Tuesday, March 17, 2026
Homeಆಯ್ಕೆ/ನೇಮಕಮುಕ್ತ ಮತ್ತು ನ್ಯಾಯಸಮ್ಮತ ಉಪ ಚುನಾವಣೆಗೆ ಸಂಪೂರ್ಣ ಸಿದ್ಧತೆ:ಚುನಾವಣಾಧಿಕಾರಿ ಸಂತೋಷ್‌ ಕುಮಾರ್

ಮುಕ್ತ ಮತ್ತು ನ್ಯಾಯಸಮ್ಮತ ಉಪ ಚುನಾವಣೆಗೆ ಸಂಪೂರ್ಣ ಸಿದ್ಧತೆ:ಚುನಾವಣಾಧಿಕಾರಿ ಸಂತೋಷ್‌ ಕುಮಾರ್

ದಾವಣಗೆರೆ, ಮಾ. : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜಿಲ್ಲಾಡಳಿತವು ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್‌ ಕುಮಾರ್‌ ಅವರು ತಿಳಿಸಿದರು.

ಅವರು ಮಂಗಳವಾರ ಮಹಾನಗರ ಪಾಲಿಕೆ ಆವರಣದಲ್ಲಿರುವ ಚುನಾವಣಾಧಿಕಾರಿಗಳ  ಕಚೇರಿಯಲ್ಲಿ ಏರ್ಪಡಿಸಿದ್ದ  ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ  ಚುನಾವಣಾ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಿದರು.

ಚುನಾವಣಾ ವೇಳಾಪಟ್ಟಿ; ನಾಮಪತ್ರ ಸಲ್ಲಿಕೆಯು ಮಾರ್ಚ್ 16 ರಿಂದ ಪ್ರಾರಂಭವಾಗಿದ್ದು,   ನಾಮಪತ್ರ ಸಲ್ಲಿಕೆಗೆ ಮಾರ್ಚ್  23 ಕೊನೆಯ ದಿನವಾಗಿದೆ.  ನಾಮಪತ್ರಗಳ ಪರಿಶೀಲನೆಯು ಮಾರ್ಚ್ 24 ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು  ಮಾರ್ಚ್ 26 ಕೊನೆಯ ದಿನವಾಗಿದೆ.   ಮತದಾನವು ಏಪ್ರಿಲ್ 9 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ. ಮಾರ್ಚ್ ೧೬, ೧೭ ರಂದು ಎರಡು ದಿನಗಳಲ್ಲಿ ನಾಮಪತ್ರ ಸ್ವೀಕಾರವಾಗಿಲ್ಲವೆಂದು ತಿಳಿಸಿದರು.

ಮತದಾರರ ಅಂಕಿ-ಅಂಶ; ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು  284 ಮತಗಟ್ಟೆಗಳಲ್ಲಿ ಪುರುಷ 1,13,654, ಮಹಿಳೆಯರು  1,17,986,   ತೃತೀಯ ಲಿಂಗಿಗಳು 43 ಸೇರಿ  ಒಟ್ಟು 2,31,683 ಮತದಾರರಿದ್ದಾರೆ. ಇದರಲ್ಲಿ  1,452 ಪುರುಷ, 1,322 ಮಹಿಳಾ ಸೇರಿ ಒಟ್ಟು 2,774  ಯುವ ಮತದಾರರಿದ್ದಾರೆ,  ವಿಶೇಷ ಚೇತನರಲ್ಲಿ ಪುರುಷರು 1,379, ಮಹಿಳೆಯರು 1,139 ಒಟ್ಟು 2,518 ವಿಶೇಷ ಚೇತನ ಮತದಾರರಿದ್ದಾರೆ. 85 ವರ್ಷಗಳಿಗಿಂತ ಹೆಚ್ಚು ವಯೋಮಾನದ 928 ಪುರುಷರು, 1,138 ಮಹಿಳೆಯರು ಸೇರಿ ಒಟ್ಟು 2,066 ಮತದಾರರಿದ್ದಾರೆ, ಇವರುಗಳಿಗೆ ಮನೆಯಿಂದಲೇ ಅಂಚೆ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಮತಗಟ್ಟೆ ಮತ್ತು ತಂಡಗಳ ರಚನೆ;
ಚುನಾವಣೆಗಾಗಿ ಒಟ್ಟು 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ನಗರ ಪ್ರದೇಶದಲ್ಲಿ 234 ಮತ್ತು ಗ್ರಾಮೀಣ ಭಾಗದಲ್ಲಿ 50 ಮತಗಟ್ಟೆಗಳು ಬರಲಿವೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ತಡೆಯಲು ಮತ್ತು ಚುನಾವಣಾ ವೆಚ್ಚದ ಮೇಲೆ ನಿಗಾ ಇಡಲು ವಿವಿಧ ತಂಡಗಳನ್ನು ರಚಿಸಲಾಗಿದೆ ಫ್ಲೈಯಿಂಗ್ ಸ್ಕ್ವಾಡ್ (FST): 8 ತಂಡಗಳು.ಸ್ಥಿರ ಕಣ್ಗಾವಲು ತಂಡ (SST): 12 ಚೆಕ್‌ಪೋಸ್ಟ್‌ಗಳಲ್ಲಿ 36 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಇತರ ತಂಡಗಳು: ವಿಡಿಯೋ ಸರ್ವೆಲೆನ್ಸ್ ತಂಡ (VST), ವಿಡಿಯೋ ವೀಕ್ಷಕ ತಂಡ (VVT) ಮತ್ತು ವೆಚ್ಚ ವೀಕ್ಷಕ ತಂಡಗಳನ್ನು ನೇಮಿಸಲಾಗಿದೆ.

ವಿಶೇಷ ಸೌಲಭ್ಯಗಳು;
85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ  ಮನೆಯಿಂದಲೇ ಮತದಾನ ಮಾಡಲು ಪೋಸ್ಟಲ್ ಬ್ಯಾಲೆಟ್ (Postal Ballot) ಸೌಲಭ್ಯವನ್ನು ಒದಗಿಸಲಾಗುವುದು ಎಂದು  ತಿಳಿಸಿದರು.

ಸ್ಥಳ ಪರಿಶೀಲನೆ ಮತ್ತು ಭದ್ರತೆ;
ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಸಾರಿಗೆ ಇಲಾಖೆಯ ಅಧಿಕಾರಿಗಳು  ಇಂದು ಸ್ಟ್ರಾಂಗ್ ರೂಮ್ ಹಾಗೂ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ವಿಶೇಷವಾಗಿ ಡಿ.ಆರ್.ಆರ್. ಪ್ರೌಢಶಾಲೆಯನ್ನು ಪ್ರಮುಖ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿದ್ದು, ಅಲ್ಲಿನ ಸುರಕ್ಷತೆ ಮತ್ತು ಎಸ್‌ಒಪಿ ಅನುಷ್ಠಾನದ ಬಗ್ಗೆ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದರು.

ಏಕಗವಾಕ್ಷಿ ವ್ಯವಸ್ಥೆ (Single Window System);
ಚುನಾವಣಾ ಪ್ರಚಾರ, ವಾಹನ ಪರವಾನಗಿ ಹಾಗೂ ರಾಜಕೀಯ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲು ಅನುಕೂಲವಾಗುವಂತೆ ‘ಏಕಗವಾಕ್ಷಿ ವ್ಯವಸ್ಥೆ’ಯನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ವಿವಿಧ ಇಲಾಖೆಗಳ (ಅರಣ್ಯ, ಅಗ್ನಿಶಾಮಕ, ಪೊಲೀಸ್, ಕಾರ್ಪೊರೇಷನ್) ಅನುಮತಿಯನ್ನು ಒಂದೇ ಕಡೆ ಮತ್ತು ತ್ವರಿತವಾಗಿ ಪಡೆಯಬಹುದಾಗಿದೆ ಎಂದರು.

ಸಿ-ವಿಜಿಲ್ (cVIGIL) ಆಪ್ ಬಳಕೆ;
ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ‘ಸಿ-ವಿಜಿಲ್’ ಆಪ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಸಾರ್ವಜನಿಕರು ಯಾವುದೇ ದೂರುಗಳನ್ನು ಈ ಆಪ್ ಮೂಲಕ ಸಲ್ಲಿಸಬಹುದು. ದೂರು ಬಂದ  ಕೂಡಲೇ ಸಂಬಂಧಪಟ್ಟ ಫ್ಲೈಯಿಂಗ್ ಸ್ಕ್ವಾಡ್ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸೂಕ್ಷ್ಮ ಮತಗಟ್ಟೆಗಳಿಗೆ ಸಿಸಿಟಿವಿ ಕಾವಲು;
ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಂತಹ ಕಡೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಮತ್ತು ಮತದಾನದ ಪ್ರಕ್ರಿಯೆಯನ್ನು ನೇರ ಪ್ರಸಾರ (Live Telecast) ಮಾಡುವ ವ್ಯವಸ್ಥೆ ಇರಲಿದೆ.

ಚೆಕ್ ಪೋಸ್ಟ್ ಗಳು:

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ  ಚುನಾವಣೆ ಅಕ್ರಮಗಳನ್ನು ತಡೆಯಲು ಒಟ್ಟು 12 ಚೆಕ್‌ ಪೋಸ್ಟ್‌ ಗಳನ್ನು ತೆರೆಯಲಾಗಿದೆ.
ಆಜಾದ್ ನಗರ ಪೊಲೀಸ್‌ ಠಾಣೆ -ಚೌಡಮ್ಮ ದೇವಸ್ಥಾನದ ಹತ್ತಿರ ಮಾಗನಹಳ್ಳಿ ರಸ್ತೆ, ಬೇತೂರು ಹಳ್ಳ ಚೆಕ್ ಪೋಸ್ಟ್ ಗಾಂಧಿನಗರ ಪೊಲೀಸ್‌ ಠಾಣೆ -ಶಿವಪುರ ಕೊಂಡಜ್ಜಿ ರಸ್ತೆ, ಸಾಯಿ ಇಂಟರ್ ನ್ಯಾಷನಲ್ ಬಳಿ ಹರಿಹರ ರಸ್ತೆ, ಆರ್.ಎಂ.ಸಿ ಪೊಲೀಸ್‌ ಠಾಣೆ – ಬಾಡಾ ಕ್ರಾಸ್,  ಗಾಣಗಿತ್ತಿ ಕಲ್ಲು (ಹಳೇ ಚಿಕ್ಕನಹಳ್ಳಿ ಚೆಕ್ ಪೋಸ್ಟ್) ಕೆ.ಟಿ.ಜೆ ನಗರ ಪೊಲೀಸ್‌ ಠಾಣೆ  -ಲೋಕಿಕೆರೆ ರಸ್ತೆ ಚೆಕ್ ಪೋಸ್ಟ್, ಭೂಮಿಕ ನಗರ ಚೆಕ್ ಪೋಸ್ಟ್ .ವಿದ್ಯಾ ನಗರ ಪೊಲೀಸ್‌ ಠಾಣೆ  -ವಿದ್ಯಾನಗರ ಚೆಕ್ ಪೋಸ್ಟ್, ಶಾಮನೂರು ರಸ್ತೆ ಚೆಕ್ ಪೋಸ್ಟ್,  ದಾವಣಗೆರೆ ಗ್ರಾಮಾಂತರ ಪೊಲೀಸ್‌ ಠಾಣೆ  -ದೊಡ್ಡ ಬೂದಿಹಾಳ್ ರಸ್ತೆ ಚೆಕ್ ಪೋಸ್ಟ್, ಹದಡಿ ಪೊಲೀಸ್‌ ಠಾಣೆ -ಕಾರಿಗನೂರು ಕ್ರಾಸ್, ಅಡ್‌ರೋಡ್.

ಮತದಾನ ಜಾಗೃತಿ (SVEEP) ;
ಮತದಾನದ ಪ್ರಮಾಣವನ್ನು ಹೆಚ್ಚಿಸಲು ‘ಸ್ವೀಪ್’ (SVEEP) ಸಮಿತಿಯ ಮೂಲಕ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ ಪಂಚಾಯತ್ ಸಿಇಒ ಅವರ ನೇತೃತ್ವದಲ್ಲಿ ಈ ಅಭಿಯಾನ ನಡೆಯುತ್ತಿದೆ ಎಂದರು.

ಈ ವೇಳೆ ಚುನಾವಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments