ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬರುವುದಕ್ಕೂ ಮುಂಚೆ ಈ ರಾಜ್ಯವು ಮೈಸೂರು ರಾಜ್ಯ ಎಂದೇ ಹೆಸರಾಗಿತ್ತು. ಸ್ವಾತಂತ್ರ್ಯಪೂರ್ವದಲ್ಲೂ ಮೈಸೂರು ಮಹಾ ಸಂಸ್ಥಾನವೆಂದೇ ಹೆಸರಾಗಿತ್ತು. ಇತಿಹಾಸದ ದಾಖಲೆಗಳನ್ನು ಅರವಿನೋಡಿದಾಗ ಭಾರತ ಸಂಸ್ಥಾನದ ಇತರೆ ರಾಜ್ಯಗಳ ರಾಜರುಗಳು ತಮ್ಮ ರಾಜ್ಯ ವಿಸ್ತರಣೆಯ ಬಗ್ಗೆ ಖಡ್ಗ ಜಳಪಿಸಿ, ರುಂಡ ಮುಂಡಗಳನ್ನು ಚೆಂಡಾಡಿ, ಅಪಾರ ಸಾವು ನೋವಿಗೆ ಕಾರಣರಾಗಿ, ರಾಜ್ಯದಾಹಕ್ಕೆ ಬಲಿಯಾಗಿ ಪ್ರಸಿದ್ದಿ ( ಕುಪ್ರಸಿದ್ದಿ ) ಹೊಂದಿದ್ದರೆ ಅದಕ್ಕೆ ಅಪವಾದ ಎಂಬಂತೆ ಮೈಸೂರು ಅರಸರು ಈ ನೆಲದ ಹುಟ್ಟುಗುಣವನ್ನನುಸರಿಸಿ ಶಾಂತಿ ಮಂತ್ರ ಪಠಿಸುತ್ತಾ, ಯಾವೊಂದು ರಾಜ್ಯಗಳ ಮೇಲೆ ಅಕ್ರಮಣ ಮಾಡದೆ, ಭೂತಾಯಿಗೆ ಶೋಣಿತವನೆರೆಯದೆ, ರಾಜಪ್ರಭುತ್ವದಲ್ಲಿಯೂ ಪ್ರಜಾಪ್ರಭುತ್ವವನ್ನು ಜಾರಿಮಾಡಿ, ಪ್ರಜೆಗಳಿಗೆ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿ ರಾಜ ಪ್ರತ್ಯಕ್ಷ ದೇವತಾ ಎನ್ನುವುದನ್ನು ಚಾಚೂತಪ್ಪದೆ ಆಡಳಿತ ನಡೆಸಿದ ಹೆಗ್ಗಳಿಕೆ ನಮ್ಮ ಮೈಸೂರು ಒಡೆಯರದು.
ಇತಿಹಾಸದ ಪುಟಗಳನ್ನು ಒಮ್ಮೆ ಮೆಲುಕು ಹಾಕಿದಾಗ ಇತಿಹಾಸದಲ್ಲಿ ದಾಖಲಾದ ಎಲ್ಲಾ ರಾಜ ಮಹಾರಾಜರುಗಳನ್ನು ನಾವು ಸಾಮಾನ್ಯವಾಗಿ ಏಕವಚನದಲ್ಲಿಯೇ ಗೆಲುವನ್ನು ಪಡೆದ, ಸೋತು ಹೋದ, ಗುಡಿ ಗುಂಡಾರಗಳ ಕಟ್ಟಿಸಿದ, ತೆರಿಗೆಯನ್ನು ಹಾಕಿದ, ಹೀಗೆ ಏಕ ವಚನದಲ್ಲಿಯೇ ಸಂಬೋಧಿಸುತ್ತೇವೆ. ಅಷ್ಠೇಕೆ ಸಾಮ್ರಾಟ್ ಅಶೋಕನನ್ನ, ದಕ್ಷಿಣ ಪಥೇಶ್ವರ ಪುಲಕೇಶಿಯನ್ನ, ಟಿಪ್ಪುವನ್ನ, ಹೊಯ್ಸಳನನ್ನ ಹೀಗೆ ಎಲ್ಲರನ್ನೂ ಸಹ ನಾವು ಏಕವಚನದಲ್ಲಿಯೇ ಸಂಬೋಧಿಸುತ್ತೇವೆ. ಆದರೆ ಮೈಸೂರು ಯದುವಂಶದ ಅರಸರ ಬಗ್ಗೆ ಮಾತನಾಡುವಾಗ ನಾವು ನಮ್ಮನ್ನಾಳಿದ ಮೈಸೂರು ಒಡೆಯರನ್ನು ಎಂದಿಗೂ ಏಕವಚನದಲ್ಲಿ ಸಂಬೋಧಿಸಿ ಮಾತನಾಡದೆ ಇಂದಿಗೂ ಸಹ ಆ ಅರಸರನ್ನು ನಾವು ಬಹುವಚನದಲ್ಲಿಯೇ ಅವರುಗಳನ್ನು ಸಮಬೋಧಿಸಿ ಕರೆಯುತ್ತೇವೆ, ಉದಾ. ಮುಮ್ಮಡಿ ಕೃಷ್ಣ ರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಕಂಠೀರವ ನರಸಿಂಹರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್, ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್, ಯದುವೀರ ಒಡೆಯರ್ ಹೀಗೆ ನಮ್ಮನ್ನಾಳಿದ ರಾಜಪ್ರಭುತ್ವದ ಮೈಸೂರು ಅರಸರನ್ನು ನಾವು ಬಹುವಚನದಿಂದಲೇ ಮಾತನಾಡುತ್ತೇವೆ. ಹೀಗೆ ಭಾರತದಲ್ಲಿ ಯಾವ ಅರಸರಿಗೂ ಸಿಗದ ಗೌರವ ಈ ಮೈಸೂರು ಅರಸರಿಗೆ ಏಕೆ ನಾವು ಕೊಡಬೇಕು ? ಕಾರಣ ಮೈಸೂರು ಅರಸೊತ್ತಿಗೆ ಎಂಬುದು ಗೌರವವನ್ನು ಬೇಡಿಕೊಂಡಿದ್ದಲ್ಲ, ಆ ಅರಸೊತ್ತಿಗೆ ಮೇಲಿನ ಪ್ರೀತ್ಯಾಭಿಮಾನಗಳಿಗೆ ಜನರೇ ಆ ಆಳುವ ಅರಸರಿಗೆ ನೀಡಿದ ಗೌರವವಿದು. ಕಾರಣ ಮೈಸೂರು ಅರಸರು ಮಾಡಿರುವಂಥಹ ಜನೋಪಯೋಗಿ ಕಾರ್ಯಗಳು, ಪ್ರಜೆಗಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡಿದುದರ ಫಲ ಈ ಮಹಾನ್ ಗೌರವ.
ಇಂಥಹ ಸತ್ಪುರುಷರ, ಮಹಾ ಮಾನವತಾವಾದಿಯಾದ ಅರಸರಲ್ಲಿ ಆಳ್ವಿಕೆ ನಡೆಸಿದ, ಇವರ ಕಾಲಘಟ್ಟದಲ್ಲಿ ಮೈಸೂರು ಸಂಸ್ಥಾನದ ಸುವರ್ಣಯುಗ ಎಂತಲೆ ಕರೆಯಲ್ಪಟ್ಟ, ಮಹಾತ್ಮ ಗಾಂಧೀಜಿಯವರಿಂದಲೇ ರಾಜ ಋಷಿ ಎಂಬ ಬಿರುದನ್ನು ಪಡೆದು, ಸರ್ದಾರ್ ವಲ್ಲಭಾಯ್ ಪಟೇಲ್ ಅವರಿಂದ ಇಂಥಹ ಮಹಾರಾಜರಿದ್ದರೆ ನಮಗೆ ಪ್ರಜಾಪ್ರಭುತ್ವವೇ ಬೇಕಿರಲಿಲ್ಲ ಎಂಬ ಮಾತನ್ನು ಕೇಳಲ್ಪಟ್ಟ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಘೋಶವಾಖ್ಯದೊಂದಿಗೆ ರಾಜ್ಯಭಾರ ಮಾಡಿದ ಸಾಮಾಜಿಕ ನ್ಯಾಯದ ಹರಿಕಾರ, ರೈತ ಬಂಧು, ಔದ್ಯೋಗಿಕ ಕ್ರಾಂತಿಕಾರರೂ ಆಗಿ, ಇಡೀ ಪ್ರಪಂಚದ ಭೂಪಟದಲ್ಲಿ ಈ ನಮ್ಮ ನೆಲವನ್ನು ಪರಿಚಯಿಸಿದ ಕೀರ್ತಿಯು ಸೂರ್ಯ, ಚಂದ್ರ, ಶಂಖ, ಚಕ್ರಾಂಕುಶ ಕುಠಾರ, ಮಕರ ಮತ್ಸ್ಯ ಹನುಮದ್ ಗರುಡ ಕಂಠೀರವಾದ್ಯಾನೇಕ ಬಿರುದಾಂಕಿತ, ರಾಜಾಧಿರಾಜ, ಶ್ರೀಮನ್ಮಹಾರಾಜ ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ.
10 ನೇ ಚಾಮರಾಜ ಒಡೆಯರ್ ಅವರ ಜ್ಯೇಷ್ಠ ಪುತ್ರರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನಿಸಿದ್ದು 4-6-1884 ರಲ್ಲಿ. ಇವರು ಬಾಲ್ಯಾವಸ್ಥೆಯಲ್ಲಿದ್ದುದರಿಂದ ತಾಯಿ ಕೆಂಪಮ್ಮಣ್ಣಿ ವಾಣಿವಿಲಾಸ ಸನ್ನಿಧಾನವು 8-8-1892 ರ ವರೆಗೂ ರಾಜ್ಯವನ್ನು ಮುಂದುವರೆಸಿ, ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮೈಸೂರು ಸಂಸ್ಥಾನದ ಆಡಳಿತ ಚುಕ್ಕಾಣಿ ಹಿಡಿಯಲು ಸಂಪ್ರದಾಯದಂತೆ ಪಟ್ಟಾಭಿಷೇಕವಾಯಿತು. ಶ್ರೀ ಮಾನ್ಯರ ಪಟ್ಟಾಭಿಷೇಕದೊಂದಿಗೇನೆ ಮೈಸೂರು ಸಂಸ್ಥಾನದ ಸುವರ್ಣಯುಗವೂ ಪ್ರಾರಂಭವಾಯಿತು. ಮಾನ್ಯರ ಪಟ್ಟಾಭಿಷೇಕಕ್ಕೆ ಅಂದು ಭಾರತದ ವೈಸ್ ರಾಯ್ ಲಾರ್ಡ್ ಕರ್ಜನ್ ಅವರು ಸಿಮ್ಲಾದ ಅರಮನೆಯಿಂದ ಮೈಸೂರಿಗೆ ಒಟ್ಟು 33 ದಿನಗಳ ಪಯಣಿಸಿ ಈ ಕಾರಗಯಕ್ರಮಕ್ಕೆ ಸಾಕ್ಷೀಭೂತರಾಗಿದ್ದರು. ಬಾಲ್ಯದಿಂದಲೇ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ತಿಳಿದಿದ್ದ ಲಾರ್ಡ್ ಕರ್ಜನ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕದಂದು ಮಾತನಾಡುತ್ತಾ ಈ ಮನ್ಮಹಾರಾಜರಿಂದ ಈ ಮೈಸೂರು ಸಂಸ್ಥಾನದ ಗತಿಯೇ ಸುವರ್ಣಗತಿಯತ್ತ ಸಾಗುತ್ತದೆ ಎಂದು ಮುಂದಿನ ಭವಿಷ್ಯ ಹೇಳಿದ್ದರು. ಅಂದಿನಿಂದ 1939 ರವರೆವಿಗೆ ಅಂದರೆ 37 ವರ್ಷಗಳ ಕಾಲ ಮೈಸೂರು ರಾಜ್ಯಭಾರ ಮಾಡಿದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಡೀ ಮೈಸೂರು ರಾಜ್ಯವನ್ನೇ ಅಭಿವೃದ್ದಿ ಪಥದತ್ತ ಕೊಂಡೋಯ್ದರು.
ಪ್ರಪ್ರಥಮವಾಗಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಬೋರನಕಣಿವೆ ಜಲಾಶಯ ನಿರ್ಮಾಣಮಾಡಿದರು. ತಾಯಿ ಕೆಂಪಮ್ಮಣ್ಣಿ ವಾಣಿವಿಲಾಸ ಸನ್ನಿಧಾನದ ಆಣತಿಯಂತೆ ಹಿರಿಯೂರು ತಾಲ್ಲೂಕಿನ ಮಾರೀಕಣಿವೆ ಎಂಬಲ್ಲಿ ವಾಣಿವಿಲಾಸ ಸಾಗರ, ತಂಗಿಯ ನೆನಪಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ಗಾಯಿತ್ರೀ ಜಲಾಶಯ ಹಾಗೂ 1932 ರಲ್ಲಿ ಕರ್ನಾಟಕದ ಜೀವನಾಡಿಯಾದ ಮಂಡ್ಯದ ಕನ್ನಂಬಾಡಿ ಎಂಬಲ್ಲಿ ತಮ್ಮ ಅರಮನೆಯ ಚಿನ್ನಾಭರಣಗಳನ್ನು ಮುಂಬೈನಲ್ಲಿ ಅಡವಿಟ್ಟು ಹಣ ಹೊಂದಿಸಿ ಕೃಷ್ಣ ರಾಜ ಸಾಗರ ನಿರ್ಮಿಸಿ ಅದರ ನಿರ್ಮಾತೃವಾಗಿ ಸಾವಿರಾರು ರೈತರಿಗೆ ಆಶ್ರಯ ನೀಡಿದ ಅಭಯವಂತರಾದವರಿವರು. ಅದೆಷ್ಠೋ ಕೆರೆ ಕೆಟ್ಟೆಗಳ ನಿರ್ಮಾಣ, ನಾಲೆಗಳ ನಿರ್ಮಾಣ ಸೇರಿದಂತೆ ರೈತರ ಬದುಕು ಹಸನಾಗುವಂತೆ ಮಾಡಿದ ಪುಣ್ಯಾತ್ಮರೂ ಹೌದು.
ಇಂದಿನ ನರೇಗಾ ಕಾಮಗಾರಿಗಳ ಕನಸನ್ನು ಅಂದೇ ಅವರು ಹೊತ್ತು ಕೂಲಿಗಾಗಿ ಕಾಳು ಯೋಜನೆಯಲ್ಲಿ ಬೆಂಗಳೂರು – ಮೈಸೂರು, ಮೈಸೂರು – ಅರಸೀಕೆರೆ ರೈಲ್ವೇ ಮಾರ್ಗ ನಿರ್ಮಿಸಲನುವಾಗಿದುದಲ್ಲದೆ, ಅಪಾರ ಪಾಕೃತಿಕ ಸಂಪತ್ತು ನಾಶವಾಗದಂತೆ ರೈಲ್ವೇ ಸ್ಲೀಪರ್ ಗಳಿಗಾಗಿ ದಿವಾನ್ ಶೇಷಾದ್ರಿ
ಅಯ್ಯರ್ ಅವರ ಆಣತಿಯಂತೆ ಬರ್ಮಾದಿಂದ ಟೀಕ್ ತರಿಸಿ ಅದನ್ನೇ ರೈಲ್ವೇ ಸ್ಲೀಪರ್ ಆಗಿ ಪರಿವರ್ತಿಸಿದ ಕೀರ್ತಿಶೇಷರು ಇವರು. ಆಡಳಿತ ಸುಧಾರಣೆ ಮಾಡಿ ಆಡಳಿತವನ್ನು ಚುರುಕು ಮಾಡಿದರು. 1918 ರಲ್ಲಿ ಮಿಲ್ಲರ್ಸ್ ಆಯೋಗ ರಚಿಸಿ ಇಡೀ ಭಾರತದಲ್ಲಿಯೇ ತುಳಿತಕ್ಕೊಳಗಾದ ಸಮೂದಾಯಗಳಿಗೆ ಮೀಸಲಾತಿ ಪ್ರಕಟಿಸಿದ ಹೆಗ್ಗಳಿಕೆ ಇವರದು. ಹಾಗೆಯೇ ಸಮಾಜದ ಅನಿಷ್ಟಾತಿನಿಷ್ಟ ಪದ್ದತಿಗಳಾದ ದೇವದಾಸಿ, ಬಸವಿ, ಗೆಜ್ಜೆಪೂಜೆ, ಬಾಲ್ಯವಿವಾಹ, ಸತೀ ಪದ್ದತಿಗಳನ್ನು ಕಾನೂನು ರಚಿಸಿ ನಿಷೇಧಮಾಡಿದಂತಹ ದೂರದೃಷ್ಟಿತ್ವದವರು. ವಿಧವೆಯರಿಗೆ ಮಾಶಾಸನ ನೀಡಿದ ನಮ್ನ ಮಹರಾಜ. ಇಡೀ ಭಾರತದಲ್ಲಿಯೇ ಪ್ರಪ್ರಥಮವಾಗಿ ಮೈಸೂರು ಸಂಸ್ಥಾನದಲ್ಲಿ ಅಸ್ಪೃಷ್ಯತಾ ನಿವಾರಣಾ ಕಾನೂನನ್ನು ಜಾರಿಗೆ ತಂದ ಪುಣ್ಯಾತ್ಮರೂ ಇವರೇ ಹೌದು. ಪ್ರಪ್ರಥಮಬಾರಿಗೆ ರಾಜಪ್ರಭುತ್ವದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಜಾರಿಗೆ ತಂದು ಆಡಳಿತದಲ್ಲಿ ಪ್ರಜೆಗಳಿಗೇ ಅಧಿಕಾರ ನೀಡಿದ ಭಾಗ್ಯಾದಾತರು ಇವರಾದವರು.
ಇವರು ಜೆಮ್ ಷೆಡ್ ಟಾಟಾ ರವರಿಗೆ ಬೆಂಗಳೂರು ನಗರದ ಹೃದಯ ಭಾಗದಲ್ಲಿ 460 ಎಕರೆ ಜಮೀನನ್ನು ಬಳುವಳಿಯಾಗಿ ಕೊಟ್ಟಿದ್ದಲ್ಲದೆ ವರ್ಷಕ್ಕೆ 50000 ರೂ ಹಣವನ್ನು ಅನುದಾನವಾಗಿ ನೀಡಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರಾರಂಭಿಸಲು ಕಾರಣೀಭೂತರಾದರು. ಇಂದಿನ ಭಾರತದ ಪ್ರತಿಷ್ಟಿತ HAL ಸಹ ಇವರ ಕೊಡುಗೆಯೇ ಆಗಿದೆ. ಅಂತೆಯೇ
೧. ಮಿಂಟೋ ಕಣ್ಣಾಸ್ಪತ್ರೆ
೨. ವಾಣಿವಿಲಾಸ ಆಸ್ಪತ್ರೆ,
೩. ಮೈಸೂರು ವಿಶ್ವವಿದ್ಯಾನಿಲಯ
೪. ಕೃಷಿ ವಿಶ್ವವಿದ್ಯಾಲಯ, ಹೆಬ್ಬಾಳ
೫. KR ಇಂಜಿನಿಯರಿಂಗ್ ಕಾಲೇಜು
೬. ಮೈಸೂರು- ಬೆಂಗಳೂರು ರೈಲು
೭. ಮೈಸೂರು – ಅರಸೀಕೆರೆ ರೈಲು
೮. ಮಹಾತ್ಮಗಾಂಧಿ ವಿದ್ಯುದಾಗಾರ
೯. ಬೆಂಗಳೂರಿನ ರಸೆಲ್ ಮಾರ್ಜೆಟ್
೧೦. ಬೆಂಗಳೂರಿನ ಕೆ ಆರ್ ಮಾರ್ಕೆಟ್
೧೧. ಮೈಸೂರಿನ ಕೆ ಆರ್ ಮಾರ್ಕೆಟ್
೧೨. ಹಿರಿಯೂರಿನ ವಾಣಿವಿಲಾಸ ಮಹಿಳಾ ಕಾಲೇಜು
೧೩. ಮೈಸೂರು ಸ್ಯಾಂಡಲ್ ಫ್ಯಾಕ್ಟರಿ
೧೪. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
೧೫. ಭದ್ರಾವತಿ ಕಬ್ಬಿಣದ ಕಾರ್ಖಾನೆ
೧೬. ಮೈಸೂರು ಪೇಪರ್ ಮಿಲ್ಸ್
೧೭. ಮೈಸೂರು ಲ್ಯಾಂಪ್ಸ್
೧೮.ಶಿವನ ಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ
೧೯. ಬೆಂಗಳೂರಿಗೆ ದೀಪ ದೀಪಗಳ
೨೦. ಸ್ತ್ರೀ ಯರಿಗೆ ಕಡ್ಡಾಯ ಶಿಕ್ಷಣ ಯೋಜನೆ
೨೧.ಸ್ತ್ರೀಯರಿಗೆ ಪ್ರಥಮವಾಗಿ ಮತದಾನದ ಹಕ್ಕು
೨೨.ಗ್ರಾಮ ಪಂಚಾಯ್ತಿ ಕಾಯಿದೆ
೨೩. ಗ್ರಾಮ ನೈರ್ಮಲ್ಯೀಕರಣ ಯೋಜನೆ
೨೪. ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆ
೨೪. ಶಹಬಾದ್ ಸಿಮೆಂಟ್ ಕಾರ್ಖಾನೆ
೨೫. ತಣಿಗೆ ಬೈಲು – ಕೆಮ್ಮಣ್ಣು ಗುಂಡಿ ರೋಪ್ ವೇ
೨೬. ಮೈಸೂರಿನ ಅರಗು ಹಾಗೂ ಬಣ್ಣದ ಕಾರ್ಖಾನೆ
೨೭. ಮಡಿಕೇರಿಯ ಕಾಫಿ ಸಂಶೋಧನಾ ಮಂಡಳಿ
೨೮. ನಂಜನಗೂಡು – ಚಾಮರಾಜನಗರ ರೈಲು ಮಾರ್ಗ
೨೯. ಚಿಕ್ಕಬಳ್ಳಾಪುರ-ಬೆಂಗಳೂರು ರೈಲು ಮಾರ್ಗ
೩೦. ಮಂಡ್ಯದಲ್ಕಿ ಮೈಶುಗರ್ ಸಕ್ಕರೆ ಕಾರ್ಖಾನೆ
ಹೀಗೆ ಅನೇಕಾನೇಕ ಸಾಧನೆಗಳನ್ನು ಸಾಧಿಸಿದ ಸಿದ್ದ ಪುರುಷರಿವರು.
ಗಿರಿಧಾಮ ಎಂದರೆ ಮೊದಲು ಉಳ್ಳವರಿಗೆ ಮಾತ್ರವೇ ಲಭ್ಯವಾಗುತ್ತಿದ್ಧ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳ ಸೆರಗಿನ ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣು ಗುಂಡಿಯನ್ನು 1932 ರಲ್ಲಿ ಗಿರಿಧಾಮವನ್ನಾಗಿ ಘೋಷಿಸಿ ಮೊದಲಿಗೆ ಅಲ್ಲಿ ದತ್ತಾತ್ರೇಯ ಭವನ ಎಂಬ ಭವನ ಕಟ್ಟಿಸಿ ಗಿರಿಧಾಮವನ್ನು ಅಭಿವೃದ್ದಿ ಪಡಿಸಿದ ಕೀರ್ತಿಯೂ ಅವರದೇ. ಈ ಕೆಮ್ಮಣ್ಣು ಗುಂಡಿಯನ್ನು ಬಡವರ ಊಟಿ ಎಂತಲೂ ಕರೆಯುತ್ತಾರೆ. ಈ ಕಾರಣಕ್ಕಾಗಿಯೇ ಇಂದಿಗೂ ಈ ಗಿರಿಧಾಮವನ್ನು ಕೃಷ್ಣರಾಜೇಂದ್ರ ಗಿರಿಧಾಮ ( KR Hill Station ) ಎಂದು ಕರೆಯುವುದು.
ಹೀಗೆ ಒಬ್ಬ ವ್ಯಕ್ತಿ ಆಡಳಿತ ಚುಕ್ಕಾಣಿ ಹಿಡಿದವರು ಪ್ರಜೆಗಳಾಶಯದಂತೆ ನಡೆದರೆ ಇಂಥಹ ಸಾಧನೆಗಳನ್ನು ಮಾಡಬಹುದಲ್ಲದೆ ಇತರರಿಗೆ ಸಾಧ್ಯವೇ ಇಲ್ಲ. ಅಧಿಕಾರ ಹಿಡಿದವರು 1000 ವರ್ಷಗಳ್ಲಿ ಮಾಡಬಹುದಾದ ಕೆಲಸ ಕಾರ್ಯಗಳು, ನೀಡುವಂತಹ ಕಾರ್ಯಕ್ರಮಗಳನ್ನು ಇವರು 37 ವರ್ಷದ ಆಢಳಿತಾವಧಿಯಲ್ಲಿ ಮಾಡಿರುವುದಂತೂ ಸತ್ಯ. ಇಂಥಹ ಮಹಾರಾಜರನ್ನು ಪಡೆದಂತಹ ನಾವೇ ಧನ್ಯರು. ನಾವೇ ಧನ್ಯರು,
ನಾವೇ ಧನ್ಯರು.
ಇಂದು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನ, ಅಂತಹ ಪುಣ್ಯವಂತರನ್ನ, ಭಾಗ್ಯವಿಧಾರನ್ನ, ನಮ್ನೆಲ್ಲರ ಬಾಳಿನ ಬೆಳಕಾದ ಅವರನ್ನ ನೆನಸುವುದೇ ನಮ್ಮಗಳ ಸುದೈವ.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹುಟ್ಟುಹಬ್ಬದ ದಿನದ ಶುಭಾಷಯಗಳು
✍️ ರವೀ ಚಿಕ್ಕನಾಯಕನಹಳ್ಳಿ