ದಾವಣಗೆರೆ,ಏಪ್ರಿಲ್.10: 13.ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ದೇಶದ ಮೂರನೇ ಹಂತ, ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಕರ್ತವ್ಯ ದಿನಗಳಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಥಾಪಿಸಿರುವ ಚುನಾವಣಾಧಿಕಾರಿಗಳ ಸಭಾಂಗಣದಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಜಿಲ್ಲಾಧಿಕಾರಿಯವರು ಚುನಾವಣಾಧಿಕಾರಿಯಾಗಿದ್ದು ಅಪರ ಜಿಲ್ಲಾಧಿಕಾರಿ ಸಹಾಯಕ ಚುಣಾವಣಾಧಿಕಾರಿಯಾಗಿರುವರು. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 19 ಕೊನೆಯ ದಿನವಾಗಿರುತ್ತದೆ.
ನಾಮಪತ್ರ ಸಲ್ಲಿಸಲು ರಾಷ್ಟ್ರೀಕೃತ, ಮಾನ್ಯತೆ ಪಡೆದ ಪಕ್ಷಗಳ ಅಭ್ಯರ್ಥಿಗಳು ಇದೇ ಕ್ಷೇತ್ರದ ಮತದಾರರಾದ ಒಬ್ಬರು ಸೂಚಕರಾಗಿರಬೇಕು. ಮಾನ್ಯತೆ ಪಡೆಯದ ಹಾಗೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಇದೇ ಕ್ಷೇತ್ರದ 10 ಮತದಾರರು ಸೂಚಕರಾಗಿರಬೇಕು. ಸಾಮಾನ್ಯ ವರ್ಗದವರು ರೂ.25000 ಮತ್ತು ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳು ರೂ.12500 ಗಳನ್ನು ನಗದಾಗಿ ಮಾತ್ರ ಠೇವಣಿ ಸಲ್ಲಿಸಬೇಕಾಗುತ್ತದೆ. ಒಬ್ಬ ಅಭ್ಯರ್ಥಿಯು ಗರಿಷ್ಠ 4 ನಾಮಪತ್ರ ಮತ್ತು ಎರಡು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ಇದೆ. ಚುನಾವಣಾ ಅಭ್ಯರ್ಥಿಯಾಗಲು ಕನಿಷ್ಠ 25 ವರ್ಷ ತುಂಬಿರಬೇಕು.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳಿಗೆ ಚುನಾವಣಾ ಕಚೇರಿಯ 100 ಮೀಟರ್ ವ್ಯಾಪ್ತಿಗೆ ಆಗಮಿಸಲು 3 ವಾಹನಗಳಿಗೆ ಅವಕಾಶ ಇರುತ್ತದೆ. ಮತ್ತು ನಾಮಪತ್ರ ಸಲ್ಲಿಸುವಾಗ ಒಂದು ಭಾರಿಗೆ ಅಭ್ಯರ್ಥಿ ಸೇರಿ 5 ಜನರಿಗೆ ಮಾತ್ರ ಅವಕಾಶ ಇರುತ್ತದೆ. ನಮೂನೆ-26 ರಲ್ಲಿ 4 ಪ್ರತಿಗಳಲ್ಲಿ ಘೋಷಣಾ ಪ್ರಮಾಣಪತ್ರ ಸಲ್ಲಿಸಬೇಕಿದ್ದು ಎಲ್ಲಾ ಅಂಕಣಗಳ ಮಾಹಿತಿ ನೀಡಬೇಕು. ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲು ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟರ ಜಂಟಿಯಾಗಿ ಖಾತೆ ತೆರೆಯಬಹುದು, ಕುಟುಂಬಸ್ಥರ ಹೆಸರಿನೊಂದಿಗೆ ಜಂಟಿ ಖಾತೆ ಇರÀಬಾರದು, ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದಲ್ಲಿ ಮತದಾನಕ್ಕಿಂತ ಮೊದಲು ಮಾಧ್ಯಮಗಳಲ್ಲಿ ಮೂರು ಭಾರಿ ಪ್ರಚುರಪಡಿಸಿರಬೇಕೆಂದರು.
ನಾಮಪತ್ರಗಳ ಪರಿಶೀಲನೆಯು ಏಪ್ರಿಲ್ 20 ರಂದು ಬೆಳಗ್ಗೆ 11 ಗಂಟೆಯಿಂದ ಆರಂಭವಾಗಲಿದೆ. ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸ್ ಪಡೆಯಲು ಏಪ್ರಿಲ್ 22 ರ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಇರುತ್ತದೆ. ನಂತರ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚುನಾವಣಾ ಚಿನ್ಹೆಯನ್ನು ನೀಡುವ ಮೂಲಕ ಅಂತಿಮ ಕಣದಲ್ಲಿನ ಅಭ್ಯರ್ಥಿಗಳ ವಿವರವನ್ನು ಪ್ರಕಟಿಸಲಾಗುತ್ತದೆ. ಮೇ 7 ರಂದು ಮತದಾನ ಮತ್ತು ಜೂನ್ 4 ರಂದು ಮತ ಎಣಿಕೆ ನಡೆಯಲಿದೆ ಎಂದರು.
ನಂ.13 ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ 8 ವಿಧಾನಸಭಾ ಕ್ಷೇತ್ರದ ಮತದಾರರು; ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ಸೇರಿ 8 ವಿಧಾನಸಭಾ ಕ್ಷೇತ್ರಗಳು ಒಳಪಡಲಿವೆ. ಇಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸುವರು. ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳು ಸೇರಿವೆ. ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1946 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಇದರಲ್ಲಿ 387 ಕ್ರಿಟಿಕಲ್, 11 ವಲ್ನೇರಬಲ್ ಮತಗಟ್ಟೆಗಳಿವೆ.
ಈ ಎಲ್ಲಾ ಕ್ಷೇತ್ರಗಳಲ್ಲಿ ಏಪ್ರಿಲ್ 10 ರ ವರೆಗೆ 8,50,393 ಪುರುಷ, 8,55,079 ಮಹಿಳೆಯವರು, 135 ಇತರೆ ಹಾಗೂ 562 ಸೇವಾ ಮತದಾರರು ಸೇರಿ 17,06,169 ಒಟ್ಟು ಮತದಾರರಿದ್ದಾರೆ. ಏ.9 ರ ವರೆಗೆ ನಮೂನೆ-6 ರಲ್ಲಿ 42664 ಅರ್ಜಿಗಳು ಸ್ವೀಕೃತವಾಗಿದ್ದು ಪರಿಶೀಲನೆಯ ಹಂತದಲ್ಲಿವೆ ಎಂದರು.
ಮಾದರಿ ನೀತಿ ಸಂಹಿತೆ ಜಾರಿಗೆ ಕ್ರಮ; ಚುನಾವಣಾ ದಿನಾಂಕ ಪ್ರಕಟವಾದ ದಿನದಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್, ಫ್ಲೈಯಿಂಗ್ ಸ್ಕ್ವಾಡ್, ಅಬಕಾರಿ ಜಾಗೃತ ದಳ, ವಾಣಿಜ್ಯ ತೆರಿಗೆ ಇಲಾಖೆ ತಂಡ ಸೇರಿದಂತೆ ಪೊಲೀಸ್ ಅಧಿಕಾರಿಗಳು ಒಟ್ಟು ರೂ. 1,81,26,926 ಮೌಲ್ಯದ ನಗದ ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಎಫ್‍ಎಸ್‍ಟಿಯಿಂದ ರೂ.75,62,100 ನಗದು ವಶ, ರೂ.91,39,836 ನಗದು ವಶ ಎಸ್‍ಎಸ್‍ಟಿಯಿಂದ, ಎಫ್.ಎಸ್.ಟಿ.ಯಿಂದ 400 ಟವರ್ ಫ್ಯಾನ್, 56.36 ಗ್ರಾಂ ಚಿನ್ನ, 579 ಸೀರೆಗಳನ್ನು ವಶಪಡಿಸಿಕೊಂಡಿದ್ದು ಇದರ ಮೌಲ್ಯ ರೂ.8,26,530 ಗಳಾಗಿರುತ್ತದೆ. ಚೆಕ್‍ಪೋಸ್ಟ್‍ಗಳಲ್ಲಿ 17 ಮೊಬೈಲ್, 300 ಜೀನ್ಸ್ ಪ್ಯಾಂಟ್ ಸೇರಿ ರೂ.1,57,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದಲ್ಲದೇ ಅಬಕಾರಿ ಇಲಾಖೆಯಿಂದ ರೂ.2,94,432 ಮೌಲ್ಯದ 709.145 ಲೀ ಮದ್ಯ ವಶಪಡಿಸಿಕೊಂಡಿದೆ. ಪೊಲೀಸ್ ಇಲಾಖೆಯಿಂದ ರೂ.1,47,028 ಮೌಲ್ಯದ 372.184 ಲೀ ಮದ್ಯ ವಶಪಡಿಸಿಕೊಂಡಿದ್ದು ಇಲ್ಲಿಯವರೆಗೆ 290 ಎಫ್‍ಐಆರ್ ದಾಖಲಿಸಲಾಗಿದೆ.
ಮನೆಯಲ್ಲಿಯೇ ಮತದಾನ; ಆಯೋಗವು 85 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ವಿಶೇಷಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಿದ್ದು ಇವರಿಗೆ 12ಡಿ ವಿತರಣೆ ಮಾಡಲಾಗಿದ್ದು 85 ವರ್ಷ ಮೇಲ್ಪಟ್ಟ 12845 ಮತದಾರರಲ್ಲಿ 1473 ಮತದಾರರು ಮನೆಯಲ್ಲಿಯೇ ಮತದಾನ ಮಾಡುತ್ತೇವೆ ಎಂದು 12ಡಿ ನೀಡಿರುವರು. 22922 ವಿಶೇಷಚೇತನ ಮತದಾರರಲ್ಲಿ 876 ಮತದಾರರು ಮೆನಯಲ್ಲಿ ಮತದಾನ ಮಾಡುತ್ತೇವೆ ಎಂದು ಘೋಷಣಾ ಪತ್ರ ನೀಡಿರುತ್ತಾರೆ.
ಅಗತ್ಯ ಸೇವಾ ಇಲಾಖೆ; ಅಗತ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಅವಕಾಶ ಕಲ್ಪಿಸಿದ್ದು ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇಲ್ಲಿಯೇ ಮತದಾರರ ಪಟ್ಟಿಯಲ್ಲಿ ಹೆಸರಿರುವ 375 ಮತದಾರರು ಮತ್ತು ಇದೇ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಬೇರೆ ಜಿಲ್ಲೆಯಲ್ಲಿ ಮತದಾನ ಮಾಡುತ್ತೇನೆ ಎಂದು 410 ಮತ್ತು ಇತರೆ ಬೇರೆ, ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಾವಣಗೆರೆ ಜಿಲ್ಲಾ ಮತದಾರರಾಗಿರುವ 550 ಅಗತ್ಯ ಸೇವಾ ಇಲಾಖೆ ಮತದಾರರು 12ಡಿ ಸಲ್ಲಿಸಿರುತ್ತಾರೆ. ಇದಲ್ಲದೇ ಮತದಾನ ದಿನ ಕರ್ತವ್ಯ ನಿರತಾಗುವ 2298 ಮತಗಟ್ಟೆ ಅಧ್ಯಕ್ಷಾಧಿಕಾರಿ, 2298 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ, 4596 ಮತಗಟ್ಟೆ ಸಿಬ್ಬಂದಿಗಳು ಸೇರಿ ಒಟ್ಟು 9192 ಮತದಾನ ಸಿಬ್ಬಂದಿಗಳನ್ನು ಮತದಾನ ದಿನ ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಲಾಗುತ್ತಿದೆ ಎಂದ ಅವರು ಪಿಆರ್‍ಓ, ಎಪಿಆರ್‍ಓಗಳಿಗೆ ಮೊದಲ ಹಂತದ ತರಬೇತಿ ನೀಡಲಾಗಿದೆ ಎಂದರು.
ಸಾರ್ವಜನಿಕರಿಂದ ದೂರು ಸ್ವೀಕರಿಸಲು ಸಿವಿಜಿಲ್, ಟೋಲ್‍ಫ್ರೀ; ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಎಂಸಿಸಿ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರುಗಳನ್ನು ಸಿವಿಜಿಲ್ ಆಪ್ ಮೂಲಕ 471 ದೂರುಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ ಬಹುತೇಕ ನಾಮಫಲಕಗಳಲ್ಲಿ ಚುನಾಯಿತ ಪ್ರತಿನಿಧಿಗಳ ಹೆಸರಿದೆ ಎಂಬ ವಿಷಯಗಳಿವೆ. ಮತ್ತು 1950 ಉಚಿತ ಸಹಾಯವಾಣಿಗೆ 345 ಕರೆಗಳು ಬಂದಿದ್ದು ಚುನಾವಣೆಗೆ ಸಂಬಂಧಿಸಿದ, ಮತದಾರರ ಪಟ್ಟಿ, ಹೆಸರು ಸೇರ್ಪಡೆಗೆ ಸಂಬಂಧಿಸಿ ಕರೆಗಳಾಗಿದ್ದು ಕರೆ ಮಾಡಿದವರಿಗೆ ಮಾಹಿತಿ ನೀಡಲಾಗಿದೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸಲು ಕಾನೂನು ಬಾಹಿರವಾಗಿ ಬೆದರಿಕೆ ಒಡ್ಡಬಹುದಾದ ರೌಡಿಶೀಟರ್ಸ್ 1300 ಬಾಂಡ್‍ಓವರ್ ಮತ್ತು ಇನ್ನೂ 24 ಜನರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ. 698 ಆಯುಧ ಪರವಾನಗಿ ನೀಡಿದ್ದು ಇದರಲ್ಲಿ 635 ವಾಪಸ್ ಪಡೆದು ಠೇವಣಿ ಮಾಡಿದ್ದು ಇನ್ನುಳಿದವರು ಭದ್ರತಾ ಕಾರಣಕ್ಕಾಗಿ ಅನುಮತಿ ಪಡೆದು ಉಪಯೋಗಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ದ್ವೇಷ ಭಾಷಣ ಸೇರಿದಂತೆ ಶಾಂತಿ ಕದಡುವ ಪೋಸ್ಟ್ ಹಾಕುವವರ ಮೇಲೆ ಸಂಪೂರ್ಣ ನಿಗಾವಹಿಸಲಾಗಿದ್ದು ಚುನಾವಣಾ ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ 72.96 ರಷ್ಟು ಮತದಾನವಾಗಿತ್ತು. ಕಳೆದ ಭಾರಿ ಸರಾಸರಿಗಿಂತ ಶೇ 10 ಕ್ಕಿಂತ ಕಡಿಮೆ ಮತದಾನವಾದ 135 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಈ ಭಾರಿ ಹೆಚ್ಚಿನ ಮತದಾನವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಮತದಾನ ಕೇಂದ್ರಕ್ಕೆ ಆಗಮಿಸುವವರಿಗೆ ನೆರಳು, ಕುಡಿಯುವ ನೀರು, ವಿಶ್ರಾಂತಿ, ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಒಂದೇ ಕಟ್ಟಡದ ವ್ಯಾಪ್ತಿಯಲ್ಲಿ 3 ಮತ್ತು ಇದಕ್ಕಿಂತ ಹೆಚ್ಚು ಮತಗಟ್ಟೆಗಳಿದ್ದಲ್ಲಿ ಸಹಾಯಕ್ಕಾಗಿ ಸ್ವಯಂಸೇವಕರ ಪ್ರತ್ಯೇಕ ತಂಡ ರಚನೆ ಮಾಡಿ ಸಹಾಯ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ಭಾರಿಯ ಚುನಾವಣೆಯಲ್ಲಿ ಶೇ 85 ಕ್ಕಿಂತ ಹೆಚ್ಚು ಮತದಾನವಾಗಲು ಹಲವಾರು ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ನಟರಾದ ಶೃತಿ ಪ್ರಹ್ಲಾದ್ ಮತ್ತು ಪ್ರಥ್ವಿ ಶಾಮನೂರು ನೇತೃತ್ವದಲ್ಲಿ ವಿನೂತನ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದರು.