ದಾವಣಗೆರೆ, ಮಾ. 31: ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾಡಳಿತ ಹಾಗೂ ಸ್ವೀಪ್ (SಗಿಇಇP) ಸಮಿತಿಯ ವತಿಯಿಂದ ಬೃಹತ್ ಮತದಾನ ಜಾಗೃತಿ ಕಾರ್ಯಕ್ರಮಗಳಾದ ವಾಕ್ ಥಾನ್ ಮತ್ತು ಬೀದಿ ನಾಟಕ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಗಿತ್ತೆ ಮಾಧವ ವಿಠಲರಾವ್ ತಿಳಿಸಿದರು.
ಅವರು ಇಂದು (ಮಾ.31) ದೇವರಾಜು ಅರಸು ಬಡಾವಣೆಯಲ್ಲಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿಯ ವತಿಯಿಂದ ಬೃಹತ್ ಮತದಾನ ಜಾಗೃತಿ ಕಾರ್ಯಕ್ರಮ ವಾಕ್ ಥಾನ್ ಅನ್ನು ಉದ್ಪಾಟಿಸಿ ಮಾತನಾಡಿದರು.
ಬರುವ ಏಪ್ರಿಲ್ 9 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ತಪ್ಪದೇ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕು. ದಾವಣಗೆರೆ ಕ್ಷೇತ್ರದಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವುದು ನಮ್ಮೆಲ್ಲರ ಗುರಿಯಾಗಲಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದಾವಣಗೆರೆ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ದೇವರಾಜು ಅರಸು ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಮತದಾನದ ಮಹತ್ವವನ್ನು ಸಾರುವ ಬೀದಿ ನಾಟಕವನ್ನು ಪ್ರದರ್ಶಿಸಿದರು.
ದೇವರಾಜು ಅರಸು ಬಡಾವಣೆಯಲ್ಲಿ ಜಾಗೃತಿ ಕಾರ್ಯಕ್ರಮದ ಉದ್ದಕ್ಕೂ , ನನ್ನ ಮತ – ನನ್ನ ಹಕ್ಕು. ಮತದಾನ ಮಾರಾಟಕ್ಕಿಲ್ಲ – ದೇಶದ ಹಿತಕ್ಕಾಗಿ ಮತದಾನ. ನಾನು ತಪ್ಪದೇ ಮತ ಚಲಾಯಿಸುತ್ತೇನೆ., ಅರ್ಥಪೂರ್ಣ ಮತ – ದೇಶಕ್ಕೆ ಹಿತ ಘೋಷಣೆಗಳ ಮೂಲಕ ಜನಮನ ಸೆಳೆಯಲಾಯಿತು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತ್ ಗೌಡರ್, ಸಿಪಿಒ ಮಲ್ಲನಾಯಕ್ , ಜಿಲ್ಲಾ ಮಟ್ಟದ ಅಧಿಕಾರಿಗಳು/ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿದ್ದರು.

