ಬೆಂಗಳೂರು:ಬಾಕಿ ಇರುವ 2021-22 ಹಾಗೂ 2022-23 ನೇ ಶೈಕ್ಷಣಿಕ ಧನ ಸಹಾಯಯನ್ನು ಕೂಡಲೇ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲು ಆದೇಶಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳು ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರು ಹಾಗೂ ಹೈಕೋರ್ಟ್ ನ್ಯಾಯಾಧೀಶರಿಗೆ ಈಗಾಗಲೇ ಸಾವಿರಾರು ಪೊಸ್ಟ್ ಕಾರ್ಡ ಚಳವಳಿಯನ್ನು ಆರಂಭಿಸಿದ್ದಾರೆ ಧನಸಹಾಯ ಪಾವತಿಸದಿದ್ದರೆ ನವೆಂಬರ್ ತಿಂಗಳಲ್ಲಿ ತೀವ್ರ ಹೋರಾಟಕ್ಕೂ ಸಿದ್ದ ಎಂದು ತಿಳಿಸಿದ್ದಾರೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಸುಮಾರು11 ಲಕ್ಷ ಶೈಕ್ಷಣಿಕ ಧನಸಹಾಯ ಅರ್ಜಿಗಳನ್ನು 2022-23 ನೇ ಸಾಲಿನಲ್ಲಿ ಸ್ವೀಕರಿಸಿದೆ. ಆದರೆ ಈ ಅರ್ಜಿಗಳಿಗೆ ಧನ ಸಹಾಯವನ್ನು ಕಳೆದ ಒಂದು ವರ್ಷ ಕಳೆದರೂ ಜಮೆ ಮಾಡಿಲ್ಲ ಅಲ್ಲದೆ 2021 ಸಾಲಿನ ಸಾವಿರಾರು ವಿದ್ಯಾರ್ಥಿಗಳಿಗೂ ಬಾಕಿ ಧನ ಸಹಾಯ ಬಿಡುಗಡೆಯಾಗಿಲ್ಲ.
ಈ ಬಗ್ಗೆ ಕಟ್ಟಡ ನಿರ್ಮಾಣ ಕಾರ್ಮಿಕರು ಹಲವಾರು ಬಾರಿ ತಾಲೂಕು ಜಿಲ್ಲಾ ಹಾಗೂ ಮಂಡಳಿ ಮುಂದೆ ಹೋರಾಟಗಳನ್ನು ನಡೆಸಿದ್ದರೂ ಸಚಿವರು ಹಾಗೂ ಮಂಡಳಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರೂ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷದ ಅರ್ಧ ಭಾಗವನ್ನು ಈಗಾಗಲೇ ಕಳೆದಿದ್ದರೂ ವಿದ್ಯಾರ್ಥಿ ವೇತನ ಜಮೆ ಮಾಡಲಾಗಿಲ್ಲ ಇದರಿಂದ ಲಕ್ಷಾಂತರ ನೈಜ ಕಾರ್ಮಿಕರ ಮಕ್ಕಳು ತಮ್ಮ ವಿದ್ಯಾಭ್ಯಾಸದಿಂದ ವಂಚಿತಾಗುವ ಅಪಾಯ ಎದುರಾಗಿದೆ. ಇದಕ್ಕೆ ನೇರ ಹೊಣೆಯನ್ನು ಮಂಡಳಿ ಅಧಿಕಾರಿಗಳೇ ಹೊತ್ತುಕೊಳ್ಳಬೇಕಿದೆ.
ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಇದೇ ಅಕ್ಟೋಬರ್15 ರಿಂದ 30 ರವರೆಗೆ ಶೈಕ್ಷಣಿಕ ಧನ ಸಹಾಯಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಂದ ರಾಜ್ಯ ಮುಖ್ಯಮಂತ್ರಿ ,ಕಾರ್ಮಿಕ ಮಂತ್ರಿ,ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರಾಗಿರುವ ಹೈಕೋರ್ಟ್ ನ್ಯಾಯಮೂರ್ತಿ,ಸರ್ಕಾರದ ಮುಖ್ಯಕಾರ್ಯದರ್ಶಿ,ಕಾರ್ಮಿಕ ಇಲಾಖಾ ಪ್ರಧಾನ ಕಾರ್ಯದರ್ಶಿ ಹಾಗೂ ಮಂಡಳಿಯ ಸಿಇಓ ಅವರಿಗೆ ಪೊಸ್ಟ್ ಕಾರ್ಡಗಳನ್ನು ಬರೆದು ಗಮನ ಸೆಳೆಯುವಂತೆ ಕರೆ ನೀಡಿದೆ
ಇದಕ್ಕೆ ಸ್ಪಂಧಿಸಿರುವ ರಾಜ್ಯದ ವಿವಿಧ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಸಾವಿರಾರು ಕಟ್ಟಡ ಕಾರ್ಮಿಕರ ಮಕ್ಕಳು ಸ್ವತಃ ಕೈಯಿಂದ ಪತ್ರಗಳನ್ನು ಬರೆದು ಈಗಾಗಲೇ ಆಯಾ ಪ್ರದೇಶದ ಅಂಚೆಕಚೇರಿಗಳ ಮೂಲಕ ಸಾಮೂಹಿವಾಗಿ ಅಂಚೆ ಕಾರ್ಡುಗಳನ್ನು ಪೊಸ್ಟ್ ಮಾಡಿ ಧನಸಹಾಯ ಬಿಡುಗಡೆಗೆ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿದ್ದಾರೆ. ಇದರ ಜತೆ ವಿಡಿಯೋಗಳ ಮೂಲಕ ಧನ ಸಹಾಯ ಬಿಡುಗಡೆಗೆ ಕೋರಿಕೆ ಸಲ್ಲಿಸುತ್ತಿದ್ದಾರೆ.
ಈಗಾಗಲೇ ಬಾಕಿ ಇರುವ ಪಿಂಚಣಿ, ಮದುವೆ, ವೈದ್ಯಕೀಯ ಹಾಗೂ ಮನೆ ನಿರ್ಮಾಣಕ್ಕೆ ಸಹಾಯಧನ ಮಂಜೂರು ಮಾಡುವುದು ಹಾಗೂ ಬಾಕಿ ಇರುವ ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಹಲವು ಹಂತದ ಹೋರಾಟಗಳನ್ನು ನಡೆಸಲಾಗಿದೆ. ಆದರೆ ಕಲ್ಯಾಣ ಮಂಡಳಿಯ ಅಧಿಕಾರಿಗಳು ನಕಲಿ ಫಲಾನುಭವಿಗಳು ಹಾಗೂ ಪರಿಶೀಲನೆ ನೆಪದಲ್ಲಿ ನಿರ್ಮಾಣ ವಲಯದ ಕಾರ್ಮಿಕರಿಗೆ ನ್ಯಾಯ ಬದ್ದವಾಗಿ ದೊರಕಬೇಕಾದ ಸೌಲಭ್ಯಗಳನ್ನು ತಡೆಹಿಡಿದಿರುವುದು 1996 ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾನೂನಿನ ಮೂಲ ಆಶಯಗಳಿಗೆ ವಿರುದ್ದವಾಗಿದೆ. ನಕಲಿ ಕಾರ್ಡಗಳನ್ನು ತಡೆಗಟ್ಟಲು ಮಂಡಳಿ ಕೈಗೊಳ್ಳುವ ಕ್ರಮಕ್ಕೆ ಕಾರ್ಮಿಕರು ಬೆಂಬಲಿಸಿದ್ದಾರೆ ಆದರೆ ನಕಲಿ ಕಾರ್ಡುಗಳನ್ನು ಗ್ರಾಮ ಓನ್,ಸೇವಾಸಿಂಧು ಕೇಂದ್ರಗಳು ಅವ್ಯಾಹತವಾಗಿ ನಡೆಸುವೆ ಅಲ್ಲಿ ನೊಂದಣಿ ಹಾಗೂ ನವೀಕರಣ ನಿಲ್ಲಿಸಬೇಕು ಜತೆಗೆ ಕಾರ್ಮಿಕ ಇಲಾಖೆಯಲ್ಲಿ ಕೆಲ ಭ್ರಷ್ಟ ನೌಕರರು ಇದರ ಜತೆ ಶಾಮೀಲಾಗಿದ್ದಾರೆ ಅದರ ಬಗಯ ಕ್ರಮವಹಿಸಬೇಕು ಎನ್ನುವ ಮನವಿಗೆ ಅಧಿಕಾರಿಗಳು ಸ್ಪಂಧಿಸಿಲ್ಲ. ಬದಲಾಗಿ ನೈಜ ಕಾರ್ಮಿಕರು ಅವರ ಕುಟುಂಬಕ್ಕೆ ಸಿಗಬೇಕಾದ ನ್ಯಾಯ ಬದ್ದ ಸೌಲಭ್ಯಗಳನ್ನು ತಡೆಹಿಡಿದಿರುವುದು ಖಂಡನಾರ್ಹವಾಗಿದೆ.
ಈ ಬಗ್ಗೆ ಸರ್ಕಾರ ಮತ್ತು ಕಾರ್ಮಿಕರ ಸಚಿವರು ಕೂಡಲೇ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಒತ್ತಾಯಿಸಿದೆ.
ಕಾರ್ಮಿಕರ ಬೇಡಿಕೆಗಳ ಕುರಿತು ಕ್ರಮವಹಿಸದಿದ್ದಲ್ಲಿ ನವೆಂಬರ್ 28 ರಿಂದ ಬೆಂಗಳೂರಿನಲ್ಲಿರುವ ಕಲ್ಯಾಣ ಮಂಡಳಿ ಮುಂಭಾಗದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರು, ಮಕ್ಕಳು ಹಾಗೂ ಅವರ ಕುಟುಂಬದವರು ಅನಿರ್ದಿಷ್ಟ ಹೋರಾಟ ನಡೆಸಲು ನಿರ್ಧರಿಸಿದ್ದಾರೆ ಈ ಬಗ್ಗೆ ಕಾರ್ಮಿಕ ಸಚಿವರು ಹಾಗೂ ಕಲ್ಯಾಣ ಮಂಡಳಿ ಅಗತ್ಯ ಕ್ರಮವಹಿಸಲು ಫೆಡರೇಶನ್ ಕೋರಿದೆ.ಎಂದು ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.