ದಾವಣಗೆರೆ.ಜೂನ್:13- ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು 400 ಹಾಸಿಗೆ ಸಾಮಥ್ರ್ಯದ ಹೊಸ ಬ್ಲಾಕ್ ನಿರ್ಮಾಣ ಮಾಡಲು ರೂ.260 ಕೋಟಿಗೆ ಸರ್ಕಾರ ಮಂಜೂರಾತಿ ನೀಡಿದ್ದು ಆದಷ್ಟು ಬೇಗ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಆಸ್ಪತ್ರೆಗೆ ಕ್ರಿಟಿಕಲ್ ಕೇರ್ ಸೆಂಟರ್‍ನ್ನು 16.6 ಕೋಟಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ಇದರಿಂದ ತುರ್ತು ಸಂದರ್ಭದಲ್ಲಿ ಎಲ್ಲಾ ಚಿಕಿತ್ಸೆ ಮತ್ತು ಪರೀಕ್ಷಾ ಸೌಲಭ್ಯವು ಒಂದೇ ಬ್ಲಾಕ್‍ನಲ್ಲಿ ಸಿಗುವಂತಾಗಲಿದೆ. ಮತ್ತು ನೂತನ ಬ್ಲಾಕ್‍ನ್ನು ವರ್ಷದಲ್ಲಿ ಪೂರ್ಣಗೊಳಿಸುವುದರ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಚಿಕಿತ್ಸೆಗೆ ಸಹಕಾರಿಯಾಗಬೇಕೆಂದರು.
ಮರಿಯಮ್ಮನಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ಬರುವ ಹರಿಹರ, ಮಲೆಬೆನ್ನೂರು, ಹೊನ್ನಾಳಿ ಭಾಗದಲ್ಲಿ ಸಾಕಷ್ಟು ಗುಂಡಿಗಳಿರುವುದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿರುವ ಬಗ್ಗೆ ದೂರುಗಳು ಇದ್ದು ಇದನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ದಿ ಮಾಡಲು ಆದಷ್ಟು ಬೇಗ ಡಿಪಿಆರ್ ತಯಾರಿಸಿ ಯೋಜನೆ ಸಿದ್ದಪಡಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಲೋಕೋಪಯೋಗಿ ಇಲಾಖೆಯವರು ಕೆಲವು ಕಾಮಗಾರಿಗಳನ್ನು ಟೆಂಡರ್ ಕರೆದಿಲ್ಲ ಮತ್ತು ಕೆಲವು ಕಾಮಗಾರಿಗಳನ್ನೇ ಆರಂಭಿಸಿಲ್ಲದ ಬಗ್ಗೆ ಸಚಿವರು ಅದಷ್ಟು ಬೇಗನೆ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಿ ಕೆಆರ್‍ಡಿಎಲ್, ಪಿಆರ್‍ಇಡಿ, ನಿರ್ಮಿತಿ ಕೇಂದ್ರ ಸೇರಿದಂತೆ ಸಿವಿಲ್ ಕಾಮಗಾರಿ ವಿಭಾಗದವರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲು ಸೂಚನೆ ನೀಡಿದರು.
ಮರಳು ಬ್ಲಾಕ್‍ಗಳನ್ನು ಪಾರದರ್ಶಕವಾಗಿ ಹರಾಜು ಮಾಡಲು ಸೂಚನೆ; ಮರಳು ನೀತಿ 2020 ರನ್ವಯ ಹರಿಹರ, ಹೊನ್ನಾಳಿ ಹಾಗೂ ನ್ಯಾಮತಿ ಭಾಗದಲ್ಲಿ ತುಂಗಭದ್ರಾ ನದಿ ಪಾತ್ರದಲ್ಲಿ ಗುರುತಿಸಲಾದ ಮರಳು ಬ್ಲಾಕ್‍ಗಳನ್ನು ಅತ್ಯಂತ ಪಾರದರ್ಶಕವಾಗಿ ಹರಾಜು ಪ್ರಕ್ರಿಯೆ ನಡೆಸಲು ಸೂಚನೆ ನೀಡಲಾಗಿದೆ. ಯಾವುದೇ ಮುಲಾಜಿಲ್ಲದೇ ಪಾರದರ್ಶಕವಾಗಿ ಹರಾಜು ಮಾಡಲು ಸಚಿವರು ಸೂಚನೆ ನೀಡಿದರು. ಈ ವೇಳೆ ಶಾಸಕರಾದ ಡಿ.ಜಿ.ಶಾಂತನಗೌಡ್ರು ಮರಳು ಸಮಸ್ಯೆ ಹೆಚ್ಚಿರುವುದರಿಂದ ಆದಷ್ಟು ಬೇಗೆ ಟೆಂಡರ್ ಅಂತಿಮಗೊಳಿಸಲು ತಿಳಿಸಿದಾಗ ಈಗ ಮಳೆಗಾಲ ಆರಂಭವಾಗಿರುವುದರಿಂದ ಮರಳು ಎತ್ತಲು ಸಾಧ್ಯವಾಗದಿರುವುದರಿಂದ ಡಿಸೆಂಬರ್ ನಂತರದಲ್ಲಿ ನದಿ ಮರಳು ಎತ್ತುವಳಿ ಮಾಡಲು ಟೆಂಡರ್‍ದಾರರು ಬರುವರು ಎಂದು ಹರಿಹರ ಶಾಸಕರಾದ ಬಿ.ಪಿ.ಹರೀಶ್ ಧ್ವನಿಗೂಡಿಸಿದರು.
ತುಂಗಭದ್ರಾ ನದಿಪಾತ್ರದಲ್ಲಿ 24 ಮರಳು ಬ್ಲಾಕ್‍ಗಳನ್ನು ಗುರುತಿಸಿ ಇದರಲ್ಲಿ 4 ಬ್ಲಾಕ್‍ಗಳನ್ನು ಸರ್ಕಾರಿ ಕಾಮಗಾರಿಗಳಿಗಾಗಿ ಮೀಸಲಿರಿಸಿ ಉಳಿದ 20 ಬ್ಲಾಕ್‍ಗಳಿಗೆ ಟೆಂಡರ್ ಕರೆದು ಅಂತಿಮಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
ಕೆರೆ ತುಂಬಿಸಲು ಸೂಚನೆ; ಈಗಾಗಲೇ ಜಗಳೂರು ಮತ್ತು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗಳು ಮುಕ್ತಾಯವಾಗಿವೆ. ಜಗಳೂರು ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಲು ಪ್ರಾರಂಭಿಸಬೇಕು. ಆದರೆ ಇನ್ನೂ ಏಕೆ ವಿಳಂಬ ಮಾಡಲಾಗುತ್ತಿದೆ ಎಂದು ಸಚಿವರು ಜಲಸಂಪನ್ಮೂಲ ಅಧಿಕಾರಿಗಳಿಗೆ ಸೂಚನೆ ನೀಡಿದಾಗ ಪ್ಯಾನಲ್‍ಗಳನ್ನು ಅಳವಡಿಸಲಾಗುತ್ತಿದ್ದು ಜುಲೈನಿಂದ ಪ್ರಾರಂಭಿಸಲಾಗುತ್ತದೆ ಎಂದರು. ಮತ್ತು ಸಚಿವರು ಕೆರೆಗೆ ನೀರು ತುಂಬಿಸುವ ಯೋಜನೆಗೆ ಪೈಪ್ ಅಳವಡಿಕೆಗೆ ರೂ.18 ಕೋಟಿಗೆ ಟೆಂಡರ್ ಮತ್ತು ರೂ.75 ಕೋಟಿ ಕಾಮಗಾರಿಗೆ ಆದಷ್ಟು ಬೇಗ ಟೆಂಡರ್ ಕರೆಯಲು ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರಾದ ಡಿ.ಜಿ.ಶಾಂತನಗೌಡ್ರು, ಬಿ.ದೇವೇಂದ್ರಪ್ಪ, ಬಿ.ಪಿ.ಹರೀಶ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಗ್ಯಾರಂಟಿ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಶಾಮನೂರು ಬಸವರಾಜು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
=====