ವಿಜಯಪುರ:ಮಾಜಿ ವಿಧಾನ ಪರಿಷತ್ ಸದಸ್ಯರು, ಹಿಂದುಳಿದ ವರ್ಗಗಳ ಅಗ್ರ ನಾಯಕರಾಗಿದ್ದ ಇನ್ನು ನೆನಪು ಮಾತ್ರ…
ಅವರು ತಮ್ಮ 82ನೆಯ ವಯಸ್ಸಿನಲ್ಲಿ ನಿನ್ನೆ ರಾತ್ರಿ ನಿಧನರಾಗಿದ್ದು, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ.
ನನ್ನ ತಂದೆಯ ಸ್ನೇಹಿತರಾಗಿದ್ದ ಎಸ್.ಎ. ಜಿದ್ದಿ ಅವರು 1978ರಲ್ಲಿ ತಿಕೋಟಾ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅದೇ ಸಮಯಕ್ಕೆ ನನ್ನ ತಂದೆ ಚಂದ್ರಶೇಖರ ಹೊಸಮನಿ ಅವರು ಬಳ್ಳೊಳ್ಳಿ ಮತಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಇಬ್ಬರೂ ಅಲ್ಪ ಅಂತರದಲ್ಲಿ ಸೋತಿದ್ದರು.
ಒಂದು ಕಾಲಘಟ್ಟದಲ್ಲಿ ಹಿಂದುಳಿದ ವರ್ಗಗಳ ಪ್ರಶ್ನಾತೀತ ನಾಯಕರಾಗಿದ್ದ ಎಸ್.ಎ. ಜಿದ್ದಿಯವರು, ಆಗಿನ ಮುಖ್ಯಮಂತ್ರಿ ದೇವರಾಜ ಅರಸು, ಹಿಂದುಳಿದ ವರ್ಗಗಳ ಮೇರುನಾಯಕರಾಗಿದ್ದ ಕೋಳೂರು ಮಲ್ಲಪ್ಪ ಮತ್ತು ಡಿ.ಕೆ. ನಾಯ್ಕರ್ ಅವರ ನಿಕಟ ಒಡನಾಡಿಯಾಗಿದ್ದುಕೊಂಡು ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಶಕ್ತಿಯನ್ನು ತುಂಬುವಲ್ಲಿ ಬಹುವಾಗಿ ಶ್ರಮಿಸಿದ್ದರು.
ವಿಜಾಪುರದಲ್ಲಿ ಕಾಳಿದಾಸ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಶಾಲೆ, ಕಾಲೇಜುಗಳನ್ನು, ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣೀಭೂತರಾಗಿದ್ದರು… ಅವರ ಸಮರ್ಥ ನೇತೃತ್ವದಲ್ಲಿ ಕಾಳಿದಾಸ ಶಿಕ್ಷಣ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.
ಈಚೆಗೆ ಅವರ ಅಭಿಮಾನಿಗಳು ಹೊರತಂದಿದ್ದ ‘ಕರುಣಾಮಯಿ’ ಎಂಬ ಅವರ ಅಭಿನಂದನಾ ಗ್ರಂಥವು ನಮ್ಮ ಮುದ್ರಣಾಲಯದಲ್ಲಿ ತಯಾರಾಗಿತ್ತೆಂದು ಹೇಳಲು ಹೆಮ್ಮೆಯೆನಿಸುತ್ತದೆ.
ತಮ್ಮ ಗೆಳೆಯನ ಮಗನೆಂಬ ಕಾರಣಕ್ಕೆ, ದಲಿತರು ಪತ್ರಿಕಾರಂಗದಲ್ಲಿ ಬೆಳೆಯಲೆಂಬ ಕಾರಣಕ್ಕಾಗಿ ನನ್ನನ್ನು ಮತ್ತು ನಮ್ಮ ಕುಟುಂಬವನ್ನು ಅಪಾರವಾಗಿ ಪ್ರೀತಿಸುತ್ತಿದ್ದ, ಹಲವಾರು ಸಂದರ್ಭಗಳಲ್ಲಿ ನನಗೆ ನೆರವು ನೀಡುತ್ತಿದ್ದ, ಇದೀಗ ನಮ್ಮನ್ನಗಲಿದ ನಾಯಕನಿಗೆ ಭಾವಪೂರ್ಣ ನಮನಗಳು…