Homeರಾಜ್ಯಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯಲೋಪ, ನಿರ್ಲಕ್ಷ್ಯ ಹಾಗೂ ದುರಾಡಳಿ, ಲಂಚಗುಳಿತನತವನ್ನು ಲೋಕಾಯುಕ್ತ ಸಂಸ್ಥೆ ಗಂಭೀರವಾಗಿ ಪರಿಗಣಿಸಲಿದೆ:ಲೋಕಾಯುಕ್ತ ನ್ಯಾಯಮೂರ್ತಿ...

ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯಲೋಪ, ನಿರ್ಲಕ್ಷ್ಯ ಹಾಗೂ ದುರಾಡಳಿ, ಲಂಚಗುಳಿತನತವನ್ನು ಲೋಕಾಯುಕ್ತ ಸಂಸ್ಥೆ ಗಂಭೀರವಾಗಿ ಪರಿಗಣಿಸಲಿದೆ:ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್

ದಾವಣಗೆರೆ,ಆಗಸ್ಟ್.25: ಸರ್ಕಾರಿ ಇಲಾಖೆಗಳಲ್ಲಿನ ಕರ್ತವ್ಯಲೋಪ, ನಿರ್ಲಕ್ಷ್ಯ ಹಾಗೂ ದುರಾಡಳಿ, ಲಂಚಗುಳಿತನತವನ್ನು ಲೋಕಾಯುಕ್ತ ಸಂಸ್ಥೆ ಗಂಭೀರವಾಗಿ ಪರಿಗಣಿಸಲಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾನುವಾರ ಮತ್ತು ಸೋಮವಾರ ಜಿಲ್ಲೆಯ ವಿವಿಧ ಹಾಸ್ಟೆಲ್‍ಗಳು ಹಾಗೂ ಕಚೇರಿಗಳಲ್ಲಿ ಕಂಡುಬಂದ ಅವ್ಯವಸ್ಥೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಎರಡು ದಿನಗಳಲ್ಲಿ ಲೋಕಾಯುಕ್ತ ತಂಡ ಜಿಲ್ಲೆಯಾದ್ಯಂತ ಸುಮಾರು 42 ಹಾಸ್ಟೆಲ್‍ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ನಡೆಸಿದ ಅನಿರೀಕ್ಷಿತ ತಪಾಸಣೆಯ ವರದಿಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಹಾಸ್ಟೆಲ್‍ಗಳಲ್ಲಿ ಅವ್ಯವಸ್ಥೆ ಮತ್ತು ಅತಿಯಾದ ದಟ್ಟಣೆ: ಹೆಚ್.ಕೆ.ಆರ್ ವೃತ್ತದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‍ನ ಒಂದೇ ಹಾಲ್‍ನಲ್ಲಿ 37 ವಿದ್ಯಾರ್ಥಿನಿಯರನ್ನು ಇರಿಸಿರುವುದನ್ನು ಪ್ರಶ್ನಿಸಿದ ಅವರು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕಟ್ಟಡಗಳನ್ನು ಬಾಡಿಗೆಗೆ ಪಡೆಯಲು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದರು.
ಶಕ್ತಿನಗರದ ಬಾಲಕರ ಹಾಸ್ಟೆಲ್‍ನಲ್ಲಿ 16 ಮೂಟೆ ಗೋಧಿಯನ್ನು 6 ತಿಂಗಳಿನಿಂದ ಬಳಸದೆ ಹುಳು ಹಿಡಿಯುವಂತೆ ಮಾಡಿರುವ ಬಗ್ಗೆ ತನಿಖೆ ನಡೆಸಿ ಪ್ರಕರಣ ದಾಖಲಿಸಲು ಆದೇಶಿಸಿದರು.
ಅರಸಾಪುರ ಹಾಸ್ಟೆಲ್‍ನಲ್ಲಿ ಕುಡಿಯುವ ನೀರಿನ ಕೊರತೆ ಇದ್ದು ಶುದ್ದ ಕುಡಿಯುವ ನೀರನ್ನು ಕಾಯಿನ್ ಹಾಕಿ ವಿದ್ಯಾರ್ಥಿಗಳು ತರುವಂತಹ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಸಮಸ್ಯೆ ಕಾರಣ ಮಕ್ಕಳಿಗೆ ಚರ್ಮರೋಗ ಬಂದಿದ್ದರೂ ವೈದ್ಯಕೀಯ ತಪಾಸಣೆ ನಡೆಸದಿರುವುದಕ್ಕೆ ಡಿಹೆಚ್‍ಒ ಹಾಗೂ ವೈದ್ಯಾಧಿಕಾರಿಗಳಿಗೆ ನೋಟಿಸ್ ಜಾರಿಗೆ ಸೂಚಿಸಿದರು.
ಜೆ.ಹೆಚ್. ಪಟೇಲ್ ಬಡಾವಣೆಯ ಹಾಸ್ಟೆಲ್‍ಗಳಲ್ಲಿರುವ ಮೂರು ಹಾಸ್ಟೆಲ್‍ಗಳಿಂದ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಕಾಲೇಜಿಗೆ ತೆರಳಲು ಒಂದು ಬಸ್ ಮಾತ್ರ ಬರುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಕರಿಗೆ ಪ್ರಶ್ನಿಸಿದಾಗ ಎರಡು ಬಸ್‍ಗಳು ಸಂಚರಿಸುತ್ತಿದ್ದು ಶುಕ್ರವಾರದಿಂದ ಹೆಚ್ಚುವರಿ 1 ಬಸ್ ಸೇರಿದಂತೆ 3 ಬಸ್‍ಗಳನ್ನು ನೀಡಲಾಗಿದೆ ಎಂದಾಗ ಸಮರ್ಪಕ ಬಸ್ ಸೌಲಭ್ಯ ಒದಗಿಸಲು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಲೆಗಳಲ್ಲಿ ಬೆಂಚ್ ಇಲ್ಲದೆ ಮಕ್ಕಳಿಗೆ ತೊಂದರೆ, ಡಿಡಿಪಿಐಗೆ ನೋಟಿಸ್ ನೀಡಲು ಸೂಚನೆ; ಜಿಲ್ಲೆಯ ಹಲವು ಪ್ರಾಥಮಿಕ ಶಾಲೆಗಳಲ್ಲಿ ಶೇ. 25ರಷ್ಟು ಮಕ್ಕಳು ನೆಲದ ಮೇಲೆ ಕುಳಿತು ಕಲಿಯುತ್ತಿರುವುದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಕ್ಕಳಿಗೆ ಮೂಲಸೌಕರ್ಯ, ಡೆಸ್ಕ್, ಕುಡಿಯುವ ನೀರು ಹಾಗೂ ಕಿಟಕಿಗಳಿಗೆ ಮೆಶ್ ಅಳವಡಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಸಿಇಒ ಅವರಿಗೆ ಸೂಚಿಸಿದರು.
ಈ ವೇಳೆ ಡಿಡಿಪಿಐ ಅವರು ಎಲ್ಲಾ ಶಾಲೆಯಲ್ಲಿ ಬೆಂಚ್‍ಗಳಿವೆ ಎಂದಾಗ ಮಕ್ಕಳ ವಿಷಯದಲ್ಲಿ ಸುಳ್ಳನ್ನು ಹೇಳಲಾಗುತ್ತಿದೆ, ನೋಟಿಸ್ ನೀಡಲು ತಿಳಿಸಿ, ಅಧಿಕಾರಿಗಳು ವಾಸ್ತವವಾಗಿ ಇರುವ ವಿಷಯವನ್ನು ಒಪ್ಪಿಕೊಳ್ಳುವ ಸ್ವಭಾವ ಬೆಳೆಸಿಕೊಂಡು ಸರ್ಕಾರಕ್ಕೆ ವಾಸ್ತವ ಸ್ಥಿತಿಯನ್ನು ವರದಿ ಮಾಡಿ ವ್ಯವಸ್ಥೆ ಸುಧಾರಿಸುವ ಕೆಲಸವನ್ನು ಮಾಡಬೇಕೆಂದು ಸೂಚಿಸಿದರು.
ಬಯಲುಶೌಚ ಮುಕ್ತ ಕಾಗದದ ಮೇಲೆ; ಜಿಲ್ಲೆಯಲ್ಲಿ ಬಯಲು ಶೌಚಮುಕ್ತ ಎಂದು ಘೋಷಿಸಿಕೊಳ್ಳುವುದನ್ನು ಬಿಟ್ಟು, ಶೌಚಾಲಯಕ್ಕೆ ಜಾಗವಿಲ್ಲದ 397 ಕುಟುಂಬಗಳಿಗೆ ಸಮರ್ಪಕ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಿ ಜಗಳೂರು ತಾಲ್ಲೂಕಿನ ದೇವಿಕೆರೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ರೂ.16.5 ಲಕ್ಷ ದುರುಪಯೋಗ ಮತ್ತು ಹನುಮಂತಾಪುರ ಗ್ರಾ.ಪಂ ಬಿಲ್ ಕಲೆಕ್ಟರ್ ರೂ.2.5 ಲಕ್ಷ ದುರುಪಯೋಗ ಮಾಡಿಕೊಂಡ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿ ಇಂತಹ ಭ್ರಷ್ಟ ಅಧಿಕಾರಿಗಳು ಸರ್ಕಾರಿ ಸೇವೆಯಲ್ಲಿ ಮುಂದುವರೆಯಬಾರದು ಎಂದರು.
ಚನ್ನಗಿರಿ, ಜಗಳೂರು ಸೇರಿದಂತೆ ಭೂದಾಖಲೆಗಳ ಇಲಾಖೆ (ಎಡಿಎಲ್‍ಆರ್) ಕಚೇರಿಗಳಲ್ಲಿ ರೈತರ ಅರ್ಜಿಗಳು ಬಾಕಿ ಉಳಿದಿರುವುದಕ್ಕೆ ಅಧಿಕಾರಿಗಳ ಗೈರುಹಾಜರಿ ಮತ್ತು ಸಮರ್ಪಕ ಪ್ರಭಾರ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿ, ಸಾರ್ವಜನಿಕರ ಕೆಲಸಗಳನ್ನು ಕಾಲಮಿತಿಯಲ್ಲಿ ಮುಗಿಸಲು ಆದೇಶಿಸಿದರು.
ಜಗಳೂರಿನ ಎಡಿಎಲ್‍ಆರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದಾಗ ಎಡಿಎಲ್‍ಆರ್ ಅವರು ರಜೆಯ ಮೇಲೆ ತೆರಳಿದ್ದು ಈ ಬಗ್ಗೆ ಕಚೇರಿಯ ಯಾವುದೇ ಸಿಬ್ಬಂದಿಗೆ ಮಾಹಿತಿ ಇರುವುದಿಲ್ಲ. ಯಾವುದೇ ಅಧಿಕಾರಿಗಳು ರಜೆಯ ಮೇಲೆ ತೆರಳುವಾಗ ಕಚೇರಿಯ ನಿರ್ವಹಣಾ ವ್ಯವಸ್ಥೆ ಮಾಡಿ ಹೋಗಬೇಕಾಗುತ್ತದೆ ಎಂದು ಖಡಕ್ ಸೂಚನೆ ನೀಡಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಯಾವುದೇ ಅನಾನುಕೂಲವಾಗಬಾರದು. ಸಾರ್ವಜನಿಕರ ಹಿತಾಸಕ್ತಿಯನ್ನು ಕಡೆಗಣಿಸುವುದು ಗಂಭೀರ ಕರ್ತವ್ಯಲೋಪ ಎಂದು ಎಚ್ಚರಿಸಿದರು.
ಚನ್ನಗಿರಿ ಎಡಿಎಲ್‍ಆರ್ ಧೀರ್ಘ ರಜೆ ಮೇಲೆ ತೆರಳಿದ್ದು ದಾವಣಗೆರೆ ಎಡಿಎಲ್‍ಆರ್ ಪ್ರಭಾರದಲ್ಲಿದ್ದು ಇವರು ಅಲ್ಲಿಯೂ ಇರಲ್ಲ, ಇಲ್ಲಿಯೂ ಇರಲ್ಲ. ಈ ಬಗ್ಗೆ ಸಂಪೂರ್ಣ ವರದಿ ನೀಡಲು ಸೂಚನೆ ನೀಡಿದರು.
ಪುರಸಭೆಗಳಲ್ಲಿ ಅರ್ಜಿಗಳ ನಿರ್ಲಕ್ಷ್ಯ ಹಾಗೂ ‘ಇನ್-ವರ್ಡ್’ ರಿಜಿಸ್ಟರ್ ಲೋಪ: ಹರಿಹರ, ಚನ್ನಗಿರಿ, ಜಗಳೂರು, ಹೊನ್ನಾಳಿ ಸೇರಿದಂತೆ ವಿವಿಧ ಪುರಸಭೆ, ನಗರಸಭೆ ಕಚೇರಿಗಳಲ್ಲಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಸ್ವೀಕೃತಿ ವಹಿಯಲ್ಲಿ ನಮೂದಿಸದೆ ಮೂಲೆಗೆ ತಳ್ಳುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು. ತಕ್ಷಣವೇ ಎಲ್ಲಾ ಅರ್ಜಿಗಳನ್ನು ದಾಖಲಿಸಿ, ಕಾಲಮಿತಿಯೊಳಗೆ ವಿಲೇವಾರಿ ಮಾಡದಿದ್ದರೆ ಕ್ರಿಮಿನಲ್ ಹಾಗೂ ಸಿವಿಲ್ ಕ್ರಮ ಕೈಗೊಳ್ಳಲಾಗುವುದು ಎಂದರು.
ಘನತ್ಯಾಜ್ಯ ನಿರ್ವಹಣಾ ಲೋಪ ಮತ್ತು ವಿಮೆ ಇಲ್ಲದ ವಾಹನಗಳು: ಹರಿಹರ ನಗರಸಭೆಯಿಂದ ಸಂಗ್ರಹಿಸಿದ ಕಸವನ್ನು ಸೂಕ್ತ ವೈಜ್ಞಾನಿಕ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಡಂಪ್ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆಯ 10 ಕಸ ವಿಲೇವಾರಿ ವಾಹನಗಳ ವಿಮೆ ಅವಧಿ ಮುಗಿದಿದ್ದರೂ ನವೀಕರಿಸದೆ ರಸ್ತೆಗಿಳಿಸಿರುವುದು ಶಿಕ್ಷಾರ್ಹ ಅಪರಾಧವಾಗಿದ್ದು, ತಕ್ಷಣ ಸರಿಪಡಿಸಲು ಸೂಚಿಸಿದರು.
ಶಾಂತಿ ಸಾಗರ ಸಂರಕ್ಷಣೆಗೆ ಆದ್ಯತೆ: ಏμÁ್ಯದ ಪ್ರಸಿದ್ಧ ಕೆರೆಗಳಲ್ಲಿ ಒಂದಾದ ಶಾಂತಿ ಸಾಗರಕ್ಕೆ ಸುತ್ತಮುತ್ತಲಿನ 9 ಹಳ್ಳಿಗಳ ಕೊಳಚೆ ನೀರು ನೇರವಾಗಿ ಸೇರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಿ ಕೆರೆಯ ಸ್ವಚ್ಛತೆ ಕಾಪಾಡಲು ಜಿಲ್ಲಾಧಿಕಾರಿಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಅವರು ಮುಂದಿನ ಒಂದು ತಿಂಗಳ ಕಾಲಾವಧಿಯಲ್ಲಿ ಕೆರೆಬಿಳಚಿ ಸೇರಿದಂತೆ ಕೆರೆ ಸಮೀಪವಿರುವ ಗ್ರಾಮಗಳ ಶೌಚ ನೀರು ಕೆರೆ ಸೇರುವುದನ್ನು ತಡೆಗಟ್ಟಲು ಡಿಪಿಆರ್ ತಯಾರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಆರೋಗ್ಯ ಕೇಂದ್ರ ಸುಧಾರಣೆಗೆ ಸೂಚನೆ; ಲೋಕಾಯುಕ್ತ ಅಧಿಕಾರಿಗಳು ಆನಗೋಡು, ಕಂದಗಲ್ಲು, ಹದಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದ್ದು ಇಲ್ಲಿನ ವಾರ್ಡ್‍ಗಳಲ್ಲಿ ಸರಿಯಾದ ಶೌಚಾಲಯ ಇಲ್ಲ, ಫಾರ್ಮಸಿಸ್ಟ್ ಬೀಗ ಹಾಕಿಕೊಂಡು ಗೈರು ಹಾಜರಿ, ಔಷಧ ಖರೀದಿ ಬಗ್ಗೆ ಬಿಲ್ ಇಲ್ಲದಿರುವುದು, ಮೂರು ದಿನಗಳಲ್ಲಿ ಮಧುಮೇಹದ 5 ಸಾವಿರ ಮಾತ್ರೆಗಳು ಅವಧಿ ಮೀರುತ್ತಿರುವುದು ಮತ್ತು ಹೆರಿಗೆಯಾದರೆ ವೈದ್ಯರಿಗೆ ರೂ.3 ಸಾವಿರ ಕೊಡಲೇಬೇಕೆಂದು ಸಾರ್ವಜನಿಕರ ದೂರಾಗಿದೆ. ಲಂಚಗುಳಿತನವನ್ನು ಲೋಕಾಯುಕ್ತ ಸಹಿಸುವುದಿಲ್ಲ, ಹೆರಿಗೆಗೆ ಹಣವನ್ನು ಪಡೆಯುತ್ತಿರುವ ವೈದ್ಯರ ಬಗ್ಗೆ ವರದಿ ನೀಡಲು ಡಿಹೆಚ್‍ಓಗೆ ಸೂಚನೆ ನೀಡಿದರು.
ಸಭೆಯಲ್ಲಿ ಲೋಕಾಯುಕ್ತ ಎಡಿಜಿಪಿ ಮನೀಷ್ ಕರ್ಬೀಕರ್, ಲೋಕಾಯುಕ್ತರ ಕಾರ್ಯದರ್ಶಿ ಶ್ರೀನಾಥ್ ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಪೊಲೀಸ್ ಅಧೀಕ್ಷಕ ಡಾ; ಶೇಖರ್ ಹೆಚ್.ಟಿ, ಲೋಕಾಯುಕ್ತ ಹೆಚ್ಚುವರಿ ವಿಚಾರಣಾ ನೊಂದಣಿ ಅಧಿಕಾರಿ ಸಿ.ರಾಜಶೇಖರ್, ಲೋಕಾಯುಕ್ತ ಎಸ್.ಪಿ.ಎಂ.ಎಸ್.ಕೌಲಾಪೊರೆ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments