ದಾವಣಗೆರೆ: ದಾವಣಗೆರೆಯ ಪ್ರಸಿದ್ಧ ಗ್ರಾಮದೇವತೆ ಹಾಗೂ ಅಪಾರ ಭಕ್ತರ ಆರಾಧ್ಯ ದೈವವಾದ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದ ಪೂಜಾರಿಯೇ ದೇವಿಯ ಚಿನ್ನಾಭರಣಗಳನ್ನು ಕದ್ದು ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ದೇವಸ್ಥಾನದ ಪಾವಿತ್ರ್ಯತೆ ಕಾಯಬೇಕಾದ ಪೂಜಾರಿ ಆಕಾಶ್, ಈ ಕೃತ್ಯ ಎಸಗಿದ್ದು ಭಕ್ತರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ದೇವಿಗೆ ಭಕ್ತರು ಅರ್ಪಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಒಡವೆಗಳನ್ನು ಪೂಜಾರಿ ರಹಸ್ಯವಾಗಿ ಕಳವು ಮಾಡಿ, ಖಾಸಗಿಯಾಗಿ ಮಾರಾಟ ಮಾಡಿಕೊಂಡಿದ್ದನು. ದೇವಸ್ಥಾನದ ಲೆಕ್ಕಪತ್ರ ಹಾಗೂ ಒಡವೆಗಳ ಪರಿಶೀಲನೆ ವೇಳೆ ಈ ವಿಷಯ ತಿಳಿದುಬಂದಿದ್ದು, ಸ್ಥಳೀಯವಾಗಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆ ತಿಳಿಯುತ್ತಿದ್ದಂತೆ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ನ ಪ್ರಮುಖರೂ ಆದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃತ್ಯ ಎಸಗಿದ ಪೂಜಾರಿಗೆ ಖಡಕ್ ವಾರ್ನಿಂಗ್ ನೀಡಿರುವ ಅವರು, ದೇವಿಯ ಪ್ರತಿಯೊಂದು ಚಿನ್ನಾಭರಣವನ್ನೂ ತಕ್ಷಣವೇ ಮರಳಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ದೇವಿಯ ಆಭರಣಗಳನ್ನು ಮರಳಿ ವಶಕ್ಕೆ ಪಡೆಯಲು ಟ್ರಸ್ಟ್ ಕಡೆಯಿಂದ ಗಡುವು ನೀಡಲಾಗಿದ್ದು, ತಪ್ಪಿತಸ್ಥ ಪೂಜಾರಿ ವಿರುದ್ಧ ಕಠಿಣ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ. ಒಂದು ವೇಳೆ ಆಭರಣಗಳನ್ನು ಹಿಂತಿರುಗಿಸದಿದ್ದರೆ ಪೊಲೀಸರಿಗೆ ದೂರು ನೀಡಿ ಕಾನೂನು ಸಮರ ಕಾಯ್ದುಕೊಳ್ಳಲಾಗುವುದು ಎಂದು ಟ್ರಸ್ಟ್ ಮಂಡಳಿ ಎಚ್ಚರಿಸಿದೆ.

