ಶರಣ ಸಂಸ್ಕೃತಿಯ ಅರಿವು ಮುಂದಿನ ಪೀಳಿಗೆಗೆ ತಿಳಿಯಬೇಕು, ಸತ್ಯದರ್ಶನದ ಅನಾವರಣ ಆಗಬೇಕು, ಎಂಬ ಕಾರಣದಿಂದ ಹುಟ್ಟಿದ ಸಾಹಿತ್ಯವೇ ವಚನ ಸಾಹಿತ್ಯ. ವಚನ ಸಾಹಿತ್ಯವು ಅರಿವು ಅನುಭಾವದಿಂದ ಕೂಡಿದ ಸಾಹಿತ್ಯವಾಗಿದೆ. ಶರಣ ಸಂಸ್ಕೃತಿಗೆ, ವಚನ ಸಾಹಿತ್ಯಕ್ಕೆ ಬುನಾದಿ ಹಾಕಿದವರು ವಿಶ್ವಗುರು ಬಸವಣ್ಣನವರಾಗಿದ್ದಾರೆ.
ಇಂತಹ ಶರಣ ಸಂಸ್ಕೃತಿಯನ್ನು, ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವ ತಿಳಿಸುವ ನಿಟ್ಟಿನಲ್ಲಿ ಮಠಗಳ ಪಾತ್ರ ಅನನ್ಯವಾಗಿದೆ.
ಸುತ್ತೂರು ಮಠವು ಸಹ ಶರಣ ಸಂಸ್ಕೃತಿಯನ್ನು ತಿಳಿಸುವ ಬೆಳೆಸುವ ಕಾರ್ಯದಲ್ಲಿ ; ತನ್ನದೇ ಆದ ಸೇವೆಯನ್ನು ನಿರ್ವಹಿಸಿದೆ ನಿರ್ವಹಿಸುತ್ತಿದೆ. ಸುತ್ತೂರು ಮಠವು ಭವ್ಯ ಪರಂಪರೆಯ ಇತಿಹಾಸ ಹೊಂದಿರುವ ಮಠವಾಗಿದೆ. ಸುತ್ತೂರು ಮಠಕ್ಕೆ ಹೊಸ ಸ್ವರೂಪವನ್ನು ಕೊಟ್ಟು , ಸುತ್ತೂರು ಮಠದ ಶಿಲ್ಪಿಗಳೆಂದೆ ಹೆಸರಾದವರು ಪೂಜ್ಯ ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರಾಗಿದ್ದಾರೆ.
ಶರಣ ಸಂಸ್ಕೃತಿಯನ್ನು ನಾಡಿನ ಎಲ್ಲೆಡೆ ಹಸಿರಿನಂತೆ ಪಸರಿಸಬೇಕು, ಜನರು ಶರಣ ಸಂಸ್ಕೃತಿಯ ನೆರಳಿನಲ್ಲಿ ಶಾಂತಿ ಸಮೃದ್ಧಿ ಸಂತೃಪ್ತಿ ನೆಮ್ಮದಿಯಿಂದ ಇರಬೇಕು, ಸತ್ಯದರ್ಶನವನ್ನು ಮಾಡಿಕೊಂಡು ಜೀವನದ ಮಹತ್ವವನ್ನು ಕಂಡುಕೊಳ್ಳಬೇಕು ಎಂಬುದು ಶ್ರೀಗಳ ಇಚ್ಛೆ ಮತ್ತು ಆಶಯವಾಗಿತ್ತು.
