Tuesday, January 14, 2025
Homeರಾಜ್ಯನಕಲಿ ಕಾರ್ಮಿಕ ಕಾರ್ಡ್ ರದ್ದತಿಗೆ ಸಚಿವ ಸಂತೋಷ್ ಲಾಡ್ ಸೂಚನೆ

ನಕಲಿ ಕಾರ್ಮಿಕ ಕಾರ್ಡ್ ರದ್ದತಿಗೆ ಸಚಿವ ಸಂತೋಷ್ ಲಾಡ್ ಸೂಚನೆ

ಬೆಳಗಾವಿ, ಅ.04: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರು ನಕಲಿ ದಾಖಲಾತಿ ಸೃಷ್ಟಿಸಿ ಕಾರ್ಮಿಕ ಕಾರ್ಡ್ ಗಳನ್ನು ಪಡೆದು ಫಲಾನುಭವಿಗಳೆಂದು ನೋಂದಾಯಿತರಾಗಿ ವಿವಿಧ ಧನಸಹಾಯಗಳನ್ನು ಪಡೆಯುತ್ತಿರುವದು ಗಮನಕ್ಕೆ ಬಂದಿದ್ದು, ಅಂತಹವರ ನೋಂದಣಿಯನ್ನು ಫ್ರೀಜ್/ರದ್ದುಗೊಳಿಸಬೇಕು. ಮಂಡಳಿಯ ಯಾವುದೇ ಸೌಲಭ್ಯಗಳನ್ನು ನೀಡದಂತೆ ತಡೆಹಿಡಿಯಬೇಕು ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಅ.04) ನಡೆದ ಕಾರ್ಮಿಕ ಇಲಾಖೆಯ ಪ್ರಾದೇಶಿಕ ಮಟ್ಟದ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷೆ ವಹಿಸಿ ಅವರು ಮಾತನಾಡಿದರು.

ಸಕಾಲ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ನೋಂದಣಿ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ, ಹೆರಿಗೆ ಸಹಾಯ ಧನ, ಮದುವೆ ಸಹಾಯಧನ ಸೇರಿದಂತೆ ವಿವಿಧ ಅರ್ಜಿಗಳನ್ನು ತಕ್ಷಣ ವಿಲೇವಾರಿಗೊಳಿಸಬೇಕು. ಅನರ್ಹ ಅರ್ಜಿಗಳು ಲಭ್ಯವಾದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಬೇಕು ಎಂದು ತಿಳಿಸಿದರು.

ವಿವಿಧ ಸಹಾಯಧನ ಕೋರಿ ಅರ್ಜಿ ಸಲ್ಲಸಿದ
ಅನರ್ಹ ಅರ್ಜಿಗಳನ್ನು ಪರಿಶೀಲಿಸಿ ಅಂತಹವರ ಕಾರ್ಮಿಕ ಕಾರ್ಡ್ ಗಳನ್ನು ರದ್ದುಪಡಿಸಬೇಕು. ಸಾಕಷ್ಟು ಕಾರ್ಮಿಕ ಕಾರ್ಡ್ ಗಳು ಬೋಗಸ್ ಎಂದು ಕಂಡು ಬಂದಿದ್ದು, ಅಂತಹ ಕಾರ್ಡ್ ಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಯೋಜನೆ ಸೌಲಭ್ಯ ಪಡೆಯಲು ಸ್ಥಳೀಯ ಕಚೇರಿ ಸ್ಥಾಪಿಸಿ:

ಇಲಾಖೆಯ ಮಂಡಳಿಗಳ ಯೋಜನೆಗಳ ಸೌಲಭ್ಯ ಪಡೆಯಲು ಕಾರ್ಮಿಕರು ಅಲೆದಾಡುವಂತಾಗಿದೆ. ಇಲಾಖೆಯು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲೂ ಸಹ ಕಚೇರಿಗಳನ್ನು ಸ್ಥಾಪಿಸಿ ಅಧಿಕಾರಿಗಳನ್ನು ನೇಮಿಸಿ ಕಾರ್ಮಿಕರುಗಳಿಗೆ ಸುಲಭವಾಗಿ ಇಲಾಖೆಯ ಸೌಲಭ್ಯಗಳು ದೊರಕುವಂತೆ ಮಾಡಬೇಕು ಎಂದು ಹೇಳಿದರು.

ಸೆಸ್ ಕಲೆಕ್ಷನ್ ಕಡ್ಡಾಯ:

ನೋಂದಣಿ ಹಾಗೂ ಸುಂಕ ಪಾವತಿ ವಿಧಾನ
ಕಟ್ಟಡ ಕಾಮಗಾರಿ ಕೈಗೊಳ್ಳುವ ಸಂಸ್ಥೆ ಅಥವಾ ವ್ಯಕ್ತಿಯ ಕಾಮಗಾರಿ ಪ್ರಾರಂಭಗೊಂಡಿರುವ ನಿಯಮದಂತೆ ಕಾರ್ಮಿಕ ಅಧಿಕಾರಿಗಳ ಬಳಿ ಸಲ್ಲಿಸಿ ನೋಂದಣಿ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಅದರಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ ಮತ್ತು ನಿಯಮಗಳ ಅನ್ವಯ ಸುಂಕ ಪಾವತಿ ಮಾಡಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಚಿವ ಸಂತೋಷ್ ಲಾಡ್ ಅವರು ಹೇಳಿದರು.

ಕನಿಷ್ಠ ವೇತನ ಕಾಯ್ದೆಯಡಿ ಬೆಳಗಾವಿ ಪ್ರಾದೇಶಿಕದಲ್ಲಿ ವಿಭಾಗದಲ್ಲಿ ಈಗಾಗಲೇ 30 ಪ್ರಕರಣಗಳಲ್ಲಿ ದಾಖಲಾಗಿದ್ದು, ವಿಚಾರಣೆ ಹಂತಗಳಿವೆ ಸದ್ಯದಲ್ಲೇ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ವಿವರಿಸಿದರು.

ಕನಿಷ್ಠ ವೇತನ ಪಾವತಿಸದ ಪ್ರಕರಣಗಳ ವಿಲೇವಾರಿಗೆ ಸೂಚನೆ:

ಬೆಳಗಾವಿ ವಿಭಾಗ-1 ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಈವರೆಗೆ ಯಾವುದೇ ಪ್ರಕರಣಗಳು ಇತ್ಯರ್ಥವಾಗಿಲ್ಲ. ವಿನಾಕಾರಣ ಅಧಿಕಾರಿಗಳು ನೆಪವೊಡ್ಡದೆ ಕಾರ್ಮಿಕ ತೊಂದರೆಗಳಿಗೆ ಸ್ಪಂದಿಸಿ ಸಂಬಂಧಿಸಿದ ಪ್ರಕರಣಗಳು ತ್ವರಿತವಾಗಿ ವಿಲೇವಾರಿಗೊಳಿಸಬೇಕು. ಅದೇ ರೀತಿಯಲ್ಲಿ ಬೆಳಗಾವಿ ವಿಭಾಗ 2 ರಲ್ಲಿ ಸರ್ಕಾರಿ ವಲಯಗಳಲ್ಲಿ ಕಾರ್ಯ ನಿರ್ವಹಿಸುವ ಹೊರಗುತ್ತಿಗೆ ನೌಕರರ ಪ್ರಕರಣಗಳು ಹೆಚ್ಚಾಗಿದ್ದು, ಅರಣ್ಯ ಇಲಾಖೆ, ಸರ್ಕಾರಿ ಆಸ್ಪತ್ರೆ ಹಾಗೂ ಸಾರಿಗೆ ಇಲಾಖೆಯಲ್ಲಿಯ ಪ್ರಕರಣಗಳಿವೆ ಕೂಡಲೇ ವಿಲೇವಾರಿಗೊಳಿಸಬೇಕು ಎಂದು ತಿಳಿಸಿದರು.

ವಾಣಿಜ್ಯ ಮಳಿಗೆ, ಬಡಾವಣೆಗಳ ನಿರ್ಮಾಣ, ಕಟ್ಟಡ ನಿರ್ಮಾಣಗಳ ಮಾಹಿತಿ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಪಡೆಯಲು ಜಿಲ್ಲಾಧಿಕಾರಿಗಳ ಹಂತದಲ್ಲಿ ಮನವಿ ಸಲ್ಲಿಸಬೇಕು. ಸೆಸ್ ಕಲೆಕ್ಷನ್ ಗೆ ಕಾರ್ಮಿಕ ಅಧಿಕಾರಿಗಳು ನಿರಂತರ ಶ್ರಮ ವಹಿಸಿ ಕಟ್ಟಡ ನಿರ್ಮಾಣ ಮಂಡಳಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಹೇಳಿದರು.

ನೋಂದಣಿ ಕಾರ್ಯ ಪೂರ್ಣಗೊಳಿಸಿ:

ಜಿಲ್ಲೆಯಲ್ಲಿ ಬಹಳಷ್ಟು ಸಣ್ಣ ಉದ್ದಿಮೆಯ ಅಂಗಡಿ, ಹೋಟೆಲ್ ಮತ್ತು ವಾಣಿಜ್ಯ ಮಳಿಗೆಗಳು ಟ್ರೇಡ್ ಲೈಸನ್ಸ್ ಪಡೆಯದೆ ನೋಂದಣಿಯಾಗದೆ ಇದ್ದಲ್ಲಿ ಅಂತಹ ಕಡೆಗೆ ಭೇಟಿ ನೀಡಿ, ಪರಿಶೀಲಿಸಿ ನೋಂದಣಿ ಕಾರ್ಯ ಕೈಗೊಳ್ಳಬೇಕು. ಹೆಸ್ಕಾಂ ಇಲಾಖೆಯಿಂದ ವಿದ್ಯುತ್ ಕನೆಕ್ಷನ್ ಪಡೆದ ವಾಣಿಜ್ಯ ಮಳಿಗೆಗಳ ಮಾಹಿತಿ ಪಡೆದು ಡಿಸೆಂಬರ್ ಅಂತ್ಯದೊಳಗಡೆ ನೋಂದಣಿ ಕಾರ್ಯ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆನ್ ಲೈನ್ ಮೂಲಕ ನೋಂದಣಿ ಪ್ರಾರಂಭವಿದೆ. ನೋಂದಣಿಗೆ ನಿರಾಕರಿಸಿದಲ್ಲಿ ಸಂಬಂಧಿಸಿದ ಅಸೋಸಿಯನ್ ಸಭೆ ಕರೆದು ನೋಂದಣಿ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದರು.

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ :

ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 25 ಬಾಲ ಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಅದೇ ರೀತಿಯಲ್ಲಿ ಇತರೆ ಜಿಲ್ಲೆಗಳಲ್ಲಿ ಸಹ ವಿಭಾಗೀಯ ಮಟ್ಟದಲ್ಲಿ ಈಗಾಗಲೇ ರಕ್ಷಣೆಯಾದ ಮಕ್ಕಳ ಕುರಿತು ಪ್ರತಿ ತಿಂಗಳು ಮಾಹಿತಿ ನೀಡಬೇಕು.

ಇಲಾಖೆಯಲ್ಲಿ ಪ್ರತಿಯೊಬ್ಬ ಅಧಿಕಾರಿಯು ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಬೇಕು. ಸದಾ ಕ್ರಿಯಾಶೀಲರಾಗಿ ನಿಗದಿತ ವಧಿಯೊಳಗೆ ಗುರಿ ಸಾಧನೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರು ತಿಳಿಸಿದರು.

ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಕಾರ್ಮಿಕ ಆಯುಕ್ತರಾದ ಗೋಪಾಲ ಕೃಷ್ಣ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಭಾರತಿ, ಜಂಟಿ ಕಾರ್ಮಿಕ ಆಯುಕ್ತರಾದ ಡಾ ಮಂಜುನಾಥ್, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments