ಯಾರೇ ಮಂತ್ರಿ ಎಷ್ಟೇ ಭ್ರಷ್ಟ ಆಗಿದ್ದರೂ, ಅವನನ್ನು ಸಂಪುಟದಿಂದ ವಜಾ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇದೆಯೇ? ತಮಿಳುನಾಡು ಮಂತ್ರಿ ವಿ. ಸೆಂದಿಲ್ ಬಾಲಾಜಿ ಅವರ ಮೇಲೆ ಹಲವು ಕ್ರಿಮಿನಲ್ ಮೊಕದ್ದಮೆಗಳು ಬಾಕಿ ಇದ್ದು, ಅವರು ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ಅವರನ್ನು ಸಂಪುಟದಿಂದ ವಜಾ ಮಾಡಿರುವುದಾಗಿ ಅಲ್ಲಿಯ ರಾಜ್ಯ ಪಾಲರು ಹೇಳಿದ್ದಾರೆ. ಭ್ರಷ್ಟ ಮಂತ್ರಿ ಸಂಪುಟದಲ್ಲಿ ಇರಬೇಕು ಎನ್ನುವುದು ಇಲ್ಲಿಯ ವಾದವಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಇಂಥ ಭ್ರಷ್ಟ ಮಂತ್ರಿಯನ್ನು ಸಂಪುಟದಿಂದ ವಜಾ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡುವಂತೆ ಇಲ್ಲವೇ ರಾಜೀನಾಮೆ ಪಡೆಯುವಂತೆ ಸಿಎಂ ಮೇಲೆ ಒತ್ತಡ ಹೇರಲು, ಪ್ರತಿಪಕ್ಷಗಳಿಗೆ ಅವಕಾಶ ಇದೆ. ಸಾರ್ವಜನಿಕರಿಗೂ ಪ್ರತಿಭಟನೆಗೆ ಅವಕಾಶ ಇದೆ. ಜೊತೆಗೆ ಮುಖ್ಯಮಂತ್ರಿ ಬಯಸಿದರೆ ಆತ ಯಾವುದೇ ಮಂತ್ರಿಯ ರಾಜೀನಾಮೆ ಪಡೆಯಬಹುದು ಇಲ್ಲವೇ ಸಂಪುಟದಿಂದ ಕೈ ನೀಡುವಂತೆ ಶಿಫಾರಸು ಮಾಡಿ ರಾಜ್ಯಪಾಲರಿಗೆ ಪತ್ರ ಬರೆಯಬಹುದು. ಈ ಶಿಫಾರಸು ಆಧರಿಸಿಯೇ ರಾಜ್ಯಪಾಲರು ಕ್ರಮ ಕೈಗೊಳ್ಳಬಹುದೇ ಹೊರತು, ನೇರವಾಗಿ ಯಾರೇ ಮಂತ್ರಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಇಲ್ಲವೇ ವಜಾ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಆದರೆ ತಮಿಳುನಾಡಿನ ರಾಜ್ಯಪಾಲರು ಮಂತ್ರಿಯನ್ನು , ಮುಖ್ಯಮಂತ್ರಿ ಶಿಫಾರಸು ಇಲ್ಲದೆ ಸಂಪುಟದಿಂದ ತಮ್ಮ ಅಧಿಕಾರ ಚಲಾಯಿಸಿ ವಜಾ ಮಾಡಿ ದಾಖಲೆ ಸೃಷ್ಟಿಸಿದ್ದಾರೆ. ಸಂವಿಧಾನದ 161(4) ನೆ ವಿಧಿ ಅನ್ವಯ ಮುಖ್ಯಮಂತ್ರಿಯನ್ನು ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿ ನೇಮಕ ಮಾಡುತ್ತಾರೆ. ನಂತರ ಮುಖ್ಯಮಂತ್ರಿ ಶಿಫಾರಸು ಆಧರಿಸಿಯೇ ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಹೀಗಾಗಿ ಸಚಿವರನ್ನು ನೇಮಿಸುವ , ಸಂಪುಟದಿಂದ ತಾವಾಗಿಯೇ ಕೈಬಿಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ರಾಜ್ಯಪಾಲರ ಅಧಿಕಾರ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸದನದಲ್ಲೇ ಮುಖ್ಯಮಂತ್ರಿ ಬಲಾಬಲ ತೀರ್ಮಾನ ಆಗಬೇಕು. ವಿಶ್ವಾಸ ಮತ ಪಡೆಯಬೇಕು ಎಂದು ಹೇಳಲಾಗಿದೆ. ಇಂಥದ್ದರಲ್ಲಿ ತಮಿಳುನಾಡು ರಾಜ್ಯಪಾಲರಿಗೆ "ಬಲ ಪ್ರದರ್ಶಿಸುವ " ದಮ್ಮು, ತಾಕತ್ತು " ಎಲ್ಲಿಂದ ಬಂತು ಎನ್ನುವುದೇ ಇಲ್ಲಿಯ ಮುಖ್ಯ ಪ್ರಶ್ನೆ. ತಮಿಳುನಾಡು ರಾಜ್ಯಪಾಲರು ಇಂಥ ನಿರ್ಧಾರಕ್ಕೆ ಕೈ ಹಾಕಿ, ಪ್ರಜಾಸತ್ತೆಯ ಬುಡಕ್ಕೆ ಕಲ್ಲು ಹಾಕಿದ್ದಾರೆ. ಮುಖ್ಯಮಂತ್ರಿಯ ಪರಮಾಧಿಕಾರಕ್ಕೆ ರಾಜ್ಯಪಾಲರು ಕೈ ಹಾಕಿದ್ದಾರೆ. ಭಾರತ ಪ್ರಜಾಸತ್ತೆಯಲ್ಲಿ ಇದೊಂದು ಅಪರೂಪದ ವಿವಾದ. ರಾಜ್ಯ ಮತ್ತು ಕೇಂದ್ರಗಳಲ್ಲಿ ಪರಸ್ಪರ ವಿರೋಧ ವಿರುವ ಪಕ್ಷಗಳು ಅಧಿಕಾರದಲ್ಲಿ ಇದ್ದರೆ, ರಾಜ್ಯಗಳ ಮೇಲೆ ನಿಗಾ ಇಡಲು ತಮಗೆ ಬೇಕಾದ ರಾಜ್ಯಪಾಲರನ್ನು ನೇಮಿಸಿ ಕಿರಿಕಿರಿ ಮಾಡುವ ಪರಂಪರೆ ಇತ್ತು. ಆಗಾಗ್ಗೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವೆ ಸಂಘರ್ಷಕ್ಕೆ ಇದು ಕಾರಣ ಆಗುತ್ತಿತ್ತು. ಆದರೆ ಈಗ ಸಿಎಂ ಶಿಫಾರಸ್ಸು ಇಲ್ಲದೆ ಮಂತ್ರಿಯನ್ನು ಕೈಬಿಡುವ ನಿರ್ಧಾರ ರಾಜ್ಯಪಾಲರು ಕೈಗೊಂಡಿರುವುದು ಅಚ್ಚರಿ ಅಷ್ಟೇ ಅಲ್ಲ ಚುನಾಯಿತ ಸರಕಾರಗಳ ಅಗತ್ಯ ಏನು ಎನ್ನುವ ಪ್ರಶ್ನೆಗೆ ಕಾರಣವಾಗಿದೆ. ಭ್ರಷ್ಟಾಚಾರದ ಸುಳಿಗೆ ಸಿಕ್ಕ ಮಂತ್ರಿ ಜನರ, ಪ್ರತಿಪಕ್ಷಗಳ ಪ್ರತಿಭಟನೆ, ಮುಖ್ಯಮಂತ್ರಿಯ ವಿವೇಚನೆಯಿಂದ ರಾಜೀನಾಮೆ ಕೊಡುವಂತಾದರೆ ಅದು ಪ್ರಜಾಸತ್ತೆಯ ಶಕ್ತಿ. ಆದರೆ ರಾಜ್ಯಪಾಲರು" ಕಾನೂನು ಕೈಗೆತ್ತಿಕೊಳ್ಳುವ "ಇಂಥ ಪರಿಪಾಠ ರೂಢಿಸಿಕೊಂಡರೆ ಸಿಎಂ ಹುದ್ದೆ ಯಾಕಿರಬೇಕು? ಅದಕ್ಕಾಗಿ ಚುನಾವಣೆ ಯಾಕೆ ನಡೆಯಬೇಕು? ರಾಜ್ಯಪಾಲರೇ ತಮಗೆ ಬೇಕಾದವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿ ಅವರೇ ಸರ್ಕಾರ ರಚಿಸಬಹುದಲ್ಲವೆ? ಅವರೇ ಬೇಕಾದವರಿಗೆ ಸಿಎಂ ಹುದ್ದೆಯನ್ನು ಕೊಡಬಹುದಲ್ಲವೆ? ಇದೊಂದು ಸಂವಿಧಾನಾತ್ಮಕ ಜಿಜ್ಞಾಸೆ ಹುಟ್ಟಿಸಿದ ಪ್ರಕರಣ ಆಗಿದೆ. ತಮ್ಮ ಹೇಳಿಕೆಯಲ್ಲಿ ರಾಜ್ಯಪಾಲರು ಯಾವ ಕಾಯಿದೆಯ ಅನುಸಾರ ಕ್ರಮ ಜರುಗಿಸಿರುವ ಬಗ್ಗೆ ಏನೇನೂ ಹೇಳದಿರುವುದು ಇನ್ನೊಂದು ವಿಶೇಷ.
ಮುಖ್ಯಮಂತ್ರಿಯ ಪರಮಾಧಿಕಾರಕ್ಕೆ ರಾಜ್ಯಪಾಲರು ಕೈ ಹಾಕಿ, ಪ್ರಜಾಸತ್ತೆಯ ಬುಡಕ್ಕೆ ಕಲ್ಲು ಹಾಕಿದ್ದಾರೆ:ಬೆಲಗೂರ್ ಶಮಿವುಲ್ಲಾ
RELATED ARTICLES