲೇಜು ಕೆಲಸ ಮಾಡುವುದು ಕೇಂದ್ರೀಯ ಕೃಷಿವಿವಿ, ಇಂಫಾಲದಡಿಯಲ್ಲಿ.
ಅಸ್ಸಾಂ, ಮೇಘಾಲಯ, ಮಣಿಪುರ ಮುಂತಾದ ಪೂರ್ವಾಂಚಲ ರಾಜ್ಯಗಳಲ್ಲಿ ಅಡಿಕೆ ಗಮನಾರ್ಹ ಬೆಳೆ. ಮೇಘಾಲಯದ ಈಸ್ಟ್ ಕಾಸಿ ಬೆಟ್ಟಗಳು, ಜೈಂಟಿಯಾ ಬೆಟ್ಟಗಳು, ಪಶ್ಚಿಮ ಗಾರೋ ಹಾಗೂ ಪೂರ್ವ ಗಾರೋ ಬೆಟ್ಟಗಳಲ್ಲೂ ಅಡಿಕೆ ಬೆಳೆಯುತ್ತದೆ. ತುರಾ ಇರುವುದು ಪಶ್ಚಿಮ ಗಾರೋ ಬೆಟ್ಟ ಪ್ರದೇಶದಲ್ಲಿ.
ನಮ್ಮಲ್ಲಿರುವಂತಹ ವ್ಯವಸ್ಥಿತ ಕೃಷಿ ಅಲ್ಲಿಲ್ಲ. ಆದರೆ, ಬಹು ಕಡಿಮೆ ನಿಗಾದಲ್ಲಿ ಸಾಕಷ್ಟ್ಟು ಅಡಿಕೆ ಬೆಳೆಯುತ್ತದೆ. ಅದನ್ನು ಮುಖ್ಯವಾಗಿ ತಿನ್ನಲು ಮತ್ತು ಸ್ವಲ್ಪ ಔಷಧಿ, ಬಣ್ಣ ತಯಾರಿಕೆಗೆೆ ಬಳಸುತ್ತಾರೆ.
ನಮ್ಮಲ್ಲಿನ ಹಾಗೆ ಸಿಪ್ಪೆಯನ್ನು ಎಸೆಯುತ್ತಾರೆ ಅಥವಾ ಸುಡುತ್ತಾರೆ. ಸ್ವಲ್ಪ ಉರುವಲಿಗೆ ಬಳಸುತ್ತಾರೆ. ರಸ್ತೆ ಬದಿ ಬಿದ್ದು, ಕೊಳೆತು ಮಣ್ಣು ಸೇರುವ ಸಿಪ್ಪೆ ಕಡಿಮೆಯೇನಲ್ಲ. ಇದನ್ನು ಗಮನಿಸಿ ಅಡಿಕೆ ಸಿಪ್ಪೆಯ ಸದುಪಯೋಗದ ನಿಟ್ಟಿನಲ್ಲಿ ಡಾ. ಮಿಶ್ರಾ ತಂಡ ಕೆಲಸ ಮಾಡುತ್ತಿದೆ.
ಪರಿಸರಸ್ನೇಹಿ ನಾರು
“ಕೃತಕ ನಾರುನೂಲುಗಳ ಬದಲು ಪರಿಸರಸ್ನೇಹಿ, ನವೀಕರಿಸಬಹುದಾದ ಸಂಪನ್ಮೂಲ ಮೂಲದವಕ್ಕೆ ಪ್ರಾಮುಖ್ಯತೆ ಹೆಚ್ಚುತ್ತಿದೆ. ಕೃತಕ ನಾರು ಸುಲಭದಲ್ಲಿ ಕೊಳೆಯುವುದಿಲ್ಲ. ಅಡಿಕೆ ಸಿಪ್ಪೆಯ ನಾರು ಸುಲಭದಲ್ಲಿ ಮಣ್ಣಿನಲ್ಲಿ ಕರಗುತ್ತದೆ. ಗ್ರಾಮೀಣ ಮಹಿಳೆಯರ ಉದ್ಯೋಗ ಸೃಷ್ಟಿಗೂ ಅನುಕೂಲ” ಎನ್ನುತ್ತಾರೆ ಸಮುದಾಯ ಕಾಲೇಜಿನ ಡೀನ್ ಡಾ. ಜ್ಯೋತಿ ವಸ್ತ್ರದ್.
