ಜಗಳೂರು:ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಾಗೂ ನಮ್ಮ ಭಾಷಾ ಇತಿಹಾಸದಲ್ಲಿ ಇಡೀ ವಿಶ್ವಕ್ಕೆ ಕೊಟ್ಟ ಕಾಣಿಕೆಯೆಂದರೆ ಅದು ದಾಸ ಸಾಹಿತ್ಯವಾಗಿದೆ ಎಂದು ಕನ್ನಡ ಶಿಕ್ಷಕರಾದ ಅಜ್ಜಯ್ಯ.ಪಿ. ಅವರು ಅಭಿಪ್ರಾಯಪಟ್ಟರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಜಗಳೂರು ಹಾಗೂ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆ ಅಣಬೂರು ಇವರ ಸಂಯುಕ್ತಾಶ್ರಯದಲ್ಲಿ ಅಣಬೂರು ಗ್ರಾಮದ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಜರುಗಿದ ಶಾಲಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ “ಪುರಂದರದಾಸರು” ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಪುರಂದರ ದಾಸರ ಮೊದಲ ಹೆಸರು ಶ್ರೀನಿವಾಸ ನಾಯಕ. ಮೊದಲು ಹಣದ ಬಗ್ಗೆ ಸಾಕಷ್ಟು ವ್ಯಾಮೋಹ ಪುರಂದರದಾಸರಿಗಿತ್ತು. ಒಂದು ಅನಿರೀಕ್ಷಿತ ಘಟನೆ ಅವರಲ್ಲಿ ಹಣದ ಬಗ್ಗೆ ವೈರಾಗ್ಯ ಮೂಡಲು ಕಾರಣವಾಯಿತು.
ತದನಂತರ ಪುರಂದರದಾಸರು ತನ್ನಲ್ಲಿ ಇರುವಂತಹ ಎಲ್ಲಾ ಸಂಪತ್ತನ್ನು ದಾನ ಮಾಡಿ, ಎಲ್ಲವನ್ನೂ ತ್ಯಜಿಸುತ್ತಾರೆ.
ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ತಮ್ಮ ಅನುಭವವನ್ನು ಸಾರುತ್ತಾ ಸಾಗಿದರು.
ಹೀಗೆ ದಾಸ ಪರಂಪರೆಯನ್ನು ಮುಂದುವರೆಸಿದವರು ಪುರಂದರದಾಸರು ಎಂಬುದಾಗಿ ಶಿಕ್ಷಕ ಅಜ್ಜಯ್ಯ.ಪಿ. ರವರು ವಿಷಯ ಮಂಡನೆ ಮಾಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಚಂಪಾವತಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಯುವ ಸಾಹಿತಿ ಚಂದ್ರಕಾಂತ.ಹೆಚ್. ರವರು ಮಾತನಾಡಿ ವಿದ್ಯಾರ್ಥಿ ಜೀವನದಿಂದಲೂ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು.
ಹಾಗೆಯೇ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮತ್ತು ಆಸಕ್ತಿ ಮೂಡಲು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪೂರಕವಾಗಬಲ್ಲವು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕರಾದ ಕುಮಾರ ನಾಯ್ಕರವರು ಮಾತನಾಡಿ ಕಲಿಯಲು ಎಷ್ಟೋ ಭಾಷೆಗಳಿದ್ದರೂ ಸಹ ಕನ್ನಡಕ್ಕೆ ಮೊದಲ ಆದ್ಯತೆ ಇರಬೇಕು.
ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಬೇಕು. ಬೇರೆಯವರಿಗೆ ನಮ್ಮ ಕನ್ನಡ ಭಾಷೆಯನ್ನು ಕಲಿಸಬೇಕು.
ಕನ್ನಡ ಉಳಿಯಲಿ ಬೆಳೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.
ಹತ್ತನೇ ತರಗತಿಯ ವಿದ್ಯಾರ್ಥಿನಿಯರು ಸೊಗಸಾಗಿ ಪ್ರಾರ್ಥಿಸಿದರು. ಪ್ರ ಶಿಕ್ಷಣಾರ್ತಿ ಎನ್.ಟಿ.ಸ್ವಪ್ನಾ ರವರು ಸ್ವಾಗತಿಸಿದರು.
ಈ ಕಾರ್ಯಕ್ರಮಕ್ಕೆ ಕನ್ನಡ ಶಿಕ್ಷಕರಾದ ಲೋಕೇಶ್.ಬಿ.ಅವರು ಸೊಗಸಾದ ನಿರೂಪಣೆ ಮಾಡಿದರು. ಪ್ರ ಶಿಕ್ಷಣಾರ್ತಿ ಸಿ.ಎಂ.ಐಶ್ವರ್ಯ ರವರು ವಂದಿಸಿದರು. ಮುಖ್ಯ ಶಿಕ್ಷಕರಾದ ಕುಮಾರ ನಾಯ್ಕ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಿವಪ್ರಕಾಶ್, ಶಿಕ್ಷಕಿ ಶೈಲಜ, ಸುನಿಲ್ ಕುಮಾರ್, ಮಾರುತೇಶ್, ಗೌತಮ್ ಹಾಗೂ ಪ್ರ ಶಿಕ್ಷಣಾರ್ತಿಗಳಾದ ಶೋಭಾ.ಕೆ, ಸೋಮ ಶೇಖರ.ಪಿ, ಗಿರೀಶ್.ಕೆ.ಎನ್, ಮೇಹತಾಜ್ ಬಾನು.ಎಂ ಮತ್ತು ಸಿಬ್ಬಂದಿ ವರ್ಗ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.