ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಕಾಮಗಾರಿಗಳ ಉದ್ಘಾಟನೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಬಾಪೂಜಿ ಶಾಲೆ ಮುಂಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೆರವೇರಿಸಿದರು.
38ನೇ ವಾರ್ಡ್ ನ 12 ನೇ ಮುಖ್ಯರಸ್ತೆಯ 2023-24ನೇ ಸಾಲಿನ ಎಸ್ ಎಫ್ ಐ ಮುಕ್ತನಿಧಿ ಯೋಜನೆಯಡಿ 84 ಲಕ್ಷ ರೂ. ವೆಚ್ಚದ ನಿವೃತ್ತ ನೌಕರರ ಭವನದ ಮುಂಭಾಗದ ಸಿಸಿ ರಸ್ತೆ ಅಭಿವೃದ್ಧಿ, 50 ಲಕ್ಷ ರೂ. ವೆಚ್ಚದಲ್ಲಿ
ಒಂದನೇ ಕ್ರಾಸ್ ನಲ್ಲಿರುವ 1ನೇ ಮುಖ್ಯರಸ್ತೆಯ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದ ಪಕ್ಕದ ರಸ್ತೆಯ ಬೀದಿ ವ್ಯಾಪಾರಸ್ಥರಿಗೆ ಫುಡ್ ಕೋರ್ಟ್ ಹಾಗೂ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಲ್ಲಿಕಾರ್ಜುನ್ ಅವರು ಗುದ್ದಲಿ ಪೂಜೆ ನೆರವೇರಿಸಿದರು. 7ನೇ ಮುುಖ್ಯರಸ್ತೆಯ 4ನೇ ಕ್ರಾಸ್ ನಲ್ಲಿ 50 ಲಕ್ಷ ರೂ. ವೆಚ್ಚದ ಫುಡ್ ಮಾರ್ಟ್ ನಿಂದ ಬಿಐಇಟಿ ಕಾಲೇಜು ರಸ್ತೆಯವರೆಗೆ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ, 40 ಲಕ್ಷ ರೂಪಾಯಿ ವೆಚ್ಚದ 11 ನೇ ಮುಖ್ಯರಸ್ತೆಯ 6ನೇ ಕ್ರಾಸ್ ನ ಮತ್ತು 12ನೇ ಎ ಮುಖ್ಯರಸ್ತೆಯ ಸಿಸಿ ರಸ್ತೆ ಹಾಗೂ ಬಾಪೂಜಿ ಮುಂಭಾಗದಲ್ಲಿರುವ ಪಾರ್ಕ್ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾದ ಮಾಮಾಸ್ ಜಾಯಿಂಟ್ ರಸ್ತೆಯಲ್ಲಿ ಪಾದಚಾರಿ ರಸ್ತೆ, ಎಆರ್ ಜೆ ಕಾಲೇಜು ರಸ್ತೆಯಲ್ಲಿ ಪಾದಚಾರಿ ರಸ್ತೆ, ಬಾಪೂಜಿ ಸ್ಕೂಲ್ ಮುಂಭಾಗದಲ್ಲಿನ ಹೈಟೆಕ್ ಬಸ್ ನಿಲ್ದಾಣದ ಉದ್ಘಾಟನೆಯನ್ನು ಎಸ್. ಎಸ್. ಮಲ್ಲಿಕಾರ್ಜುನ್ ಅವರು ನೆರವೇರಿಸಿದರು.
ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ್ ಅವರು, ದಾವಣಗೆರೆ ನಗರದಲ್ಲಿ ನಿಂತು ಹೋಗಿದ್ದ ಅಭಿವೃದ್ಧಿ ಕಾಮಗಾರಿಗಳು ಮತ್ತೆ ಶುರುವಾಗಿವೆ. ಅಭಿವೃದ್ಧಿ ಪರ್ವ ಆರಂಭವಾಗಿದೆ. ಮತ್ತೊಮ್ಮೆ ದಾವಣಗೆರೆಯತ್ತ ಎಲ್ಲರೂ ತಿರುಗಿ ನೋಡುವಂತೆ ಕೆಲಸ ಮಾಡಲಾಗುವುದು. ಈಗ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ, ಉದ್ಘಾಟನೆ ನೆರವೇರಿಸಲಾಗುತ್ತಿದೆ. ಇದು ಆರಂಭವಷ್ಟೇ. ರಾಜ್ಯ ಸರ್ಕಾರದ 100 ಕೋಟಿ ರೂಪಾಯಿ ಅನುದಾನ ಬಂದಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಗಳು
ನಡೆಯಲಿವೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ನಿಂತು ಹೋಗಿತ್ತು. ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ, ಈ ಹಿನ್ನೆಲೆಯಲ್ಲಿ ಸುಂದರ ನಗರವಾಗಿಸಲು, ಸ್ವಚ್ಛ ನಗರವಾಗಿಸಲು, ದಾವಣಗೆರೆಯಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳತ್ತ ತಿರುಗಿ ನೋಡುವಂತೆ ಮಾಡುತ್ತೇವೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು, ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಚಿವರಾದ ಬಳಿಕ ಮತ್ತೆ ದಾವಣಗೆರೆಯಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ಈಗ ಗುದ್ದಲಿ ಪೂಜೆ, ವಿವಿಧ ಕಾಮಗಾರಿಗಳ ಉದ್ಘಾಟನೆಯೇ ಇದಕ್ಕೆ ಸಾಕ್ಷಿ. ಹಿಂದೆ ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದಾಗ ದಾವಣಗೆರೆಯ ಅಭಿವೃದ್ಧಿ ಬಗ್ಗೆ ಪ್ರತಿಯೊಬ್ಬರು ಮಾತನಾಡುತ್ತಿದ್ದರು. ಈ ಬಾರಿ ಮರುಕಳಿಸಿದೆ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ವೇಗ ಪಡೆಯಲಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಪಾಮೇನಹಳ್ಳಿ ನಾಗರಾಜ್, ಎ. ನಾಗರಾಜ್, ಬೂದಿಹಾಳ್ ಬಾಬು, ಇಇ ಮನೋಹರ್, ಎಇಇ ಪ್ರವೀಣ್, ಮಲ್ಲಿಕಾರ್ಜುನ್, ಕಲ್ಲಹಳ್ಳಿ ನಾಗರಾಜ್, ವಾರ್ಡ್ ನ ಹಿರಿಯ ನಾಗರಿಕರು, ಸ್ಥಳೀಯರು ಉಪಸ್ಥಿತರಿದ್ದರು.