ವಿಜಯಪುರ : ವಿಜಯಪುರ ನಗರದಲ್ಲಿ ಸೋಮವಾರ ರೈತ ಭಾರತ ಪಕ್ಷದಿಂದ ವಿಜಯಪುರ ಜಿಲ್ಲೆಗೆ 371ಜೆ ಕಲ್ಯಾಣ ಕರ್ನಾಟಕ ಮೀಸಲಾತಿಗಾಗಿ ಆಗ್ರಹಿಸಿ ನಗರದ ಜಲನಗರ ಬುದ್ಧವಿಹಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಕುದುರೆ ಟಾಂಗಾಗಳಿಗೆ ಜಿಲ್ಲೆಯ ಸಚಿವರು, ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ತಿನ ಸದಸ್ಯರ ಹೆಸರುಗಳುಳ್ಳ ಬಿತ್ತಿ ಪತ್ರಗಳನ್ನು ಕಟ್ಟಿ ಜಿಲ್ಲೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಿಗೆ ವಿನೂತನ ಪ್ರತಿಭಟನೆ ಮಾಡಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜನಪ್ರತಿನಿಧಿಗಳ ಹೆಸರುಗಳುಳ್ಳ ಬಿತ್ತಿಪತ್ರಗಳನ್ನು ಸುಟ್ಟು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಮೆರವಣಿಗೆಯುದ್ದಕ್ಕೂ ವಿಜಯಪುರಕ್ಕೆ 371ಜೆ ಮೀಸಲಾತಿ ವಿರೋಧಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಜಿಲ್ಲೆಯ ಸಚಿವರು, ಸಂಸದರು ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಪ್ರತಿಭಟನಾ ಮೆರವಣಿಗೆಯು ಕೇಂದ್ರ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿಗಳು, ಪ್ರಧಾನ ಮಂತ್ರಿ, ಕೇಂದ್ರ ಗೃಹಮಂತ್ರಿ, ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ದೊರಕಬೇಕಾಗಿದ್ದ 371ಜೆ ಮೀಸಲಾತಿ ತಪ್ಪಿದ್ದಕ್ಕೆ ಜಿಲ್ಲೆಯನ್ನು ಪ್ರತಿನಿಧಿಸುವ ಶಾಸಕರು, ಸಂಸದರು ಹಾಗೂ ಸಚಿವರು ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಧ್ವನಿ ಎತ್ತದೆ ಇರುವುದು ಕಾರಣವಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಸ್ವಾರ್ಥ ರಾಜಕಾರಣದಲ್ಲಿ ಮುಳುಗಿರುವುದರಿಂದ ಜಿಲ್ಲೆಗೆ ದೊಡ್ಡ ಅನ್ಯಾಯವಾಗಿದೆ. ನಿಮ್ಮ ಕುತಂತ್ರವನ್ನು ಪ್ರಜ್ಞಾವಂತ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕೂಡಲೇ ಎಡಬಿಡಂಗಿ ನಾಟಕಗಳನ್ನು ಬಿಡಿ ವಿಜಯಪುರ ಜಿಲ್ಲೆಗೆ 371ಜೆ ಕೊಡಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಪಕ್ಷದ ಮುಖಂಡರಾದ ಅಂಬಾಜಿ ನಾರಾಯಣಕರ, ಸಿದ್ದಪ್ಪ ಪೂಜಾರಿ, ರಮೇಶ ಬಿರಾದಾರ, ಹೊನ್ನಪ್ಪ ಏಗೆಪ್ಪ ವಾಗ್ಮೋರೆ, ಮಲ್ಲೇಶಿ ದೇಸಾಯಿ, ದಾವಸಲಾಬ ಕೊರಬು, ಗಂಗಾ ಮೋರೆ, ಶಂಕರ ಪರನಾಕರ, ಶಿವರಾಜ ಕರಾಳ, ರೇಣುಕಾ ಪಾಟೀಲ, ಸಿದ್ಧರಾಮ ಚಟ್ನಿ, ವನಿತಾ ರಾಜನ ಧೋಂಜೆ, ಶಂಕ್ರೆಪ್ಪ ಸುರಪುರ, ಭೀಮು ಬಾಗೇವಾಡಿ, ಪಾರ್ವತಿ ಮಾದರ, ಪವಿತ್ರಾ ಮನಗೂಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.