ವಿಜಯಪುರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಅಪಾರ ತ್ಯಾಗ ಹಾಗೂ ಬಲಿದಾನದ ಸ್ಮರಣೆ ಮತ್ತು ದೇಶದ ಸ್ವಾತಂತ್ರ್ಯದ ಸಂಭ್ರಮವನ್ನು ಯುವ ಜನಾಂಗದಲ್ಲಿ ಜಾಗೃತಗೊಳಿಸುವ ಮಹತ್ಕಾರ್ಯಕ್ಕೆ ವಿಜಯಪುರ ಸಜ್ಜಾಗಿದೆ. ನಗರದ ಬುರಣಾಪುರದ ಕನಕದಾಸ ನಗರದಲ್ಲಿ ಬರುವ ಆಗಸ್ಟ್ 15 ರಂದು ಜರುಗಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 228ನೇ ಜನ್ಮದಿನೋತ್ಸವ ಹಾಗೂ 80ನೇ ಸ್ವಾತಂತ್ರ್ಯೋತ್ಸವದ ಬೃಹತ್ ಸಮಾರಂಭಕ್ಕಾಗಿ ಆಯೋಜನಾ ಕಮಿಟಿಯ ಪದಾಧಿಕಾರಿಗಳು ಬಿರುಸಿನ ಸಿದ್ಧತೆ ನಡೆಸಿದ್ದಾರೆ. ಇದರ ಭಾಗವಾಗಿ, ಜೆಡಿಎಸ್ ರಾಜ್ಯ ಮುಖಂಡರು ಹಾಗೂ ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀ ದೇವಾನಂದ ಚೌಹಾಣ್ ಅವರಿಗೆ ಆಯೋಜನಾ ಸಮಿತಿಯ ಪ್ರಮುಖರು ಭೇಟಿಯಾಗಿ, ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಿ ಆಹ್ವಾನಿಸಿದರು.
ದಿನಾಂಕ: 15-08-2026 ರಂದು ಸಾಯಂಕಾಲ 3:00 ಗಂಟೆಗೆ ಬುರಣಾಪುರದ ಕನಕದಾಸ ನಗರದಲ್ಲಿ ಬೃಹತ್ ಆವರಣದಲ್ಲಿ ಈ ವೈಭವದ ಸಭಾ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಮಾಜದ ನಾಯಕರು ಸಾಕ್ಷಿಯಾಗಲಿದ್ದಾರೆ.
ಕಾರ್ಯಕ್ರಮಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಸಚಿವ ಶ್ರೀ ಎಂ. ಬಿ. ಪಾಟೀಲ್, ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ರಮೇಶ್ ಜಿಗಜಿಣಗಿ, ನಾಗಠಾಣ ಶಾಸಕ ಶ್ರೀ ವಿಠ್ಠಲ್ ಕಟಕದೊಂಡ, ವಿಧಾನ ಪರಿಷತ್ ಸದಸ್ಯ ಶ್ರೀ ಸುನಿಲ್ ಗೌಡ ಪಾಟೀಲ್ ಹಾಗೂ ಮಾಜಿ ಶಾಸಕರಾದ ಶ್ರೀ ರಾಜು ಆಲಗೂರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅಲ್ಲದೆ, ಜಿ.ಪಂ. ಮಾಜಿ ಸದಸ್ಯ ಶ್ರೀ ಸಂತೋಷ್ ಪೂಜಾರಿ, ರಾಜಕೀಯ ಮುಖಂಡರಾದ ಶ್ರೀ ಅಹಮೀದ್ ಮುಷ್ರಿಫ್, ಶ್ರೀ ಉಮೇಶ್ ಕಾರಜೋಳ, ಶ್ರೀ ಸಂಜೀವ್ ಐಹೊಳೆ, ಶ್ರೀ ಗಣಪತಿ ನಾಗರಗೊಜಿ, ಶ್ರೀ ಸುರೇಶ್ ವಾಲಿಕಾರ್, ಶ್ರೀ ಈಶ್ವರಪ್ಪ ಶೂರ, ಐನಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀ ರಾಮು ಹಂಗಿ, ಉಪಾಧ್ಯಕ್ಷ ಶ್ರೀ ರಾಜು ಹಳ್ಳಿ ಸೇರಿದಂತೆ ಗ್ರಾ.ಪಂ. ಮಾಜಿ ಸದಸ್ಯರಾದ ಸುಭಾಷ್ ಪಾಂಡ್ರೆ, ಕರೆಪ್ಪ ಬಸ್ತಾಳ, ಸುಜಾತಾ ಒಂಬಾಸಿ, ಶಕೀಲಾ ಜಮಾಲ್, ಪರಮು ಮಾನೆ, ಮಲ್ಲಿಕಾರ್ಜುನ್ ಗಾಣಿಗ, ಶ್ರೀಕಾಂತ್ ಒಂಬಾಸಿ, ಮುದುಕಪ್ಪ ಮಾದರ ಹಾಗೂ ಗ್ರಾಮದ ಪ್ರಮುಖರಾದ ಶಿವಾನಂದ ಪುಟ್ಟಿ, ಮಲಕಪ್ಪ ಗೌಡ ಪಾಟೀಲ್, ಹಣಮಂತ ಪುಟ್ಟಿ, ತಾಯಪ್ಪ ಮಾನೆ ಭಾಗವಹಿಸಲಿದ್ದಾರೆ. ಜೊತೆಗೆ ಆಡಳಿತಾತ್ಮಕವಾಗಿ ವಾರ್ತಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ಅಮರೇಶ್ ದೊಡಮನಿ, ವಿಜಯಪುರ ತಹಶಿಲ್ದಾರ್ ಶ್ರೀ ಪ್ರಶಾಂತ್ ಚನಗೊಂಡ ಹಾಗೂ ಐನಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀ ಅರ್ಜುನ ದೊಡಮನಿ ಸಹ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಶಾಲಾ ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಗಟ್ಟಿಯಾದ ದೇಶಭಕ್ತಿ, ರಾಷ್ಟ್ರಪ್ರೇಮ ಹಾಗೂ ನಾಡಿಗಾಗಿ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಂತಹ ಶೂರರ ಅಪಾರ ತ್ಯಾಗ ಮತ್ತು ಬಲಿದಾನದ ಅರಿವನ್ನು ಮೂಡಿಸುವ ಉನ್ನತ ಉದ್ದೇಶದಿಂದ ಈ ಬೃಹತ್ ವೇದಿಕೆಯಲ್ಲಿ ಮಕ್ಕಳಿಗಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ಸಮಾರಂಭದ ಮುಖ್ಯ ವೇದಿಕೆಯ ಮೇಲೆ ವಿವಿಧ ಶಾಲೆಗಳ ನೂರಾರು ಮಕ್ಕಳಿಂದ ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನ ಹಾಗೂ ಸಂಗೊಳ್ಳಿ ರಾಯಣ್ಣನವರ ವೀರಗಾಥೆಯನ್ನೊಳಗೊಂಡ ನಾಟಕ ರೂಪಕ ಪ್ರದರ್ಶನಗೊಳ್ಳಲಿದೆ ಎಂದು ಆಯೋಜನಾ ಕಮಿಟಿಯ ಸದಸ್ಯರು ವಿವರಣೆ ನೀಡಿದ್ದಾರೆ.
ಕಮಿಟಿ ಮುಖಂಡ ಗೌಡಪ್ಪ ಬಡಿಗೇರ ಮಾತನಾಡಿ, ವೇದಿಕೆಯ ಮೇಲೆ ಸಾಂಸ್ಕೃತಿಕ ಪ್ರದರ್ಶನ ನೀಡುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಪುಸ್ತಕಗಳನ್ನು ಹಾಗೂ ಪ್ರೋತ್ಸಾಹ ವಿಶೇಷ ಬಹುಮಾನವನ್ನು ನೀಡಿ ಪುರಸ್ಕರಿಸಲಾಗುವುದು. ಎಳೆಯ ಮಕ್ಕಳಲ್ಲಿ ಸಾಂಸ್ಕೃತಿಕ ಆಸಕ್ತಿ, ನಾಯಕತ್ವದ ಗುಣಗಳು ಹಾಗೂ ದೇಶಭಕ್ತಿಯ ಚಿಂತನೆಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು ಈ ಸಮಾರಂಭದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಆಹ್ವಾನ ಸಲ್ಲಿಕೆಯ ಸಂದರ್ಭದಲ್ಲಿ ಆಯೋಜನಾ ಕಮಿಟಿಯ ಪ್ರಮುಖರಾದ ಜೆಡಿಎಸ್ ಮುಖಂಡರಾದ ಸುರೇಶ್ ವಾಲಿಕಾರ ಹಾಗೂ ಆಯೋಜಕರಾದ ದೂಂಡಿಬಾ ಮಾನೆ, ಅರ್ಜುನ್ ಮಾನೆ, ಚಂದ್ರಮ ರೊಗಿ, ಸದಾಶಿವ ಮಾನೆ, ಮಹಾಂತೇಶ ಕರಪೆ, ಸುಭಾಷ್ ಪಾಂಡ್ರೆ ಸೇರಿದಂತೆ ಇತರ ಹಲವು ಪದಾಧಿಕಾರಿಗಳು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

