-ದಾವಣಗೆರೆ ಮಹಾನಗರದಲ್ಲಿ ಅನೇಕ ಮನೆತನಗಳು ತಮ್ಮ ಸತ್ಕಾರ್ಯಗಳಿಂದ ಜನಮೆಚ್ಚುಗೆಯನ್ನು ಗಳಿಸಿವೆ . ಇಂತಹ ಮನೆತನಗಳಲ್ಲಿ ಎ . ಹೆಚ್ . ತಿಪ್ಪಯ್ಯನವರ ಮನೆತನವೂ ಒಂದು , ದಾನ – ಧರ್ಮಕ್ಕೆ ಹೆಸರಾದ ಎ .ಹೆಚ್ . ತಿಪ್ಪಯ್ಯ ಮತ್ತು ಎ . ಹೆಚ್ . ಶಾರದಮ್ಮ ದಂಪತಿಗಳಿಗೆ 05 – 08 – 1949 ರಂದು ಬಸವಜಯಂತಿ ಶುಭ ದಿವಸ ಜನಿಸಿದ ಎ . ಹೆಚ್ . ಶಿವಮೂರ್ತಿ ಸ್ವಾಮಿ ಅವರು ಪ್ರಾಥಮಿಕ ಶಿಕ್ಷಣವನ್ನು ದಾವಣಗೆರೆಯಲ್ಲಿ , ಪ್ರೌಢಶಿಕ್ಷಣ ವನ್ನು ಸಿರಿಗೆರೆಯ ತರಳಬಾಳು ಬೃಹನ್ಮಠದ ವಿದ್ಯಾರ್ಥಿನಿಲಯದಲ್ಲಿ ಮುಗಿಸಿದರು . ಮುಂದೆ ಬಿ .ಎ ಮತ್ತು ಎಂ . ಎ . ವ್ಯಾಸಂಗವನ್ನು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಪೂರೃಸಿದರು . ನಂತರ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಕೆಲಸಕ್ಕೆ ಸೇರಿಕೊಂಡರು . ಕಾರ್ಯನಿರ್ವಹಿಸುತ್ತಲೇ ಎಲ್ . ಎಲ್ .ಬಿ ಮುಗಿಸಿದರು , ಕೆಲಸಕ್ಕೆ ಸ್ವಯಂ ನಿವೃತ್ತಿ ಪಡೆದು ವಕೀಲರಾಗಿ ಸೇವೆ ಆರಂಭಿಸಿದರು . ವಕೀಲಿವೃತ್ತಿ ಜೊತೆಗೆ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು , ಅಪಾರ ದೈವಭಕ್ತರಾಗಿದ್ದ ಶಿವಮೂರ್ತಿಸ್ವಾಮಿಯವರು ಯಡಿಯೂರಿನ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಪರಮಭಕ್ತರಾಗಿದ್ದರು , ಅಂಧರ ಬಾಳಿನ ಬೆಳಕಾಗಿದ್ದ ಲಿಂ . ಪುಟ್ಟರಾಜ ಗವಾಯಿಗಳ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು . ಗದುಗಿನಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಅಂಧ ಮಕ್ಕಳಿಗೆ ಅನ್ನ , ಪ್ರಸಾದ ನೀಡಿ ಸಂಗೀತವನ್ನು ಕಲಿಸಿಕೊಡುವುದನ್ನು ನೋಡಿದ ಶಿವಮೂರ್ತಿಸ್ವಾಮಿಯವರು ದಾವಣಗೆರೆಯಲ್ಲಿಯೂ ಈ ರೀತಿಯ ಆಶ್ರಮವನ್ನು ಸ್ಥಾಪಿಸಲು ತಮ್ಮ ಕೆಲವು ಸ್ನೇಹಿತರ ಜೊತೆ ಕಾರ್ಯೋನ್ಮಖರಾದರು . ದಾವಣಗೆರೆಯ ಹೊರಭಾಗದ ಬಾಡಾ ಕ್ರಾಸ್ ಬಳಿ ಇರುವ ಜಾಗವನ್ನು ಆಯ್ಕೆ ಮಾಡಿಕೊಂಡರು . ಆದರೆ ನಿವೇಶನಕ್ಕೆ ಬೇಕಾದ ಹನ್ನೆರಡೂವರೆ ಲಕ್ಷ ರೂಪಾಯಿಗಳನ್ನು ಹೊಂದಿಸಲು ದಾನಿಗಳ ಹತ್ತಿರ ಹೋಗಬೇಕೆಂದು ನಿರ್ಧರಿಸಿದರು . ಈ ಸಮಯದಲ್ಲಿ ಪುಟ್ಟರಾಜ ಗವಾಯಿಗಳು ದಾವಣಗೆರೆಗೆ ಆಗಮಿಸಿದ್ದ ವಿಷಯ ತಿಳಿದ ಶಿವಮೂರ್ತಿಸ್ವಾಮಿ ಮತ್ತು ಸ್ನೇಹಿತರು ಗುರುಗಳ ದರ್ಶನ ಪಡೆದು , ಆಶ್ರಮದ ನಿವೇಶನದ ಬಗ್ಗೆ ತಿಳಿಸಿ , ನಿವೇಶನ ನೋಡಲು ವಿನಂತಿಸಿದರು , ಇದಕ್ಕೆ ಸಮ್ಮತಿಸಿದ ಪುಟ್ಟರಾಜ ಗವಾಯಿಗಳು ಬಾಡಾ ಕ್ರಾಸ್ ಬಳಿ ಇರುವ ನಿವೇಶನಕ್ಕೆ ಆಗಮಿಸಿದರು . ನಿವೇಶನದಲ್ಲಿ ಓಡಾಡಿದ ಗುರುಗಳು ಆಶ್ರಮಕ್ಕೆ ನಿವೇಶನ ಸೂಕ್ತವಾಗಿದೆ ಎಂದು ಹರ್ಷದಿಂದ ಹೇಳಿದರು , ನಿವೇಶನಕ್ಕೆ ಹಣ ಹೊಂದಿಸಲು ತಮ್ಮ ತುಲಾಭಾರದಿಂದ ಬಂದ ಹಣವನ್ನು ಉಪಯೋಗಿಸಿಕೊಳ್ಳಬೇಕೆಂದು ಸೂಚಿಸಿದರು . ಈ ವಿಷಯ ಹರಡುತ್ತಿದ್ದಂತೆಯೇ ಭಕ್ತರು ನಾ ಮುಂದು ತಾ ಮುಂದು ಎಂಬಂತೆ ಮುಂದೆ ಬಂದರು . ಒಂದೇ ವೇದಿಕೆಯಲ್ಲಿ ಪುಟ್ಟರಾಜ ಗವಾಯಿಗಳ 155 ತುಲಾಭಾರ ನಡೆದಿದ್ದು ಐತಿಹಾಸಿಕ ದಾಖಲೆಯಾಯಿತು . ಹೀಗೆ ಬಾಡಾ ಕ್ರಾಸ್ ಬಳಿ ಶ್ರೀ ವೀರೇಶ್ವರ ಪುಣ್ಯಾಶ್ರಮ ಸ್ಥಾಪನೆಯಾಗಲು ಶಿವಮೂರ್ತಿ ಸ್ವಾಮಿಯವರಿಗೆ ಎನ್ . ಎಂ . ಕಡೇಕೊಪ್ಪ . ಅಜ್ಜಂಪುರದ ಶೆಟ್ರು ಸುಶೀಲಮ್ಮ ಮತ್ತಿತರರು ಕೈಜೋಡಿಸಿದರು . ಮಾಜಿ ಸಚಿವರೂ, ಹಾಲಿ ಶಾಸಕರಾದ ಡಾ ಶಾಮನೂರು ಶಿವಶಂಕರಪ್ಪ , ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕರಾದ ಎ . ಹೆಚ್ . ಶಿವಯೋಗಿಸ್ವಾಮಿ ಸೇರಿದಂತೆ ಅನೇಕರು ಆಶ್ರಮದ ಕಟ್ಟಡ ನಿಮಾಣಕ್ಕೆ ಸಹಕಾರ ನೀಡಿದರು , ಸುಮಾರು ಎರಡೂವರೆ ಕೋಟಿ ರೂಪಾಯಿಗಳ ಆಕರ್ಷಕ , ಭವ್ಯ ಶಿಲಾಮಂಟಪದ ನಿರ್ಮಾಣದಲ್ಲಿಯೂ ಶಿವಮೂರ್ತಿಸ್ವಾಮಿ ಅವರು ಅಪಾರ ಶ್ರಮ ವಹಿಸಿದರು , ಇವರ ಜೊತೆಗೆ ಆಶ್ರಮದ ಗೌರವಾಧ್ಯಕ್ಷರಾದ ಡಾ . ಶಾಮನೂರು ಶಿವಶಂಕರಪ್ಪ , ಅಧ್ಯಕ್ಷರಾದ ಅಥಣಿ ವೀರಣ್ಣ ಅವರು ಸಹಕಾರ್ಯದರ್ಶಿ ಜಾಲಿಮರದ ಕರಿಬಸಪ್ಪ , ಉಪಾಧ್ಯಕ್ಷರಾದ ಅಜ್ಜಂಪುರದ ಶೆಟ್ರು ಮೃತ್ಯುಂಜಯ , ದೇವರಮನೆ ಶಿವಕುಮಾರ್, ಯಲ್ಲಪ್ಪ ಮತ್ತಿತರರು ಸಹಕರಿಸಿದರು . ಶಿವಮೂರ್ತಿ ಸ್ವಾಮಿಯವರು ಶಿಕ್ಷಣ ಕ್ಷೇತ್ರಕ್ಕೂ ಪ್ರವೇಶಿಸಿದರು . ದಾವಣಗೆರೆ ಸಮೀಪದ ಆವರಗೆರೆಯಲ್ಲಿ ಗ್ರಾಮೀಣ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಶ್ರೀ ಸಿದ್ದಲಿಂಗೇಶ್ವರ ವಿದ್ಯಾ ಸಂಸ್ಥೆಯ ಅಡಿಯಲ್ಲಿ ಶ್ರೀ ಗುರು ಪಂಚಾಕ್ಷರ ಗವಾಯಿಗಳ ಸ್ಮಾರಕ ಶಾಲೆಯನ್ನು ಆರಂಭಿಸಿದರು , ಎಲ್ . ಕೆ . ಜಿ ಯಿಂದ ಎಸ್ . ಎಸ್ . ಎಲ್. ಸಿ ವರೆಗೆ ನೂರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ . ಶಾಲೆಯಲ್ಲಿ ಡೊನೇಶನ್ ಪಡೆಯದೆ ಕೇವಲ ಫೀ ಮಾತ್ರ ಕಟ್ಟಿಸಿಕೊಂಡು ಬಡಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ . ಹೀಗೆ ಶಿವಮೂರ್ತಿ ಸ್ವಾಮಿಯವರು ಧಾರ್ಮಿಕ , ಶೈಕ್ಷಣಿಕ , ಸಾಮಾಜಿಕ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದು , ಇಂದು ಅವರು ನಮ್ಮ ಕಣ್ಣ ಮುಂದೆ ದೈಹಿಕವಾಗಿ ಇಲ್ಲದಿದ್ದರೂ ಅವರು ಮಾಡಿದ ಕಾರ್ಯಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ . — ಬಕ್ಕೇಶ ನಾಗನೂರು —–ಹಿರಿಯ ಪತ್ರಕರ್ತರು