ಇವರು ಧಾರವಾಡ ಕೃಷಿವಿವಿಯ ಹೋಮ್ ಸೈನ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದವರು. ಡೆಪ್ಯೂಟೇಶನ್ ಮೇಲೆ ಅಲ್ಲಿ ಕೆಲಸ ಮಾಡುತ್ತಿದ್ದಾರೆ. “ಅಡಿಕೆ ಸಿಪ್ಪೆಯ ನಾರು, ನೂಲು ಹಾಗೂ ಇನ್ನಿತರ ಸಂಯುಕ್ತ ವಸ್ತುಗಳು ಸಿಪ್ಪೆಯ ನಿರ್ವಹಣೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಬಲ್ಲವು” ಎನ್ನುವುದು ಅವರ ವಿಶ್ವಾಸ.
ಚಾಲಿ ಅಡಿಕೆಯ ತೂಕದಲ್ಲಿ ಅಡಿಕೆಯಲ್ಲಿ ಸಿಪ್ಪೆಯ ಪ್ರಮಾಣ 40% ರಿಂದ 50%. ಡಾ. ಮಿಶ್ರಾರ ಪ್ರಕಾರ “ಸಿಪ್ಪೆಯಲ್ಲಿನ ನಾರಿನ ಪ್ರಮಾಣ 40-45%. ನಾರಿನ ಸರಾಸರಿ ಉದ್ದ ನಾಲ್ಕು ಸೆಂಟೀಮಿಟರು. ಅಡಿಕೆಯ ಉದ್ದಕ್ಕನುಗುಣವಾಗಿ ನಾರಿನ ಉದ್ದವೂ ಇರುತ್ತದೆ. ಆದರೆ ಸೆಣಬಿನಂತಹ ಜೈವಿಕ ನಾರುಗಳಿಗೆ ಹೋಲಿಸಿದರೆ ಅಡಿಕೆಯದರ ಉದ್ದ ಬಹಳ ಕಡಿಮೆ.”
“ಅಡಿಕೆ ಸಿಪ್ಪೆಯಲ್ಲಿ ಮುಖ್ಯವಾಗಿ ಎರಡು ವಿಧದ ನಾರುಗಳು – ಒಂದು ಅತ್ಯಂತ ಒರಟು. ಮತ್ತೊಂದು ಅತ್ಯಂತ ನಯ. ಅಡಿಕೆ ಸಿಪ್ಪೆಯ ಮಧ್ಯದ ಪದರ ಅಂದರೆ ಸಿಪ್ಪೆಯ ಕೆಳಗಿನ ಪದರದಲ್ಲಿರುವ ನಾರು ನಯವಾದುದು. ಇವು ಸೆಣಬಿನ ನಾರಿನಂತಯೇ ಇರುತ್ತವೆ. ಒರಟಾದ ನಾರು ಸೆಣಬಿನ ನಾರಿಗಿಂತ ಹತ್ತು ಪಟ್ಟು ಒರಟು.”
“ಅಡಿಕೆ ಸಿಪ್ಪೆಯ ನಾರು ಕುರಿ ಉಣ್ಣೆಯಷ್ಟೇ ಗಟ್ಟಿ. ಇದರಲ್ಲಿ ಸೆಲ್ಯುಲೋಸ್, ಹೆಮಿಸೆಲ್ಯುಲೋಸ್, ಲಿಗ್ನಿನ್ ಹಾಗೂ ಇನ್ನಿತರ ಸಣ್ಣಪುಟ್ಟ ಅಂಶಗಳಿವೆ. ಸಾಂದ್ರತೆ ಕೃತಕ ನಾರಿನಷ್ಟೇ ಇರುತ್ತದೆ. ದ್ವಿದಳ ಸಸ್ಯಗಳ ತೊಗಟೆಯ ನಾರಿನಷ್ಟೇ ನೀರು ಹೀರುವ ಗುಣವಿದೆ” ಎನ್ನುತ್ತಾರೆ ಡಾ. ಅನುಪಮ ಮಿಶ್ರಾ.
ಸಂಸ್ಕರಣೆ
ಒಣಗಿದ ಅಡಿಕೆ ಸಿಪ್ಪೆಯನ್ನು ಮೊದಲಿಗೆ 2% ಯೂರಿಯಾ ಬಳಸಿ ಉಪಚರಿಸುತ್ತಾರೆ. ಅನಂತರ ಮೂರರಿಂದ ಐದು ದಿನಗಳ ಕಾಲ ನೀರಿನಲ್ಲಿ ಮುಳುಗಿಸಿಡುತ್ತಾರೆ. ನಂತರ ಚೆನ್ನಾಗಿ ನೀರಿನಲ್ಲಿ ತೊಳೆದು 2-3 ದಿನ ಒಣಗಿಸುತ್ತಾರೆ. ನಂತರ ಕೈ /ಯಂತ್ರ ಉಪಯೋಗಿ ನಾರನ್ನು ಬೇರ್ಪಡಿಸುತ್ತಾರೆ. ಈ ನಾರನ್ನು ಕೆಲವು ದ್ರಾವಣಗಳ
ಸಹಾಯದಿಂದ ನಯಗೊಳಿಸುತ್ತಾರೆ. ನಂತರ ಬ್ಲೀಚ್ ಮಾಡುತ್ತಾರೆ.
ತಯಾರಾದ ನಾರನ್ನು ಯಂತ್ರ ಬಳಸಿ ಒರಟು ಮತ್ತು ನಯ ಎಂಬ ಎರದು ವರ್ಗದ್ದಾಗಿ ಬೇರ್ಪಡಿಸುತ್ತಾರೆ. ಹಗುರ, ನಯ ನಾರನ್ನು 30 % ಹತ್ತಿಯ ಎಳೆಗಳ ಜೊತೆ ಸೇರಿಸಿ ನೂಲು ತಯಾರಿಸುತ್ತಾರೆ. ಹತ್ತಿ ಸೇರಿಸದಿದ್ದರೆ ಯಂತ್ರಗಳ ಮೂಲಕ ನೂಲು ತಯಾರಿ ಕಷ್ಟ.
“ಒಂದು ಕಿಲೋ ನಯ ನಾರನ್ನು ತಯಾರಿಸಲು ಒಂದು ಸಾವಿರ ರೂ. ಖರ್ಚು. ಅಷ್ಟೇ ದೊರಗಾದ ನಾರಿಗೆ 700 ರೂ. ಸಾಕು. ಹತ್ತಿಯೊಂದಿಗೆ ಮಿಶ್ರ ಮಾಡಿದ ಒಂದು ಕಿಲೋ ನಾರಿಗೆ ರೂ. ರು 1200 ಅಸಲಾಗುತ್ತದೆ. ಈ ನೂಲಿನಿಂದ ಬೇಕಾದ ಸಿದ್ಧ ಉಡುಪು ತಯಾರಿಸಬಹುದು. ಅಡಿಕೆ ಸಿಪ್ಪೆಯಲ್ಲಿರುವ ಸೆಲ್ಯುಲೋಸ್ ಅಂಶ ಒಳ್ಳೆ ಗಾಳಿಯಾಡಲು ಅನುಕೂಲ ಮಾಡಿಕೊಡುತ್ತದೆ. ಜೊತೆಗೆ ಚರ್ಮಸ್ನೇಹಿ. ಬಟ್ಟೆಗಳನ್ನು ಸುಲಭದಲ್ಲಿ ನಿರ್ವಹಣೆ ಮಾಡಬಹುದು”, ಡಾ. ಮಿಶ್ರಾ ತಿಳಿಸುತ್ತಾರೆ.
ಅಡಿಕೆ ಸಿಪ್ಪೆಯಿಂದ ಸಿಗುವ ಒರಟು ನಾರನ್ನು ನೀಡ್ಲ್ ಪಂಚಿಂಗ್ ವಿಧಾನದಿಂದ ಶೀಟುಗಳಾಗಿ ಪರಿವರ್ತಿಸುತ್ತಾರೆ. ಇದನ್ನು ತಯಾರಿಸಲು ತಗಲುವ ವೆಚ್ಚ ಒಂದು ಮೀಟರಿಗೆ ೬೦ ರೂ. ಈ ಶೀಟನ್ನು ಕರಕುಶಲ ವಸ್ತುಗಳಲ್ಲಿ, ಕಾಲೊರಸು, ರಗ್ಗು, ನೆಲಹಾಸು, ದಿಂಬು, ಸೀಟ್ ಕುಶನ್ ಇತ್ಯಾದಿ ತಯಾರಿಸಲು ಬಳಸಬಹುದು.
ಈ ರೀತಿಯ ನಾರಿನ ಉತ್ಪನ್ನಗಳನ್ನು ಕೊಯಮತ್ತೂರಿನ ಕುಮಾರಗುರು ತಂತ್ರಜ್ಞಾನ ಕಾಲೇಜೂ ಪ್ರಾಯೋಗಿಕವಾಗಿ ತಯಾರಿಸಿದೆ. ಸೆಣಬಿನ ಜೊತೆ ೫೦ : ೫೦ ಪ್ರಮಾಣದಲ್ಲಿ ಸೇರಿಸಿ ಸಣ್ಣ ಮಕ್ಕಳ ಡೈಪರ್, ಸ್ಯಾನಿಟರಿ ನ್ಯಾಪ್ಕಿನ್, ಮಾಸ್ಕ್, ಗಾಯಗಳಿಗೆ ಹಾಕುವ ಬ್ಯಾಂಡೇಜ್ ತಯಾರಿಸಬಹುದು ಎನ್ನುವುದು ಅವರ ಸಂಶೋಧನೆಯ ಸಾರಾಂಶ. ಹತ್ತಿಯ ಜೊತೆ ಅಷ್ಟೇ ಪ್ರಮಾಣದಲ್ಲಿ ಈ ನಾರು ಸೇರಿಸಿ ಪರಿಸರಸ್ನೇಹಿ ಬ್ಯಾಗ್ ಕೂಡಾ ತಯಾರಿಸಿದ್ದಾರೆ. ಅಡಿಕೆ ಸಿಪ್ಪೆಯ ನಾರನ್ನು ಅಣಬೆ ಕೃಷಿಯಲ್ಲೂ ಲಾಭದಾಯಕವಾಗಿ ಬಳಸಬಹುದು ಎನ್ನುತ್ತಾರೆ ಡಾ. ಅನುಪಮಾ.
ಸಂಯುಕ್ತ ವಸ್ತು ತಯಾರಿ
ಡಾ. ಮಿಶ್ರಾ ತಂಡ ಅಡಿಕೆ ಸಿಪ್ಪೆಯಿಂದ ಸಂಯುಕ್ತ ವಸ್ತುಗಳನ್ನೂ (ಕಾಂಪೋಸಿಟ್ಸ್) ತಯಾರಿಸಿದೆ. ಇದಕ್ಕೆ ಅವರು ಅನುಸರಿಸಿದ ವಿಧಾನ ಹೀಗಿದೆ : ಮೊದಲಿಗೆ ಕಾಲು ಭಾಗ ಅಡಿಕೆ ಸಿಪ್ಪೆಯ ತುಣುಕು ಮತ್ತು ಮುಕ್ಕಾಲು ಭಾಗ ಪಾಲಿವಿನೈಲ್ ಆಲ್ಕೋಹಾಲ್ ಎಂಬ ಸಿಂಥೆಟಿಕ್ ರೆಸಿನ್ ಹಾಗೂ ಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣ ಮಾಡಿಕೊಳ್ಳುತ್ತಾರೆ.
ಈ ಮಿಶ್ರಣವನ್ನು ನಿರ್ದಿಷ್ಟ್ಟ ಉಷ್ಣತೆಯಲ್ಲಿ ನಿರ್ದಿಷ್ಟ್ಟ ಅವಧಿಗೆ ಕುದಿಸಿ ಅಚ್ಚುಗಳಲ್ಲಿ ಹಾಕುತ್ತಾರೆ. ನಂತರ ಓವನ್ನಿನಲ್ಲಿ ಒಣಗಿಸುತ್ತಾರೆ. ಹೊರತೆಗೆದು ಶಾಖ ಬಳಸಿ ಒತ್ತುತ್ತ್ತಾರೆ. ಈಗ ಈ ಸಂಯುಕ್ತ ವಸ್ತು ಶೀಟುಗಳಾಗಿ ಪರಿವರ್ತನೆಯಾಗುತ್ತದೆ.
ಈ ಶೀಟನ್ನು ಶಾಖ ಕೊಟ್ಟು ಬೇಕಾದ ಹಾಗೆ ಬಗ್ಗಿಸಿ ಅದೇ ರೂಪದಲ್ಲಿ ಉಳಿಯುವಂತೆ ಮಾಡಬಹುದು. ಅಡಿಕೆ ಸಿಪ್ಪೆಯ ಕಾಂಪೋಸಿಟ್ಸ್ ಶೀಟಿನಿಂದ ನರ್ಸರಿ ಬ್ಯಾಗ್, ಹಸಿರು ಮನೆಯ ಭಾಗಗಳು, ಭೂ ಹೊದಿಕೆ, ಟೇಬಲ್ ಮ್ಯಾಟ್, ವಾಹನಗಳ ಹಾಸುವ ಮ್ಯಾಟ್, ಹಲಗೆಗಳು, ಪೇಪರ್ ಬೋರ್ಡ್, ಮೆಡಿಕಲ್ ವೇಸ್ಟ್ ವಿಲೇವಾರಿ ಮಾಡಲು ಬಳಸುವ ಚೀಲ, ಆಟಿಕೆ ಮತ್ತು ಕ್ರೀಡಾ ಸಾಮಗ್ರಿಗಳನ್ನು ಪ್ಯಾಕ್ ಮಾಡಲು, ಹಣ್ಣು ಮತ್ತು ತರಕಾರಿಗಳನ್ನು ಸಾಗಣೆ ಮಾಡಲು ಬಳಸಬಹುದು.
ನಮ್ಮ ರಾಜ್ಯದಲ್ಲಿ ಸುರತ್ಕಲ್ಲಿನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಹಾಗೂ ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಸಂಸ್ಥೆಯಲ್ಲೂ ಪರಿಸರಸ್ನೇಹಿ ಅಡಿಕೆ ಸಿಪ್ಪೆಯ ಕಾಂಪೋಸಿಟ್ಸ್ ಉಪಯೋಗದ ಬಗ್ಗೆ ಒಂದಷ್ಟು ಅಧ್ಯಯನಗಳಾಗಿವೆ.
ಮಲೆನಾಡಿನಲ್ಲಿ ಚಾಲಿ ಅಡಿಕೆ ಸಿಪ್ಪೆ ಈಗಲೂ ಬಚ್ಚಲು ಒಲೆಯ ಖಾಯಂ ಒಳಸುರಿ. ಹೊಗೆ ಜಾಸ್ತಿಯಾದರೂ ಸುಲಭವಾಗಿ ಹೊತ್ತಿಕೊಳ್ಳುವ ಗುಣ. ಜಾಸ್ತಿ ಇದ್ದರೆ ಗೊಬ್ಬರದ ಗುಂಡಿಯೇ ಗತಿ. ಹಸಿರು ಅಡಿಕೆ ಸಿಪ್ಪೆಯಲ್ಲಿ ನೀರಿನ ಅಂಶ ಹೆಚ್ಚಿರುವ ಕಾರಣ ಸೀದಾ ಗೊಬ್ಬರದ ಗುಂಡಿಗೆ!
ಕೆಲಸಗಾರರ ಅಲಭ್ಯತೆಯಿಂದ ಅಲ್ಲಲ್ಲಿ ಅಡಿಕೆ ಸಂಸ್ಕರಣೆಯ ಘಟಕಗಳು ಬಂದಿವೆ. ಇವುಗಳಿಂದ ಅಗಾಧ ಪ್ರಮಾಣದ ಒಣಗಿದ ಸಿಪ್ಪೆ ಉತ್ಪಾದನೆ. ಇದು ರಸ್ತೆ ಬದಿಯಲ್ಲಿ ರಾಶಿ ರಾಶಿ ಕೊಳೆಯುತ್ತ ಬಿದ್ದಿರುತ್ತದೆ.
ಅಂತರ್ಜಾಲದ ಸಂಶೋಧನಾ ವರದಿಗಳ ಪ್ರಕಾರ ಅಡಿಕೆ ಸಿಪ್ಪೆಯ ಬಳಕೆಯ ನೂರೆಂಟು ದಾರಿ ಕಾಣುತ್ತದೆ. ಆದರೆ ಯಾವುದೂ ಅನುಷ್ಠಾನಕ್ಕೆ ಇಳಿದಂತಿಲ್ಲ.
ಈ ಹಿನ್ನೆಲೆಯಲ್ಲಿ, ಮೇಘಾಲಯದ ವಿಜ್ಞಾನಿಗಳ ಅಡಿಕೆ ಸಿಪ್ಪೆಯ ಸಂಶೋಧನೆಯಂತೂ ನಮ್ಮಲ್ಲ್ಲೂ ಹೊಸಹುರುಪನ್ನು ತುಂಬುವಥದ್ದು.
ಡಾ. ಅನುಪಮಾ ಮಿಶ್ರ – 963663 43105
ಡಾ. ಜ್ಯೋತಿ ವಸ್ತ್ರದ್ – 94487 77421