Monday, December 23, 2024
Homeರಾಜ್ಯಜನಸ್ನೇಹಿ ಆಡಳಿತದೊಂದಿಗೆ ಪ್ರಗತಿ ಕಡೆ ಗಮನ ಹರಿಸಿರಿ : ಪ್ರಭುಲಿಂಗ ಕವಳಿಕಟ್ಟಿ

ಜನಸ್ನೇಹಿ ಆಡಳಿತದೊಂದಿಗೆ ಪ್ರಗತಿ ಕಡೆ ಗಮನ ಹರಿಸಿರಿ : ಪ್ರಭುಲಿಂಗ ಕವಳಿಕಟ್ಟಿ


ಶಿವಮೊಗ್ಗ, ನವೆಂಬರ್ 04 :
ಸ್ಥಳೀಯ ಸಂಸ್ಥೆಗಳ ಅಧಿಕಾರಿ/ನೌಕರರು ಜನರ ಕಷ್ಟಗಳಿಗೆ ಉತ್ತಮವಾಗಿ ಸ್ಪಂದಿಸುವ ಮೂಲಕ ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಜೊತೆಗೆ ಪ್ರಗತಿಗೆ ಹೆಚ್ಚಿನ ಗಮನ ನೀಡಬೇಕು ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ಮಹಾನಗರಪಾಲಿಕೆ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಪಾಲಿಕೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಳ್ಮೆಯಿಂದ ಸಾರ್ವಜನಿಕರ ಅಹವಾಲು ಮತ್ತು ಕಷ್ಟಗಳಿಗೆ ಸ್ಪಂದಿಸಬೇಕು. ಜನಸ್ನೇಹಿ ಆಗುವ ಜೊತೆ ಜೊತೆಗೆ ಆಸ್ತಿ ತೆರಿಗೆ ವಸೂಲಾತಿ, ಉದ್ದಿಮೆ ಪರವಾನಗಿಯಂತಹ ಕೆಲಸಗಳನ್ನು ರಾಜೀಯಾಗದೇ ಗಟ್ಟಿಯಾಗಿ ನಿರ್ವಹಿಸಬೇಕು ಎಂದರು.
ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ಹಲವಾರು ಮಾನದಂಡಗಳಲ್ಲಿ ಪಾಲಿಕೆ ನಿಗದಿತ ಗುರಿಗಿಂತ ಹೆಚ್ಚಿನ ಪ್ರಗತಿ ಸಾಧಿಸಿರುವುದು ಅಭಿನಂದನೀಯ. ಹಾಗೆಯೇ ಕಸ ನಿರ್ವಹಣೆ, ಪೌರ ಕಲ್ಯಾಣ ಸೇವೆಗಳಲ್ಲಿ ಇನ್ನೂ ಉತ್ತಮ ಸಾಧನೆ ಮಾಡಬೇಕು.
ನಗರ ಸ್ವಚ್ಚ ಮತ್ತು ಸುಂದರವಾಗಿದೆ ಎಂದರೆ ಅದಕ್ಕೆ ಕಾರಣ ಪೌರಕಾರ್ಮಿಕರು. ಪೌರ ಕಾರ್ಮಿಕರು ಇನ್ನೂ ಹೆಚ್ಚಿನ ಶ್ರದ್ದೆಯಿಂದ ತಮ್ಮ ಕೆಲಸ ಮಾಡಬೇಕು. ಏನಾದರೂ ಬೇಡಿಕೆಗಳಿದ್ದಲ್ಲಿ ಪಾಲಿಕೆ ಅಥವಾ ತಮಗೆ ಸಲ್ಲಿಸಬಹುದೆಂದರು.
ಯಾವುದೇ ಯೋಜನೆಯ ಅಂದಾಜು ಪಟ್ಟಿಯನ್ನು ತಯಾರಿಸುವಾಗ ಮೂಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಬೇಕು. ಉಳಿಕೆ, ವ್ಯತ್ಯಾಸಗಳು ಆಗದಂತೆ ನೋಡಿಕೊಳ್ಳಬೇಕು. ಸಕಾಲಿಕವಾಗಿ ಪ್ರಸ್ತಾವನೆಗಳನ್ನು ನೀಡಿ ಅಪ್‍ಡೇಟ್ ಮಾಡಬೇಕು ಎಂದರು.
14 ನೇ ಹಣಕಾಸು ಯೋಜನೆಯಡಿ ಇನ್ನೂ ಅನುದಾನ ಬಾಕಿ ಉಳಿಸಿಕೊಳ್ಳಲಾಗಿದೆ. 14 ನೇ ಹಣಕಾಸು ಅನುದಾನ ಖರ್ಚು ಮಾಡಿದರೆ 15 ನೇ ಹಣಕಾಸು ಬಿಡುಗಡೆಯಾಗುತ್ತದೆ. ನಿಗದಿತ ಅವಧಿಯೊಳಗೆ ಅನುದಾನ ಬಳಕೆ ಮಾಡಿಕೊಳ್ಳಬೇಕು.
ಹಾಗೂ ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಶೇ.50 ಕೆಲಸ ಮಾತ್ರ ಆಗಿದ್ದು, ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಪೌರಕಾರ್ಮಿಕರ ಆರೋಗ್ಯ ತಪಾಸಣೆ, ಸಮರ್ಪಕವಾದ ಪರಿಕರಗಳನ್ನು ನೀಡುವುದರೊಂದಿಗೆ ಪೌರ ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಅವರಿಗೆ ತಲುಪಿಸಬೇಕೆಂದರು.
ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ ಪಾಲಿಕೆಯ ವಿವಿಧ ಯೋಜನೆಗಳ ಪ್ರಗತಿಯನ್ನು ವಿವರಿಸಿ, ಆಶ್ರಯ ಯೋಜನೆಯಡಿ ಗೋವಿಂದಾಪುರದಲ್ಲಿ 3000 ಜಿ+2 ಮಾದರಿಯ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು 624 ಮನೆಗಳು ಪೂರ್ಣಗೊಂಡು ಫಲಾನುಭವಿಗಳಿಗೆ ನೀಡಲಾಗಿದೆ. ಮುಂದಿನ ಮಾರ್ಚ್ ಒಳಗೆ 600 ಮನೆಗಳು ಪೂರ್ಣಗೊಳ್ಳಲಿವೆ. ಬ್ಯಾಂಕ್ ಸಾಲ ಸಮಸ್ಯೆಗೆ ಸಂಬಧಿಸಿದಂತೆ ಬ್ಯಾಂಕ್‍ನವರೊಂದಿಗೆ ಸಭೆಗಳನ್ನು ನಡೆಸಿ ಪರಿಹರಿಸಲಾಗುತ್ತಿದೆ. ಗೋಪಿಶೆಟ್ಟಿಕೊಪ್ಪದಲ್ಲಿ 1836 ಜಿ +2 ಮನೆಗಳು ಮಂಜೂರಾಗಿದ್ದು ಕಾಮಗಾರಿ ಸದ್ಯಕ್ಕೆ ಸ್ಥಗಿತವಾಗಿದೆ. ಮುಂದುವರೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಅಮೃತ 2.0 ಯೋಜನೆಯಡಿ ನವುಲೆ, ತ್ಯಾವರೆಚಟ್ನಹಳ್ಳಿ, ಹರಿಗೆ, ಗೋಪಿಶೆಟ್ಟಿಕೊಪ್ಪದ ಕೆರೆ ಪುನಶ್ಚೇತನ-ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗಿದೆ. ನಗರದಲ್ಲಿ ಪಿಪಿಡಿ ಮಾದರಿಯಲ್ಲಿ ಹಳೆಯ ಬೀದಿ ದೀಪಗಳನ್ನು ಬದಲಾಯಿಸಿ ಎಲ್‍ಇಡಿ ಬೀದಿದೀಪ ಅಳವಡಿಸಿ ಕೇಂದ್ರೀಕೃತ ಚಾಲನೆ ಮತ್ತು ನಿರ್ವಹಣೆ ಯೋಜನೆಯಡಿ 16495 ಬೀದಿ ದೀಪ ಅಳವಡಿಕೆ ಆಗಿದೆ. ಸ್ವಚ್ಚ ಭಾರತ ಅಭಿಯಾನ 1.0 ಜಾರಿಯಲ್ಲಿದ್ದು, ಅಬ್ಬಲಗೆರೆಯ ಕೈಬಿಡಲಾದ ಕ್ವಾರಿಯೊಂದರಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಲಿಗೆಸಿ ತ್ಯಾಜ್ಯ ನಿರ್ವಹಣೆ ಉತ್ತಮವಾಗಿ ಆಗುತ್ತಿದೆ.
