Sunday, August 2, 2026
Homeಜಾಗೃತಿಜೆನ್ ಝೀ ಉದ್ಯಮಿಗಳನ್ನಾಗಿ ಮಾಡುವ ಹೊಣೆ ಕುಟುಂಬಗಳ ಮೇಲಿದೆ : ಪರಿಷತ್ ಸದಸ್ಯ ಡಿ.ಎಸ್. ಅರುಣ್

ಜೆನ್ ಝೀ ಉದ್ಯಮಿಗಳನ್ನಾಗಿ ಮಾಡುವ ಹೊಣೆ ಕುಟುಂಬಗಳ ಮೇಲಿದೆ : ಪರಿಷತ್ ಸದಸ್ಯ ಡಿ.ಎಸ್. ಅರುಣ್


ದಾವಣಗೆರೆ : ಜೆನ್ ಝೀ ಪೀಳಿಗೆಯನ್ನು ಕೇವಲ ಉದ್ಯೋಗ ಬಯಸುವವರನ್ನಾಗಿ ಮಾಡದೇ, ಉದ್ಯೋಗ ನೀಡುವ ಉದ್ಯಮಿಗಳನ್ನಾಗಿ ಬೆಳೆಸುವ ಹೊಣೆ ಕುಟುಂಬಗಳ ಹಿರಿಯರ ಮೇಲಿದೆ. ಇದಕ್ಕಾಗಿ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ ಎಂದು ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದ್ದಾರೆ.
ಕರ್ನಾಟಕ ಆರ್ಯವೈಶ್ಯ ಮಹಾಸಭಾದ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ನಗರದ ಬಿಐಇಟಿಯಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ದಾವಣಗೆರೆ ಜಿಲ್ಲಾ ಆರ್ಯವೈಶ್ಯ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಆರ್ಯವೈಶ್ಯ ಸಮುದಾಯದಲ್ಲಿ ವ್ಯಾಪಾರ ಹಾಗೂ ಉದ್ಯಮಗಳಲ್ಲಿ ತೊಡಗುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೆಚ್ಚು ಜನರು ಉದ್ಯೋಗ ನೀಡುವವರಾಗದೇ, ಉದ್ಯೋಗ ಬಯಸುವವರಾಗುತ್ತಿದ್ದಾರೆ ಎಂದವರು ವಿಷಾದಿಸಿದರು.
ಉದ್ಯಮಿಗಳಾಗಲು ಜೆನ್ ಝೀಗೆ ಮಾರ್ಗದರ್ಶನದ ಅಗತ್ಯವಿದೆ. ಅಂತಹ ಮಾರ್ಗದರ್ಶನ ನೀಡಲು ಆರ್ಯವೈಶ್ಯ ಮಹಾಸಭಾ ಮುಂದಾಗಿದೆ. ಬರುವ ಡಿಸೆಂಬರ್ 25ರಿಂದ ಮೂರು ದಿನಗಳವರೆಗೆ ವಿಶ್ವ ಆರ್ಯವೈಶ್ಯ ಸಮಾವೇಶವನ್ನು ಆಯೋಜಿಸಲಾಗಿದೆ. ಇಲ್ಲಿ ಉದ್ಯಮಿಗಳಾಗಲು ಅಗತ್ಯ ಸಮಗ್ರ ಮಾರ್ಗದರ್ಶನ ಸಿಗಲಿದೆ ಎಂದು ಹೇಳಿದರು. ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆದಿತ್ತು. ಆಗ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಕ್ಕಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಮೆ ಕೇಳುತ್ತಿದ್ದಾರೆ. ನಮ್ಮ ಮಕ್ಕಳು ತಪ್ಪು ಮಾಡಿದರು ಎಂದು ಈಗ ಪೋಷಕರಿಗೆ ಅನ್ನಿಸುತ್ತಿದೆ ಎಂದು ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.
ಹೇಳಬೇಕಿರುವುದನ್ನು ಹೇಳದೇ ತಪ್ಪಾಗಿದೆ ಎಂಬ ಭಾವನೆ ಈಗ ಪೋಷಕರಲ್ಲಿ ಬರುತ್ತಿದೆ. ಜೆನ್ ಝೀಗೆ ಸರಿಯಾದ ದಿಕ್ಕು ಮನೆಯಲ್ಲಿ ತೋರಬೇಕು ಎಂದು ತಿಳಿಸಿದರು.
ಅದೇ ರೀತಿ, ಉದ್ಯಮದ ವಿಷಯ ಬಂದಾಗ ಹಿರಿಯರು ಮುಂದಿನ ಯುವ ಪೀಳಿಗೆಯ ಮಾತನ್ನೂ ಕೇಳಬೇಕು. ಆಗ ಮಾತ್ರ ಕೌಟುಂಬಿಕ ಉದ್ಯಮ ಉಳಿಯಲು ಸಾಧ್ಯ. ಆನ್‌ಲೈನ್ ವಹಿವಾಟಿನ ಈ ಕಾಲದಲ್ಲಿ, ಉದ್ಯಮ ಹಾಗೂ ಅಂಗಡಿಗಳ ವಹಿವಾಟುಗಳು ಹಳೆಯ ಪದ್ಧತಿಯಲ್ಲಿದ್ದರೆ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರುಣ್ ಇದೇ ಸಂದರ್ಭದಲ್ಲಿ ಹೇಳಿದರು.
ಮುಂದಿನ ಪೀಳಿಗೆಗೆ ಮುಕ್ತ ಅವಕಾಶ ಕೊಡಲಿಲ್ಲ, ಮಕ್ಕಳ ವೇಗಕ್ಕೆ ತ್ಕ ಹಾಗೆ ಉದ್ಯಮ ಬದಲಿಸಲಿಲ್ಲ. ಹೀಗಾಗಿ ಆನ್‌ಲೈನ್ ಕಾಲಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹಲವಾರು ಕೌಟುಂಬಿಕ ಉದ್ಯಮಗಳವರು ಹೇಳುತ್ತಿದ್ದಾರೆ. ಈ ಬಗ್ಗೆಯೂ ಯೋಚಿಸಬೇಕಿದೆ ಎಂದು ತಿಳಿಸಿದರು.
ಈ ಹಿಂದೆ ಇದ್ದ ಕೌಟುಂಬಿಕ ಉದ್ಯಮಗಳು ಏಕೆ ಕಡಿಮೆಯಾಗುತ್ತಿವೆ ಎಂಬ ಬಗ್ಗೆಯೂ ಯೋಚಿಸಬೇಕಿದೆ. ಈಗ ಸ್ವಂತ ಅಣ್ಣ – ತಮ್ಮಂದಿರೇ ಜೊತೆಯಾಗಿ ವಹಿವಾಟು ನಡೆಸಲು ಬಯಸುವುದಿಲ್ಲ, ಹೊರಗಿನವರ ಜೊತೆ ಕೈ ಜೋಡಿಸುತ್ತಿದ್ದಾರೆ. ಆನ್‌ಲೈನ್ ಉದ್ಯಮದಿಂದ ಕೌಟುಂಬಿಕ ಉದ್ಯಮಗಳಿಗೆ ಹಿನ್ನಡೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂದು ಅರುಣ್ ತಿಳಿಸಿದರು.
ಆದರೆ, ಆನ್‌ಲೈನ್ ಉದ್ಯಮದಿಂದ ಸರ್ಕಾರಕ್ಕೆ ಸಾಕಷ್ಟು ಜಿಎಸ್‌ಟಿ ಬರುತ್ತಿದೆ. ಹೀಗಾಗಿ ಈ ಆನ್‌ಲೈನ್ ಯಾವ ಕಾರಣಕ್ಕೂ ಬದಲಾಗದು. ನಮ್ಮ ಮಕ್ಕಳು ಈಗ ಆನ್‌ಲೈನ್ ಖರೀದಿ ಸುಲಭವಾಗಿದೆ ಎಂದು ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗಿನ ಮಕ್ಕಳ ವೇಗಕ್ಕೆ ಕೌಟುಂಬಿಕ ಉದ್ಯಮಗಳು ಏಕೆ ಬೆಳೆಯಲಿಲ್ಲ ಎಂಬ ಬಗ್ಗೆಯೂ ಯೋಚಿಸಬೇಕಿದೆ. ಈ ಪ್ರಶ್ನೆಗಳಿಗೆ ಆರ್ಯವೈಶ್ಯ ಮಹಾಸಭಾದ ಸಮಾವೇಶದಲ್ಲಿ ಉತ್ತರ ಸಿಗಲಿದೆ ಎಂದವರು ಆಶಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments