ದಾವಣಗೆರೆ:ಸಾಹಿತ್ಯ ಕ್ಷೇತ್ರಕ್ಕೆ ಅನುಪಮವಾದ ಸೇವೆ ಸಲ್ಲಿಸುವ ಮೂಲಕ ನಾಡೋಜ ಡಾ.ಕಮಲಾ ಹಂಪನಾರವರು ಅಪರೂಪದ ಸಾಹಿತ್ಯ ಸ್ತ್ರೀ ರತ್ನ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಬಣ್ಣಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕಮಲಾ ಹಂಪನಾ ಅವರಿಗೆ ನುಡಿ ನಮನವನ್ನು ಸಲ್ಲಿಸಿ ಅವರು ಮಾತಾಡಿದರು. ಸುಮಾರು 50 ಕ್ಕೂ ಹೆಚ್ಚು ಮೌಲ್ವಿತ ಕೃತಿಗಳನ್ನು ರಚಿಸಿ ತಮ್ಮ ಸಾಧನೆಯನ್ನು ಮೆರೆದಿದ್ದಾರೆ. ಸಾಹಿತ್ಯಕ ಸೇವೆ, ಸಾಧನೆ, ಅನುಭವ ಹಾಗೂ ವಯಸ್ಸಿನಲ್ಲಿ ಶ್ರೇಷ್ಠತೆಯ ಪರಾಕಾಷ್ಠೆಯನ್ನು ತಲುಪಿದ್ದರು. ದಾವಣಗೆರೆಯೊಂದಿಗೆ ಅವರು ಅವಿನಾಭವ ಸಂಬಂಧವನ್ನೂ ಹೊಂದಿದ್ದರು. ಅಂತವರು ಅಗಲಿರುವುದು ಕನ್ನಡ ನಾಡಿಗೆ, ಸಾರಸ್ವತ ಲೋಕಕ್ಕೆ ಭರಿಸಲಾರದ ನಷ್ಟವನ್ನುಂಟು ಮಾಡಿದೆ ಎಂದು ಬಿ.ವಾಮದೇವಪ್ಪ ಹೇಳಿದರು.
ವಿಶ್ರಾಂತ ಉಪನ್ಯಾಸಕ ಸುಭಾಷ್ ಚಂದ್ರ ಬೋಸ್ ಚಂದ್ರ ಮಾತನಾಡುತ್ತಾ ಕಮಲಾ ಹಂಪನಾ ಎಂಬ ಶಿರೂನಾಮೆಯೇ ವಿಶೇಷವಾಗಿದೆ. ಕಮಲಾ ಹಿಂದೂ ಧರ್ಮಕ್ಕೆ ಸೇರಿದವರು ಹಾಗೂ ಹಂಪ ನಾಗರಾಜಯ್ಯ ಅವರು ಜೈನ ಧರ್ಮಕ್ಕೆ ಸೇರಿದವರು. ಅವರಿಬ್ಬರ ಸಮ್ಮಿಲನವು ಎರಡು ಸಾಹಿತ್ಯ ಪ್ರತಿಭೆಗಳ ಸಮ್ಮಿಲನವಾಯಿತು. ಜಾತಿ ಧರ್ಮ ಮೀರಿ ಈರ್ವರೂ ಸಾಹಿತ್ಯಕ ಕೃಷಿ ಮಾಡಿ ಸಾಹಿತ್ಯ ವಲಯದಲ್ಲಿ ಅಪರೂಪದ ಸಾಧನೆ ಮಾಡಿ ಸೈ ಎನಿಸಿಕೊಂಡರು. ಶತಮಾನದ ಅಂಚಿನವರೆಗೆ ತುಂಬು ಬದುಕನ್ನು ಸಾಗಿಸಿ ಇಹಲೋಕ ತ್ಯಜಿಸಿದ್ದಾರೆ ಎಂದು ಬಣ್ಣಿಸಿದರು.
ದಾವಣಗೆರೆ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ರವಿಚಂದ್ರರವರು ನಾಡೋಜ ಡಾ.ಕಮಲಾ ಹಂಪನಾ ಅವರ ಒಡನಾಟವನ್ನು ಸ್ಮರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಹಾಗೂ ಕಾರ್ಮಿಕ ನಾಯಕ ಕೆ.ರಾಘವೇಂದ್ರ ನಾಯರಿ ಪ್ರಾಸ್ತಾವಿಕವಾಗಿ ಮಾತನಾಡಿ ನಾಡೋಜ ಕಮಲಾ ಹಂಪನಾ ಅವರ ಸಾಹಿತ್ಯಿಕ ಸೇವೆಯನ್ನು ಗುರುತಿಸಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ೨೦೦೩ ರಲ್ಲಿ ಮುಡುಬಿದಿರೆಯಲ್ಲಿ ನಡೆದ ೭೧ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವನ್ನು ನೀಡಿತ್ತು. ಕಮಲಾ ಹಂಪನಾರವರು ಕನ್ನಡ ನಾಡಿನ ಅಗ್ರಗಣ್ಯ ಲೇಖಕರಾಗಿ, ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ವಿಮರ್ಶಕರಾಗಿ ಹಾಗೂ ಪ್ರಾಚೀನ ಅರ್ವಾಚೀನ ಕೃತಿಗಳ ಅನುಸಂಧಾನಕಾರರಾಗಿ ಬಹು ಆಯಾಮಗಳಲ್ಲಿ ಸಾಹಿತ್ಯಕ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಮಾಡಿದ್ದರು ಎಂದು ಕೆ.ರಾಘವೇಂದ್ರ ನಾಯರಿ ಸ್ಮರಿಸಿದರು.
ದಾವಣಗೆರೆ ತಾಲ್ಲೂಕು ಸುಮತಿ ಜಯಪ್ಪ, ಸತ್ಯಭಾಮ ಮಂಜುನಾಥ್, ಎಸ್.ಎಂ.ಮಲ್ಲಮ್ಮ, ಲೇಖಕ ನಾಗರಾಜ್ ಸಿರಿಗೆರೆ ಕಮಲಾ ಹಂಪನಾ ಅವರನ್ನು ಸ್ಮರಿಸಿ ನುಡಿನಮನವನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಮಂಜಣ್ಣ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ ದಿಳ್ಯಪ್ಪ, ರೇವಣಸಿದ್ಧಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿಗಳಾದ ಸಿ ಜಿ ಜಗದೀಶ್ ಕೂಲಂಬಿ, ಪತ್ರಕರ್ತ ಜಿಗಳಿ ಪ್ರಕಾಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್ ಎಂ ಮಲ್ಲಮ್ಮ, ಬೈರೇಶ್ವರ, ಸತ್ಯಭಾಮಾ ಮಂಜುನಾಥ್, ರುದ್ರಾಕ್ಷಿ ಭಾಯಿ, ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ದಾಗಿನಕಟ್ಟೆ ಪರಮೇಶ್ವರಪ್ಪ, ನಾಗರಾಜ್ ಸಿರಿಗೆರೆ, ಬೇತೂರು ಎಂ ಷಡಾಕ್ಷರಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ ಶಿವಶಂಕರ್, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಉಪಾಧ್ಯಕ್ಷ ಆರ್.ಆಂಜನೇಯ, ಖಜಾಂಚಿ ಕೆ.ವಿಶ್ವನಾಥ್ ಬಿಲ್ಲವ, ಕನ್ನಡಪರ ಸಂಘಟಕ ರಾಜೇಂದ್ರ ಬಂಗೇರ, ಶಿಕ್ಷಕಿ ಕೆ.ವೀಣಾ, ಸಾಹಿತಿ ಪಿ.ಜಯರಾಮನ್, ಹಾಲೇಶ್, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ್ ಅಂಗಡಿ, ಕರಿಬಸಪ್ಪ, ಬಸವರಾಜ್ ಹೆಚ್, ಹೆಚ್.ಎಲ್.ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕ ಸಾ ಪ ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್ ತಮ್ಮ ನುಡಿ ನಮನದೊಂದಿಗೆ ಧನ್ಯವಾದ ಸಲ್ಲಿಸಿದರು.