Saturday, December 21, 2024
Homeಬರಹಸಿದ್ದರಾಮಯ್ಯನವರ ರಾಜೀನಾಮೆ ನಿರೀಕ್ಷಿಸುತ್ತಿರುವ ಸಜ್ಜನರಿಗಾಗಿ…

ಸಿದ್ದರಾಮಯ್ಯನವರ ರಾಜೀನಾಮೆ ನಿರೀಕ್ಷಿಸುತ್ತಿರುವ ಸಜ್ಜನರಿಗಾಗಿ…

“ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು”. ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ವ್ಯವಸ್ಥಿತ ರಾಜಕೀಯ ಹುನ್ನಾರದ ಭಾಗವಾಗಿ ಮುಡಾ ವಿವಾದ ಮುನ್ನೆಲೆಗೆ ಬಂದಾಗಿನಿಂದಲೂ ಕೇಳಿಬರುತ್ತಿರುವ ಮಾತು ಇದು. ಈ ಪ್ರಶ್ನೆ ಕೇಳುವುದಕ್ಕೆಂದೇ ಬಿಜೆಪಿ-ಜೆಡಿಎಸ್‌ ನಾಯಕರು ಈ ವಿವಾದವನ್ನು ಹುಟ್ಟುಹಾಕಿದ್ದಾರೆ, ಹಾಗಾಗಿ ಅವರು ಕೇಳುವುದರಲ್ಲಿ ಅರ್ಥವಿದೆ. ಇನ್ನು ಜನಿವಾರದ ನಿಯಂತ್ರಣದಲ್ಲಿರುವ ಮಾಧ್ಯಮಗಳು ಬಿಜೆಪಿಗೆ ಬಕೇಟು ಹಿಡಿಯುತ್ತಾ ಬಂದಿರೋದು ನಗ್ನ ಸತ್ಯ. ಹಾಗಾಗಿ ಅವುಗಳು ರಾಜೀನಾಮೆಯ ಪ್ರಶ್ನೆಯನ್ನು ತಮ್ಮ ಪ್ರೈಮ್‌ ಟೈಮು, ಬಾಟಮ್‌ ಲೈನುಗಳಾಗಿ ಓಡಿಸುತ್ತಿರೋದನ್ನೂ ಸಹಿಸಿಕೊಳ್ಳಬಹುದು. ಎರಡ್ರುಪಾಯಿ ಭಕ್ತಗಣದ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ನಡೆಯುತ್ತಿರುವ ಚರ್ಚೆಯನ್ನು ನೋಡಿಯೂ ನಿರ್ಲಕ್ಷಿಸಿಬಿಡಬಹುದು. ಆದರೆ, ಸೋ ಕಾಲ್ಡ್‌ ಸಜ್ಜನರು ಎನಿಸಿಕೊಂಡ ಬುದ್ದಿಜೀವಿ ವಲಯದ ಕೆಲವರು, ಬಿಜೆಪಿ-ಜೆಡಿಎಸ್‌ನವರ ವ್ಯವಸ್ಥಿತ ಹುನ್ನಾರದ ಒಳಹೊರಗು ಅರಿವಿದ್ದು ಕೂಡಾ ಈ ಮಾತು ಹೇಳುತ್ತಿದ್ದಾರಲ್ಲಾ, ಅದನ್ನು ಕಂಡಾಗ ಒಂದಷ್ಟು ಪ್ರಶ್ನೆಗಳು ಕಾಡುತ್ತಿವೆ.

ಅಂತವರು ತಮ್ಮ ಸಮರ್ಥನೆಗೆ ಬಳಸಿಕೊಳ್ಳುತ್ತಿರೋದು ನೈತಿಕತೆ’ ಮತ್ತು ಸಿದ್ದರಾಮಯ್ಯನವರಸಚ್ಚಾರಿತ್ಯ್ರದ ಹಿನ್ನೆಲೆ’ಯನ್ನು. ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯನವರು ಈಗ ತಮ್ಮ ಮೇಲೆ ಆರೋಪ ಕೇಳಿಬಂದಿರುವ ಹೊತ್ತಿನಲ್ಲಿ ಅಧಿಕಾರದಲ್ಲಿ ಮುಂದುವರೆಯುವುದು ಅವರು ನಡೆದು ಬಂದ ಚಾರಿತ್ಯ್ರದ ಹಾದಿಗೆ ಪೂರಕವಾದುದಲ್ಲ, ಹಾಗಾಗಿ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ಕೊಡಲಿ ಎಂಬುದು ಅವರ ವಾದ. ಸಜ್ಜನರ ಈ ವಾದ ಕೇಳಿದರೆ, ಇಷ್ಟು ದಿನ ಸಿದ್ದರಾಮಯ್ಯನವರು ನೈತಿಕ ರಾಜಕಾರಣ ಮಾಡಿಕೊಂಡು ಬಂದಿದ್ದೇ ತಪ್ಪು, ಸಮಾಜವಾದದ ಹಾದಿಯಲ್ಲಿ ಹೆಜ್ಜೆ ಹಾಕಿದ್ದೇ ಮಹಾಪರಾಧ ಎಂದು ಇವರೆಲ್ಲ ಭಾವಿಸಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತೆ.

ಯಾಕೆಂದರೆ ಇಡೀ ವಿವಾದ ಎಷ್ಟು ರಾಜಕೀಯ ಪ್ರೇರಿತ ಅನ್ನೋದು ದುರ್ಬೀನು ಹಾಕಿದಷ್ಟು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಜನರಿಂದ ಚುನಾಯಿತವಾದ ಸರ್ಕಾರಗಳನ್ನು ಅಸ್ಥಿರಗೊಳಿಸುವ ಹುನ್ನಾರವನ್ನು ನಾವೀಗ ದೇಶಾದ್ಯಂತ ಕಾಣುತ್ತಿದ್ದೇವೆ. ದಿಲ್ಲಿ, ಮಹಾರಾಷ್ಟ್ರ, ಜಾರ್ಖಂಡ್, ಈ ಹಿಂದೆ ಕರ್ನಾಟಕದಲ್ಲೂ ಕಂಡಿದ್ದೇವೆ. ಇಂಥಾ ಪ್ರಯತ್ನಕ್ಕೆ ಮುಂದಾಗುತ್ತಿರುವವರು ಸಂವಿಧಾನ ವಿರೋಧಿಗಳು ಮಾತ್ರವಲ್ಲ, ಮಹಾನ್‌ ಭ್ರಷ್ಟಾತಿಭ್ರಷ್ಟರು ಅನ್ನುವುದರಲ್ಲಿ ಸಂಶಯವಿಲ್ಲ. ಇದು ನಮ್ಮ ಮುಂದಿರುವ ಸಮಕಾಲ.

ಇಂಥಾ ರಾಜಕೀಯ ಸನ್ನಿವೇಶದಲ್ಲಿ, ಸಮಕಾಲದ ತುರ್ತುಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಹೇಳಲಾಗುವ ನೈತಿಕತೆ’ ಮತ್ತುಚಾರಿತ್ಯ್ರ’ದಂತಹ ಮಾತುಗಳು ತೂಕ ಕಳೆದುಕೊಂಡ ಸವಕಲುಗಳಂತೆ ಭಾಸವಾಗುತ್ತವೆ ಮಾತ್ರವಲ್ಲ, ಹಿಡನ್‌ ಅಜೆಂಡಾದ ಅಪಾಯಕಾರಿ ಅಸ್ತ್ರಗಳಂತೆಯೂ ಗೋಚರಿಸುತ್ತವೆ. ಇಂತಹ ಹಿಡನ್‌ ಅಜೆಂಡಾಗಳು ರಾಜಕೀಯ ಪ್ರೇರಿತವಾಗಿರಬಹುದು, ವೈಯಕ್ತಿಕ ಜಿದ್ದಿನ ಕಾರಣದಿಂದ ಇರಬಹುದು ಅಥವಾ ಜಾತಿ-ಧರ್ಮದಂತಹ ಸಾಮಾಜಿಕ ಅಸಹನೆಗಳಿಂದಲೂ ಪ್ರೇರಿತವಾಗಿರಬಹುದು. ಯಾಕೆಂದರೆ ತೀರಾ ಮುಗ್ಧತೆ ಅಥವಾ ಅತಿ ಆದರ್ಶದಿಂದ ಇವರು ಇಂಥಾ ಒತ್ತಡ ಹೇರುತ್ತಿದ್ದಾರೆ ಎನಿಸುವುದಿಲ್ಲ. ರಾಜಕಾರಣದ ವರ್ತಮಾನದ ಒಳಹುಗಳನ್ನು ಅರಿಯದವರು ಮುಗ್ಧತೆಯಿಂದಲೋ, ಅತಿ ಆದರ್ಶದ ಕಲ್ಪನೆಯಿಂದಲೋ ಹೀಗೆ ಮಾತಾಡಬಹುದು. ಬುದ್ದಿಜೀವಿ ವಲಯದ ಇವರೆಲ್ಲ, ಪ್ರಸ್ತುತ ರಾಜಕೀಯ ಸಾಗುತ್ತಿರುವ ಹಾದಿಯ ಪ್ರತಿ ತಿರುವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಬಂದವರು. ಎಲ್ಲಾ ಅರಿವಿದ್ದು ಕೂಡಾ ಇಂಥಾ ಮಾತುಗಳನ್ನು ಮುನ್ನೆಲೆಗೆ ತರುತ್ತಾರೆಂದರೆ ಅದನ್ನು ನಾವು ಹಿಡನ್ ಅಜೆಂಡಾದ ಭಾಗ ಅಂತಲೇ ಗುಮಾನಿ ಪಡಬೇಕಾಗುತ್ತೆ.

ಗರಿಷ್ಠ ಕರಾಳ ಹತಾರಗಳ ಸಮೇತ ಸೆಣೆಸಾಟದ ಅಖಾಡಕ್ಕಿಳಿದ ದುಷ್ಟ ವ್ಯಕ್ತಿಯ ವಿರುದ್ಧ ಒಬ್ಬ ದುರ್ಬಲನೋ ಅಥವಾ ಕಡಿಮೆ ಶಸ್ತ್ರಸಜ್ಜಿತನೋ ಕಾದಾಟಕ್ಕೆ ಇಳಿದಿದ್ದಾನೆ ಎಂದುಕೊಳ್ಳಿ. ಅಲ್ಲಿ ನಡೆಯುತ್ತಿರುವುದೇ ಅಸಮಾನ ಕಾಳಗ. ಆ ಕಾಳಗವನ್ನು ತಡೆಯುವ, ತಪ್ಪಿಸುವ ಅಥವಾ ನಿರ್ಬಂಧಿಸುವ ಯಾವ ಅವಕಾಶವೂ ನಮ್ಮ ಮುಂದೆ ಇಲ್ಲ ಎನ್ನುವಂತ ಸಂದರ್ಭದಲ್ಲಿ ಆ ದುರ್ಬಲ ಅಥವಾ ಕಡಿಮೆ ಶಸ್ತ್ರಸಜ್ಜಿತ ವ್ಯಕ್ತಿಯ ಎರಡೂ ಕೈಗಳನ್ನು ನೈತಿಕತೆ ಮತ್ತು ಚಾರಿತ್ಯ್ರದ ಹಗ್ಗಗಳಿಂದ ಬಿಗಿದು ಸೆಣಸಾಡು ಎನ್ನುವುದು ಯಾವ ಸೀಮೆಯ ಆದರ್ಶ? ಇಂತವರ ವರ್ತನೆಗಳಿಂದ ವರ್ತಮಾನದ ಲಾಭ ಯಾರಿಗೆ?

ದುಷ್ಟ ವ್ಯಕ್ತಿಯನ್ನು ಇವರು ಬಹಿರಂಗವಾಗಿ ವಿರೋಧಿಸಿಕೊಂಡು ಬಂದವರು ಎಂಬ ಕಾರಣಕ್ಕೆ, ಈಗ ಅದೇ ದುಷ್ಟ ವ್ಯಕ್ತಿಗೆ ಅನುಕೂಲವಾಗುವಂತೆ ತಮ್ಮ ಹಿಡನ್‌ ಅಜೆಂಡಾಗಳನ್ನು ಅನುಷ್ಠಾನಕ್ಕೆ ತರಲು ಹೊರಟ ಇವರ ಲಯಬದ್ಧ ಸ್ವರಗಳಿಗೆ ತಲೆಯಾಡಿಸಿ, ತೂಕಡಿಸಿದರೆ ಬಹುಶಃ ಚರಿತ್ರೆಯ ಕಂದಕಗಳಲ್ಲಿ ಮತ್ತೆಮತ್ತೆ ಬೀಳುತ್ತಾ ಸಾಗಿಬಂದಿರುವುದನ್ನು ಈಗಲೂ ಮುಂದುವರೆಸಿದಂತಾಗುತ್ತೆ. ಯಾಕೆಂದರೆ ಎಚ್ಚರವಾಗುವ ಹೊತ್ತಿಗೆ ನಾವು ನಮ್ಮ ಧ್ವನಿಯನ್ನೇ ಕಳೆದುಕೊಂಡಿರುತ್ತೇವೆ. ತಳಸಮುದಾಯದ ಬಲಿ ಚಕ್ರವರ್ತಿಯನ್ನೋ, ಮಹಿಷಾಸುರನನ್ನೋ ವೈದಿಕ ಶಕ್ತಿಗಳು ಮಟ್ಟಹಾಕುತ್ತಿರುವಾಗ, ಪ್ರತಿರೋಧ ತೋರಬೇಕಿದ್ದ ಅವರ ಪ್ರಜೆಗಳ ಮೆದುಳುಗಳನ್ನು ಇಂಥಾ ಸಜ್ಜನ ಅಜೆಂಡಾವಾದಿಗಳು ನಿಷ್ಕ್ರಿಯಗೊಳಿಸಿದ್ದರೂ ಇರಬಹುದು. ಅವೆಲ್ಲಾ ಪೌರಾಣೇತಿಹಾಸದ ನಿದರ್ಶನಗಳು ಎಂದು ತಳ್ಳಿಹಾಕೋಣ. ಆದರೆ ಇವತ್ತು ನಾವೆಲ್ಲ ಹಾಡಿ ಹೊಗಳುತ್ತಿರುವ ದೇವರಾಜ ಅರಸು ಅವರಿಗೆ ಏನಾಯಿತು ಎಂಬ ಸನಿಹಸದ್ಯದ ಇತಿಹಾಸವನ್ನಾದರೂ ನಾವು ಪರಿಗಣಿಸಬೇಕಿದೆ. ದೇವರಾಜು ಅರಸು ಅವರ ವೈಯಕ್ತಿಕ ವರ್ಚಸ್ಸನ್ನೂ ಇದೇ ರೀತಿ ಭ್ರಷ್ಟಾಚಾರದ ಆರೋಪದಲ್ಲಿ ಹಾಳುಗೆಡವಲಾಯ್ತು. ಅರಸು ಭ್ರಷ್ಟಾಚಾರ ಮಾಡಿದ್ದರೋ ಇಲ್ಲವೋ ಎಂಬ ಚರ್ಚೆಗಿಂತ, ತಳಸಮುದಾಯಗಳನ್ನು ರಾಜಕಾರಣದ ಮುನ್ನೆಲೆಗೆ ತಂದು ಸಬಲೀಕರಣಗೊಳಿಸುವ ಅವರ ಕ್ರಾಂತಿಕಾರಿ ರಾಜಕಾರಣದ ಹೆಜ್ಜೆಯನ್ನು ಹೊಸಕಿ ಹಾಕಲು ಅಂತಹ ಆರೋಪಗಳನ್ನು ಹೇಗೆಲ್ಲ ವ್ಯವಸ್ಥಿತವಾಗಿ ಬಳಸಿಕೊಳ್ಳಲಾಯ್ತು ಮತ್ತು ಅದರಿಂದ ಆದ ಪರಿಣಾಮ ಏನು ಅನ್ನೋದನ್ನು ನಾವು ಮರೆಯಬಾರದು. ಭ್ರಷ್ಟಾಚಾರದ ಆರೋಪದಲ್ಲಿ ಅರಸು ಅವರ ರಾಜಕೀಯ ಜೀವನವನ್ನೇ ಬಲಿಹಾಕಿದ ತರುವಾಯ, ಭ್ರಷ್ಟಾಚಾರ ಸಂಪೂರ್ಣ ನಿರ್ನಾಮವಾಯ್ತೆ? ಖಂಡಿತ ಇಲ್ಲ. ಆದರೆ ಅವರು ಶುರು ಮಾಡಿದ್ದ ತಳಸಮುದಾಯಗಳ ಏಳಿಗೆಯ ಪಥವನ್ನು ಸಂಪೂರ್ಣ ದಿಕ್ಕುತಪ್ಪಿಸಲಾಯ್ತು. ನೈತಿಕತೆ, ಆದರ್ಶದ ಹೆಸರಲ್ಲಿ ಅರಸು ಅವರನ್ನು ಪತನಗೊಳಿಸಿದ ಸಜ್ಜನರು ಈ ಸಮಾಜಕ್ಕೆ ಕೊಟ್ಟ ಅಂತಿಮ ಕೊಡುಗೆ ಏನು ಅನ್ನೋದನ್ನು ಪ್ರಶ್ನಿಸಿಕೊಂಡಾಗ, ಈಗ ಸಿದ್ದರಾಮಯ್ಯನವರ ವಿರುದ್ಧವೂ ಅವರು ಪ್ರಯೋಗಿಸುತ್ತಿರುವ ನೈತಿಕತೆ, ಆದರ್ಶದ ಪದಬಳಕೆಗಳ ಪರಿಣಾಮ ನಮ್ಮ ಅಂದಾಜಿಗೆ ನಿಲುಕಬಹುದು.

