Thursday, August 21, 2025
Homeರಾಜಕೀಯಪ್ರಾದೇಶಿಕತೆಯನ್ನು ತೊಡೆದುಹಾಕಲು ಪ್ರಾಧಾನಿ ನೀಡುವ ಕರೆ ರಾಜ್ಯಗಳ ಅಸ್ಮಿತೆಗೆ ನೀಡಿರುವ ಬೆದರಿಕೆಯ ರೀತಿ ಕಾಣುತ್ತಿದೆ:ಸಿದ್ದರಾಮಯ್ಯ

ಪ್ರಾದೇಶಿಕತೆಯನ್ನು ತೊಡೆದುಹಾಕಲು ಪ್ರಾಧಾನಿ ನೀಡುವ ಕರೆ ರಾಜ್ಯಗಳ ಅಸ್ಮಿತೆಗೆ ನೀಡಿರುವ ಬೆದರಿಕೆಯ ರೀತಿ ಕಾಣುತ್ತಿದೆ:ಸಿದ್ದರಾಮಯ್ಯ

ಜಾತೀಯತೆ ಮತ್ತು ಪ್ರಾದೇಶಿಕತೆಯನ್ನು ತೊಡೆದುಹಾಕಬೇಕು ಎಂದು ಸನ್ಮಾನ್ಯ ನರೇಂದ್ರ ಮೋದಿ ಅವರು ವಿಜಯದಶಮಿ ಪ್ರಯುಕ್ತ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರೆ ನೀಡಿದ್ದಾರೆ. ಜಾತೀಯತೆಯನ್ನು ತೊಡೆದುಹಾಕಬೇಕೆಂಬ ಪ್ರಧಾನಿ ಕರೆಗೆ ನನ್ನ ಸಹಮತವಿದ್ದರೂ ತೊಡೆದುಹಾಕುವ ಬಗೆ ಹೇಗೆ ಎಂಬುದನ್ನು ತುಸು ವಿವರಿಸಿದ್ದರೆ ಅವರ ಉದ್ದೇಶ ಸ್ಪಷ್ಟವಾಗುತ್ತಿತ್ತು.

ಜಾತೀಯತೆಯ ಜೊತೆ ಪ್ರಾದೇಶಿಕತೆಯನ್ನು ಕೂಡಾ ಪ್ರಧಾನಿ ಅವರು ತಳುಕಹಾಕಿ ಏನು ಹೇಳಲಿಕ್ಕೆ ಹೊರಟಿದ್ದಾರೆ? ಭಾರತ ಎನ್ನುವುದು ದೇಶ ಮಾತ್ರವಲ್ಲ ಅದು ರಾಜ್ಯಗಳ ಒಕ್ಕೂಟ ಎನ್ನುವುದನ್ನು ಸಂವಿಧಾನವೇ ಹೇಳಿದೆ. ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯ ಕೂಡಾ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳ ವೈವಿಧ್ಯವನ್ನು ಹೊಂದಿವೆ. ಈ ಪ್ರಾದೇಶಿಕತೆಯನ್ನು ತೊಡೆದುಹಾಕುವುದೆಂದರೆ ವೈವಿಧ್ಯತೆಯನ್ನು ನಾಶಮಾಡುವುದೇ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮತ್ತು ಅವರ ಪಕ್ಷ ಹಾಗೂ ಪರಿವಾರ ಆಗಾಗ ಏಕಭಾಷೆ, ಏಕ ಸಂಸ್ಕೃತಿಯ ಭಜನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕತೆಯನ್ನು ತೊಡೆದುಹಾಕಲು ನೀಡುವ ಕರೆ ರಾಜ್ಯಗಳ ಅಸ್ಮಿತೆಗೆ ನೀಡಿರುವ ಬೆದರಿಕೆಯ ರೀತಿ ಕಾಣುತ್ತಿದೆ. ಇದನ್ನು ಒಪ್ಪಲು ಸಾಧ್ಯ ಇಲ್ಲ. ಇಂತಹದ್ದೊಂದು ಹೇಳಿಕೆ ಸಾಕ್ಷಾತ್ ಪ್ರಧಾನಮಂತ್ರಿಯವರಿಂದಲೇ ಬಂದಿರುವುದರಿಂದ ಅವರೇ ಇದಕ್ಕೆ ಸ್ಪಷ್ಟೀಕರಣ ನೀಡಬೇಕಾಗುತ್ತದೆ.

ಹಿಂದೂ ಧರ್ಮದ ಬಗ್ಗೆ ದಣಿವಿಲ್ಲದಂತೆ ರಾತ್ರಿ-ಹಗಲು ಮಾತನಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತ್ತು ಅವರ ಪಕ್ಷ ಜಾತಿಯ ಪ್ರಶ್ನೆ ಎದುರಾದ ಕೂಡಲೇ ಭೀತಿಗೀಡಾಗುತ್ತಿರುವುದು ಯಾಕೆ? ಜಾತೀಯತೆಯನ್ನು ತೊಡೆದುಹಾಕಬೇಕಾದರೆ ಮೊದಲು ಅದು ನಮ್ಮ ನಡುವೆ ಇರುವುದನ್ನು ಒಪ್ಪಿಕೊಳ್ಳಬೇಕಲ್ಲವೇ? ಜಾತಿ ಕುರುಡಿನಿಂದ ಜಾತೀಯತೆಯ ನಿರ್ಮೂಲನೆ ಅಸಾಧ್ಯ ಎನ್ನುವುದನ್ನು ಮಾನ್ಯ ನರೇಂದ್ರ ಮೋದಿ ಅವರು ಅರಿತಿದ್ದಾರೆ ಎಂದು ಭಾವಿಸುವೆ.

ಜಾತೀಯತೆಯನ್ನು ತೊಡೆದುಹಾಕಬೇಕಾದರೆ ಮೊದಲು ಅದಕ್ಕೆ ಅಂಟಿ ಕೊಂಡಿರುವ ಅಸ್ಪೃಶ್ಯತೆ, ಅಸಮಾನತೆ, ಲಿಂಗತಾರತಮ್ಯ ಮತ್ತು ಶೋಷಕ ವ್ಯವಸ್ಥೆಯನ್ನು ತೊಡೆದುಹಾಕಬೇಕು. ಜಾತಿ ಆಧಾರಿತ ಅಸಮಾನತೆಯನ್ನು ನಿವಾರಣೆ ಮಾಡುವ ಉದ್ದೇಶದಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ಜಾರಿಗೆ ತಂದಿದ್ದರು. ಮೀಸಲಾತಿಯನ್ನು ಜಾತಿ ಆಧಾರದಲ್ಲಿಯೇ ನೀಡಲಾಗುತ್ತಿದೆ. ಪ್ರಧಾನಿ ಮೋದಿಯವರು ಜಾತೀಯತೆಯನ್ನು ತೊಡೆದುಹಾಕಲು ನೀಡಿರುವ ಕರೆ ಮೀಸಲಾತಿಯನ್ನು ವಿರೋಧಿಸಲು ನೀಡಿರುವ ಪ್ರಚೋದನೆಯಂತೆ ಕಾಣುತ್ತಿದೆ. ಈ ಬಗ್ಗೆ ದೇಶದ ಜನ ಎಚ್ಚೆತ್ತುಕೊಳ್ಳಬೇಕಾಗಿದೆ.

ಬಹುತ್ವಭಾರತ

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments