Thursday, August 21, 2025
Homeರಾಜ್ಯ"ಮಾಧ್ಯಮಗಳು ಅವರ ಪರ ಇವರ ಪರ ಎನ್ನದೆ ಜನರಪರ ಕೆಲಸ ಮಾಡಲಿ: ತೇಜಸ್ವಿ ಪಟೇಲ್

“ಮಾಧ್ಯಮಗಳು ಅವರ ಪರ ಇವರ ಪರ ಎನ್ನದೆ ಜನರಪರ ಕೆಲಸ ಮಾಡಲಿ: ತೇಜಸ್ವಿ ಪಟೇಲ್

ದಾವಣಗೆರೆ:”ಮುನ್ನೋಟವಿಲ್ಲದ ರಾಜಕಾರಣದಿಂದ ದೇಶದಲ್ಲಿ ಕೊಳೆತ ಸ್ಥಿತಿಯ ವಾತಾವರಣ ಸೃಷ್ಟಿಯಾಗಿದೆ ಎಂದೆನಿಸುತ್ತಿದೆ” ಎಂದು ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಬಿ ಶ್ರೀನಿವಾಸ್ ಅಭಿಪ್ರಾಯಪಟ್ಟರು. ಅವರು ದಾವಣಗೆರೆ ನಗರದ ರೋಟರಿ ಬಾಲ ಭವನದಲ್ಲಿ ಈ ದಿನ ಡಾಟ್ ಕಾಮ್ ಆಯೋಜಿಸಿದ್ದ “ನಮ್ಮ ಕರ್ನಾಟಕ. ನಡೆದ 50 ಹೆಜ್ಜೆ ಮುಂದಿನ ನಡೆ” ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶೇಷ ಸಂಚಿಕೆ ಕುರಿತು ಉಪನ್ಯಾಸ ನೀಡಿದ ಅವರು “ಕರ್ನಾಟಕ ಹೇಗೆ ಹರಿದು ಹಂಚಿಕೆಯಾಗಿತ್ತು. ಅದನ್ನು ಒಗ್ಗೂಡಿಸಲು ಎಷ್ಟು ಶ್ರಮ ಪಟ್ಟರು, ಶೋಷಣೆ ಒಳಗಾದವರು, ದೀನದಲಿತರು, ದುರ್ಬಲರು ಹೀಗೆ ನಾನಾ ವಿಚಾರಗಳನ್ನೊಳಗೊಂಡ ಸಮಗ್ರ ಪುಸ್ತಕ ಇದಾಗಿದೆ. ವಿಶೇಷ ಸಂಚಿಕೆಯಲ್ಲಿ ಎಲ್ಲವನ್ನು ಒಳಗೊಂಡು 50 ವರ್ಷದ ಹೆಜ್ಜೆಯ ಗುರುತನ್ನು ಇಲ್ಲಿಯ ಲೇಖನಗಳಲ್ಲಿ ಕಾಣುತ್ತೇವೆ” ಎಂದು ಪುಸ್ತಕ ಕುರಿತು ಮಾತನಾಡಿದರು

“ಯಾವುದೇ ಸಮುದಾಯವಿರಲಿ ಸ್ವಂತ ಬಲದಿಂದ ಶ್ರಮವಹಿಸಿ ಮೇಲೆ ಬರಬೇಕಾಗಿದೆ. ಯಾವ ಸಮಾಜ ಸ್ವಂತ ಶ್ರಮದಿಂದ ಮೇಲೆ ಬರುವುದಿಲ್ಲವೋ ಆ ಸಮಾಜ ಇನ್ನೂ ಶೋಷಣೆಗೆ ಒಳವಾಗುತ್ತದೆ. ಘೋಷಣೆಗಳೇ ಕಾವ್ಯಗಳಾಗಿ, ಕಾವ್ಯಗಳ ಘೋಷಣೆಗಳಾಗಿ, ಗೋಡೆ ಬರಹವೇ ಶಾಸನವಾಗುತ್ತಿದ್ದ ಕಾಲವನ್ನು ಮೀರಿ ಬಂದಿದ್ದೇವೆ. ಇವತ್ತು ಕೂಗಿಕೊಂಡರೂ ಬೇಡಿಕೊಂಡರೂ ಶೋಷಣೆ ಒಳಗಾದ ಸಮಾಜಕ್ಕೆ ನ್ಯಾಯ ಕೊಡಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಸೂಕ್ಷ್ಮತೆಗಳನ್ನು ಅರಿತು ನಾವೆಲ್ಲರೂ ಒಗ್ಗಟ್ಟಾಗಬೇಕಾಗಿದೆ. ಸಮ ಸಮಾಜ ನಿರ್ಮಾಣವಾದರೆ ಯಾವ ಮೀಸಲಾತಿಯ ಅವಶ್ಯಕತೆಯೂ ಇರುವುದಿಲ್ಲ. ಕುಲಕಸುಬನ್ನು ನಂಬಿದವನಿಗೆ ಕಸುಬು ಸಿಗುತ್ತಿಲ್ಲ. ಕಾರ್ಮಿಕನಿಗೆ ಕೆಲಸ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯದಂತೆ ಶೋಷಣೆ ಒಳಗಾದ ದಲಿತ ಅಲ್ಪಸಂಖ್ಯಾತ ಹಿಂದುಳಿದ ಜನರಿಗೆ ಮೀಸಲಾತಿ ಬಹುಮುಖ್ಯ ಹಾಗು ಅವಶ್ಯಕತೆ ಇದೆ” ಎಂದು ಅಭಿಪ್ರಾಯಪಟ್ಟರು.

