ದಾವಣಗೆರೆ: ಇಂದಿನ ಮಕ್ಕಳೇ ದೇಶದ ಮುಂದಿನ ಭವಿಷ್ಯ. ಹಾಗಾಗಿ ಯುವಕರಿಗೆ ರಾಜಕಾರಣದಲ್ಲಿ ಹೆಚ್ಚಿನ ಅವಕಾಶ ನೀಡುವ ಅಗತ್ಯತೆ ಇದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರತಿಪಾದಿಸಿದರು.
ನಗರದ ದೃಶ್ಯಕಲಾ ಮಹಾವಿದ್ಯಾಲಯ ಕಾಲೇಜಿನ ಮಕ್ಕಳ ಥೀಮ್ ಪಾರ್ಕ್ ನಲ್ಲಿ ಜವಾಹರ್ ಬಾಲ್ ಮಂಚ್ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಕ್ಕಳೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪರಿಸರ, ನೀರು ಸಂರಕ್ಷಣೆ ಬಗ್ಗೆ ತಿಳಿಸಿ. ಹಿರಿಯರನ್ನು ಗೌರವಿಸುವ ಬಗ್ಗೆ ಹೇಳಿಕೊಡಿ. ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಾಗಿ ಪಾಲ್ಗೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ವಿಶೇಷ ಗಮನ ನೀಡಿ ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸಮಾಜದ ಎಲ್ಲಾ ಜನರು ರಾಜಕೀಯದ ಜಂಜಾಟದಲ್ಲಿ ಮುಳುಗಿ ಹೋಗಿದ್ದಾರೆ. ಇದೆಲ್ಲದರ ನಡುವೆ ಯಾವುದೇ ರಾಜಕೀಯದ ಪ್ರಭಾವವಿಲ್ಲದೆ ಕೇವಲ ಮಕ್ಕಳಿಗಾಗಿ ಅನೇಕ ಸಮಾಜಮುಖಿ ಕೆಲಸಗಳು ಹೆಚ್ಚಾಗಿ ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಜವಾಹರ್ ಬಾಲ್ ಮಂಚ್ ಏರ್ಪಡಿಸಿರುವ ರಾಜ್ಯಮಟ್ಟದ ಮಕ್ಕಳೋತ್ಸವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಪ್ರಭಾ ಮಲ್ಲಿಕಾರ್ಜುನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಸಂವಿಧಾನ, ಮಕ್ಕಳ ಹಕ್ಕು, ಹಾಗೂ ಇನ್ನಿತರ ಮಕ್ಕಳ ಉಪಯೋಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಯಂಥ ಅತ್ಯುತ್ತಮ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ಅತ್ಯುತ್ತಮ ಕೆಲಸ. ಇಂಥ ಅನೇಕ ಕಾರ್ಯಕ್ರಮ ಏರ್ಪಡಿಸಿ ಮಕ್ಕಳಿಗೆ ಸ್ಫೂರ್ತಿ ತುಂಬುತ್ತಿರುವ ಜವಾಹರ್ ಬಾಲ್ ಮಂಚ್ ಸಂಘಟನೆ ಒಂದು ಉತ್ತಮ ಮಕ್ಕಳ ಸ್ನೇಹಿ ಸಂಘಟನೆಯಾಗಿದೆ. ಸಂಘಟಕರ ಕಾರ್ಯವನ್ನು ನಾನು ಸುಮಾರು ದಿನಗಳಿಂದ ಗಮನಿಸುತ್ತಿದ್ದು ಉಪಯುಕ್ತ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ. ಇಂಥ ಸಂಘಟನೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಗಬೇಕು ಎಂದು ಆಶಿಸಿದರು.
ಭಾರತನಾಟ್ಯ, ಯಕ್ಷಗಾನ, ಚಿತ್ರಕಲೆ, ಪ್ರಬಂಧ, ಕರಾಟೆ, ಹಾಡುಗಾರಿಕೆ, ಭಾಷಣ, ವೇಷಭೂಷಣ,ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಿ ಖುಷಿಪಟ್ಟರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 200ರಿಂದ 300 ಮಕ್ಕಳು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರವನ್ನು ಇದೇ ವೇಳೆ ವಿತರಿಸಲಾಯಿತು. ಸಂವಿಧಾನ ಪೀಠಿಕೆಯನ್ನು ಇದೇ ವೇಳೆ ಬೋಧಿಸಲಾಯಿತು.
ಬಾಲ್ ಮಂಚ್ ದಾವಣಗೆರೆ ಜಿಲ್ಲಾಧ್ಯಕ್ಷ ಮೊಹಮದ್ ಜಿಕ್ರಿಯಾ ಎಲ್ಲರನ್ನೂ ಸ್ವಾಗತಿಸಿದರು. ರಾಜ್ಯಾಧ್ಯಕ್ಷ ಮೈನುದ್ದಿನ್ ಕಾರ್ಯಕ್ರಮ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಜವಾಹರ್ ಬಾಲ್ ಮಂಚ್ ರಾಷ್ಟ್ರೀಯ ಸಂಯೋಜಕ ಜಯ ಕುಮಾರ್ ಪಿಳ್ಳಯ್ , ದಾವಣಗೆರೆ ಉಸ್ತುವಾರಿ ಸೋಮಶೇಖರ್, ಮಂಚ್ ನ ಪದಾಧಿಕಾರಿಗಳಾದ ಪ್ರೇಮ ಕೆ. ಹೆಚ್., ಶಿಲ್ಪಾ ಪರಶುರಾಮ್, ಫಯಾಜ್ ಅಹ್ಮದ್, ನಾಗರಾಜ್, ಮಂಜುನಾಥ, ದರ್ಶನ್, ಪ್ರವೀಣ್, ವೀರೇಶ್, ಆಫ್ರಿದ್, ತೇಜಸ್ವಿ,ಹಾಗೂ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು ಹಾಜರಿದ್ದರು. ವಿದ್ಯಾ ಸಾಗರ ಶಾಲೆಯ ಎನ್. ಎಂ. ಪ್ರಜ್ಞಾ ನಿರೂಪಣೆ ನಡೆಸಿಕೊಟ್ಟರು.