ಬರಗಾಲದ ನಡುವೆ ಕೊಳವೆ ಬಾವಿಗಳನ್ನು ಆಧರಿಸಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರುವ ರೈತರಿಗೆ ಬೆಸ್ಕಾಂ ಇಲಾಖೆ ಮೋಸ ಮಾಡುತ್ತಿದೆ. ಸಮರ್ಪಕವಾದ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ನಮಗೆ ಕರೆಂಟ್ ಕೊಡಿ, ಇಲ್ಲಾ ವಿಷ ಕೊಡಿ ಎಂದು ರೈತರು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಸೊಕ್ಕೆ ಬೆಸ್ಕಾ ಸ್ಟೇಷನ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ರೈತರ ಜಮೀನುಗಳಿಗೆ ಪ್ರತಿನಿತ್ಯ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ನೀಡಬೇಕು.
ಬೆಸ್ಕಾಂ ಇಲಾಖೆಯ ಅಧಿಕಾರಿಗಳು ರೈತರಿಗೆ ಮೋಸ ಮಾಡುತ್ತಿದ್ದಾರೆ. ಕನಿಷ್ಠ ಐದು ಗಂಟೆಯಾದರು ವಿದ್ಯುತ್ ಪೂರೈಕೆ ಮಾಡುತ್ತಿಲ್ಲ.
ಕೊಳವೆಬಾವಿಯನ್ನು ನಂಬಿಕೊಂಡು ಬೆಳೆ ಇಟ್ಟಿದ್ದೇವೆ. ಬೆಳೆ ಬಂದರೆ ಸಾಲ ತೀರಿಸಬಹುದು. ಬೆಸ್ಕಾ ಇಲಾಖೆಯ ಅಧಿಕಾರಿಗಳು ಅದಕ್ಕೂ ತಣ್ಣೀರೆರಚಿದ್ದಾರೆ.
ಆದ್ದರಿಂದ ಸಮರ್ಪಕವಾಗಿ ವಿದ್ಯುತ್ ನೀಡಿ ಇಲ್ಲ, ನಮಗೆ ವಿಷ ಕೊಡಿ ಎಂದು ಬೆಸ್ಕಾ ಅಧಿಕಾರಿಗಳಿಗೆ ಒತ್ತಾಯಿಸಿದರು.
ಈಗಾಗಲೇ ತಾಲೂಕಿನಾದ್ಯಂತ ಮಳೆಯ ಅಭಾವದಿಂದ ರೈತರು ತುಂಬಾ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೆಚ್ಚಿನ ರೈತರು ಕೊಳವೆಬಾವಿಯನ್ನೇ ನಂಬಿಕೊಂಡಿದ್ದಾರೆ. ಆದರೆ ಕನಿಷ್ಠ ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ.
ಇದರಿಂದಾಗಿ ಬೆಳೆ ನಾಶವಾಗುತ್ತಿದೆ. ದೊಡ್ಡ ಕಂಪನೊಗಳಿಗೆ ದಿನಪೂರ್ತಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ರೈತರಿಗೆ 7 ಗಂಟೆಗಳ ಕಾಲ 3 ಫೇಸ್ ಹಾಗೂ ರಾತ್ರಿ ಸಮಯದಲ್ಲಿ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು ಇಲ್ಲವಾದಲ್ಲಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಬೆಸ್ಕಾ ಎ.ಇ.ಇ ಸುಧಾಮಣಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ರೈತರಿಗೆ ಅನುಕೂಲವಾಗುವಂತೆ ಕ್ರಮ ವಹಿಸಲಾಗುತ್ತದೆ. ವಿದ್ಯುತ್ ಉತ್ಪಾದನೆಯಲ್ಲಿ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ತಿರುಮಲೇಶ್, ಗ್ರಾಮಸ್ಥರಾದ ಬಸವರಾಜಪ್ಪ, ಮಹಾಂತೇಶ್, ಬಂಕ್ ರಾಜಣ್ಣ, ದೊಡ್ಡಮನೆ ಭರತ್, ಮುಪ್ಪಣಿ ಬಸವರಾಜಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಹನುಮೇಶ್, ಯರಲಕಟ್ಟೆ ರಾಮನಗೌಡ, ಡಿ.ಸಿ ಹನುಮಂತಪ್ಪ, ಜಗಪ್ಪರು ಬಸವರಾಜ್ ಸೇರಿದಂತೆ ಮತ್ತಿತರರಿದ್ದರು.(ವರದಿ: ಎಂ.ಡಿ. ಅಬ್ದುಲ್ ರಖೀಬ್ ಜಗಳೂರು.)