ದಾವಣಗೆರೆ; ಫೆ.21: ಗಣರಾಜ್ಯೋತ್ಸವದ 75 ನೇ ವರ್ಷದ ಅಂಗವಾಗಿ ಸಂವಿಧಾನದ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಏರ್ಪಡಿಸಿದೆ. ದಾವಣಗೆರೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸಂಚರಿಸುವ ಮೂಲಕ ಕಾರ್ಯಕ್ರಮವನ್ನು ಎಲ್ಲರ ಸಹಕಾರದಿಂದ ಯಶಸ್ವಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಗುರುವಾರ ಆಫೀಸರ್ಸ್ ಕ್ಲಬ್‍ನಲ್ಲಿ ಸಂವಿಧಾನ ಜಾಗೃತಿ ಜಾಥಾ ಕುರಿತಂತೆ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಂವಿಧಾನ ಜಾಗೃತಿ ಜಾಥಾಗೆ ಜನವರಿ 26 ರಂದು ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಚಾಲನೆ ನೀಡಿದ್ದರು. ಜನವರಿ 26 ರಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಂಚರಿಸುವ ಮೂಲಕ ಜನಸಾಮಾನ್ಯರಿಗೂ ಸಂವಿಧಾನದ ಆಶಯಗಳನ್ನು ತಲುಪಿಸುವ ಕೆಲಸ ಮಾಡಲಾಗಿದೆ. ಈ ವೇಳೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಸ್ವ ಸಹಾಯ ಸಂಘದ ಮಹಿಳೆಯರು, ರೈತರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಹಿರಿಯ ನಾಗರಿಕರು ಜಾಥಾ ಸಂದರ್ಭದಲ್ಲಿ ಭಾಗವಹಿಸುವ ಮೂಲಕ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಸ್ವೀಕರಿಸಿರುತ್ತಾರೆ ಎಂದರು.
ಜಾಥಾ ವೇಳೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದು ವಿಶೇಷವಾಗಿದ್ದರೆ ಸ್ಥಳೀಯ ವಾದ್ಯ ಮೇಳಗಳು ಇದರಲ್ಲಿ ಭಾಗವಹಿಸಿವೆ. ಸ್ಥಬ್ದಚಿತ್ರದಲ್ಲಿ ಸಂವಿಧಾನ ಶಿಲ್ಪಿ ಡಾ; ಬಿ.ಆರ್.ಅಂಬೇಡ್ಕರ್ , ಬಸವಣ್ಣ, ಬುದ್ದನ ಪ್ರತಿಮೆಯನ್ನು ಅಳವಡಿಸುವ ಮೂಲಕ, ವರ್ಗ ರಹಿತ, ಸಮ ಸಮಾಜ ನಿರ್ಮಾಣ, ಬ್ರಾತೃತ್ವ ಭಾವನೆ ಬೆಳೆಸುವುದು, ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಸಾಮಾಜಿಕ, ಆರ್ಥಿಕ ನ್ಯಾಯ ಒದಗಿಸಲು ಅನುಷ್ಟಾನ ಮಾಡಿದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು ಜಾಥಾ ಉದ್ದೇಶವಾಗಿತ್ತು ಎಂದರು.
ಜಾಥಾ ವೇಳೆ ಸೈಕಲ್ ರ್ಯಾಲಿ, ಬೈಕ್ ರ್ಯಾಲಿ, ಕ್ಯಾಂಡಲ್ ಮಾರ್ಚಿಂಗ್, ಎತ್ತಿನಗಾಡಿ ಮೆರವಣಿಗೆ, ರಂಗೋಲಿ ಸ್ಪರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಅನೇಕ ಸರ್ಕಾರಿ ಕಾರ್ಯಕ್ರಮ, ಸಭೆಗಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಪ್ರಸ್ತಾವನೆ ಓದುವ ಮೂಲಕ ಪ್ರತಿಜ್ಞೆ ಮಾಡಲಾಗಿದೆ ಎಂದರು.
ಸಾಮಾಜಿಕ ಜಾಲತಾಣ ಬಳಕೆ; ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಸಾಮಾಜಿಕ ಜಾಲಥಾಣಗಳಾದ ಫೇಸ್ಬುಕ್, ಟ್ವಿಟರ್, ಇನ್‍ಸ್ಟ್ರಾಗ್ರಾಂ, ಯೂಟ್ಯೂಬ್ ಮೂಲಕ ಪ್ರಚಾರವನ್ನು ಕೈಗೊಂಡಿದ್ದು ಒಟ್ಟು 36 ಲಕ್ಷ ಲೈಕ್‍ಗಳು ಬಂದಿದ್ದು ಜಾಲತಾಣದಲ್ಲಿಯು ಎಲ್ಲಾ ವರ್ಗದ ಜನರನ್ನು ತಲುಪಲಾಗಿದೆ. ಜಾಥಾ ಮಾರ್ಚ್ 7 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಂಪನ್ನವಾಗಲಿದೆ ಎಂದರು.
ಬೇಸಿಗೆ ಎದುರಿಸಲು ಸಿದ್ದತೆ; ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಆಗಸ್ಟ್ ತಿಂಗಳಲ್ಲಿ ಶೇ 90 ರಷ್ಟು ಮಳೆ ಕೊರತೆ ಎದುರಿಸಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಇಳಿಕೆಯಾಗಿದ್ದು ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದ 19 ಗ್ರಾಮಗಳಲ್ಲಿ ಅಂತರ್ಜಲ ಕುಸಿತದಿಂದ ಖಾಸಗಿ ಬೋರ್‍ವೆಲ್ ಬಾಡಿಗೆ ಪಡೆದು 19 ಗ್ರಾಮಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಇದರ ಜೊತೆಗೆ ತೀವ್ರ ಬಿಸಿಲು ಇರುವುದರಿಂದ ಮುಂದೆ ಸಮಸ್ಯೆಯಾಗಲಿರುವ 126 ಗ್ರಾಮಗಳ ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದು ಇಲ್ಲಿ ಖಾಸಗಿ ಕೊಳವೆಬಾವಿ ಗುರುತಿಸಿಟ್ಟುಕೊಳ್ಳಲಾಗಿದೆ. ಅವುಗಳು ಲಭ್ಯವಾಗದಲಿದ್ದಲ್ಲಿ ಸಮಸ್ಯೆಯಾದ 24 ಗಂಟೆಯೊಳಗೆ ಟ್ಯಾಂಕರ್‍ಗಳ ಮೂಲಕ ನೀರು ಒದಗಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪೂರೈಕೆಯಾಗುತ್ತಿರುವ ಗ್ರಾಮಗಳಿಗೆ ನೀರಿನ ಸಮಸ್ಯೆ ಇರುವುದಿಲ್ಲ. ಭದ್ರಾ ಜಲಾಶಯದ ಮೂಲಕ ತುಂಗಭದ್ರಾ ನದಿಗೆ ಹಾಗೂ ಕಾಲುವೆಗಳಿಗೆ ನೀರು ಬಿಡಿಸಲಾಗಿದೆ. ಶಾಂತಿಸಾಗರದಿಂದ ಹಲವು ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದ್ದು ಕಾಲುವೆ ಮೂಲಕ ಶಾಂತಿಸಾಗರಕ್ಕೆ ನೀರು ಬಿಡಿಸಲಾಗಿದೆ ಎಂದರು.
ಕಾಲುವೆಯ ಕೊನೆ ಭಾಗದ ರೈತರಿಗೂ ನೀರು ತಲುಪಿಸುವ ಉದ್ದೇಶದಿಂದ ನಾಲೆಗೆ ಅಕ್ರಮವಾಗಿ ಅಳವಡಿಸಲಾಗಿದ್ದ ಪಂಪ್‍ಸೆಟ್‍ಗಳ ತೆರವಿಗೆ ತಂಡಗಳನ್ನು ರಚಿಸಿ ಕ್ರಮ ಕೈಗೊಳ್ಳಲಾಗಿದೆ. ಎಲ್ಲೆಲ್ಲಿ ಕಾನೂನಾತ್ಮಕ ಸಮಸ್ಯೆ ಎದುರಾಗುತ್ತದೆ, ಅಂತಹ ಭಾಗದಲ್ಲಿ 144 ಸೆಕ್ಷನ್ ಜಾರಿಗೊಳಿಸಲು ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಕೊಳವೆಬಾವಿ ಕೊರೆಸಲು ಅನುಮತಿ ಬೇಕು; ಅಂತರ್ಜಲ ಮಟ್ಟ ಕಡಿಮೆಯಾಗಿದ್ದರಿಂದ ಕೊಳವೆಬಾವಿ ಕೊರೆಯಲು ನಿಬರ್ಂಧವಿದೆ. ಕೊಳವೆಬಾವಿ ಕೊರೆಯಲು ರಿಗ್ ಮಾಲಿಕರು ನಮೂನೆ-7 ರಲ್ಲಿ ಅನುಮತಿ ಪಡೆಯಬೇಕಾಗಿರುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ವ್ಯವಸ್ಥಿತ ಹಾಗೂ ಪರಿಣಾಮಕಾರಿಯಾಗಿ ನಡೆಸಲಾಗಿದೆ. ಜಿಲ್ಲೆಯ 194 ಗ್ರಾಮ ಪಂಚಾಯಿತಿಗಳ ಕೇಂದ್ರಸ್ಥಾನದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಜಾಗೃತಿ ಮೂಡಿಸಲಾಗಿದೆ. ಜ.26 ರಿಂದ ಪ್ರತಿದಿನ 7 ಗ್ರಾಮ ಪಂಚಾಯಿತಿಗಳ ಕೇಂದ್ರಸ್ಥಾನಗಳಲ್ಲಿ ಸಂಚರಿಸಿದ್ದು ಜನರು ಬಹಳ ಉತ್ಸುಕತೆಯಿಂದ ಭಾಗವಹಿಸಿದ್ದಾರೆ ಎಂದರು.
ಬೇಸಿಗೆ ಎದುರಾಗಿದ್ದು ಈಗಾಗಲೇ 19 ಗ್ರಾಮಗಳಲ್ಲಿ ಖಾಸಗಿ ಬೋರ್‍ವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದಾದ 18 ಗ್ರಾಮಗಳಲ್ಲಿ ಖಾಸಗಿ ಬೋರ್‍ವೆಲ್ ಮೂಲಕ ನೀರು ಪೂರೈಕೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞೆ ಸ್ವೀಕರಿಸಲಾಯಿತು.