ದಾವಣಗೆರೆ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ – ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಅವರು ಯಾಕೆ ಮಾತನಾಡುತ್ತಿಲ್ಲ. ಮಹಿಳೆಯರ ಮಾನ ತೆಗೆದ ಮೈತ್ರಿಕೂಟದ ಅಭ್ಯರ್ಥಿ ಕುರಿತಂತೆ ಪ್ರಚಾರದಲ್ಲಿ ಮಾತನಾಡದೇ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಹಾಗೂ ಹಾಲಿ ಸದಸ್ಯ ಗಡಿಗುಡಾಳ್ ಮಂಜುನಾಥ್ ಪ್ರಶ್ನಿಸಿದರು.
ಎಂಸಿಸಿ ಬಿ ಬ್ಲಾಕ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಮಾತ್ರವಲ್ಲ, ದೇಶವೇ ಈ ಘಟನೆಯಿಂದ ತಲೆತಗ್ಗಿಸುವಂತಾಗಿದೆ. ಎಲ್ಲೆಡೆ ಪ್ರಜ್ವಲ್
ರೇವಣ್ಣರ ಕೇಸ್ ವಿಚಾರ ಸಂಬಂಧ ಚರ್ಚೆಯಾಗುತ್ತಿದೆ. ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯವರು ಮೈತ್ರಿ ಧರ್ಮ ಪಾಲನೆ ಮಾಡುವುದಿಲ್ಲವೇ? ಜೆಡಿಎಸ್ ನವರು ಮೈತ್ರಿಧರ್ಮ ಪಾಲನೆ ಮಾಡದಿದ್ದರೆ
ಬೆಂಬಲವಿಲ್ಲ ಎಂದಿದ್ದರು. ಈಗ ಬಿಜೆಪಿಯವರು ಮೈತ್ರಿ ಧರ್ಮ ಪಾಲನೆ ಮಾಡುತ್ತಾರೆಯೇ? ಆರೋಪಿ ಪರ ನಿಲ್ಲುತ್ತಾರೆಯೇ ಎಂದು ಪ್ರಶ್ನಿಸಿದರು.
ಪ್ರಭಾ ಮಲ್ಲಿಕಾರ್ಜುನ್ ಅವರಲ್ಲಿ ವಿನಯವಂತಿಕೆ ಇಲ್ಲ, ಸಂಸ್ಕೃತಿ ಇಲ್ಲ ಎಂಬ ಹೇಳಿಕೆ ನೀಡಿರುವ ಗಾಯಿತ್ರಿ ಸಿದ್ದೇಶ್ವರ ಅವರು ಹೇಳಿಕೆ ಶೋಭೆ ತರುವಂಥದ್ದಲ್ಲ ಎಂದು ಕಿಡಿಕಾರಿದರು.
ಮಹಿಳೆಯರಿಗಾಗಿ ಆರೋಗ್ಯ ತಪಾಸಣಾ ಶಿಬಿರಗಳು, ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಒತ್ತು, ಪುಟ್ಟ ಮಗುವಿನ ಚಿಕಿತ್ಸೆಗೆ ನೆರವು, ಕಷ್ಟ ಎಂದು ಬಂದವರಿಗೆ
ಸಹಾಯ ಮಾಡುವ ಗುಣ ಹೊಂದಿರುವ ಪ್ರಭಾ ಮಲ್ಲಿಕಾರ್ಜುನ್ ಅವರ ಬಗ್ಗೆ ಜಿಲ್ಲೆಯ ಜನರು ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಕಾಂಗ್ರೆಸ್ ಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ಸಹಿಸಲು ಆಗದೇ ಈ ರೀತಿ
ಹೇಳಿಕೆ ನೀಡಿರುವುದು ಮಹಿಳಾ ಸಮುದಾಯಕ್ಕೆ ಮಾಡಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಎಂದ ಮೇಲೆ ಟೀಕೆ ಸಹಜ. ಆದ್ರೆ, ಪ್ರಭಾ ಮಲ್ಲಿಕಾರ್ಜುನ್ ಅವರ ಸಮಾಜ ಸೇವೆ, ಆರೋಗ್ಯ ಸೇವೆ, ಬಡವರಿಗೆ ಸ್ಪಂದನೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಪ್ರತಿಯೊಬ್ಬರೂ ಪ್ರಭಾ ಮಲ್ಲಿಕಾರ್ಜುನ್ ಅವರ ಕಾರ್ಯವೈಖರಿಗೆ
ಬೆಂಬಲಿಸುತ್ತಿದ್ದಾರೆ. ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿಯೂ ಹೆಲ್ತ್ ಕ್ಯಾಂಪ್ ಮಾಡುವ ಮೂಲಕ ಆರೋಗ್ಯಕ್ಕೆ ವಿಶೇಷ ಕಾಳಜಿ ವಹಿಸಿದ್ದಾರೆ. ಎಷ್ಟೋ ಮಹಿಳೆಯರಿಗೆ ಉಚಿತ ಚಿಕಿತ್ಸೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಬಿಜೆಪಿ ನಾಯಕರು ಇದೇ ಸಿದ್ದೇಶ್ವರರ ವಿರುದ್ದ ಏನೆಲ್ಲಾ ಮಾತನಾಡಿದ್ದರು ಎಂಬುದನ್ನು ಮರೆತಂತೆ ಕಾಣುತ್ತದೆ. ಬಿಜೆಪಿ ನಾಯಕರು ಮಾಡಿದ ಆರೋಪಗಳು, ಟೀಕೆ, ರಾಜ್ಯ, ದೆಹಲಿ ವರಿಷ್ಠರಿಗೆ ದೂರು ಕೊಟ್ಟಿದ್ದು, ಆಮೇಲೆ ಏನೆಲ್ಲಾ ಪ್ರಹಸನ ನಡೆಯಿತು ಎಂಬುದು ಎಲ್ಲರಿಗೂ ಗೊತ್ತು. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಏನೆಲ್ಲಾ ಮಾತನಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ. ಸೋಲಿನ ಭೀತಿಯಿಂದ ಹಗುರ ಹಾಗೂ ಕೇವಲವಾಗಿ ಮಾತನಾಡುವುದನ್ನು ಸಿದ್ದೇಶ್ವರ ಬಿಡಲಿ ಎಂದು ಒತ್ತಾಯಿಸಿದರು.
ಬಿಜೆಪಿಯ ಯಾವ ನಾಯಕರು ಹಗುರವಾಗಿ ಮಾತನಾಡುತ್ತಿಲ್ಲ. ಸಿದ್ದೇಶ್ವರ ಹಾಗೂ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಮಾತ್ರ ಹಗುರ ಹೇಳಿಕೆ ನೀಡಿದ್ದಾರೆ. ಸಿದ್ದೇಶ್ವರ ಮತ್ತು ಅವರ ಕುಟುಂಬದವರು ಎಷ್ಟು ಮಹಿಳೆಯರಿಗೆ ಚಿಕಿತ್ಸೆಗೆ ನೆರವು ನೀಡಿದ್ದಾರೆ? ಎಷ್ಟು ಆರೋಗ್ಯ ಶಿಬಿರಗಳನ್ನು ಮಹಿಳೆಯರಿಗಾಗಿ ನಡೆಸಿದ್ದಾರೆ? ಎಷ್ಟು ಸ್ಪಂದಿಸಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ. ಈ ಬಾರಿ ಬಿಜೆಪಿ ಸಂಸದರ ದುರಾಡಳಿತ, ಸ್ವಜನಪಕ್ಷಪಾತ, ದುರಂಹಕಾರಕ್ಕೆ ದಾವಣಗೆರೆ ಜಿಲ್ಲೆಯ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.