ವಿಜಯಪುರ:| ‘ಕರ್ಮಕ್ಕೇ ವಾಧಿಕಾರಸ್ತೇ ಮಾ ಫಲೇಷು ಕದಾಚನ’ ‘ಕರ್ಮ ಮಾಡು ಫಲವನ್ನು ಅಪೇಕ್ಷಿಸಬೇಡ’ ಎನ್ನುವ ಮಾತನ್ನು ನನ್ನ ಅಕ್ಕ ಡಾ॥ ರೈಲಜಾ. ರಾ.ಬಿದರಿ ಮಾವನವರನ್ನು ಕುರಿತು ಬರೆದದ್ದು ಇಂದು ನೆನಪು ಮಾಡಿಕೊಳ್ಳಲೇ ಬೇಕೆನಿಸುತ್ತದೆ. ಏಕೆಂದರೆ ಫೆಬ್ರುವರಿ ಎರಡು ನಮ್ಮ ತಂದೆಯಂತಹ ಮಾವನವರ ಪುಣ್ಯಾರಾಧನೆ ದಿನವಾಗಿದೆ. ಹಿರಿದಾದ ವ್ಯಕ್ತಿತ್ವ ಹೊಂದಿ, ಜನಸೇವೆಗಾಗಿ ಅವರು ಬದುಕಿದ ರೀತಿ ಈಗಲೂ ನಮಗೆಲ್ಲ ಅನುಕರಣೀಯ! 1930ರಲ್ಲಿ ಶ್ರೀಯುತ, ರಾಮಪ್ಪ ತಾರಾಬಾಯಿ ಅವರ ಹಿರಿಯ ಮಗನಾಗಿ ಜನಿಸಿದರು.

ಮೂಲತಃ ರಾಮಪ್ಪ ಬಿದರಿಯವರು ಒಬ್ಬ ನಿಸ್ಕಲ್ಮಶ ರಾಜಕಾರಣಿ ಸ್ವತಂತ್ರ ಪೂರ್ವದಲ್ಲಿ “ಔಂದ” ಸಂಸ್ಥಾನದ ಪ್ರಧಾನಮಂತ್ರಿಯಾಗಿದ್ದರು. ಇಂದಿನಂತೆ ಸೌಲಭ್ಯವಿಲ್ಲದ ದಿನಗಳಲ್ಲಿ ಸಂಸ್ಥಾನದ ಪ್ರಧಾನ ಮಂತ್ರಿ ಆಗಿದ್ದ ಬಿದರಿ ಅವರು ಮಳೆಗಾಲದಲ್ಲಿ ತುಂಬಿ ಹರಿಯುವ ಕೃಷ್ಣ ನದಿಯಲ್ಲಿ ಈಜಿ ಆ ನದಿಯನ್ನು ದಾಟುತ್ತಿದ್ದರಂತೆ, ಅಪ್ಪಟ ಪ್ರಾಮಾಣಿಕರಾದ ಶ್ರೀಯುತರು ಸಂಸ್ಥಾನದ ಹಣವನ್ನು ಸ್ವಂತಕ್ಕಾಗಿ ಎಂದು ಬಳಸಿದವರಲ್ಲ. ವಿಲಾಸಿ ಜೀವನ ನಡೆಸಿದವರಲ್ಲ. ಹೀಗಾಗಿ ಅವರು ಸರಳತೆಯ ಸಾಕಾರ ಮೂರ್ತಿಗಳಾಗಿದ್ದರು. ಜನರ ಪ್ರೀತಿ ಗಳಿಸಿದ್ದರು. ಸ್ವತಂತ್ರ ಭಾರತದಲ್ಲಿ 1952 ರಲ್ಲಿ ಮೊಟ್ಟಮೊದಲ ಬಾರಿಗೆ ಚುನಾರಣೆ ನಡೆದಾಗ ಶ್ರೀ ರಾಮಪ್ಪ ಬಿದರಿಯವರು ವಿಜಾಪುರ ದಕ್ಷಿಣ ಲೋಕಸಭೆಯ ಅಭ್ಯರ್ಥಿಯಾಗಿ ಲೋಕಸಭೆಗೆ ಸದಸ್ಯರಾದವರು. ವಿಜಯಪುರದ ರಾಜೇಂದ್ರ ಪ್ರಸಾದರೆಂದೇ ಪ್ರಸಿದ್ದರಾದ ಇವರು ಶ್ರಮ ಜೀವಿಗಳು ಕೂಡ ಆಗಿದ್ದರು. ಇಂತಹ ಆದರ್ಶ ವ್ಯಕ್ತಿಯ ಮಗನಾಗಿ ಜನಿಸಿದವರು ಡಾ। ಸಿ. ಆರ್. ಬಿದರಿಯವರು. ಬಾಲ್ಯದಲ್ಲೇ ಅತ್ಯಂತ ಚುರುಕಾದ ಬುದ್ದಿ ಹೊಂದಿದ ಇವರು ಬಾಲಕರಾಗಿದ್ದಾಗಲೇ ವಿದ್ಯಾರ್ಥಿ ವೇತನ ಪಡೆಯುತ್ತಾ ಹಲವಾರು ರೀತಿಯ ಬಹುಮಾನವನ್ನು ತಮ್ಮದಾಗಿಸಿಕೊಂಡವರು ಓದುವುದರಲ್ಲಿ ಮಾತ್ರವಲ್ಲದೆ ಆಟದಲ್ಲೂ ಸೈ ಎನಿಸಿಕೊಂಡ ಪ್ರತಿಭಾವಂತ ವಿದ್ಯಾರ್ಥಿ,

ಆಗಿನ ಕಾಲದಲ್ಲಿ ಅವರ ತಂದೆ ಸಂಸ್ಥಾನದ ಪ್ರಧಾನಿಯಾಗಿದ್ದರೂ ಎಲ್ಲೂ ಆ ಹೆಸರನ್ನು ಬಳಸಿಕೊಳ್ಳದೇ ತಮ್ಮ ಸ್ವಂತ ಪರಿಶ್ರಮದಿಂದ ಉನ್ನತ ಶಿಕ್ಷಣ ಕಲಿತು ವೈದ್ಯರಾಗಿ, ಆ ವೈದ್ಯಕೀಯ ಕ್ಷೇತ್ರದಲ್ಲಿ ಪ್ರತ್ಯಕ್ಷ ದೇವರು ಎನಿಸಿಕೊಂಡ ಮಹಾನುಭಾವರು. ಎಂ.ಬಿ.ಬಿ.ಎಸ್. ಎಂ.ಡಿ ಪದವಿಗಳಲ್ಲದೆ ಇನ್ನೂ ಏಳೆಂಟು ವೈದ್ಯಕೀಯ ಪದವಿಗಳನ್ನು ಪಡೆದಿದ್ದ ಪ್ರವೀಣರು, ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿ ವಿಜಯಪುರದ ಸಿದ್ದೇಶ್ವರ ಹೈಸ್ಕೂಲ್ ನಲ್ಲಿ ಮೆಟ್ರಿಕ್ ಕಲಿತು ಜೊತೆಗೆ ಕ್ರೀಡಾಪಟುವಾಗಿದ್ದರು. ಓಟದಲ್ಲಿ ಭಾಗವಹಿಸಿ ಮ್ಯಾರಥಾನ್ ರನ್ನಿಂಗ್ ರೇಸ್ ನಲ್ಲಿ ಭಾಗವಹಿಸುವ ಅರ್ಹತೆ ಪಡೆದು ಗೆಲುವಿನ ಗುರಿ ತಲುಪುವ ಸಮಯದಲ್ಲಿ ಇವರಿಗೆ ಏಕಾಏಕಿ ಪೋಲಿಯೋ ತಗುಲಿದ್ದು ವಿಧಿಯ ಅಟ್ಟಹಾಸ! ಕ್ರೀಡಾ ಕ್ಷೇತ್ರದಲ್ಲಿ ಮಿಲ್ಟಾ ಸಿಂಗರಷ್ಟೇ ಎತ್ತರಕ್ಕೆ ಬೆಳೆದು ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸುವ ಸಂದರ್ಭದಲ್ಲಿ ತುಂಬಲಾರದ ನಷ್ಟವಾಯಿತು. ಯಾವ ಮದ್ದು ಕೊಟ್ಟು ರೋಗಿಗಳನ್ನು ಗುಣಪಡಿಸುತ್ತಿದ್ದರೋ ಅದೇ ಕಾಯಿಲೆ ಅವರ ಅಧಮ್ಯ ಶಕ್ತಿಯನ್ನು ಕಸಿದುಕೊಂಡಿತ್ತು. ದೇಹ ಕುಸಿದರೂ ಅವರ ಎದೆಯೊಳಗಿನ ಧೈರ್ಯ, ಉತ್ಸಾಹ ನೆಲವನ್ನು ಒದ್ದು ಎದ್ದು ನಿಂತಿತ್ತು. ಕರ್ಮ ಭೂಮಿ ವಿಜಯಪುರದಲ್ಲಿ ಬಂಥನಾಳ ಪೂಜ್ಯರ ಅಶೀರ್ವಾದದಿಂದ ಆಸ್ಪತ್ರೆ ಆರಂಭಿಸಿದರು.

ಮುಂದೆ ಬಿ.ಎಲ್. ಡಿ.ಇ. ಸಂಸ್ಥೆಯಲ್ಲಿ ಸುಮಾರು 35ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ಆಲಂಕರಿಸಿ ಕಾರ್ಯ ನಿರ್ವಹಿಸಿದರು. ವೈದ್ಯಕೀಯ ಕಾಲೇಜಿಗಾಗಿ ಕಷ್ಟಪಟ್ಟು ಶ್ರೀ. ಬಿ.ಎಮ್ ಪಾಟೀಲರೊಂದಿಗೆ ಕೈಜೋಡಿಸಿ ವೈದ್ಯಕೀಯ ಕಾಲೇಜು ಬಿ.ಎಲ್.ಡಿ.ಇ. ಸಂಸ್ಥೆಗೆ ಸಿಗುವಂತೆ ಶ್ರಮಿಸಿದರು. ರೋಟರಿ ಕ್ಲಬ್ ಚೇರ್ಮನ್ ಆಗಿ ಹಲವಾರು ಸಾಮಾಜಿಕ ಕೆಲಸ ಮಾಡಿ ಎಲ್ಲರ ಹೃದಯದೊಳಗೆ ನಗು ತುಂಬಿದ ದೇವರಾದವರು. ಕೊನೆಯ ದಿನಗಳಲ್ಲೂ ಶಾರೀರಿಕ ಸಮಸ್ಯೆ ಇದ್ದರೂ ರೋಗಿಗಳ ಸೇವೆ ಮಾಡಿದ ಧನ್ವಂತರಿ ನನ್ನ ಪ್ರೀತಿಯ ಮಾವನವರು. ಅವರ ಸರಳ ಸಜ್ಜನಿಕೆ ಬದುಕು ಮುಂದಿನ ಪೀಳಿಗೆಗೆ ಬೆಳಕಾಗಲಿ. ನೋವ ನುಂಗಿ ಮುಂದಡಿ ಇಡುವ ಅವರ ಆತ್ಮಸ್ಥೆರ್ಯ ಎಲ್ಲಾ ಹೊಸ ಚಿಗುರುಗಳ ಎದೆಯಂಗಳದಲ್ಲಿ ಮೂಡಿಬರಲಿ. ಜಗಕ್ಕೆ ಬಂದಿರಿ ಕಷ್ಟಕೋಟಲೆಗಳ ಮಧ್ಯೆಯೂ ಹೆಜ್ಜೆಗಳ ಗುರುತನ್ನು ವೈದ್ಯಕೀಯ ರಂಗದಲ್ಲಿ ಮೂಡಿಸಿ ಮರೆಯಾಗಿ ೧೨ ವರ್ಷಗಳಾದರೂ ಮರೆಯಲಾಗದ ಮಾಣಿಕ್ಯ ನೀವು. ಪ್ರಶಾಂತತೆಯ ಬಯಲಲ್ಲಿ ಬಯಲಾದ ನಿಮ್ಮ ಸಾಮಾಜಿಕ ಸೇವೆ ಇನ್ನೂ ನಿಂತಿಲ್ಲ. ನಿಮ್ಮ ಸ್ಮರಣಾರ್ಥವಾಗಿ ನೀವು ಪ್ರೀತಿಸುತ್ತಿದ್ದ ಕ್ರೀಡೆಯಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಸ್ಪರ್ಧೆ ಏರ್ಪಡಿಸಿ ಅವರಿಗೆ ತಕ್ಕ ಬಹುಮಾನವನ್ನು ನಿಮ್ಮ ಹೆಸರಿನಲ್ಲಿ ವಿತರಿಸಲಾಗುವುದು. ನಿಮ್ಮ ಉತ್ಸಾಹ ಕ್ರೀಡಾಪಟುಗಳಲ್ಲಿ ಬರಲಿ ಎನ್ನುವ ಆಸೆಯೊಂದಿಗೆ ಹಲವಾರು ವಿದ್ಯಾರ್ಥಿಗಳಿಗೆ ಕ್ರೀಡೆಗಳನ್ನು ತಮ್ಮ ಕುಟುಂಬದಿಂದ ಬಿ. ಎಲ್. ಡಿ. ಇ ಸಂಸ್ಥೆಯಲ್ಲಿ ಸೇರ್ಪಡಿಸಲಾಗಿದ್ದು. ಜನವರಿ 31 ಹಾಗೂ ಫೆಬ್ರುವರಿ 1ನೇ ತಾರೀಖಿನವರೆಗೆ ನಡೆಯುವ ಹಲವಾರು ಆಟಗಳು, ಗೆದ್ದ ವಿದ್ಯಾರ್ಥಿಗಳಿಗೆ 2ನೇತಾರೀಖಿಗೆ ಬಹುಮಾನ ವಿತರಿಸಲಾಗುವುದು. ಹಾಗೂ ಕ್ಯಾನ್ಸರ್ ರೋಗದ ಕುರಿತು ಕಾರ್ಯಗಾರ ನಡೆಸಲಾಗುವುದು. ಡಾ।। ಸಿ. ಆರ್. ಬಿದರಿಯವರು ಇಹಲೋಕದಿಂದ ಮರೆಯಾದರೂ ಅವರು ಪ್ರೀತಿಸುವ ಕ್ರೀಡಾರಂಗ ಹಾಗೂ ವೈದ್ಯಕೀಯ ರಂಗ ಯಾವತ್ತಿಗೂ ಅವರನ್ನು ನೆನೆಸಿಕೊಳ್ಳುತ್ತದೆ. ನಿಮ್ಮ ನೆನಪು ನಮ್ಮ ಮನದಲ್ಲಿ ಹಸಿರಾಗಿದೆ. ನಿಮ್ಮ ಪವಿತ್ರ ಆತ್ಮಕ್ಕೆ ಚಿರಶಾಂತಿ ಸಿಗಲಿ!
- ಶ್ರೀಮತಿ. ಇಂದಿರಾ. ಶ. ಬಿದರಿ. ಹೊನಗನಹಳ್ಳಿ,ಶಿಕ್ಷಕಿ ಹಾಗೂ ಸಾಹಿತಿ