Homeಸಂಸ್ಕೃತಿರಂಗ ಕಲೆಪ್ರತಿಭೆಗಳು ಅರಳಿ ಜನಮನ ಮಿಡಿದ "ಸಂಪತ್ತಿಗೆ ಸವಾಲ್" ನಾಟಕ.

ಪ್ರತಿಭೆಗಳು ಅರಳಿ ಜನಮನ ಮಿಡಿದ “ಸಂಪತ್ತಿಗೆ ಸವಾಲ್” ನಾಟಕ.


ದಾವಣಗೆರೆ:ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ, ಇದರ ನಿರ್ದೇಶಕರಾಗಿ ಮಲ್ಲಿಕಾರ್ಜುನ ಕಡಕೋಳ ರವರು ನೇಮಕಗೊಂಡ ನಂತರ, ವೃತ್ತಿ ರಂಗಭೂಮಿಗೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳು ಆಯೋಜನೆಗೊಂಡು ಯಶಸ್ವಿಯಾದವು. ಡಾ. ರಾಜಪ್ಪ ದಳವಾಯಿ ವಿರಚಿತ “ಪ್ರತಿ ಗಂಧರ್ವ” ಪ್ರಥಮ ನಾಟಕ ವಿನೂತನ ಪ್ರಯೋಗದ ನಂತರ, ವೃತ್ತಿ ರಂಗಭೂಮಿಯ ಹೆಸರಾಂತ ನಾಟಕಕಾರ, ಕವಿ ಪುಂಡಲೀಕ ಬಸವನಗೌಡ ಧುತ್ತರಗಿ ರಚನೆಯ, “ಸಂಪತ್ತಿಗೆ ಸವಾಲ್” ನಾಟಕವನ್ನು ದಾವಣಗೆರೆಯಲ್ಲಿ ಕ್ಯಾಂಪ್ ಮಾಡಿದ್ದ, ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟಕ ಸಂಘ ಕಮತಗಿ ಕಂಪನಿಯ, ಯುವ ಕಲಾ ತಂಡಕ್ಕೆ ನಟ, ನಿರ್ದೇಶಕ, ಸಂಘಟಕ ಕೆ. ಎಸ್. ಡಿ. ಎಲ್. ಚಂದ್ರುರವರು, ತಿಂಗಳೊ ಪ್ಪತ್ತಿನಲ್ಲಿ ಆಧುನಿಕ ಸ್ಪರ್ಶದೊಂದಿಗೆ
(ತಾಲೀಮು ನಡೆಸಿ) ನಿರ್ದೇಶನ ನೀಡಿ, ಸೆಪ್ಟೆಂಬರ್ 25 ರಿಂದ ಪ್ರದರ್ಶನ ಆರಂಭಿಸಿದ್ದು, ಹೊಸ ತಲೆಮಾರಿಗೆ ವಿನೂತನ ನಾಟಕವಾಗಿ ಯಶಸ್ವಿ ಪ್ರದರ್ಶನ ಕಾಣುತ್ತ, ಜನಮನ ಸೆಳೆಯುತ್ತಿರುವುದು ವೃತ್ತಿ ರಂಗಭೂಮಿ ರಂಗಾಯಣದ ಪ್ರಯತ್ನ ಸಫಲಗೊಂಡಂತಾಗಿದೆ.
ಭದ್ರಿ ಹಾಗೂ ಸಿದ್ದ ಸೋದರರಿಬ್ಬರೂ ತಾಯಿ ಸಂಗವ್ವನ ಮಕ್ಕಳು, ಅಣ್ಣ ಸಿದ್ದ ಹಾಗೂ ತಾಯಿ ಸಾಹುಕಾರ ಮನೆಯ ಜೀತದಾಳುಗಳಾಗಿ ದುಡಿಯುವ ಮುಗ್ಧ ಜೀವಿಗಳು, ಭದ್ರಿ ನ್ಯಾಯದ ಪರ ಅನ್ಯಾಯದ ವಿರುದ್ಧ ಸಿಡಿದೇಳುವ ಜನನಾಯಕ. ಸಿದ್ಧನ ಪತ್ನಿಯಾಗಿ ಬಂದ ಪಾರ್ವತಿ, ಭದ್ರಿಗೆ ಹಾಲು ಕುಡಿಸಿ ಮಗನ ಪ್ರೀತಿಯನ್ನು ಉಣಿಸಿದವಳು, ಹಣದ ಅಹಂಕಾರ, ಸಂಪತ್ತಿನ ಸೊಕ್ಕಿನಿಂದ ಮೆರೆಯುವ ಸಾಹುಕಾರ ಮರಿಯಪ್ಪ, ಭದ್ರನ ವಿರುದ್ಧ ಸದಾಕಿಡಿ ಕಾರುತ್ತಿರುತ್ತಾನೆ. ಸಾಹು ಕಾರಣ ತಾಳಕ್ಕೆ ಕುಣಿಯುವ ಕುಲಕರ್ಣಿ ವೆಂಕಪ್ಪ, ಊರಿನವರನ್ನೆಲ್ಲ ಕೀಳಾಗಿ ಕಾಣುವ ಗಯ್ಯಾಳಿ ಮಗಳು ದುರ್ಗಿ, ಭದ್ರಿಯ ಜೊತೆಗೆ ಸದಾ ಕಾದಾಡುತ್ತ ಒಂದೊಮ್ಮೆ ಆತನ ಗಂಡಸ್ತನಕ್ಕೆ ಸವಾಲಾಕಿ, ಮುಂದಳೆಯ ಕೂದಲನ್ನು ಕತ್ತರಿಸಿಕೊಂಡು ಅವಮಾನಿತಳಾಗಿ ಬಂದಿರುತ್ತಾಳೆ, ಅದೇ ಸಮಯದಲ್ಲಿ ಸಾಹುಕಾರ ಸಿದ್ದನ ಪತ್ನಿಯ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿ ಭದ್ರನಿಂದ ಪೆಟ್ಟು ತಿಂದು ಪಾರಾಗಿರುತ್ತಾನೆ, ಇದೇ ಘಟನೆಯನ್ನು ನೆಪ ಮಾಡಿಕೊಂಡು ಭದ್ರಿಯ ಮನೆಗೆ ಹೋಗಿ ತನ್ನ ಮಗಳ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದನೆಂದು ಸುಳ್ಳು ಆರೋಪಹೊರಿಸಿ ಬರುತ್ತಾನೆ, ಇದನ್ನೇ ನಿಜವೆಂದು ನಂಬಿದ ಮನೆಯವರು ಭದ್ರಿಯನ್ನು ಮನೆ ಬಿಟ್ಟು ಕಳಿಸುತ್ತಾರೆ.
ಸಿಡಿದೆದ್ದ ಭದ್ರಿ ಸುಳ್ಳು ಆರೋಪ ನಿಜ ಮಾಡಲು ಸಾಹುಕಾರನ ಮನೆಗೆ ಬಂದಾಗ, ಸಾಹುಕಾರ ಭದ್ರಿ ಯತ್ತ ಬಂದೂಕನ್ನು ಗುರಿ ಮಾಡುತ್ತಿರುವಾಗಲೇ, ಭದ್ರಿ ದುರ್ಗಿಯನ್ನು ತನ್ನತ್ತ ಸೆಳೆದುಕೊಂಡು ಅಲ್ಲಿಂದ ಪಾರಾಗುತ್ತಾನೆ, ಆಗ ದುರ್ಗಿ ಭದ್ರಿಯ ನ್ಯಾಯ, ನೀತಿ ಹೃದಯವಂತಿಕೆ ಅರಿತು ಅವನಲ್ಲಿ ಅನುರಕ್ತಳಾಗಿ, ಪ್ರೀತಿಸಿ ಮದುವೆಯಾಗಲು ನಿರ್ಧರಿಸಿ ಭದ್ರಿಯನ್ನೂ ಒಪ್ಪಿಸುತ್ತಾಳೆ. ಇದರಿಂದ ಕುಪಿತಗೊಂಡ ಸಾಹುಕಾರ ತನ್ನ ಬಣವಿಗಳಿಗೆ ಭೈರನಿಂದ ಬೆಂಕಿ ಹಚ್ಚಿಸಿ, ಅದಕ್ಕೆ ಭದ್ರನೇ ಕಾರಣವೆಂದು ಪೊಲೀಸರಿಗೆ ದೂರು ನೀಡಿ ಭದ್ರಿಯನ್ನು ಜೈಲಿಗೆ ಕಳಿಸುತ್ತಾನೆ, ಇದರಿಂದ ಅಘಾತಗೊಂಡ ಸಂಗವ್ವ ಅಸುನೀಗುತ್ತಾಳೆ, ಭದ್ರಿಯನ್ನು ಬಂಧಿಸುವಾಗ ಬಿಡಿಸಿಕೊಳ್ಳಲು ಹೋದ ಪಾರ್ವತಿಗೆ ಪೊಲೀಸ್ ಅಧಿಕಾರಿ ಕಾಲಿನಿಂದ ಒದ್ದ ಪರಿಣಾಮ, ಗರ್ಭಿಣಿ ಪಾರ್ವತಿಯು ರಕ್ತಸ್ರಾವವಾಗಿ ವಂಶದ ಕುಡಿ ನಾಶವಾಗುತ್ತದೆ. ನಂತರ ಊರಿನವರ ಬೆದರಿಕೆಗೆ ಹೆದರಿ ಸಾಹುಕಾರನೇ ಭದ್ರಿಯನ್ನು ಜೈಲಿನಿಂದ ಬಿಡಿಸುತ್ತಾನೆ. ಭದ್ರಿ ದುರ್ಗಿಯನ್ನು ಮದುವೆಯಾಗಿ ಮನೆಗೆ ಬಂದಾಗ, ಸಾಹುಕಾರ ಅಣ್ಣನಿಂದಲೇ ತಮ್ಮನ ಕೊಲೆ ಮಾಡಿಸುವ ಸಂಚುಮಾಡಿ, ಗುಂಡಿಲ್ಲದ ಬಂದೂಕೆಂದು ಸಿದ್ಧನ ತಮ್ಮನಿಗೆ ಹೆದರಿಸಲು ಕೊಟ್ಟ ಬಂದೂಕಿನಿಂದ, ಸಿದ್ಧ ಭದ್ರಿಗೆ ಹಾರಿಸಿದ ಗುಂಡು, ದುರ್ಗಿಯ ಕೈಗೆ ತಾಗುತ್ತದೆ, ಆಗ ಅಲ್ಲಿಗೆ ಬಂದ ಸಾಹುಕಾರ ಇಷ್ಟೆಲ್ಲಾ ಅವಘಡಗಳಿಗೆ, ತನ್ನ ಸಂಪತ್ತಿನ ಅಹಂಕಾರವೇ ಕಾರಣವೆಂದು ಪಶ್ಚಾತ್ತಾಪ ಪಟ್ಟು, ಎಲ್ಲರ ಕ್ಷಮೆ ಯಾಚಿಸಿ ಭದ್ರಹಾಕಿದ “ಸಂಪತ್ತಿಗೆ ಸವಾಲ್ ” ಗೆ ಸೋಲನ್ನೊಪ್ಪಿ ಪರಿವರ್ತಿತನಾಗುತ್ತಾನೆ.
