2023-24ನೇ ಶೈಕ್ಷಣಿಕ ವರ್ಷ ಸುಗಮವಾಗಿ ಸಾಗುತ್ತಿರುವಾಗಲೇ ಸುಪ್ರೀಂಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿರುವ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಖಂಡನೀಯವಾದದ್ದು.
ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಜಾರಿಗೊಳಿಸಿ ಬಡವ- ಶ್ರೀಮಂತ; ಮೇಲು-ಕೀಳು; ಜಾತಿ- ಮತಗಳ; ತಾರತಮ್ಯಗಳನ್ನು ಹೋಗಲಾಡಿಸಿ ವಿದ್ಯಾರ್ಥಿಗಳು ಅನುಶಾಸನದ ಶಿಕ್ಷಣ ಪಡೆಯಲಿ ಎಂಬ ಉದ್ದೇಶ ಸರಕಾರಿ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಆದೇಶವನ್ನು ಮಾಡಿತ್ತು.
ಇದನ್ನು ಪ್ರಶ್ನಿಸಿ, ತರಗತಿಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯವು ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಹಾಗೂ ಕರ್ನಾಟಕ ಸರ್ಕಾರದ ಆದೇಶವು ಸಂವಿಧಾನಬದ್ಧವಾಗಿದೆ ಎಂದು ತೀರ್ಪು ನೀಡಿತ್ತು. ಅಷ್ಟೇ ಅಲ್ಲದೆ ಈ ವಿಚಾರದಲ್ಲಿ ಮತೀಯ ಸಂಘಟನೆಗಳ ಕೈವಾಡದ ಕುರಿತು ಸಂಶಯವನ್ನು ವ್ಯಕ್ತಪಡಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿ, ಸುಪ್ರೀಂ ಕೋರ್ಟಿನ ದ್ವಿ ಸದಸ್ಯ ಪೀಠವು ಭಿನ್ನಮತದ ತೀರ್ಪನ್ನು ನೀಡಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು. ಈ ರೀತಿಯಾಗಿ ನ್ಯಾಯಾಲಯದ ಆವರಣದಲ್ಲಿರುವ ವಿಚಾರದ ಕುರಿತಾಗಿ ಮುಖ್ಯಮಂತ್ರಿ ಅವರು ಸಾರ್ವಜನಿಕವಾಗಿ ಹೇಳಿಕೆ ಕೊಡುವುದು ನಾಡಿನ ಶೈಕ್ಷಣಿಕ ಹಿತಕರ ಪರಿಸರವನ್ನು ಕಲುಷಿತಗೊಳಿಸಿದಂತಾಗುತ್ತದೆ. ಸರ್ಕಾರದ ಈ ರೀತಿಯ ನಿಲುವು ಶಾಲಾ ಕಾಲೇಜುಗಳ ಸೌಹಾರ್ದದ ವಾತಾವರಣವನ್ನು ಹಾಳುಗೆಡಹುತ್ತದೆ ಮತ್ತು ಇದರ ಲಾಭವನ್ನು ಮೂಲಭೂತವಾದಿ ಸಂಘಟನೆಗಳು ಬಳಸಿಕೊಂಡು ಸಾಮಾಜಿಕ ಸ್ವಾಸ್ತ್ಯವನ್ನು ನಾಶಮಾಡಬಹುದಾದ ಅಪಾಯವಿದೆ. ಕರ್ನಾಟಕ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸರ್ಕಾರದ ನಿಲುವುಗಳನ್ನು ವ್ಯಕ್ತಪಡಿಸುವಾಗ ಪ್ರಕರಣದ ಸೂಕ್ಷ್ಮತೆ ಮತ್ತು ನ್ಯಾಯಾಲಯದ ಆದೇಶಕ್ಕೆ ಗೌರವವನ್ನು ನೀಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪರಿಷತ್ ಆಗ್ರಹಿಸುತ್ತದೆ ಎಬಿವಿಪಿ ಕರ್ನಾಟಕ ಉತ್ತರ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.