ವಚನಗಳನ್ನು ಅಧ್ಯಯನ ಮಾಡಿದರೆ ಶರಣ ಸಂಸ್ಕೃತಿಯನ್ನು ತಿಳಿಯಲು ಸಾಧ್ಯವಾಗುತ್ತದೆ. ಹಾಗಾಗಿ ಮಕ್ಕಳಲ್ಲಿ ಮೊದಲು ಅಕ್ಷರದ ಅರಿವು ಬೇಕು. ಬಡತನದ ಬೇಗುದಿಯಲ್ಲಿ ಅಕ್ಷರಭ್ಯಾಸದಿಂದ ವಿಮುಖ ಆದವರಿಗೆ ; ಅಕ್ಷರ ಅರಿವು ಆಶ್ರಯ, ಅನ್ನ ದಾಸೋಹವನ್ನು ಕೊಡಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿ ನಿಲಯವನ್ನು ತೆರೆಯುತ್ತಾರೆ. ಯಾವುದೇ ಜಾತಿ ಮತ ಪಂಥವೆನ್ನದೆ ಎಲ್ಲಾ ಸಮುದಾಯದ ಮಕ್ಕಳಿಗೂ ಪ್ರಸಾದ ನಿಲಯದಲ್ಲಿ ಅವಕಾಶ ಕೊಡುತ್ತಾರೆ. ಸಮ ಸಮಾಜವನ್ನು ರೂಪಿಸುವುದು ಸಹ ಶರಣ ಸಂಸ್ಕೃತಿಯ ಒಂದು ಭಾಗ ಮತ್ತು ಉದ್ದೇಶವು ಆಗಿತ್ತು.
ಇಂದು ಮಠಕ್ಕೆ ಇರುವಷ್ಟು ಆರ್ಥಿಕ ವ್ಯವಸ್ಥೆ ಅಂದು ಇರಲಿಲ್ಲ. ಮಠವನ್ನು ವಿದ್ಯಾರ್ಥಿ ನಿಲಯವನ್ನು ನಿರ್ವಹಿಸುವುದು ಸಾಮಾನ್ಯ ಕೆಲಸವಾಗಿರಲಿಲ್ಲ.
ಒಮ್ಮೆ ಸಾಹಿತಿಗಳದ ಕೊ ಚೆನ್ನಬಸಪ್ಪ ಅವರು 1954 -55 ರ ಸಮಯದಲ್ಲಿ ನಾನು ಮೈಸೂರು ಮಠದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳನ್ನು ಭೇಟಿಯಾಗಿದ್ದೆ ಎಂದು, ಶ್ರೀಗಳವರೊಂದಿಗೆ ನಡೆದ ಪ್ರಸಂಗವನ್ನು ಹೀಗೆ ಹಂಚಿಕೊಳ್ಳುತ್ತಾರೆ – ಬುದ್ದಿ ನೀವು ಇದನ್ನೆಲ್ಲ ಹೇಗೆ ನಿಭಾಯಿಸುತ್ತಿದ್ದರೆಂಬುದು ನನಗೆ ಆಶ್ಚರ್ಯದ ಸಂಗತಿಯಾಗಿದೆ ಎಂದು ಮಾತನಾಡುತ್ತ ಕುಳಿತಿದ್ದೆ. ಮಧ್ಯದಲ್ಲಿ ಅವರ ಶಿಷ್ಯರೊಬ್ಬರು ಬಂದು ಸ್ವಾಮಿಗಳ ಕಿವಿಯಲ್ಲಿ ಏನೋ ಪಿಸುಗುಟ್ಟಿದರು. ಸ್ವಾಮಿಗಳು ನನ್ನೊಡನೆ ಮಾತನಾಡುವುದನ್ನು ನಿಲ್ಲಿಸಿ : ನಾಳೆವರೆಗೆ ಇರುತ್ತೀರಾ ಚೆನ್ನಬಸಪ್ಪನೋರೆ ? ಎಂದರು. ಇದ್ದಕ್ಕಿದ್ದ ಹಾಗೆ ಎದ್ದು ನಿಂತರು. ಇರ್ತೀನಿ ಬುದ್ದಿ ಎಂದೆ. ಹಾಗಾದರೆ ಬೆಳಗ್ಗೆ 9 ಗಂಟೆಗೆ ಬನ್ನಿ , ಇಲ್ಲೇ ಬೆಳಗಿನ ಪ್ರಸಾದ ಮಾಡಿ ಎಂದವರು : ಈಗ ಸ್ವಲ್ಪ ಅರ್ಜೆಂಟ್ ಕೆಲ್ಸ ಇದೆ, ಹೋಗಬೇಕಾಗಿದೆ ಎಂದು ಎದ್ದೇಬಿಟ್ಟರು.
ನಾನು ಮರುದಿನ ಬೆಳಗ್ಗೆ ಹೋದೆ. ಮಠದ ಮುಂದೆ ಹತ್ತಾರು ಗಾಡಿಗಳು ನಿಂತಿದ್ದವು. ನಾನು ಒಳಗೆ ಹೋಗಿ ಕುಳಿತೆ. ಸ್ವಾಮಿಗಳು ದಯಮಾಡಿಸಿದರು. ನಾನು : ‘ಯಾಕೆ ಬುದ್ದೀ ನಿನ್ನೆ ಅಷ್ಟೊಂದು ಅವಸರದಿಂದ ಎದ್ದುಬಿಟ್ಟಿರಿ? ಯಾರಿಗಾದರೂ ಆಪತ್ತು ಬಂದಿತ್ತೊ ? ಎಂದೆ. ಇವೊತ್ತಿನ ಊಟಕ್ಕೆ ಹಾಸ್ಟೆಲಿನಲ್ಲಿ ಅಕ್ಕಿ ಇಲ್ಲ ಅಂತ ಹೇಳಿದ್ರು, ಕೂಡಲೆ ಗಾಡಿಕಟ್ಟಿಸಿ ಶ್ರೀರಂಗಪಟ್ಟಣದ ಕಡೆ ಭಿಕ್ಷಾಟನೆಗೆ ಹೋಗಿದ್ದೆ’ ಎಂದರು ಎಂಬುದನ್ನು ವಿವರಿಸುತ್ತಾರೆ. ಹೀಗೆ ಶ್ರೀಗಳು ಜೋಳಿಗೆ ಹಿಡಿದು ಊರೂರು ಸುತ್ತಿ , ಭಿಕ್ಷಾಟನೆ ಮಾಡಿತಂದ ! ಕಾಣಿಕೆ ದವಸ ದಾನ್ಯದಿಂದ ವಿದ್ಯಾರ್ಥಿಗಳನ್ನು ಪೋಷಿಸುತ್ತಿದ್ದರು.
ಶ್ರೀಗಳಿಗೆ ತ್ರಿಕಾಲವು ಲಿಂಗ ಪೂಜೆ ಶಿವಯೋಗ ಎಷ್ಟು ಮುಖ್ಯವಾಗಿತ್ತೋ, ಹಾಗೇ ಮಕ್ಕಳ ಮಕ್ಕಳ ಯೋಗ ಕ್ಷೇಮದ ಕುರಿತು ಜಾಗೃತಿವಹಿಸುವುದು, ಯಾವ ಮಕ್ಕಳು ಹಸಿವಿನಿಂದ ಇರಬಾರದು, ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎನ್ನುವುದನ್ನು ದಿನ ನಿತ್ಯದ ಕಾಯಕವಾಗಿತ್ತು. ಒಮ್ಮೆ ಯಾವುದೇ ದವಸ ದಾನ್ಯಗಳು ಇಲ್ಲದಾಗ, ಆರ್ಥಿಕ ವ್ಯವಸ್ಥೆ ಕುಂಟಿತವಾದಗ ; ಇಷ್ಟಲಿಂಗವನ್ನು ಇಟ್ಟುಕೊಳ್ಳುವ ಬಂಗಾರದ ಕರಡಿಗೆ ( ಚೌಕ ) ಯನ್ನು ಮಾರಿ ವಿದ್ಯಾರ್ಥಿನಿಲಯವನ್ನು ನಿರ್ವಹಿಸುತ್ತಾರೆ. ಮಠದ ವಿದ್ಯಾರ್ಥಿ ನಿಲಯವು ಲಕ್ಷಾಂತರ ಬಡಮಕ್ಕಳ ಭವಿಷ್ಯವನ್ನು ರೂಪಿಸಿದೆ.
ಈ ರೀತಿಯಾಗಿ ಮಕ್ಕಳಗೆ ಅಕ್ಷರ ದಾಸೋಹವನ್ನು ಮಾಡುತ್ತ, ಮಕ್ಕಳಿಗೆ ಪ್ರತಿನಿತ್ಯ ಶರಣರ ಜೀವನ ಚರಿತ್ರೆಗಳನ್ನು, ವಚನಗಳನ್ನು, ನೀತಿ ಕಥೆಗಳನ್ನು ಹೇಳುತ್ತಾ, ಶರಣ ಸಂಸ್ಕೃತಿಯ ಜ್ಞಾನ ದಾಸೋಹವನ್ನು ಮಾಡಿದವರಗಿದ್ದಾರೆ ಸುತ್ತೂರು ಶ್ರೀಗಳು.
ಮಕ್ಕಳಲ್ಲಿ ! ವಿದ್ಯಾರ್ಥಿ ನಿಲಯಗಳ ಮೂಲಕ ವಚನ ಸಾಹಿತ್ಯವನ್ನು ಸಂಸ್ಕೃತಿಯನ್ನು ಬಿತ್ತುವ ಕೆಲಸ ಮಾಡಿದರೆ, ನಗರ ಗ್ರಾಮಗಳಲ್ಲೆಲ್ಲಾ ವಚನ ಸಾಹಿತ್ಯ ಪಸರಿಸುವ ಕೆಲಸ ಆಗಬೇಕೆಂದು ” ವಚನ ಸಾಹಿತ್ಯ ಪರಿಷತ್ತು ” ಸಮಿತಿಯನ್ನು ರಚಿಸಿ, ಆ ಮೂಲಕ ಶರಣ ಸಂಸ್ಕೃತಿಯನ್ನು ತಿಳಿಸುವ ಕಾರ್ಯವನ್ನು ಮಾಡಿದ್ದಾರೆ. ಶ್ರೀಗಳು ರೂಪಿಸಿದ ವಚನ ಸಾಹಿತ್ಯ ಪರಿಷತ್ತು ಇಂದಿಗೂ ಜನ ಮಾನಸದಲ್ಲಿ ಅರಿವಿನ ಬೀಜ ಬಿತ್ತುವ ಕಾರ್ಯವನ್ನು ಮಾಡುತ್ತಿದೆ. ಇಂದಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಸಹ ಹಿರಿಯ ಶ್ರೀಗಳ ಆಶಯದಂತೆ ಶರಣ ಸಂಸ್ಕೃತಿಗೆ ಒತ್ತನ್ನು ಕೊಟ್ಟು, ಶರಣ ಸಂಸ್ಕೃತಿಯನ್ನು ಬಿತ್ತರಿಸುವ ಕೃತಿಗಳನ್ನು, ಮಹಾಮನೆ ಎನ್ನುವ ಮಾಸ ಪತ್ರಿಕೆಯನ್ನು ಪ್ರಕಟಿಸುವುದರೊಂದಿಗೆ, ವಿದ್ಯಾರ್ಥಿ ನಿಲಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ಶರಣ ಸಂಸ್ಕೃತಿಗೆ ಜೀವನವನ್ನು ಮೂಡುಪಾಗಿಟ್ಟ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು ನಮ್ಮೆಲ್ಲರಿಗೂ ಆದರ್ಶಪ್ರಾಯಾರಾಗಿದ್ದಾರೆ. ಹಾಗಾಗಿ ಶ್ರೀಗಳ ಜನ್ಮ ದಿನವನ್ನು ಭಕ್ತರು ” ವಚನ ಸಂಸ್ಥಾಪನ ” ದಿನವನ್ನಾಗಿ ಆಚರಿಸುತ್ತಿದ್ದಾರೆ. ಇದೆ ಆಗಸ್ಟ್ 29 ರಂದು ಶ್ರೀಗಳ 110 ನೇ ಜನ್ಮದಿನಾಚರಣೆ ಆಗಿರುವುದರಿಂದ, ನಾಡಿನೆಲ್ಲಡೆ ವಚನ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
🖋️:
ಶಿವಪ್ರಸಾದ ಕರ್ಜಗಿ.
ಬಸವತತ್ವ ಚಿಂತಕರು, ಕಾರ್ಯಕಾರಿ ಸಮಿತಿ ಸದಸ್ಯರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ.