Monday, July 7, 2025
Homeರಾಜಕೀಯಕರ್ನಾಟಕದ ಭ್ರಷ್ಟ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯನವರೂ ಒಬ್ಬರು ಎನ್ನುವ ಸತ್ಯ ಸುಳ್ಳಾಗುವುದಿಲ್ಲ:ರವಿ ಕೃಷ್ಣರೆಡ್ಡಿ

ಕರ್ನಾಟಕದ ಭ್ರಷ್ಟ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯನವರೂ ಒಬ್ಬರು ಎನ್ನುವ ಸತ್ಯ ಸುಳ್ಳಾಗುವುದಿಲ್ಲ:ರವಿ ಕೃಷ್ಣರೆಡ್ಡಿ

ಮೂಡಾ ಅಕ್ರಮ ಸೈಟು ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಮತ್ತು ಇತರೆ ಯಾರಿಂದಲೂ ಯಾವುದೇ ಲೋಪ ಆಗಿಲ್ಲ ಅಥವ ಆಗಿದೆ ಎನ್ನುವುದಕ್ಕೆ ಸಾಕ್ಷ್ಯಾಧಾರಗಳು ಇಲ್ಲ ಎಂದು ಲೋಕಾಯುಕ್ತ ಸಂಸ್ಥೆಯ ಪೊಲೀಸ್ ಅಧಿಕಾರಿ ಇಂದು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ.

ಈ ಪೊಲೀಸರ ತನಿಖೆಯ ಮೇಲೂ ಯಾವುದೇ ಪ್ರಭಾವ ಬಳಸಲಾಗಿಲ್ಲ ಮತ್ತು ಯಾವುದೇ ಅಧಿಕಾರ ದುರುಪಯೋಗ ಆಗಿಲ್ಲ ಎನ್ನುವುದು ಎಷ್ಟು ಸತ್ಯವೋ, ಸಿದ್ದರಾಮಯ್ಯನವರ ಕುಟುಂಬದವರು “ಮೂಡಾ” ದಿಂದ ಯಾವುದೇ ಪ್ರಭಾವ ಮತ್ತು ಅಧಿಕಾರ ದುರುಪಯೋಗ ಇಲ್ಲದೆ ಸೈಟು ಪಡೆದಿದ್ದರು ಎನ್ನುವುದೂ ಅಷ್ಟೇ ಸತ್ಯ.

ಕಾನೂನು ಏನೇ ಹೇಳಬಹುದು, ಹಾಗೆಯೇ ಇಂದಿನ ಕರ್ನಾಟಕದ ಕಾಂಗ್ರೆಸ್ ಬುದ್ಧಿಜೀವಿಗಳೂ ಸೇರಿದಂತೆ ಪೇಡ್ ಪತ್ರಕರ್ತರು ಏನೇ ವದರಬಹುದು, ಬೇರೆ ಯಾರೂ ಮಾಡಿಲ್ಲವೇ ಎನ್ನುವ ವಿತಂಡವಾದವನ್ನು ನಾಚಿಕೆಯಿಲ್ಲದೆ ಎಷ್ಟೇ ಬಳಸಬಹುದು, ಕರ್ನಾಟಕದ ಭ್ರಷ್ಟ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯನವರೂ ಒಬ್ಬರು ಎನ್ನುವ ಸತ್ಯ ಸುಳ್ಳಾಗುವುದಿಲ್ಲ.

ಕೋಮುವಾದ-ವಿರೋಧಿ ಮತ್ತು ಬಡವರ “ಭಾಗ್ಯ ವಿಧಾತ” ಎನ್ನುವ ಸೋಗಿನಲ್ಲಿ ಇವರ ಆಡಳಿತದಲ್ಲಿ ಕರ್ನಾಟಕ ಸರ್ಕಾರವು ಮೇಲಿನಿಂದ ಕೆಳಗಿನ ತನಕವೂ ಎಷ್ಟು ಭ್ರಷ್ಟ, ಲಂಚಕೋರ, ಮತ್ತು ದುರಾಡಳಿತದ್ದು ಎಂದು ಮುಂದಿನ ದಿನಗಳಲ್ಲಿ ಇತಿಹಾಸ ದಾಖಲಿಸಲಿದೆ.

ಅಂದಹಾಗೆ, ಈಗ ಬಿ-ರಿಪೋರ್ಟ್ ಹಾಕಿಸಿಕೊಂಡ ಮಾತ್ರಕ್ಕೆ ಪ್ರಕರಣ ಇಲ್ಲಿಗೇ ಮುಕ್ತಾಯವಾಗುವುದಿಲ್ಲ. ಯಡಿಯೂರಪ್ಪ ಮತ್ತು ಸೋಮಣ್ಣ ಭಾಗಿಯಾಗಿದ್ದ ಅಕ್ರಮ ಡಿನೋಟಿಫಿಕೇಶನ್ ಹಗರಣದ ವಿರುದ್ಧ ನಾನು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾಗ, ಆಗಲೂ ಲೋಕಾಯುಕ್ತ ಪೊಲೀಸರು ಬಿ-ರಿಪೋರ್ಟ್ ದಾಖಲಿಸಿದ್ದರು. ನಾವು ಅದನ್ನು ಪ್ರಶ್ನಿಸಿದೆವು. ಆಗಿನ ನ್ಯಾಯಾಧೀಶ ಸುಧೀಂದ್ರ ರಾಯರು ನಮ್ಮ ವಾದವನ್ನು ಪುರಸ್ಕರಿಸಿ ಪೊಲೀಸರ ಬಿ-ರಿಪೋರ್ಟ್ ತಿರಸ್ಕರಿಸಿ ಯಡಿಯೂರಪ್ಪ, ಸೋಮಣ್ಣ ಸೇರಿದಂತೆ ನಾಲ್ವರಿಗೆ ಸಮನ್ಸ್ ಜಾರಿ ಮಾಡಿದ್ದರು ಮತ್ತು ಅವರು ಸುಮಾರು ಆರು ವರ್ಷಗಳ ಕಾಲ ಜಾಮೀನಿನ ಮೇಲೆ ಇದ್ದರು. ಆ ಕೋರ್ಟು, ಈ ಕೋರ್ಟು ಎಂದು ಅದನ್ನು ನ್ಯಾಯಾಂಗದ ಸಿಕ್ಕುಗಳಲ್ಲಿ ಸಿಕ್ಕಿಸಿ, ಕೊನೆಗೆ ಯಾವುದೋ ತಾಂತ್ರಿಕ ಕಾರಣಕ್ಕೆ ಮೊಕದ್ದಮೆ ರದ್ದಾಯಿತು. ಆರೋಪಿಗಳು ಖುಲಾಸೆಯೇನೂ ಆಗಲಿಲ್ಲ.

ಈ ಪ್ರಕರಣದಲ್ಲಿಯೂ ಆರೋಪಿಗಳಿಗೆ ಶಿಕ್ಷೆ ಆಗದೆ ಹೋಗಬಹುದು. ಅದು ನ್ಯಾಯಕ್ಕೆ ಮತ್ತು ಕಾನೂನಿಗೆ ಆಗುವ ಅಪಜಯ. ಆದರೆ ದುರಂತ ಇರುವುದು ಅಲ್ಲಲ್ಲ. ಭ್ರಷ್ಟರು ಜನತಾ ನ್ಯಾಯಾಲಯದಲ್ಲಿ, ಅಂದರೆ ಚುನಾವಣೆಗಳಲ್ಲಿ ಗೆದ್ದು ಬರುವುದು. ಮತದಾರರು ಭ್ರಷ್ಟರ ಹಣಕ್ಕೆ ಮತ್ತು ಕ್ಷಣಿಕ ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ಜೊತೆಗೆ ಜಾತಿಪ್ರೇಮ. ಅಂದಹಾಗೆ, ಜಾತಿವಿನಾಶ ಆಗಬೇಕು ಎನ್ನುವವರೇ ಇಂದು ದೊಡ್ಡ ಸಂಖ್ಯೆಯಲ್ಲಿ ಜಾತಿಭಾವನೆಯನ್ನು ಗಟ್ಟಿಗೊಳಿಸಿ ತಮ್ಮ ಜಾತಿ/ಸಮುದಾಯದ ಸಿರಿವಂತ ಖದೀಮರನ್ನು ಮತ್ತು ಪಾಪಿಗಳನ್ನು ರಕ್ಷಿಸುತ್ತಿದ್ದಾರೆ.

ಇದು ಕಾಲಮಾನದ ಸಮಸ್ಯೆ. ಈ ವಿದ್ಯಮಾನ ಎಷ್ಟು ದಿನ ನಡೆಯುತ್ತದೆಯೋ ಅಲ್ಲಿಯವರೆಗೆ ಭ್ರಷ್ಟರು ಸುರಕ್ಷಿತ. ಕಾಲ ಬದಲಾಯಿತೋ, ಮನೆ-ಹೊಲ-ಬಿಲದಲ್ಲಿ ಅಡಗಿರುವ ಭ್ರಷ್ಟರನ್ನು ಜನರು ಬೀದಿಗೆ ಎಳೆತಂದು ಬಾರಿಸುತ್ತಾರೆ. ನೋಡುತ್ತಿರಿ.

ಒಂದು ಕಾಲದಲ್ಲಿ ಸಮಾಜದ ಸಾಕ್ಷಿಪ್ರಜ್ಞೆ ಎನ್ನಿಸಿಕೊಂಡಿದ್ದವರೂ ಇಂದು ಜಾತಿಪ್ರೇಮ ಅಥವ ಜಾತಿದ್ವೇಷದಿಂದ ಕುರುಡಾಗಿ, ಆಮಿಷಗಳಿಗೆ ಮತ್ತು ಅಧಿಕಾರಕ್ಕೆ ಬಲಿಯಾಗಿ, ಕೋಮುವಾದವನ್ನು ವಿರೋಧಿಸುವ ಭರದಲ್ಲಿ ಭ್ರಷ್ಟಾಚಾರಿಗಳನ್ನು ಮತ್ತು ಭ್ರಷ್ಟಾಚಾರವನ್ನು ಸಮರ್ಥಿಸುವ ಹೀನ ಸ್ಥಿತಿಗೆ ತಲುಪಿದ್ದಾರೆ. ಅವರಿಗೆ ನೆನಪಿರಲಿ, ಕಾಂಗ್ರೆಸ್ ಮತ್ತು ಇತರೆ ಪ್ರಾದೇಶಿಕ ಪಕ್ಷಗಳ ಅನಿಷ್ಟ ಕುಟುಂಬ ರಾಜಕಾರಣ ಮತ್ತು ಅವರ ಎಗ್ಗುಸಿಗ್ಗಿಲ್ಲದ ಅನಿಯಂತ್ರಿತ ಭ್ರಷ್ಟಾಚಾರದ ಕಾರಣದಿಂದಲೇ ಬಿಜೆಪಿ ದೇಶದಲ್ಲಿ ಈ ಮಟ್ಟಿಗೆ ಬೆಳೆದಿದ್ದು. ನಿಮ್ಮ ಆಶಯಗಳು ಅಪ್ರಾಮಾಣಿಕವಾದದ್ದು ಎನ್ನುವುದು ಇದೆಲ್ಲಾ ಗೊತ್ತಿದ್ದರೂ ನೀವು ಕಾಂಗ್ರೆಸ್ ಭ್ರಷ್ಟಾಚಾರವನ್ನು ಸಮರ್ಥಿಸುತ್ತೀರಿ ಎನ್ನುವ ಇದೇ ಕಾರಣಕ್ಕೆ.

ಇದೆಲ್ಲದರ ನಡುವೆ ಕೆ.ಆರ್.ಎಸ್. ಪಕ್ಷವು ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಸುತ್ತದೆ. ಸಾಮಾಜಿಕ ನ್ಯಾಯಕ್ಕಾಗಿ, ಪ್ರಜಾಪ್ರಭುತ್ವಕ್ಕಾಗಿ, ಜನಸಾಮಾನ್ಯರ ಏಳಿಗೆಗಾಗಿ, ಸರ್ವೋದಯಕ್ಕಾಗಿ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.ರವಿ (ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ )

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments