ಜಗಳೂರು:ಕವಿತೆ ಕಟ್ಟುವಂತದ್ದಲ್ಲ ಅದು ಹುಟ್ಟುವಂತದ್ದು. ನಮ್ಮ ಮನಸಿನಲ್ಲಿ ಒಂದು ಹದವಾದ ನೆಲೆಯನ್ನು ಕೊಟ್ಟಾಗ ಕವಿತೆಯ ಹುಟ್ಟು ಆಗುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿ ಹಾಗೂ ಮಹಿಳಾ ಸಾಹಿತಿಗಳಾದ ಶ್ರೀಮತಿ ಗೀತಾ ಮಂಜು ಅವರು ಅಭಿಪ್ರಾಯಪಟ್ಟರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಜಗಳೂರು ಹಾಗೂ ಶ್ರೀ ಕಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲೆ ಕಲ್ಲೇದೇವರಪುರ ಇವರ ಸಂಯುಕ್ತಾಶ್ರಯದಲ್ಲಿ ಕಲ್ಲೇದೇವರಪುರ ಗ್ರಾಮದ ಶ್ರೀ ಕಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಜರುಗಿದ ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ “ಕವಿತೆ ಕಟ್ಟೋಣ” ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಸ್ವತಃ ಶಿಕ್ಷಕಿಯೂ ಆದ ಶ್ರೀಮತಿ ಗೀತಾ ಮಂಜುರವರು ಕಾರ್ಯಕ್ರಮಕ್ಕೆ ನಾಲ್ಕು ದಿನ ಮುಂಚಿತವಾಗಿ ಸದರಿ ಶಾಲೆಗೆ ಭೇಟಿ ನೀಡಿ “ಕವಿತೆ ಕಟ್ಟೋಣ” ಎಂಬ ವಿಷಯವಾಗಿ ಶಾಲಾ ಮಕ್ಕಳಿಗೆ ಉಪನ್ಯಾಸ ನೀಡಿದ್ದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವತಃ ಕವಿತೆ ರಚಿಸಲು ಸ್ಪೂರ್ತಿಯಾಗಿದ್ದರು. ಅದರ ಪರಿಣಾಮವಾಗಿ ಸದರಿ ಶಾಲೆಯ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವತಃ ಕವಿತೆ ರಚಿಸಿ ಕಾರ್ಯಕ್ರಮದಲ್ಲಿ ಕವನ ವಾಚಿಸಿದ್ದು ವಿಶೇಷವಾಗಿತ್ತು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಸಂಘಟನಾ ಕಾರ್ಯದರ್ಶಿ ಹಾಗೂ ನಿವೃತ್ತ ಶಿಕ್ಷಕರಾದ ಕೃಷ್ಣಮೂರ್ತಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಕನ್ನಡ ಅಭಿಮಾನ ಸಾರುವ ಗೀತೆಗಳಿಗೆ ಸೊಗಸಾಗಿ ಹೆಜ್ಜೆ ಹಾಕಿದರು.
ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ವಸಂತಕುಮಾರಿ ತಿಪ್ಪೇಸ್ವಾಮಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಇಂಚರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಹ ಶಿಕ್ಷಕರಾದ ಚಿತ್ರಯ್ಯನವರು ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಾಯ್ಕ ರವರು ಸೊಗಸಾಗಿ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಿದರು. ಚೈತ್ರಾ ರವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಡಿ.ರಮೇಶ ನಾಯ್ಕ ಅವರು ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಯುವ ಸಾಹಿತಿ ಚಂದ್ರ ಕಾಂತ.ಹೆಚ್. ಗ್ರಾ. ಪಂ. ಸದಸ್ಯರಾದ ಕೆ.ಟಿ. ಬಡಯ್ಯ, ವಿಮಲಾಕ್ಷಿ ರಾಜಶೇಖರ್, ಶಿಕ್ಷಕರಾದ ಉಮೇಶ್, ಚಂದ್ರಶೇಖರ ರೆಡ್ಡಿ, ಸತ್ಯ ನಾರಾಯಣ ರೆಡ್ಡಿ, ಶಿಕ್ಷಕಿ ಶೋಭಾ, ದೈಹಿಕ ಶಿಕ್ಷಕರಾದ ಹೆಚ್. ಪಿ. ತಿಪ್ಪೇಸ್ವಾಮಿ, ಬಿ. ಅನಂತ್, ಶಿವಕುಮಾರ್, ಶಿಕ್ಷಕಿ ಚಿನ್ಮಯ ಮತ್ತು ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.