“ದೇಶದ ಬಹುದೊಡ್ಡ ಸಮುದಾಯವಾದ ಅಹಿಂದ ಹೊರಗಿಟ್ಟು ದೇಶವನ್ನು ಕಟ್ಟಲು ಆಗುವುದಿಲ್ಲ. ಇದನ್ನು 80ರ ದಶಕದಲ್ಲೇ ವಿಪಿ ಸಿಂಗ್ ಹೇಳಿದ್ದರು. ಇಲ್ಲಿ ದಲಿತ ಚಳುವಳಿ, ಕಾರ್ಮಿಕ ಚಳುವಳಿ, ರೈತ ಚಳುವಳಿಗಳ ಐವತ್ತು ವರ್ಷದ ಕುರಿತು ಈ ಸಂಚಿಕೆಯಲ್ಲಿ ಕಾಣುತ್ತವೆ. ಈ ಸಂಚಿಕೆಯು ಯುವಕರಿಂದ ಹಿಡಿದು ಎಲ್ಲರೂ ಓದಬೇಕಾದ ಮಹತ್ವದ ಸಂಚಿಕೆ ಆಗಿದೆ. ಕೋಮುವಾದವನ್ನು ತಡೆಗಟ್ಟುವ ಈದಿನ ಡಾಟ್ ಕಾಮ್ ಮಾಧ್ಯಮವನ್ನು ಚೈತನ್ಯವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ಕರೆ ನೀಡಿದರು.

ವಿಶೇಷ ಸಂಚಿಕೆಯ ಬಿಡುಗಡೆಗೊಳಿಸಿ ಮಾತನಾಡಿದ ಮಾಯಕೊಂಡ ಕ್ಷೇತ್ರದ ಶಾಸಕ ಕೆ ಎಸ್ ಬಸವಂತಪ್ಪ “ಅಂಗೈಯಲ್ಲಿ ಪ್ರಪಂಚ ಎನ್ನುವ ಕಾಲಮಾನದಲ್ಲಿ ನಾವಿದ್ದೇವೆ. ಮಾಧ್ಯಮಗಳು ಜನರ ಪ್ರತಿಬಿಂಬವಾಗಲಿ. ಶೋಷಿತರ ಧ್ವನಿಯಾಗಲಿ. ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವಾಗಲಿ. ಸಮ ಸಮಾಜ ನಿರ್ಮಾಣಕ್ಕೆ ಮಾಧ್ಯಮ ಕೂಡ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಈ ದಿನ ಡಾಟ್ ಕಾಮ್ ಕೆಲಸ ಮಾಡುತ್ತಿದೆ. ಇದಕ್ಕೆ ನಾವೆಲ್ಲರೂ ಕೈಜೋಡಿಸುತ್ತೇವೆ. ಯಾವ ವಿಚಾರಗಳನ್ನು ಬಿಟ್ಟರಿಸಬೇಕೋ ಅವುಗಳನ್ನು ಬಿತ್ತರಿಸುತ್ತಿಲ್ಲ. ಕೋಮು ದ್ವೇಷ ಬಿತ್ತರಿಸುವ ಮಾಧ್ಯಮಗಳ ನಡುವೆ ಸೌಹಾರ್ದ ಕಟ್ಟುವ ಈದಿನ ಡಾಟ್ ಕಾಮ್ ಬಂದಿರುವುದು ಸಂತಸದ ಸಂಗತಿ. ಸಮ ಸಮಾಜವನ್ನು ನಿರ್ಮಾಣ ಮಾಡಲು ಇಂತಹ ಮಾಧ್ಯಮಗಳು ಹುಟ್ಟಬೇಕಿದೆ”
ಎಂದು ಶುಭ ಹಾರೈಸಿದರು.

ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ “ಮಾಧ್ಯಮಗಳು ಅವರ ಪರ ಇವರ ಪರ ಎನ್ನದೆ ಜನರಪರ ಕೆಲಸ ಮಾಡಲಿ. ಈ ನಿಟ್ಟಿನಲ್ಲಿ ನಾವು ಗಮನಿಸುತ್ತಿರುವಂತೆ ಈ ದಿನ ಅತ್ಯಂತ ನಿಖರವಾಗಿ ಸಮಾಜದ ಪರವಾಗಿ ಸುದ್ದಿಗಳನ್ನು ಮಾಡುತ್ತಿದೆ. ಎಲ್ಲಾ ಮಾಧ್ಯಮಗಳೂ ಯಾವುದೇ ಪಕ್ಷಕ್ಕೆ ಸೀಮಿತವಾಗದೆ, ಜನಪರ ಕಾಳಜಿವಹಿಸಿ ಮಾಧ್ಯಮಗಳ ಕೆಲಸ ಮಾಡಬೇಕೆಂದು” ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಫಕ್ರುದ್ದೀನ್ “ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಬೇಕು. ಪತ್ರಿಕೆ ಮತ್ತು ಪತ್ರಕರ್ತರು ತುಂಬಾ ಕಷ್ಟದಲ್ಲಿದ್ದಾರೆ. ಪತ್ರಿಕೆಗಳನ್ನು ಕೊಂಡು ಓದುವುದರಿಂದ ಆರ್ಥಿಕವಾಗಿ ಸ್ವಲ್ಪ ಮಟ್ಟಿಗಾದರೂ ಸುಧಾರಿಸಿಕೊಳ್ಳಬಹುದು. ಸರ್ಕಾರಗಳು ಮತ್ತು ಪಾಲಿಕೆಗಳು ಪ್ರತಿ ವಾರ್ಡ್ ಮತ್ತು ಎಲ್ಲಾ ಪಾರ್ಕುಗಳಲ್ಲೂ ಗ್ರಂಥಾಲಯಗಳನ್ನು ನಿರ್ಮಿಸಿ ಓದುವ ಹವ್ಯಾಸ ಹೆಚ್ಚು ಮಾಡಬೇಕು. ಪ್ರತಿಯೊಬ್ಬರು ಪತ್ರಿಕೆಯನ್ನು ಬೆಳೆಸಲು ಸಹಕಾರ ನೀಡಬೇಕು ಸರ್ಕಾರವು ಇದರ ಬಗ್ಗೆ ಗಮನ ಹರಿಸಬೇಕೆಂದು” ಮನವಿ ಮಾಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ ಡಿ ರಾಘವನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್ ಹೆಚ್ಅರುಣ್ ಕುಮಾರ್, ನೆರಳುಬೀಡಿ ಕಾರ್ಮಿಕರ ಸಂಘಟನೆಯ ಜಬೀನ ಖಾನಂ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ್ ಕುಂದವಾಡ, ದಲಿತ ಮುಖಂಡ ಬಿ ಎಂ ಹನುಮಂತಪ್ಪ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬುಳ್ಳಾಪುರ ಹನುಮಂತಪ್ಪ, ಸತೀಶ್ ಅರವಿಂದ್, ಪವಿತ್ರ ಅರವಿಂದ್, ಅಬ್ದುಲ್ ಗನಿ ತಾಹಿರ್, ಹನುಮಂತಪ್ಪ, ಸುಧಾ ಪಲ್ಲಾಗಟ್ಟೆ, ಅಲ್ಲಾಭಕ್ಷಿ, ಅಣಜಿ ಹನುಮಂತಪ್ಪ, ಮಂಜುನಾಥ್, ಮಹಾಂತೇಶ್, ಲಿಂಗರಾಜು, ಅಜ್ಜಯ್ಯ ಮದಕರಿ, ಪರಮೇಶ್ವರಪ್ಪ, ಶ್ಯಾಮಲೆ ಚಂದ್ರಪ್ಪ ಹಾಗೂ ರೈತ ಸಂಘಟನೆಗಳ, ಕಾರ್ಮಿಕ ಸಂಘಟನೆಗಳ, ಗ್ರಾಕೂಸ್, ಜನಶಕ್ತಿಯ, ದಲಿತ ಸಂಘರ್ಷ ಸಮಿತಿಯ ಅನೇಕ ಕಾರ್ಯಕರ್ತರು ಸಾಹಿತಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments