ದಾವಣಗೆರೆ ಮಹಾನಗರ ಪಾಲಿಕೆಯಿಂದ 68 ನೇ ಕರ್ನಾಟಕ ರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಸಮಾಜದ ವಿವಿಧ ಸ್ತರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ನೀಡುವ “ರಾಜ್ಯೋತ್ಸವ ಸನ್ಮಾನ”ಕ್ಕೆ ದಾವಣಗೆರೆ ನಗರದ ಕೆನರಾ ಬ್ಯಾಂಕ್ ಉದ್ಯೋಗಿ ಕೆ.ರಾಘವೇಂದ್ರ ನಾಯರಿ ಭಾಜನರಾಗಿದ್ದಾರೆ.
ಕಳೆದ ಮೂರು ದಶಕಗಳಿಂದ ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಕೆ.ರಾಘವೇಂದ್ರ ನಾಯರಿಯವರ ಕಾರ್ಮಿಕ ಸಂಘಟನಾ ಕ್ಷೇತ್ರದಲ್ಲಿನ ಅವರ ಸೇವೆಯನ್ನು ಪರಿಗಣಿಸಿ ಮಹಾನಗರ ಪಾಲಿಕೆಯವರು ನಾಯರಿಯವರನ್ನು ರಾಜ್ಯೋತ್ಸವ ಸನ್ಮಾನಕ್ಕೆ ಆಯ್ಕೆ ಮಾಡಿದ್ದಾರೆ. ನಾಯರಿಯವರು ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಕಾರ್ಮಿಕ ಸಂಘಟನೆಯ ದಾವಣಗೆರೆ ಜಿಲ್ಲಾಧ್ಯಕ್ಷರಾಗಿ, ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್‌ನ ರಾಷ್ಟ್ರೀಯ ಸಹ ಖಜಾಂಚಿಯಾಗಿ, ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಪೆಡರೇಶನ್‌ನ ಜಂಟಿ ಕಾರ್ಯದರ್ಶಿಯಾಗಿ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ, ರಾಷ್ಟ್ರೀಯ ಮಟ್ಟದ ಮೂರೂ ಸ್ತರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕ ಸಂಘಟನೆ ಮಾತ್ರವಲ್ಲದೇ ಯಕ್ಷಗಾನ ಕಲೆ, ಕನ್ನಡ ಸಾಹಿತ್ಯ ಪರಿಷತ್ತು, ಸಾಮಾಜಿಕ ಹೋರಾಟ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ನಾಯರಿಯವರನ್ನು ಅರ್ಹವಾಗಿಯೇ ದಾವಣಗೆರೆ ಮಹಾನಗರ ಪಾಲಿಗೆ ಗುರುತಿಸಿದೆ. ಸನ್ಮಾನ ಸಮಾರಂಭದಲ್ಲಿ ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಮಾಜಿ ಸಚಿವರು ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಮಾಜಿ ಮೇಯರ್ ಎಸ್.ಟಿ.ವೀರೇಶ್, ಪಾಲಿಕೆ ಸದಸ್ಯರಾದ ಎ.ನಾಗರಾಜ್, ಪ್ರಸನ್ನಕುಮಾರ್, ಮಾಜಿ ಮಹಾನಗರ ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಉಪಸ್ಥಿತರಿದ್ದು ನಾಯರಿಯವರನ್ನು ಸನ್ಮಾನಿಸಿದರು.
ದಾವಣಗೆರೆ ಮಹಾನಗರ ಪಾಲಿಕೆಯಿಂದ ಮಾಡಿದ ಈ ರಾಜ್ಯೋತ್ಸವ ಸಮ್ಮಾನವು ನನ್ನ ಇನ್ನಷ್ಟು ಕಾರ್ಮಿಕ ಸಂಘಟನೆಗೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆ ಹಾಗೂ ಸ್ಪೂರ್ತಿ ನೀಡುತ್ತದೆ ಸನ್ಮಾನ ಸ್ವೀಕರಿಸಿದ ನಾಯರಿ ಪ್ರತಿಕ್ರಿಯಿಸಿದ್ದಾರೆ.