ಕಳೆದ ಹತ್ತುವರ್ಷಗಳ ಆಡಳಿತದಲ್ಲಿ ದಲಿತರು, ದೇವದಾಸಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಏನೊಂದು ನೆರವು ನೀಡದ ಮತ್ತು ಅವರ ಸಂಕಷ್ಠಗಳನ್ನು ಹೆಚ್ಚಳ ಮಾಡಿರುವ ಮತ್ತು ದಲಿತರು ಹಾಗೂ ಮಹಿಳೆಯರು ಮತ್ತು ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ವಳಕ್ಕೆ ಕಾರಣವಾದ ಬಿಜೆಪಿಯನ್ನು ಈ ಲೋಕ ಸಭಾ ಚುನಾವಣೆಯಲ್ಲಿ ಸೋಲಿಸುವಂತೆ ರಾಜ್ಯದ ಮತದಾರರಿಗೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಕರೆ ನೀಡುತ್ತದೆ.
ದಲಿತರು, ದೇವದಾಸಿ ಮಹಿಳೆಯರು, ಶೂದ್ರ ಸಮುದಾಯಗಳ ಹಾಗೂ ಅಲ್ಪಸಂಖ್ಯಾತ ಬಡವರು ಮತ್ತು ಮಹಿಳೆಯರು ಸ್ವಾವಲಂಬಿ ಬದುಕು ನಿರ್ವಹಿಸಲು ಕೃಷಿಯಲ್ಲಿ ತೊಡಗುವವರಿಗೆ ತಲಾ ಐದು ಎಕರೆ ನೀರಾವರಿ ಜಮೀನು ನೀಡುವ ನಿರಾಕರಿಸಿ, ಗೋದ್ರೇಜ್, ಫತಂಜಲಿಯಂತಹ ದೊಡ್ಡ ಬಂಡವಾಳಶಾಹಿ ಕಂಪನಿಗಳಿಗೆ ಲಕ್ಷಾಂತರ ಎಕರೆ ಜಮೀನುಗಳನ್ನು ಉಚಿತವಾಗಿ ನೀಡುತ್ತದೆ.
ದೇವದಾಸಿ ಹಾಗೂ ಮತ್ತಿತರೆ ಮಹಿಳೆಯರು ಸ್ತ್ರೀ ಶಕ್ತಿ ಸಂಘಗಳಲ್ಲಿ, ದಲಿತರು, ಕೂಲಿಕಾರರು, ರೈತರು ಬರಗಾಲ, ಕರೋನಾ ಮತ್ತು ಬೆಳೆಗಳ ಬೆಲೆ ಕುಸಿತ, ಉದ್ಯೋಗ ನಷ್ಠದಿಂದಾಗಿ ಸಾಲ ಬಾಧಿತರಾಗಿದ್ದು ಅವರ ಸಾಲ ಮನ್ನಾ ಮಾಡಲು ಕೋರಿದರೂ ನಿರಾಕರಿಸಿ ದೇಶದ ದೊಡ್ಡ ದೊಡ್ಡ ಕಂಪನಿಗಳ 17 ಲಕ್ಷ ಕೋಟಿ ಸಾಲ ಮನ್ನಾ ಮಾಡುತ್ತಾರೆ.
ಬಡವರ ಮೇಲೆ ತೆರಿಗೆ ಹೇರಿ ದೊಡ್ಡ ದೊಡ್ಡ ಕಂಪನಿಗಳಿಗೆ ತೆರಿಗೆ ರಿಯಾಯಿತಿ ನೀಡಿದ್ದಾರೆ.
ಅಲ್ಲಿ ಇಲ್ಲಿ ಸಾಲ ಶೂಲ ಮಾಡಿ ಹೈನುಗಾರಿಕೆ ಮೂಲಕ ಸ್ವಾವಲಂಬಿ ಬದುಕನ್ನು ಕಂಡುಕೊಂಡ ಬಡವರ, ದಲಿತ ಮಹಿಳೆಯರ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಮತ್ತು ಆಹಾರದ ಹಕ್ಕಿನ ಮೇಲೆ ದಾಳಿ ನಡೆಸುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುತ್ತದೆ.
ದಲಿತರು, ಶೂದ್ರ ಸಮುದಾಯದ ಬಡವರು, ಮಹಿಳೆಯರಿಗೆ ಮೀಸಲಾತಿಯಡಿ ಸಾರ್ವಜನಿಕ ಶಿಕ್ಷಣದ ಮೂಲಕ ಶಿಕ್ಷಣವನ್ನು ಹಾಗೂ ಸಾರ್ವರಂಗದ ಉದ್ದಿಮೆಗಳಲ್ಲಿ ಉದ್ಯೋಗವನ್ನು ನೀಡುತ್ತಿದ್ದುದನ್ನು ಕಳಚಿ ಹಾಕಿ ಇವರಿಗೆ ಶಿಕ್ಷಣ ಹಾಗೂ ಉದ್ಯೋಗ ದೊರೆಯದಂತೆ ಮಾಡಲು ಅವುಗಳನ್ನು ಲೂಟಿಕೋರರ ಲೂಟಿಗೆ ತೆರೆಯಲು ಖಾಸಗೀಕರಿಸಲಾಗುತ್ತಿದೆ.
ಸಮಾನ ಹಕ್ಕುಗಳನ್ನು ಬಯಸುವ ದಲಿತರ ಮೇಲೆ ಮರ್ಯಾದೆ ಹತ್ಯೆ ಹೆಸರಿನ ಕೊಲೆಗಳ ಮೂಲಕ ಹಾಗೂ ಮತಾಂತರ ನಿಷೇಧದ ಮತ್ತು ಜಾನುವಾರು ಹತ್ಯೆ ನಿಷೇಧದ ಹೆಸರಿನಲ್ಲಿ ನಿರ್ಧಯವಾಗಿ ಧಾಳಿ ಮಾಡಲು ಕುಮ್ಮಕ್ಕು ನೀಡಲಾಗುತ್ತದೆ.
ಸಮಾಜ ಹಾಗೂ ದೇಶವನ್ನು ಕೋಮು ಆಧಾರದ ಮೇಲೆ ವಿಭಜಿಸಲು ಕ್ರಮವಹಿಸಲಾಗುತ್ತಿದೆ. ಅಲ್ಪ ಸಂಖ್ಯಾತರ ಮೇಲೆ ದ್ವೇಷವನ್ನು ಕಾರಲಾಗುತ್ತದೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವ ಮತ್ತು ದುರ್ಬಲರಿಗೆ ಸಾಮಾಜಿಕ ನ್ಯಾಯ ನೀಡುವ, ಎಲ್ಲ ಧರ್ಮೀಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡುವ ಮತ್ತು ಮತಾಂತರಕ್ಕೆ ಅವಕಾಶ ನೀಡುವ, ಅದೇ ರೀತಿ, ರಾಜಕೀಯ ಹಾಗೂ ಪ್ರಭುತ್ವದಿಂದ ಧರ್ಮವನ್ನು ಪ್ರತ್ಯೇಕಿಸುವ, ದೇಶದ ಸಂವಿಧಾನವನ್ನೇ ಬುಡ ಮೇಲು ಮಾಡಿ
ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳ ಹಾಗೂ ಮೇಲ್ಜಾತಿಗಳ ಹಿಂದುತ್ವ ವಾದಿ ಸರ್ವಾಧಿಕಾರ ಹೇರುವ, ಮನುವಾದವನ್ನು ಜಾರಿಗೊಳಿಸುವ, ಆ ಮೂಲಕ ದಲಿತರು,ಶೂದ್ರರು ಹಾಗೂ ಮಹಿಳೆಯರನ್ನು ಗುಲಾಮಗಿರಿಗೆ ತಳ್ಳುವ ದುರುದ್ದೇಶವಿರುವ ಅಪಾಯಕಾರಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ಬರದಂತೆ ತಡೆಯುವುದು ಅಗತ್ಯವಿದ್ದು ಅದಕ್ಕಾಗಿ ಬಿಜೆಪಿಯನ್ನು ಸೋಲಿಸಲು ಮತ್ತು ಲೂಟಿಕೋರ ಆರ್ಥಿಕ ನೀತಿಗಳ ವಿರುದ್ದ, ಪ್ರಜಾಪ್ರಭುತ್ವ ಹಾಗೂ ಕೋಮು ಸೌಹಾರ್ಧತೆಯ ರಕ್ಷಣೆಗಾಗಿ ಸಂಘಟಿತ ಹೋರಾಟವನ್ನು ಬಲಗೊಳಿಸಲು ಮತದಾರರಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮನವಿಮಾಡಿದ್ದಾರೆ.