Thursday, August 21, 2025
Homeಸಂಸ್ಕೃತಿಅಮ್ಮನ ಸೆರಗು ಅದರ ಮಹತ್ವ……

ಅಮ್ಮನ ಸೆರಗು ಅದರ ಮಹತ್ವ……

ಇಂದಿನ ಮಕ್ಕಳಿಗೆ ಅಮ್ಮನ ಸೆರಗು ಎಂದರೇನು ಅಂತಲೇ ಗೊತ್ತಿಲ್ಲ, ಏಕೆಂದರೆ ಅಮ್ಮ ಸೀರೆ ಉಡುವುದೇ ಇಲ್ಲ . ಹಬ್ಬಕ್ಕೆ, ಸಮಾರಂಭಕ್ಕೆ ಉಡುವ ಸೀರೆಯ ಸೆರಗು ಇದಲ್ಲ. ಅದು ಬಲು ನಾಜೂಕು. ಇದರ ಮಹಿಮೆಯೇ ಬೇರೆ. ಉಪಯೋಗವಂತೂ ಒಂದಕ್ಕಿಂತ ಒಂದು.

ಮಗು ಅತ್ತರೆ ಕಣ್ಣೊರೆಸಲು ಸೆರಗೇ ಟವೆಲ್. ಮಗುವಿನ ಮೂಗು, ಕಿವಿ ಸ್ವಚ್ಛಗೊಳಿಸಲು, ಆಟವಾಡಿ ಬಂದಾಗ ಬೆವೆತ ಮುಖ ಒರೆಸಲು ಇದೇ ಕರವಸ್ತ್ರ.

ಮಗು ತೊಡೆಯ ಮೇಲೆ ಮಲಗಿ ನಿದ್ದೆ ಮಾಡಿದರೆ ಈ ಸೆರಗೇ ಬೀಸಣಿಗೆ, ಚಳಿಯಾದರೆ ಹೊದಿಕೆ.

ಯಾರಾದರೂ ಹೊಸಬರು ಬಂದರೆ ನಾಚುವ ಮಗುವಿಗೆ ಅಮ್ಮನ ಸೆರಗೇ ಬಚ್ಚಿಟ್ಟು ಕೊಳ್ಳಲು ಆಸರೆ. ಜೊತೆಗೆ ಅದರ ಮರೆಯಿಂದಲೇ ಮೆಲ್ಲಗೆ ಕದ್ದು ನೋಡಲೂ ಬಹುದು.

ಅಮ್ಮನ ಸೆರಗು ಹಿಡಿದು ಬಿಟ್ಟರೆ ಸಾಕು. ಮಗು ಅಮ್ಮನ ಹಿಂದೆ ಜಗವನ್ನೇ ಸುತ್ತಬಹುದು.

ಮಳೆ ಬಂದು ನೆನೆಯುವ ಸ್ಥಿತಿ ಬಂದರೆ ತಾನು ನೆಂದರೂ ಪರವಾಗಿಲ್ಲ, ಮಗುವಿಗೆ ಸೆರಗಿನ ಆಸರೆ ಖಂಡಿತ. ಹಣೆಯ ಬೆವರು, ನೆಂದ ಒದ್ದೆ ತಲೆ ಇತ್ಯಾದಿಗಳನ್ನು ಒರೆಸಲು ಸೆರಗು ಸದಾ ಸಿದ್ದ.

ಕರಿದ ತಿಂಡಿಗಳನ್ನು ಮಕ್ಕಳಿಗೆ ಕೊಡಬೇಡವೆಂದು ಗದರುವ ಸಮಯದಲ್ಲಿ ಸೆರಗಿನ ಮರೆಯೇ ಮುಚ್ಚಿಟ್ಟು ಕೊಡಲು ಯೋಗ್ಯ ಜಾಗ.

ತರಕಾರಿ ಅಥವಾ ಯಾವುದಾದರು ಸಾಮಾನು ತರಲು ಚೀಲ ಮರೆತರೆ ಸೆರಗು ಇದ್ದೇ ಇರುತ್ತಿತ್ತು.

ಗಿಡದಿಂದ ಬಿಡಿಸಿದ ಹೂವುಗಳಿಗೆ, ಮಾರುಕಟ್ಟೆಯಿಂದ ತರುವ ತರಕಾರಿಗಳಿಗೆ ಒಮ್ಮೊಮ್ಮೆ ಸೆರಗೇ ಬುಟ್ಟಿ.

ಮನೆಗೆ ಯಾರಾದರೂ ಇದ್ದಕ್ಕಿದ್ದಹಾಗೆ ಬಂದು ಬಿಟ್ಟಾಗ ಕುರ್ಚಿಯ ಮೇಲೆ ಧೂಳು ಇದ್ದರೆ ಒರೆಸಲು ಸೆರಗೇ ಸಾಧನ.

ತಕ್ಷಣ ಮಸಿ ಅರಿವೆ ದೊರಕದಿದ್ದಾಗ ಒಲೆಮೇಲೆ ಉಕ್ಕುವ ಹಾಲಿನ ಬಿಸಿ ಪಾತ್ರೆ ಇಳಿಸಲಿಕ್ಕೂ ಅಮ್ಮನ ಸೆರಗು ಬೇಕು.

ತಲೆಯ ಮೇಲೆ ಕಟ್ಟಿಗೆಯ ಹೊರೆ, ಹುಲ್ಲಿನ ಹೊರೆ ಹೊರಲು ಅಮ್ಮನ ಸೆರಗು ಬೇಕು.

ಮಂಗಲ ಕಾರ್ಯಗಳಲ್ಲಿ ಕೊಡುವ ಉಡಿಯಕ್ಕಿ ಬಾಗಿಣ ಇತ್ಯಾದಿ ಸ್ವೀಕರಿಸಲು ಹಾಗೂ ದೇವಸ್ಥಾನದಲ್ಲಿ ಕೊಡುವ ಪ್ರಸಾದ ಸ್ವೀಕರಿಸಲು ಅಮ್ಮನ ಸೆರಗು ಬೇಕು.

ಸಿಟ್ಟು ಬಂದರೆ ಅಥವಾ ಏನಾದರೂ ಮಾಡಲೇ ಬೇಕೆನ್ನುವ ಛಲ ಬಂತೆಂದರೆ ಅಮ್ಮ ಸೆರಗು ಕಟ್ಟಿದಳೆಂದರೆ ಆಯಿತು. ಕೆಲಸ ಆದಂತೆಯೇ. ಅಮ್ಮನೆನಾದರೂ ಸೆರಗು ಕಟ್ಟಿದಳೆಂದರೆ ಅಪ್ಪನೂ ಹೆದರುತ್ತಾನೆ.

ಹಬ್ಬ, ಉತ್ಸವಗಳಿಗಳಿಗೆ ಮುಂಚೆ ಅಮ್ಮ ಸೆರಗು ಕಟ್ಟಿದಳೆಂದರೆ ಮನೆಯಲ್ಲಿನ ಜೇಡ, ಜಿರಲೆ ಇತ್ಯಾದಿ ಕ್ರಿಮಿಕೀಟಗಳಿಗೆ ಉಳಿಗಾಲವಿಲ್ಲ. ಮನೆಯನ್ನು ಧೂಳು ಮುಕ್ತಗೊಳಿಸಿ ಗೋಡೆಗಳಿಗೆ ಸುಣ್ಣ, ನೆಲಕ್ಕೆ ಸಾರಣೆ ಮಾಡಿದ ನಂತರವೇ ಸೊಂಟಕ್ಕೆ ಕಟ್ಟಿದ ಸೆರಗಿಗೆ ಮುಕ್ತಿ.

ಹಾಗೆಯೇ ಅಮ್ಮನೇನಾದರೂ ಸೆರಗೊಡ್ಡಿ ಬೇಡಿದಳೆಂದರೆ ಎಂತಹ ಕಲ್ಲು ಮನಸ್ಸೂ ಕರಗಿ ಬಿಡುತ್ತದೆ.

ಅಮ್ಮ ಮತ್ತು ಅವಳ ಸೀರೆಯ ಸೊಬಗನ್ನು ವರ್ಣಿಸಲು ಪದಗಳೇ ಸಾಲದು. ಇಂತಹ ಮಹಿಮೆಗಳುಳ್ಳ ಸೆರಗು ಈಗ ಎಲ್ಲಿ ಮಾಯವಾಯಿತೋ..!?

ಅಲ್ಲದೆ ಹೆಂಡತಿಯ ಸೆರಗನ್ನು ಹಿಡಿದು ಸದಾ ಅವಳ ಹಿಂದೆಯೇ ತಿರುಗುವ ಗಂಡ ಎಲ್ಲಿ ಹೋದನೋ? ಸೆರಗೇ ಇಲ್ಲದಿದ್ದ ಮೇಲೆ ಇನ್ನು ಅದನ್ನು ಹಿಡಿವ ಗಂಡನೆಲ್ಲಿ?

(ಸಂಗ್ರಹ)Naveed Magundi.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments