ಪೂಜ್ಯ ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ಗಣಪತಿಯ ಪೂಜೆಯ ಬಗ್ಗೆ ಲಿಂಗಾಯತರನ್ನು ಕುರಿತು ಹೇಳಿದ ಮಾತನ್ನು ವಿಶ್ವೇಶ್ವರ ಭಟ್ಟರು ಅತಿರಂಜಿತವಾಗಿ ಬಣ್ಣಿಸಿ ಅಸಭ್ಯ ಶಬ್ದಗಳಲ್ಲಿ ವಿರೋಧಿಸಿದ್ದನ್ನು ಜಾಗತಿಕ ಲಿಂಗಾಯತ ಮಹಾಸಭೆಯು ಅಷ್ಟೇ ಬಲವಾಗಿ ಖಂಡಿಸುತ್ತದೆ. ಬಸವ ಸ್ಥಾಪಿತ ಲಿಂಗಾಯತ ಧಮ೯ದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ.
ಆದರೆ ನೆರೆಹೊರೆಯ ಸನಾತನಿಗಳ ಪ್ರಭಾವದಿಂದ ಅನೇಕ ಲಿಂಗಾಯತ ರು ವಿಶೇಷವಾಗಿ ವೀರಶೈವರು ತಮ್ಮ ಮನೆಗಳಲ್ಲಿ ಗಣೇಶ ಹಬ್ಬದ ಆಚರಣೆ ಮಾಡುವದನ್ನು ಸ್ವಾಮಿಗಳು ಪ್ರಶ್ನಿಸಿದ್ದಾರೆ. ಅದರಲ್ಲಿ ಯಾವ ತಪ್ಪೂ ಇಲ್ಲ. ಆದ್ದರಿಂದ ಸ್ವಾಮಿಗಳು ಆ ಬಗ್ಗೆ ಕ್ಷಮೆ ಕೇಳುವ ಅಗತ್ಯವಿಲ್ಲ.
ಅದನ್ನೆ ನೆಪವಾಗಿಟ್ಟುಕೊಂಡು ಸಿರಿಗೆರೆ ಮಠದ ಹಿರಿಯ ಸ್ವಾಮಿಗಳು ಬಸವಣ್ಣನರು ವೇದಗಳನ್ನು ತಿರಸ್ಕರಿಸಲಿಲ್ಲವೆಂದು ಹೇಳಿದ್ದು ಬಾಲಿಶ ಹೇಳಿಕೆ. ಅವರ “ಬಿಸಿಲು ಬೆಳೆಂಗಳು”ನ ಒಂದು ಲೇಖನದಲ್ಲೂ ಹಾಗೆ ಬರೆದಿದ್ದು ಪ್ರಶ್ನಾಹ೯ ಸಂಗತಿ. ಬಸವಣ್ಣನವರ ಅನೇಕ ವಚನಗಳಲ್ಲಿ ನೇರವಾಗಿಯೇ ವೇದಗಳನ್ನು ತಿರಸ್ಕರಿದ್ದಾರೆ ಮತ್ತು ಖಂಡಿಸಿದ್ದಾರೆ.
ಸಂಧಭಾ೯ನುಸಾರವಾಗಿ ನಾಲ್ಕಾರು ವಚನಗಳಲ್ಲಿ “ಶ್ರುತಿಗಳು ಸಾರುತಿದ್ದಾವೆ ನೋಡಾ” ಎಂದು ಶಿವನ ಶ್ರೇಷ್ಠತೆಯ ಬಗ್ಗೆ ಹೇಳಿದ್ದ ಮಾತ್ರಕ್ಕೆ ಅವರು ವೇದಗಳನ್ನು ಒಪ್ಪಿದ್ದಾರೆಂದು ಅಥೈ೯ಸುವುದು ಸರಿಯಲ್ಲ. ಅವರಷ್ಟೇ ಅಲ್ಲ ಅಲ್ಲಮರು, ಸಿದ್ದರಾಮರು, ಅಂಬಿಗರ ಚೌಡಯ್ಯನವರು ಇತರ ಅನೇಕ ಶರಣರೂ ವೇದಗಳನ್ನು ನೇರವಾಗಿಯೇ ತಿರಸ್ಕರೀದ್ದಾರೆ.
ಅಷ್ಟಕ್ಕೂ ಈಗಿನ ತಂಟೆಗೂ ವೇದಕ್ಕೂ ಏನು ಸಂಭಂಧ ಗುರುಗಳೇ? ಸಾನೆಹಳ್ಳಿ ಶ್ರೀಗಳೊಂದಿಗಿನ ನಿಮ್ಮ ಒಳಜಗಳ ಈಗಾಗಲೇ ಸಾವ೯ಜನಿಕರಿಗೆ ತಿಳಿದ ಸಂಗತಿ. ಆದ್ದರಿಂದ ನಿಮ್ಮ ಈಗಿನ ಹೇಳಿಕೆ ಕದಡಿದ ನೀರಲ್ಲಿ ಮೀನು ಹಿಡಿದಂತೆ ಭಾಸವಾಗುತ್ತದೆ.
ವಿಶ್ವೇಶ್ವರ ಭಟ್ಟರು ಇದೇ ರೀತಿಯ ವರದಿಗಳನ್ನು ಮಾಡಿ ಡಾ ಕಲಬುಗಿ೯ಯವರ ಕೊಲೆಗೆ ಕಾರಣವಾಗಿದ್ದಾರೆ. ಆದ್ದರಿಂದ ಆ ಪ್ರಕರಣದಲ್ಲಿ ಅವರನ್ನು ಪ್ರಚೋದಕರೆಂದು ಪೋಲಿಸರು ಅವರ ವಿರುದ್ಧ ಕ್ರಮಕೊಳ್ಳಬೇಕು.
~ಡಾ. ಎಸ್ ಎಂ ಜಾಮದಾರ್