ದಾವಣಗೆರೆ – ಇಂದಿನ ವೈಜ್ಞಾನಿಕ ಯುಗದಲ್ಲಿ ಚಂದ್ರಯಾನ ಉಡಾವಣೆ ಯಶಸ್ವಿಯಾಗಿ ಮಾಡಿದ್ದರೂ ಮಹಿಳೆಯರ ಬಗ್ಗೆ ಕೀಳಿರಿಮೆ ಕಡಿಮೆಯಾಗಿಲ್ಲ ಎಂದು NFIW ರಾಜ್ಯಾಧ್ಯಕ್ಷೆ ಕಾಂ ಎ ಜ್ಯೋತಿ ಹೇಳಿದರು.
ಶನಿವಾರ ಕಾಮ್ರೇಡ್ ಪಂಪಾಪತಿ ಭವನದಲ್ಲಿ ನಡೆದ ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಕಾಂ ಎ ಜ್ಯೋತಿ ಅವರು, ಹೆಣ್ಣನ್ನು ತುಚ್ಛವಾಗಿ ಕಾಣುವ ಸಮಾಜವನ್ನು ಖಂಡಿಸಿದರು. ಹೆಣ್ಣು ಮಕ್ಕಳು ಎಲ್ಲಾ ಸ್ತರಗಳಲ್ಲಿ ಮುಂದೆ ಬಂದಿದ್ದಾರೆ ಕ್ರೌರ್ಯ ದೌರ್ಜನ್ಯ ಅತ್ಯಾಚಾರ ವರದಕ್ಷಿಣೆ ಪಿಡುಗು ಮುಂತಾದ ಕ್ರಿಯೆಗಳು ಸಮಾಜದಲ್ಲಿ ನಡೆಯುತ್ತಿದ್ದರು ಸರ್ಕಾರ ಇವುಗಳ ವಿರುದ್ಧವಾಗಿ ಕ್ರಮ ತೆಗೆದುಕೊಳ್ಳದೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಸ್ತ್ರೀಯರ ಬಗ್ಗೆ ಮನುವಾದ ಹೆಣ್ಣು ಮಕ್ಕಳಿಗೆ ಯಾವುದೇ ಸ್ವಾತಂತ್ರವನ್ನು ಕೊಡಬಾರದು ಎನ್ನುವ ಉದ್ದೇಶ ಹೊಂದಿದ್ದರೂ ಅದನ್ನು ಮೀರಿ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಸ್ವತಂತ್ರವಾಗಿ ಬದುಕಲು ಯತ್ನಿಸುತ್ತಿದ್ದಾರೆ. ಜನಪ್ರತಿನಿಧಿಗಳ ಆಯ್ಕೆಯಲ್ಲಿ 33% ಮಹಿಳಾ ಮೀಸಲಾತಿ ತರಬೇಕೆನ್ನುವುದರಲ್ಲಿ ಭಾರತೀಯ ಮಹಿಳಾ ಒಕ್ಕೂಟ ಪ್ರಮುಖ ಪಾತ್ರವಹಿಸಿದೆ, ಸುಪ್ರೀಂ ಕೋರ್ಟ್ ಲೋಕಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ತರಬೇಕೆನ್ನುವ ಸೂಚನೆ ಕೊಡುತ್ತಿದ್ದಂತೆ ವಿಶೇಷ ಅಧಿವೇಶನ ಕರೆದು ತರಾತುರಿಯಲ್ಲಿ ಪಾರ್ಲಿಮೆಂಟಿನಲ್ಲಿ ತೀರ್ಮಾನ ತೆಗೆದುಕೊಂಡ ಬಿಜೆಪಿ ಸರ್ಕಾರ 2029ಕ್ಕೆ ಮಹಿಳಾ ಮೀಸಲಾತಿ ತರುವುದಾಗಿ ಹೇಳಿದ್ದಾರೆ ಇದು ಖಂಡನೀಯ ಬರುವ ಲೋಕಸಭಾ ಚುನಾವಣೆಗೆ ಮುನ್ನವೇ ಮಹಿಳಾ ಮೀಸಲಾತಿಯನ್ನು ಘೋಷಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

NFIW ಮಹಿಳಾ ಸಂಘಟನೆಯು ಮಹಿಳಾ ಸ್ವಾತಂತ್ರ್ಯ, ಮಹಿಳೆಯರ ಸ್ವಾವಲಂಬನೆಗಾಗಿ ಹೋರಾಟ ಮಾಡಬೇಕಾಗಿದೆ ಎಂದರು. ಹೆಣ್ಣನ್ನು ಎರಡನೇ ದರ್ಜೆ ಪ್ರಜೆ ಯಾಗಿ ನೋಡುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
NFIW ಬೆಂಗಳೂರು ಜಿಲ್ಲಾಧ್ಯಕ್ಷೆ ದಿವ್ಯ ಬಿರಾದಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್ ಆವರಗೆರೆ ಚಂದ್ರು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಹೆಚ್ ಜಿ ಉಮೇಶ್, ಸಿಪಿಐ ಜಿಲ್ಲಾ ಖಜಾಂಚಿ ಕಾಂ ಆನಂದರಾಜ್ ಶುಭಾಶಯದ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಮುಖಂಡರಾದ ಟಿಎಸ್ ನಾಗರಾಜ್, ಮಹಮ್ಮದ್ ಭಾಷಾ, ಹೊನ್ನಾಳಿ ಚೆನ್ನಮ್ಮ, ಜಗಳೂರು ಸುಶೀಲಮ್ಮ, ದಾವಣಗೆರೆ ಸರೋಜಾ, ಹರಿಹರದ ಸರೋಜಮ್ಮ ಇದ್ದರು. ಎಂ ಬಿ ಶಾರದಮ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಎಸ್ ಎಸ್ ಮಲ್ಲಮ್ಮ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಮ್ಮೇಳನದ ಆರಂಭದಲ್ಲಿ ಇಪ್ಟಾ ಕಲಾವಿದರಾದ ಐರಣಿ ಚಂದ್ರು ಮತ್ತು ಸಂಗಡಿಗರು ಮಹಿಳೆಯರ ಕುರಿತು ಜಾಗೃತಿ ಗೀತೆಗಳನ್ನಾಡಿ ಗಮನ ಸೆಳೆದರು.