ಭದ್ರಿ ಪಾತ್ರದಲ್ಲಿ ಪಾಪು ಕಲ್ಲೂರ ದಿಟ್ಟವಾದ ಪಾತ್ರವನ್ನು ಗಟ್ಟಿಯಾಗಿ ನಿರ್ವಹಿಸುವಲ್ಲಿ ಯಶಸ್ಸು ಕಂಡಿದ್ದಾರೆ. ದುರ್ಗಿ ಸವಾಲಿನ ಗಯ್ಯಾಳಿ ಪಾತ್ರದಲ್ಲಿ ಕನಕಲಕ್ಷ್ಮಿ ಕಲ್ಲೂರ ಅದ್ಭುತವಾಗಿ ಅಭಿನಯಿಸಿ ವಿಶೇಷ ಗಮನ ಸೆಳೆದಿದ್ದಾರೆ. ಸಿದ್ದನಾಗಿ ರಿಯಾಜ್ ಕರಜಗಿ, ಪಾರ್ವತಿಯಾಗಿ ಹಿರಿಯ ನಟಿ ಜ್ಯೋತಿಮಂಗಳೂರು ಹಾಗೂ ಸಂಗವ್ವನಾಗಿ ತ್ರಿವೇಣಿ ಶಿಂಧೆ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಸಫಲರಾಗಿದ್ದಾರೆ, ಸಾಹುಕಾರ ಮರಿಯಪ್ಪನಾಗಿ ಸಂಕೇತ್ ಮಂಗಳೂರು, ವೆಂಕಪ್ಪ ಕುಲಕರ್ಣಿಯಾಗಿ ಆನಂದ ಪತ್ತಾರ್ ಪಾತ್ರಕ್ಕೆ ಮೆರಗು ತಂದು ಮಿಂಚಿದ್ದಾರೆ. ಚೆನ್ನಿ- ಮೇಘನಾ ನಾಕೋಡ, ಕೆಂಚಪ್ಪ-ಕುಮಾರ ಶಿರಸಿ,ಗುಂಡ-ಮೇಘರಾಜ್ ಪರಮೇಶ್ವರ್. ಭೈರ- ಚಂದ್ರು ಡಂಬರಹಳ್ಳಿ,ಇನ್ ಸ್ಪೆಕ್ಟರ್ -ಅರುಣ್ ಮುಧೋಳ್, ಪೊಲೀಸರು- ಆಕಾಶ ಪರಮೇಶ್ವರ್, ಚಂದ್ರು ಹುಬ್ಬಳ್ಳಿ ಇವರ ಪೋಷಕ ಪಾತ್ರಗಳು ನಾಟಕಕ್ಕೆ ಕಳೆಕಟ್ಟಿದವು. ಚಲನಚಿತ್ರ ಗೀತೆಗಳನ್ನು ಸಂದರ್ಭಕ್ಕನುಸಾರ ಅಳವಡಿಸಿರುವುದು,ಕೃತಕ ಎಮ್ಮೆಯ ಮೇಲೆ ಭದ್ರಿಯ ಪ್ರವೇಶ, ಕಾಲರ್ ಮೈಕ್ ಗಳು ಬಳಕೆ, ನಾಟಕದ ಸರಾಗ ಓಟಕ್ಕೆ ಪೂರಕವೆನಿಸಿದವು.
ರಾಘವೇಂದ್ರ ಶಿಂಧೆಯವರ ಕೀಬೋರ್ಡ್ ಗೆ, ಮುತ್ತುರಾಜ್ ಕಪ್ಪನಹಳ್ಳಿಯವರ ರಿದಂ ಪ್ಯಾಡ್ ಸಾಥ್ ನೀಡಿದ ಸಂಗೀತ ಸಂಯೋಜನೆ, ಆಕಾಶ್ ಪರಮೇಶ್ವರ್, ಬೆಳಕು ಮತ್ತು ಧ್ವನಿ, ಮಲ್ಲಪ್ಪ ಡಂಬರಹಳ್ಳಿ ವಸ್ತ್ರ ವಿನ್ಯಾಸ, ಆಕಾಶ್ ಬಿಜಾಪುರ್ ಅವರ ಪ್ರಸಾದನ, ನಾಟಕದ ಆಕರ್ಷಣೆಗೆ ರಂಗು ತಂದವು, ಕೆ. ಎಸ್. ಡಿ. ಎಲ್. ಚಂದ್ರುರವರ ಸಮರ್ಥ ನಿರ್ದೇಶನ ಹಾಗೂ ಕಲಾವಿದರು ತರಬೇತಿಯಲ್ಲಿ ತೋರಿದ ನಿಷ್ಠೆ-ಶ್ರದ್ಧೆ, ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ವಿಶೇಷಾ ಧಿಕಾರಿ ರವಿಚಂದ್ರ ಅವರ ರಂಗ ಕಾಳಜಿ, ಪರಿಶ್ರಮದಿಂದ “ಸಂಪತ್ತಿಗೆ ಸವಾಲ್ ” ನಾಟಕವು ಹೃದಯಂಗಮವಾಗಿ ಮೂಡಿಬಂದು ಜನಮನ ಆಕರ್ಷಿಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments