ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾರಿಗನೂರು ಕ್ರಾಸ್ನಲ್ಲಿ ಶನಿವಾರ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಅವರು ಜನರ ಸಮಸ್ಯೆಗಳನ್ನು ಆಲಿಸುವುದರ ಜತೆಗೆ ಸ್ಥಳೀಯ ಹೋಟೆಲ್ನಲ್ಲಿ ಮುಖಂಡರೊಂದಿಗೆ ಮಂಡಕ್ಕಿ, ಮೆಣಸಿನಕಾಯಿ ಸವಿದರು.
ಕಳೆದ ಎರಡು ವಾರಗಳಿಂದ ರಾಜ್ಯ ಪ್ರವಾಸ ಹಾಗೂ ನಾಲ್ಕು ದಿನಗಳ ಬರಗಾಲ ಅಧಿವೇಶನದಲ್ಲಿ ಪಾಲ್ಗೊಂಡು ಕ್ಷೇತ್ರಕ್ಕೆ ಮರಳಿದ ಸಚಿವರು ಶನಿವಾರ ಬೆಳಗ್ಗೆಯಿಂದಲೇ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಹೊನ್ನೂರು ಗ್ರಾಮದಲ್ಲಿ ಮೃತಪಟ್ಟ ಈರಪ್ಪ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಕಾರಿಗನೂರು ಗ್ರಾಮದಲ್ಲಿ ನಿಧನರಾದ ಕಾಂಗ್ರೆಸ್ ಮುಖಂಡ ನಾಗಣ್ಣ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ನಂತರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಚಿವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳೀಯ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಂಡರು. ಇನ್ನು ಕೆಲವು ಸಮಸ್ಯೆಗಳನ್ನು ನಿಗದಿತ ಕಾಲಮಿತಿಯಲ್ಲಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜನರೊಂದಿಗೆ ನೇರವಾಗಿ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಬಳಿಕ ಕಾರಿಗನೂರು ಗ್ರಾಮದ ಹೋಟೆಲ್ವೊಂದರಲ್ಲಿ ಸ್ಥಳೀಯ ಮುಖಂಡರೊಂದಿಗೆ ಕುಳಿತು ಮಂಡಕ್ಕಿ ಹಾಗೂ ಮೆಣಸಿನಕಾಯಿ ಸವಿದರು. ಸಚಿವರ ಸರಳ ನಡೆ ಸ್ಥಳೀಯರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ತೇಜಸ್ವಿ ಪಟೇಲ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

