ದಾವಣಗೆರೆ:ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪುರಸ್ಕೃತರಾಗಿರುವ ದಾವಣಗೆರೆ ಜಿಲ್ಲೆಯ ಪೊಲೀಸರನ್ನು ಅಭಿನಂದಿಸುವ ಹೃದಯಸ್ಪರ್ಶಿ ಕಾರ್ಯಕ್ರಮವು ನಗರದ ಶ್ರೀ ಡಿ. ದೇವರಾಜ ಅರಸು ಬಡಾವಣೆ ಬಿ' ಬ್ಲಾಕ್‌ನಲ್ಲಿರುವ ಶಿವಧ್ಯಾನ ಮಂದಿರದಲ್ಲಿ ದಿನಾಂಕ:೨೫-೦೪-೨೦೨೫ ರಂದು ಬೆಳಿಗ್ಗೆ10-30ಕ್ಕೆ ನಡೆಯಲಿದೆ. ಅಂತರರಾಷ್ಟ್ರೀಯ ಅಧ್ಯಾತ್ಮಿಕ ಸೇವಾ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಆಯೋಜನೆಗೊಂಡಿರುವ ಈ ಕಾರ್ಯಕ್ರಮವನ್ನು ರಾಜ್ಯದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರೂ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರೂ ಆದ ಶಂಕರ ಮಹಾದೇವ ಬಿದರಿ ಅವರು ಉದ್ಘಾಟಿಸಲಿದ್ದಾರೆ. ಪೊಲೀಸರು ತಮ್ಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ವಿಶಿಷ್ಟ ಮತ್ತು ಅನನ್ಯ ಸೇವೆಗೆ ಸರ್ಕಾರ ಕೊಡಮಾಡುವ ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕಕ್ಕೆ ದಾವಣಗೆರೆ ಜಿಲ್ಲೆಯ 20ಜನರು ಭಾಜನರಾಗಿದ್ದು, ಅವರೆಲ್ಲರನ್ನೂ ಒಂದೇ ವೇದಿಕೆಯಲ್ಲಿ ಸನ್ಮಾನಿಸುವುದರ ಮೂಲಕ
ರಕ್ಷಾಶ್ರೀ’ ಬಿರುದು ನೀಡಿ ಗೌರವಿಸಲಾಗುತ್ತದೆ.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಳಿಯಾಳ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಡಾ. ಪದ್ಮಾಜಿ ಅಧ್ಯಕ್ಷತೆ ವಹಿಸಲಿದ್ದು, ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಆಶಯ ನುಡಿಗಳನ್ನಾಡುವರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಅವರಿಗೆ `ದಿವ್ಯ ರಕ್ಷಕ’ ಬಿರುದು ನೀಡಿ ಗೌರವಿಸಲಾಗುವುದು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಜಯಕುಮಾರ್ ಎಂ. ಸಂತೋಷ್ ಮತ್ತು ಜಿ. ಮಂಜುನಾಥ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಹಿರಿಯ ಪತ್ರಕರ್ತರೂ ಆದ ನಗರವಾಣಿ ಸಹ ಸಂಪಾದಕ ಬಿ.ಎನ್. ಮಲ್ಲೇಶ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅವರ ಕುಟುಂಬ ವರ್ಗದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.