ದಾವಣಗೆರೆ:ಜುಲೈ.29: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಎಸ್.ಐ.ಆರ್ ಗಣತಿ ನಮೂನೆಗಳ ಶೇ 85.64 ರಷ್ಟು ಡಿಜಿಟಲೀಕರಣ ಮಾಡಲಾಗಿದ್ದು ಮತದಾರರ ಸಹಾಯಕ್ಕಾಗಿ ಬರುವ ಆಗಸ್ಟ್ 2 ರ ಭಾನುವಾರ ಎಲ್ಲಾ ಮತಗಟ್ಟೆಗಳಲ್ಲಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್.ಐ.ಆರ್. ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಯಾವುದೇ ಗೊಂದಲವಿಲ್ಲದೇ ಮತ್ತು ಯಾವುದೇ ದೂರುಗಳಿಗೆ ಆಸ್ಪದ ಇಲ್ಲದೇ ಮತದಾರರ ವಿಶೇಷ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಇದುವರೆಗೆ ಶೇ 85.64% ಅಂದರೆ 12,83,981 ಮತದಾರರ ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ಇನ್ನು ಶೇ 14.36% ರಷ್ಟು 67,156 ಕಾರ್ಯ ಬಾಕಿ ಇದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು.
ಎಎಸ್‍ಡಿ ಮತದಾರರು ಅಂದರೆ ಗೈರುಹಾಜರು, ವರ್ಗಾವಣೆ ಮತ್ತು ಮೃತ ಮತದಾರರ ವಿವರದನ್ವಯ ಮೃತಪಟ್ಟವರು 32,881, ಪತ್ತೆಯಾಗದವರು 13,996, ಖಾಯಂ ಆಗಿ ಸ್ಥಳಾಂತರಗೊಂಡವರು 75,559, ಎರಡು ಕಡೆ ಹೆಸರಿರುವವರು 25,234 ಮತದಾರರು ಸೇರಿದಂತೆ ಒಟ್ಟು 1,48,195 ಮತದಾರರು ಇದ್ದಾರೆ.
ಸಾರ್ವಜನಿಕರಿಗೆ ಪ್ರಮುಖ ಸೂಚನೆ ಹಾಗೂ ಅವಕಾಶಗಳು:
ಮತದಾರರ ವಿಶೇಷ ಪರಿಷ್ಕರಣೆ ಎಸ್‍ಐಆರ್ ಪ್ರಕ್ರಿಯೆ ಬರುವ ಆಗಸ್ಟ್ 8 ರವರೆಗೆ ಅವಕಾಶ ನೀಡಲಾಗಿದೆ. ಖಾಯಂ ಆಗಿ ಸ್ಥಳಾಂತರಗೊಂಡವರು ಅಥವಾ ಪತ್ತೆಯಾಗದವರು ಆಗಸ್ಟ್ 8 ರವರೆಗೆ ಡಿಜಿಟಲೀಕರಣ ಮಾಡಿಸಿಕೊಳ್ಳಲು ಅವಕಾಶವಿದೆ. ಇಂತಹವರ ಹೆಸರುಗಳು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗಲಿವೆ. ಆದರೆ ಆಗಸ್ಟ್ 8 ರ ವರೆಗೆ ಕಾಯದೇ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಕುಟುಂಬದ ಯಾವುದೇ ಸದಸ್ಯರು ಸಹಿ ಮಾಡಿ ನೀಡಬಹುದಾಗಿದೆ ಎಂದರು.
ದಾಖಲೆಗಳಿಲ್ಲದಿದ್ದರೂ ಅರ್ಜಿ ಸಲ್ಲಿಕೆ: 2002ರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಅಥವಾ ಸೂಕ್ತ ದಾಖಲೆಗಳಿಲ್ಲದಿದ್ದರೂ ಸಾರ್ವಜನಿಕರು ಆತಂಕಪಡಬೇಕಿಲ್ಲ. ಅರ್ಜಿಯಲ್ಲಿ ಹೆಸರು, ಜನ್ಮ ದಿನಾಂಕ, ಪೆÇೀಷಕರ ವಿವರಗಳನ್ನು ಭರ್ತಿ ಮಾಡಿ, ಸಹಿ ಮಾಡಿ ಸಲ್ಲಿಸಬಹುದು. ನಂತರ ಮತದಾರರ ನೋಂದಣಾಧಿಕಾರಿ ನೋಂದಣಿ ವೇಳೆ ಪರಿಶೀಲಿಸಿ ಸರಿಪಡಿಸಲಿದ್ದಾರೆ.
ಭಾನುವಾರ ವಿಶೇಷ ಶಿಬಿರ: ಆಗಸ್ಟ್ 2 ರಂದು ಮುಂಬರುವ ಭಾನುವಾರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳು, ಗ್ರಾಮ ಪಂಚಾಯಿತಿಗಳು ಹಾಗೂ ದಾವಣಗೆರೆ ನಗರದ 45 ಸಹಾಯ ಕೇಂದ್ರಗಳಲ್ಲಿ ವಿಶೇಷ ಶಿಬಿರ ಆಯೋಜಿಸಲಾಗುತ್ತಿದೆ. ಸಾರ್ವಜನಿಕರು, ಕೂಲಿ ಕಾರ್ಮಿಕರು ಹಾಗೂ ಉದ್ಯೋಗಸ್ಥರು ಈ ರಜಾ ದಿನದ ಶಿಬಿರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಪ್ರಗತಿ ಕುಂಠಿತ ವ್ಯಾಪಕ ಜಾಗೃತಿಗೆ ಕ್ರಮ: ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ಎಸ್.ಐ.ಆರ್.ಜಾಗೃತಿ ಮೂಡಿಸಲು 16 ಮೈಕ್ರೋ ಆಡಿಯೋ ಸಿಸ್ಟಮ್ ಹಾಗೂ ಪಾಲಿಕೆ ಕಸ ಸಂಗ್ರಹಣಾ ವಾಹನಗಳ ಮೂಲಕ ಬೀದಿ-ಬೀದಿಗಳಲ್ಲಿ ಧ್ವನಿವರ್ಧಕಗಳ ಮುಖಾಂತರ ಪ್ರಚಾರ ಮಾಡಲಾಗುತ್ತಿದೆ. ಬಿಎಲ್‍ಒ, ಬಿಎಲ್‍ಎ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಈಗಾಗಲೇ ನಿಗದಿತ 3 ಬಾರಿಗಿಂತ ಹೆಚ್ಚು ಬಾರಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ ಎಂದರು.
ವಿಶೇಷ ಮನವಿ: ಯಾರೂ ಕೂಡ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಎರಡು ಕಡೆ ಹೆಸರು ನೋಂದಾಯಿಸುವುದು ಅಪರಾಧ. ದಾಖಲೆಗಳಿಲ್ಲದಿದ್ದರೂ ಅರ್ಜಿ ಸಲ್ಲಿಸಿ, ಜಿಲ್ಲಾಡಳಿತ ಮತದಾರರಿಗೆ ಸೂಕ್ತ ಸಹಾಯ ಮಾಡಲಿದೆ. ಕೊನೆ ಕ್ಷಣದವರೆಗೆ ಕಾಯದೆ ತಕ್ಷಣವೇ ಈ ಅವಕಾಶವನ್ನು ಬಳಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.

