ದಾವಣಗೆರೆ : ಜಗಳೂರು ತಾಲೂಕಿನ ಗುರು ಸಿದ್ದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಇಂದು ಶಿಕ್ಷಕರ ದಿನಾಚರಣೆ ಹಾಗೂ ವರ್ಗಾವಣೆ ಗೊಂಡ ದೈಹಿಕ ಶಿಕ್ಷಕರಾದ ಚಂದ್ರಪ್ಪ ಕತ್ತಿ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಸುರೇಶ್ ರೆಡ್ಡಿ ಯವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ವರ್ಗಾವಣೆಗೊಂಡಿರುವ ದೈಹಿಕ ಶಿಕ್ಷಕರಾದ ಶ್ರೀ ಚಂದ್ರಪ್ಪ ರವರ ಸೇವೆಯನ್ನು ಕೊಂಡಾಡಿದರು.
ಐದು ವರ್ಷಗಳ ಕಾಲ ಕ್ರೀಡಾಪಟುಗಳಿಗೆ ತರಬೇತಿ ನೀಡಿ ಗುರು ಸಿದ್ದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಿದ್ದಾರೆ.
ಅನಿವಾರ್ಯ ಕಾರಣಗಳಿಂದ ಸ್ವಂತ ಜಿಲ್ಲೆಗೆ ವರ್ಗಾವಣೆ ಬಯಸಿ ತೆರಳುತ್ತಿರುವ ಇವರಿಗೆ ಶುಭವಾಗಲಿ,
ಹಾಗೂ ಶಿಕ್ಷಣ ಇಲಾಖೆಯಲ್ಲಿ ಉನ್ನತ ಮಟ್ಟದ ಸ್ಥಾನಗಳನ್ನು ಅಲಂಕರಿಸುವಂತಾಗಲಿ ಎಂದು ಶುಭ ಕೋರಿದರು.
ನಿವೃತ್ತ ದೈಹಿಕ ಪರಿವೀಕ್ಷಕರಾದ ಶ್ರೀ ವೆಂಕಟೇಶ, ಯುವ ಸಾಹಿತಿ ಶ್ರೀ ಚಂದ್ರಕಾಂತ, ಸರ್ಕಾರಿ ಪ್ರೌಢಶಾಲೆ ಗುರು ಸಿದ್ದಾಪುರದ ಮುಖ್ಯ ಶಿಕ್ಷಕರಾದ ಶ್ರೀ ಮಂಜಪ್ಪ ದಿದ್ಧಿಗಿ, ಗೌರೀಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರೇವಣಸಿದ್ದಪ್ಪ ಮತ್ತಿತರರು ಮಾತನಾಡಿದರು.
ಶಿಕ್ಷಣ ಇಲಾಖೆಯ ಪ್ರಮುಖರು, ಗ್ರಾಮಸ್ಥರು,ಹಿತೈಷಿಗಳು,ಹಳೆಯ ವಿದ್ಯಾರ್ಥಿಗಳು ಶ್ರೀ ಚಂದ್ರಪ್ಪ ಕತ್ತಿ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶ್ರೀ ಗೋಪಿ ನಾಯ್ಕ್, ಶ್ರೀ ಕರಿಬಸಪ್ಪ,ವಿಶ್ವನಾಥ್ ಜಂಬಗಿ, ಶ್ರೀ ಮಂಜುನಾಥ್, ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಯಶವಂತಪ್ಪ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಶ್ರೀ ಬಸವರಾಜ್, ಶಾಲೆಯ ಸಮಸ್ತ ಶಿಕ್ಷಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.