ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಜಿ. ಬಿ. ವಿನಯ್ ಕುಮಾರ್ ಅವರು ನಾಮಪತ್ರ ಸಲ್ಲಿಕೆ ಮಾಡಿದರು.
ಇಂದು ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಗೆ ಐವರ ಜೊತೆ ಆಗಮಿಸಿದ ವಿನಯ್ ಕುಮಾರ್ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ವಿನಯ್ ಕುಮಾರ್ ಅವರು, ದಾವಣಗೆರೆ ಜಿಲ್ಲೆಯ ಜನರ ಅಪೇಕ್ಷೆಯಂತೆ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂಬ ಘೋಷಣೆ ಮಾಡಿದ ಬಳಿಕ ಯಾರೂ ಸಂಪರ್ಕ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ, ಕಾಗಿನೆಲೆ ಶ್ರೀಗಳು ಸೇರಿದಂತೆ ಸಮಾಜದ ಮುಖಂಡರ ಬಗ್ಗೆ ಅಪಾರವಾದ ಗೌರವ, ಪ್ರೀತಿ, ವಿಶ್ವಾಸ ಇದೆ ಎಂದು ಹೇಳಿದರು.
ಎರಡು ಕುಟುಂಬಗಳ ಅಭ್ಯರ್ಥಿಗಳ ವಿರುದ್ಧ ದಾವಣಗೆರೆ ಜಿಲ್ಲೆಯಲ್ಲಿ ವಿರೋಧಿ ಅಲೆ ಇದೆ. ಯಾರೂ ಬಹಿರಂಗವಾಗಿ ಹೇಳುತ್ತಿಲ್ಲ. ಚುನಾವಣಾ ಫಲಿತಾಂಶದ ದಿನ ಹೊರಗೆ ಬರಲಿದೆ. ಆಗ ಜನರ ವಿರೋಧಿ ಅಲೆ ಎಷ್ಟಿತ್ತೆಂದು ಗೊತ್ತಾಗಲಿದೆ ಎಂದು ಹೇಳಿದರು.
ಜಿಲ್ಲೆಯ ಜನರ ಅಪೇಕ್ಷೆಯಂತೆ ಸ್ಪರ್ಧೆ ಮಾಡುತ್ತಿದ್ದೇನೆ. ಜನರ ಒತ್ತಡವೇ ನಾನು ಸ್ಪರ್ಧೆ ಮಾಡಲು ಕಾರಣ. ಈಗಾಗಲೇ ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ಹೋಗಿ ಬಂದಿದ್ದೇನೆ. ಎಲ್ಲಾ ಕಡೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜನರು ಚುನಾವಣೆಯಲ್ಲಿ ನನಗೆ ಮತ ನೀಡುವ ಮೂಲಕ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಎಂದು ವಿನಯ್ ಕುಮಾರ್ ತಿಳಿಸಿದರು.
ಕೇವಲ ಅಹಿಂದ ವರ್ಗ ಮಾತ್ರವಲ್ಲ, ಎಲ್ಲಾ ಸಮಾಜದವರು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ. ಬಹಿರಂಗವಾಗಿ ಎರಡು ಕುಟುಂಬಗಳ ವಿರುದ್ಧ ಜನರು ಹೇಳದಿದ್ದರೂ ಆಕ್ರೋಶವಂತೂ ಇದ್ದೇ ಇದೆ. ಕಣದಿಂದ ಎಷ್ಟೇ ಒತ್ತಡ ಬಂದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆ ವೇಳೆ ಶರತ್ ಕುಮಾರ್ ಸೇರಿದಂತೆ ಅಹಿಂದ ವರ್ಗದ ಮುಖಂಡರು ಹಾಜರಿದ್ದರು.