ನಗರದಲ್ಲಿ 4 ಇಂದಿರಾ ಕ್ಯಾಂಟಿನ್ ಇದ್ದು ಇನ್ನೂ 2 ಕ್ಯಾಂಟಿನ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾಲಿಕೆಯಲ್ಲಿ ಒಟ್ಟು 104869 ಲಕ್ಷ ಆಸ್ತಿ ಇದ್ದು, ರೂ.3674.67 ಲಕ್ಷ ಕರ ವಸೂಲಾತಿ ಆಗಿದೆ. ಬಾಕಿ 848.63 ಲಕ್ಷ ಇದ್ದು ಒಟ್ಟು ಶೇ.81.23 ಕರ ವಸೂಲಾತಿ ಆಗಿದೆ. 279 ಮಳಿಗೆಗಳು ಇದ್ದು ಶೇ 40.47 ವಸೂಲಾತಿ ಆಗಿದೆ. ಜಾಹಿರಾತು ತೆರಿಗೆ ವಸೂಲಾತಿ ಶೇ.75.13 ಆಗಿದೆ. 2 ಬಾರಿ ಉದ್ದಿಮೆ ಪರವಾನಗಿ ಮೇಳ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 2777 ಉದ್ದಿಮೆ ಪರವಾನಗಿ ನೀಡಲಾಗಿದೆ ಎಂದರು.
ಡೇ-ನಲ್ಮ್ ಯೋಜನೆಯಡಿ ಸ್ವಯಂ ಉದ್ಯೋಗ, ಸ್ವಸಹಾಯ ಸಂಘದ ಗುಂಪಿಗೆ ಸಾಲ, ಪ್ರದೇಶ ಮಟ್ಟದ ಒಕ್ಕೂಟ, ಬೀದಿ ಬದಿ ವ್ಯಾಪಾರಸ್ಥರಿಗೆ ಪಿಎಂ ಸ್ವನಿಧಿ ಆತ್ಮ ನಿರ್ಭರ್ ಯೋಜನೆಯಡಿ ಸಾಲ, ನಗರ ವಸತಿರಹಿತ ನಿರಾಶ್ರಿತರಿಗೆ ನಿರಾಶ್ರಿತರ ಕೇಂದ್ರ ಸ್ಥಾಪಿಸಲಾಗಿದೆ. ಪಿಎಂ ಸ್ವನಿಧಿ ಯೋಜನೆಯಡಿ 1ನೇ ಹಂತದಲ್ಲಿ ರೂ.10 ಸಾವಿರ ಸಾಲವನ್ನು 5089 ಜನರಿಗೆ, ಎರಡನೇ ಹಂತದಲ್ಲಿ ರೂ.20 ಸಾವಿರವನ್ನು 2299 ಮತ್ತು 3ನೇ ಹಂತದಲ್ಲಿ 382 ಜನರಿಗೆ ನಿಗದಿತ ಗುರಿಗಿಂತ ಹೆಚ್ಚಿನ ಸಾಲವನ್ನು ನೀಡಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಗಳ ಎರಡು ಸ್ವಸಹಾಯ ಸಂಘಗಳನ್ನು ರಚಿಸಲಾಗಿದ್ದು, ವಸತಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದರು.
ನಗರ ನೀರು ಸರಬರರಾಜು ಮಂಡಳಿಯ ಕಾರ್ಯಪಾಲಕ ಅಭಿಯಂತರ ಸಿದ್ದಣ್ಣ ಮಾತನಾಡಿ, ನಗರದಲ್ಲಿ 59 ಓಹೆಚ್‍ಟಿ ಗಳಿವೆ. ಗಾಜನೂರು ಜಲಾಶಯದಲ್ಲಿ ಒಳಹರಿವು ಕಡಿಮೆ ಇದ್ದು ಜನವರಿ, ಫೆಬ್ರವರಿ ವರೆಗೆ ನೀರು ಆಗಬಹುದು. ಆನಂತರ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದರು.
ಪೌರಕಾರ್ಮಿಕ ಸಂಘದ ಅಧ್ಯಕ್ಷರು, ಪೌರಕಾರ್ಮಿಕರ ಮೆಡಿಕಲ್ ಬಿಲ್, ಗುಂಪುವಿಮೆ, ಜ್ಯೋತಿ ಸಂಜೀವಿನಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಸಭೆಯಲ್ಲಿ ಡಿಯುಡಿಸಿ ಯೋಜನಾ ನಿರ್ದೇಶಕ ಮನೋಹರ್, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.
(ಫೋಟೊ ಇದೆ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments