ವಿಜಯಪುರ:”ಬಂಜಾರಾ ಸಮಾಜದ ಸ್ವಾಭಿಮಾನವನ್ನು ಕೆಣಕಿದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯ ಸೋಲಿನಲ್ಲಿ ಬಂಜಾರಾ ಸಮಾಜದ ಗೆಲುವಿದೆ”
ಇಂದು ವಿಜಯಪುರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ವಿಜಯಪುರ ಜಿಲ್ಲಾ ಬಂಜಾರಾ ಸ್ವಾಭಿಮಾನಿ ಸಮಾವೇಶದಲ್ಲಿ ಕೇಳಿಬಂದ ಘೋಷವಾಕ್ಯವಿದು.
ಜಿಲ್ಲೆಯ ಮೂಲೆ ಮೂಲೆಯಿಂದ ಬಂದಿದ್ದ ಸುಮಾರು 10 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ಬಂಜಾರಾ ಸಮಾವೇಶದಲ್ಲಿ, ಮೀಸಲಾತಿ ರದ್ದುಪಡಿಸುವವರ ಪರವಾಗಿರುವ ರಮೇಶ ಜಿಗಜಿಣಗಿ ಮತ್ತು ಗೋವಿಂದ ಕಾರಜೋಳ ಅವರಿಗೆ ತಕ್ಕ ಪಾಠ ಕಲಿಸಲು ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸಲೇಬೇಕೆಂದು ಒಕ್ಕೊರಲಿನಿಂದ ನಿರ್ಣಯ ಕೈಕೊಳ್ಳಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರು ದೀಪ ಬೆಳಗಿಸಿ, ಸಂತ ಸೇವಾಲಾಲ ಮಹಾರಾಜರು ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ಮಾತನಾಡಿ, ಬಂಜಾರಾ ಸಮಾಜದ ಭಾವನೆಗಳನ್ನು ಗೌರವಿಸುವುದಾಗಿ ಮತ್ತು ಸಮಾಜದ ಹಿತರಕ್ಷಣೆ ಮಾಡುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ನಾಯಕ, ಮಾಜಿ ಶಾಸಕ ಶರಣಪ್ಪ ಸುಣಗಾರ, ಶ್ರೀದೇವಿ ಉತ್ಲಾಸ್ಕರ, ಡಿ.ಎಲ್. ರಾಠೋಡ, ಕಾಂತಾ ನಾಯಕ, ಡಾ. ಬಾಬು ರಾಜೇಂದ್ರ ನಾಯಕ, ಶಂಕರ ಚವ್ಹಾಣ, ಎಂ.ಎಸ್. ನಾಯಕ, ಮಹಾದೇವ ರಾಠೋಡ, ಬದ್ದು ರಾಠೋಡ, ಡಾ. ರವಿದಾಸ ರಾಠೋಡ, ರಾಜು ಜಾಧವ ಮತ್ತಿತರ ಬಂಜಾರಾ ಮುಖಂಡರು ಉಪಸ್ಥಿತರಿದ್ದರು.