ಸರಿ, ನೈತಿಕತೆಯ ಹೊಣೆ ಹೊತ್ತು ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟರು ಅಂತಿಟ್ಟುಕೊಳ್ಳಿ. ಅಧಿಕಾರದ ಚುಕ್ಕಾಣಿಯನ್ನು ಯಾರ ಕೈಗಿಡುವಿರಿ? ಶಾಂತವೇರಿ ಗೋಪಾಲಗೌಡರಿಗಾ? ಕಡಿದಾಳು ಮಂಜಪ್ಪನವರಿಗಾ? ನಿಜಲಿಂಗಪ್ಪನವರಿಗಾ? ಅಥವಾ ಕೆಂಗಲ್‌ ಹನುಮಂತಯ್ಯನವರಿಗಾ? ಮೌಲ್ಯಾಧಾರಿತ ರಾಜಕಾರಣದ ಅವರೆಲ್ಲರ ಕಾಲಘಟ್ಟ ಗುಂಡೂರಾಯರು ಅಧಿಕಾರಕ್ಕೆ ಅಪ್ಪಳಿಸುತ್ತಿದ್ದಂತೆಯೇ ಮುಗಿದುಹೋಗಿದೆ. ಈಗ ಚೆಕ್‌ನಲ್ಲಿ ಲಂಚ ಪಡೆಯುವಷ್ಟು, ಹಾಡುಹಗಲೇ ಶಾಸಕರುಗಳ ಖರೀದಿ ಮಾಡುವಷ್ಟು ಕಾಲ ಅಪ್‌ಡೇಟ್‌ ಆಗಿದೆ. ಈಗ ನೀವು, ಒಂದು ಹುನ್ನಾರದ ಆರೋಪವನ್ನು ನೆಪ ಮಾಡಿಕೊಂಡು ಸಿದ್ದರಾಮಯ್ಯನವರನ್ನು ರಾಜೀನಾಮೆ ಕೊಡಿಸಿದರೆ ಮುಂದೇನು? ಅಧಿಕಾರಕ್ಕೆ ಬರುವವರ ಆದ್ಯತೆಗಳು ಏನು? ಬಿಜೆಪಿ-ಜೆಡಿಎಸ್‌ನ ಮಾತು ಒಂದುಕಡೆಗಿರಲಿ, ಕಾಂಗ್ರೆಸಿನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯುವವರು ಸಿದ್ದರಾಮಯ್ಯನವರು ಹಾಕಿರುವ ದಿಕ್ಕಿನಲ್ಲಿ ಆಡಳಿತ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸವಿಲ್ಲ. ಮತ್ತೊಮ್ಮೆ ಪ್ರಬಲ ಜಾತಿಗಳ ಕೋಮು ರಾಜಕಾರಣ ಆರ್ಭಟಿಸಿ, ಅಹಿಂದ ಸಮುದಾಯಗಳು ಅನಾಥಗೊಳ್ಳುತ್ತವೆ. ಹಾಗಿರುವಾಗ ನೈತಿಕತೆ ಮತ್ತು ಚಾರಿತ್ಯ್ರದ ಮಾತಾಡುತ್ತಿರುವ ಇವರು ಈ ಸಮಾಜಕ್ಕೆ ಕೊಡಲು ಹೊರಟಿರುವುದೇನು?

ರಫೇಲ್‌ ಸ್ಕ್ಯಾಮ್, ಪಿಎಂ ಕೇರ್ ಹಗರಣ, ಎಲೆಕ್ಟ್ರೋಲ್ ಬಾಂಡ್ ಅವ್ಯವಹಾರಗಳ ತರುವಾಯವೂ ನಿರಾತಂಕವಾಗಿ ಅಧಿಕಾರದಲ್ಲಿ ಮುಂದುವರೆಯುತ್ತಾ ತಮ್ಮ ವಿಭಜಕ ಅಜೆಂಡಾವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಪ್ರಜಾತಂತ್ರ ಮತ್ತು ಸಂವಿಧಾನವನ್ನು ಶಿಥಿಲಗೊಳಿಸುತ್ತಿರುವವರ ಕಾಲಘಟ್ಟದಲ್ಲಿ ಆರೋಪಕ್ಕೂ ಹುನ್ನಾರಕ್ಕೂ ವ್ಯತ್ಯಾಸವನ್ನು ಮರೆತಂತೆ ನೈತಿಕತೆಯ ಮಾತಾಡುವವರು ಎಷ್ಟೇ ಸಜ್ಜನರೆನಿಸಿಕೊಂಡಿದ್ದರೂ ಅವರ ಹಿಂದಿರಬಹುದಾದ ರಾಜಕೀಯ ಅಥವಾ ವೈಯಕ್ತಿಕ ಅಜೆಂಡಾಗಳನ್ನು ನಾವು ಅನುಮಾನಿಸಲೇಬೇಕಿದೆ. ಇಲ್ಲವಾದಲ್ಲಿ, ಮಹಿಷನಾಡಿನಲ್ಲಿ ಮಹಿಷ ದಸರಾ ಆಚರಿಸಲೂ ನಾವು ವೈದಿಕರ ವಿರೋಧ, ಅಪ್ಪಣೆ, ಅನುಮತಿಗಾಗಿ ಕಾತರಿಸಬೇಕಾದ ದುಸ್ಥಿತಿಗೆ ಮತ್ತೆಮತ್ತೆ ಈಡಾಗುತ್ತಲೇ ಇರಬೇಕಾಗುತ್ತೆ.

ಅವರು ನಮ್ಮಂತೆಯೇ ಅಥವಾ ನಮಗಿಂತ ಕಠಿಣವಾಗಿ ಮತ್ತು ಜಾಣತನದಿಂದ ಕೋಮುವಾದಿಗಳನ್ನು ವಿರೋಧಿಸುತ್ತಾರೆ ಎಂಬ ಮಾನದಂಡ, ನಮ್ಮ ಮೆದುಳನ್ನು ಅನಾಯಾಸವಾಗಿ ಅವರ ಕೈಗೊಪ್ಪಿಸಲು ನಮಗೆ ಪ್ರೇರಣೆಯಾಗದಿರಲಿ. ಪ್ರತಿಯೊಂದನ್ನು ಪ್ರಶ್ನಿಸಿ, ಪರಿಶೀಲಿಸಿ, ಪರಾಮರ್ಶಿಸಿ ಸ್ವೀಕರಿಸೋಣ. ಪರಾಮರ್ಶೆ ಎಂದರೆ ಕೇವಲ ಆಗಿಹೋದದ್ದನ್ನು ಅಥವಾ ಆಗುತ್ತಿರುವುದನ್ನು ಕಾಣುವುದು ಮಾತ್ರವಲ್ಲ, ಆಗಲಿರುವ ಪರಿಣಾಮವನ್ನು ಮುಂಗಾಣುವುದು ಕೂಡಾ… ಆ ಪರಿಣಾಮ, ನಾಳೆಯ ನಕ್ಷತ್ರದ ಪಟ ತೋರಿಸಿ ಇವತ್ತು ನಮ್ಮ ಕತ್ತು ಹಿಸುಕುತ್ತಿಲ್ಲ ತಾನೇ ಎಂಬುದನ್ನು ಖಾತ್ರಿಪಡಿಸಿಕೊಳ್ಳೋಣ….

(ಮಾಚಯ್ಯ ಎಂ ಹಿಪ್ಪರಗಿ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments