Saturday, December 21, 2024
Homeಸಾಹಿತ್ಯಕನ್ನಡ ವಾರಿಧಿಯಲ್ಲಿ ಈಜಿದ ಎಂ.ಜಿ.ಈಶ್ವರಪ್ಪ:ಎನ್. ಟಿ. ಎರ್ರಿಸ್ವಾಮಿ

ಕನ್ನಡ ವಾರಿಧಿಯಲ್ಲಿ ಈಜಿದ ಎಂ.ಜಿ.ಈಶ್ವರಪ್ಪ:ಎನ್. ಟಿ. ಎರ್ರಿಸ್ವಾಮಿ

ಅದು 1996ರ ಸಮಯ. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು ಡಾ. ಎಂ ಜಿ ಈಶ್ವರಪ್ಪನವರು. ಬರದ ನಾಡು ಜಗಳೂರಿನಲ್ಲಿ ಕನ್ನಡದ ತೇರು ಎಳೆಯುವ ಅಮಿತೋತ್ಸಾಹ ಅವರದು. ಅಂತೆಯೇ ಸಾಹಿತ್ಯ ಬಳಗವನ್ನು ಒಗ್ಗೂಡಿಸಿ ಜಗಳೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಂದಿ ಹಾಡಿದರು. ಜಗಳೂರು ತಾಲೂಕು ಕ .ಸಾ.ಪ ಅಧ್ಯಕ್ಷರಾದ ಶ್ರೀ ಸುಭಾಷ್ ಚಂದ್ರ ಬೋಸ್, ನಾಲಂದ ಕಾಲೇಜಿನ ಡಾ. ಟಿ ತಿಪ್ಪೇಸ್ವಾಮಿ, ಕನ್ನಡದ ಕಟ್ಟಾಳು ಎಂ ಬಸವಪ್ಪ, ಬ್ಯಾಂಕಿನವನಾದ ನಾನು, ಎಂ ಎಸ್ ಬಸವೇಶ ರಾಜಕೀಯ ಧುರೀಣರಾದ ನಾಗಮ್ಮ, ಕಲ್ಲೇ ರುದ್ರೇಶ್, ಶಾಸಕರಾದ ಎಂ ಬಸಪ್ಪ ಇಡೀ ಶಿಕ್ಷಕ ವೃಂದ ಹೀಗೆ ಗುರುಹಿರಿಯರ, ಕಿರಿಯರ ದೊಡ್ಡ ದಂಡೇ ಸಮ್ಮೇಳನಕ್ಕಾಗಿ ಟೊಂಕ ಕಟ್ಟಿ ನಿಂತಿತ್ತು. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯಶ್ರೀ ಡಿ ವೀರೇಂದ್ರ ಹೆಗಡೆಯವರು, ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಹಾ .ಮಾ ನಾಯಕರು ಸಮ್ಮೇಳನಕ್ಕೆ ಬರುವವರಿದ್ದರು. ಸಮ್ಮೇಳನ ಒಂದೆರಡು ದಿನ ಇದೆ ಎನ್ನುವಾಗ ಜಗಳೂರಿನಲ್ಲಿ ಅಹಿತಕರ ಘಟನೆ ಯೊಂದು ಜರುಗಿತು. ಕುಡಿಯುವ ನೀರಿಗಾಗಿ ಪ್ರಾರಂಭವಾದ ಹೋರಾಟ ಪಟ್ಟಣ ಪಂಚಾಯಿತಿಯ ಕಚೇರಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸು ವಲ್ಲಿ ಪರಿ ಸಮಾಪ್ತಿಯಾಯಿತು. ಅನಿರೀಕ್ಷಿತವಾಗಿ ಸಮ್ಮೇಳನ ರದ್ದಾಯಿತು. ಇದರಿಂದ ವಿಚಲಿತ ರಾಗದ ಎಂ. ಜಿ. ಈಶ್ವರಪ್ಪನವರು ಮತ್ತೆ ನಮ್ಮನ್ನು ಹುರುಪುಗೊಳಿಸಿದರು. ತದ ನಿಮಿತ್ತವಾಗಿ 1996ರ ಫೆಬ್ರವರಿಯಲ್ಲಿ ಪ್ರಥಮ ಬಾರಿಗೆ ಜುಗಳೂರಿನಲ್ಲಿ ಬಹಳ ಅದ್ದೂರಿಯಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಜರುಗಿತು. ಕಾರಣಾಂತರದಿಂದ ಅಂದಿನಿಂದ ಇಂದಿನವರೆಗೆ ಮೂರು ದಶಕಗಳು ಸಂದರೂ ಜಗಳೂರಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡಲಾಗಿಲ್ಲ. ಈಗ ಮಾಡೋಣ ಎಂದರೆ ಎಂ .ಜಿ. ಈಶ್ವರಪ್ಪನವರ ಮಾರ್ಗದರ್ಶನ ನಮಗಿಲ್ಲವಾಯಿತೇ ಎಂಬ ಕೊರಗು ಕಾಡುವಂತಾಗಿದೆ.

ಜಗಳೂರಿಗೂ ಈಶ್ವರಪ್ಪನವರಿಗೂ ಹಾಲು ಜೇನು ಬೆರೆವಂತಹ ಅವಿನಾಭಾವ ಸಂಬಂಧ. ನಾಲ್ಕು ದಶಕಗಳಿಗೂ ಮಿಗಿಲಾದ ಅನುಬಂಧ. ಅವರು ಕೃಷಿ ಜಾನಪದದಲ್ಲಿ ಡಾಕ್ಟರೇಟ್ ಪದವಿ ಗಳಿಸಲು ಸಂಗ್ರಹಿಸಿದ ಮಾಹಿತಿಯಲ್ಲಿ ಜಗಳೂರಿನ ಪಾಲು ಅತಿ ಹೆಚ್ಚು. ಹಾಗಾಗಿ ಈ ನೆಲದ ಬಗ್ಗೆ ಅವರಿಗೆ ತುಂಬ ಅಭಿಮಾನವಿತ್ತು. ನಾಲಂದ ಕಾಲೇಜಿನ ಎಂ ಬಸವಪ್ಪನವರು ಎಂ .ಜಿ. ಈಶ್ವರಪ್ಪನವರು ಕಾಲೇಜು ವಿದ್ಯಾಭ್ಯಾಸದಲ್ಲಿ ಒಡನಾಡಿಗಳು. ತನ್ಮೂಲಕ ಸಾಹಿತ್ಯದ ಒಡನಾಟ ಜಗಳೂರಿಗೆ ತಂದವರು. ಈಶ್ವರಪ್ಪನವರ ಉಪನ್ಯಾಸಗಳನ್ನು ಕೇಳುವುದೆಂದರೆ ರಸಗುಲ್ಲವನ್ನು ಮೆದ್ದಂತೆ. ಸಾಹಿತ್ಯ ಸಾಹಿತೆಯನ್ನು ಅವರು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿದ್ದರೆ ಕಿತ್ತಳೆ ಹಣ್ಣಿನ ತೊಳೆಯನ್ನು ಜೇನಿನಲ್ಲಿ ಅದ್ದಿ ಬಾಯಿಗಿಟ್ಟಂತೆ. ಜಗಳೂರಿನವರಾದ ನಾವು ಕರೆದಾಗಲೆಲ್ಲ ಅವರು ಇಲ್ಲ ಎನ್ನದೆ ಬಂದು ನಮಗೆ ಉಣೆಸಿದ ಸಾಹಿತ್ಯದ ನಳಪಾಕ ಎಂದೂ ಮರೆಯಲಾಗದು.

ಸಾಹಿತ್ಯ, ಜಾನಪದ , ರಂಗಭೂಮಿ, ಅಧ್ಯಾಪನದಂತೆ ಸಂಗೀತವು ಅವರಿಗೆ ಅಚ್ಚು . ಸಂಗೀತವನ್ನು ಕೇಳಲೆಂದೇ ಅವರು ಒಂದಿಷ್ಟು ಸಮಯ ಪರಿಪಾಲಿಸುತ್ತಿದ್ದರು ಎಂದರೆ ನಮಗೆ ಅಚ್ಚರಿಯಾಗದೆ ಇರದು. ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲಿಯೇಇರಲಿ ಸಭಿಕರಾಗಿಯು ಕೂಡ ಇವರು ಬಂದು ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಕಾರ್ಯಕ್ರಮದ ರಸ ಸ್ವಾದವನ್ನು ಅನುಭವಿಸುವ ದೊಡ್ಡಗುಣ ಇವರಲ್ಲಿತ್ತು. ಇಂದಿನ ದಿನಮಾನದಲ್ಲಿ ನಾವು ಇಂತಹ ಗುಣ ಸ್ವಭಾವದವರನ್ನು ನೋಡುವುದು ಅಪರೂಪದಲ್ಲಿ ಅಪರೂಪ.
ಈಶ್ವರಪ್ಪನವರು ಜಗಳೂರಿಗೆ ಬಂದರೆಂದರೆ ಸ್ನೇಹ ಕಲಾ ತಂಡದ ಹಾಡುಗಾರಿಕೆಯನ್ನು ಮನಸಾರೆ ಕೇಳಿ ಆನಂದಿಸುತ್ತಿದ್ದರು.

ಜಗಳೂರಿನಲ್ಲಿ ನಾಲಂದ ಕಲಾಭಾರತಿ ನಾಟಕ ತಂಡ ಕಟ್ಟುವಲ್ಲಿ ಎಂ ಬಸವಪ್ಪನವರ ಪಾತ್ರ ಹಿರಿದು. ಅವರಿಗೆ ಪ್ರೇರಕರಾಗಿದ್ದವರು ಅವರ ಮಿತ್ರರಾದ ಎಂ.ಜಿ. ಈಶ್ವರಪ್ಪನವರೇ. ಆದಾಗಲೇ ಎಂ.ಜಿ. ಈಶ್ವರಪ್ಪ ಮತ್ತು ಮಿತ್ರ ಮಂಡಳಿ ದಾವಣಗೆರೆಯಲ್ಲಿ “ಪ್ರತಿಮಾ ಸಭಾ” ಸ್ಥಾಪಿಸಿ ನಾಡಿನಲ್ಲಿ ಅದರ ಕೀರ್ತಿಯ ಘಮ ಮಲ್ಲಿಗೆಯ ಪರಿಮಳದಂತೆ ಪಸರಿಸಿದ್ದು ಕಣ್ಣ ಮುಂದೆಯೇ ಇತ್ತು. ಸ್ನೇಹತ್ವವನ್ನು ಹೀಗೂ ಬಳಸಿಕೊಳ್ಳಬಹುದು ಎಂದು ತೋರಿಸಿಕೊಟ್ಟವರು ಬಸವಪ್ಪ ಮತ್ತು ಈಶ್ವರಪ್ಪನವರು.

ಬ್ಯಾಂಕಿಗನಾದ ನಾನು ಸಾಹಿತ್ಯ ಒಲವು ಹೆಚ್ಚಿಸಿಕೊಳ್ಳಲು ಕಾರಣ ರಾದವರಲ್ಲಿ ಎಂ. ಜಿ. ಈಶ್ವರಪ್ಪನನರೂ ಒಬ್ಬರು. ಕೆನರಾ ಬ್ಯಾಂಕಿನ ವೃತ್ತಿ ನಿಮಿತ್ತ ನಾನು ದಾವಣಗೆರೆ ಜಿಲ್ಲೆಯಲ್ಲಿ ಹತ್ತಾರು ವರ್ಷಗಳ ಕಾಲ ಕೆಲಸ ಮಾಡುವ ಸಂದರ್ಭದಲ್ಲಿ ನನಗೆ ಅವರ ಆತ್ಮೀಯ ಒಡನಾಟ ದೊರಕಿ ಸಾಹಿತ್ಯ ರಚನೆಯ ಸೂಕ್ತ ಮಾರ್ಗದರ್ಶನವೂ ದೊರಕಿತು. ಯುವ ಸಮೂಹವನ್ನು ಯಶಸ್ಸಿನ ಬದುಕಿನೆಡೆಗೆ ಪ್ರೇರೇಪಿಸುವ ” ಸಾಧನೆಗೆ ಹಾದಿ ನೂರು .” ಎನ್ನುವ ನನ್ನ ಲೇಖನಗಳ ಸಂಕಲನವೊಂದು ಮುದ್ರಣಗೊಂಡು ಬಿಡುಗಡೆಗೆ ಸಿದ್ದಗೊಂಡಿದೆ.ಈ ಕೃತಿಗೆ ಮುನ್ನುಡಿ ಬರೆದಿರುವವರು ಎಂ.ಜಿ. ಈಶ್ವರಪ್ಪನವರೇ .
ಇದೇಜೂನ್ ತಿಂಗಳಿನಲ್ಲಿ ಬರುವ ನನ್ನ ಜನ್ಮದಿನದಂದು ಈಶ್ವರಪ್ಪನವರಿಂದಲೇ ಪುಸ್ತಕ ಬಿಡುಗಡೆಗೊಳಿಸಬೇಕೆಂಬ ಸಂಕಲ್ಪ ನನ್ನದಾಗಿತ್ತು. ಆದರೆ ವಿಧಿಯ ಸಂಕಲ್ಪದ ಮುಂದೆ ಬೇರೆ ಯಾವ ಆಟ, ಸಂಕಲ್ಪಗಳು ಕೆಲಸ ಮಾಡದು. ಜವರಾಯನ ಆಟವೇ ಅಂತಹುದು.

ಆದರೆ ಇರುವಷ್ಟು ದಿನ ಮಾಳಿಗೆ ಮನೆಯ ಗೌಡ್ರ ಈಶ್ವರಪ್ಪನವರು ಸಾರ್ಥಕ ಬದುಕನ್ನು ಬದುಕಿ ಉಸಿರು ಉಸಿರಲ್ಲು ಹೆಸರನ್ನು ಉಳಿಸಿ ಶಾಶ್ವತವಾದ .”ಮೇಗಳಮನೆ ” ಗೆ ಮರಣವೇ ಮಹಾನವಮಿ ಎಂಬಂತೆ ನಗುತ್ತ ನಗುತ್ತಾ ಎದ್ದು ನಡೆದರಲ್ಲ !
ಅವರಿಗೆ ಅವರೇ ಸಾಟಿ.
ಅವರಿಗೊಂದುಹೃದಯಪೂರ್ವಕ ನಮನ ಸಲ್ಲಿಸೋಣ .

ಎನ್. ಟಿ. ಎರ್ರಿಸ್ವಾಮಿ
ಕೆನರಾ ಬ್ಯಾಂಕ್ ನಿವೃತ್ತ ಡಿಎಂ
ಅಚ್ಯುತ ಬಡಾವಣೆ , ಜಗಳೂರು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments