ದಾವಣಗೆರೆ:1982-83ರ ಅವಧಿಯಲ್ಲಿ ದಾವಣಗೆರೆಯ ಡಿ.ಆರ್.ಆರ್. ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ರಾಜ್ಯ ಪಾಲಿಟೆಕ್ನಿಕ್ ವಿದ್ಯಾರ್ಥಿಗಳನ್ನು ಸಂಘಟಿಸಿ, ತಮ್ಮ ಮುಂದಿನ ಶೈಕ್ಷಣಿಕ ಹಕ್ಕುಗಳಿಗಾಗಿ ನಡೆಸಿದ ಐತಿಹಾಸಿಕ ಸುದೀರ್ಘ ಹೋರಾಟಕ್ಕೆ ದಾವಣಗೆರೆಯು ಸಾಕ್ಷಿಯಾಗಿತ್ತು. ಅಂದಿನ ಕಾಲಘಟ್ಟದಲ್ಲಿ ನ ಭೂತೋ ನ ಭವಿಷ್ಯತಿ ಎನ್ನುವಂತೆ ನಡೆದ ವಿದ್ಯಾರ್ಥಿ ಚಳುವಳಿಯದು. ಡಿಪ್ಲೊಮೊ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಬಡ ಹಾಗೂ ಮಧ್ಯಮ ವರ್ಗದವರೇ ಹೆಚ್ಚಾಗಿದ್ದು, 1983 ಕ್ಕಿಂತ ಮೊದಲು ರಾಜ್ಯದ ಎರಡು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮಾತ್ರ ಅದೂ ಡೊನೇಷನ್ ಕೊಟ್ಟವರಿಗೆ ಮಾತ್ರ ಪ್ರವೇಶಾವಕಾಶವಿದ್ದಿತ್ತು.
ಇನ್ನುಳಿದ ಯಾವುದೇ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಾಗಲಿ ಮುಖ್ಯವಾಗಿ ಯಾವುದೇ ಸರ್ಕಾರಿ, ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಾವಕಾಶ ಇರಲಿಲ್ಲ. ಇದನ್ನು ಮನಗಂಡು ಡಿ.ಆರ್.ಆರ್. ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ನಾಯಕರಾಗಿದ್ದ ಶ್ರೀ ವಿ.ಎಸ್. ಮಲ್ಲಿಕಾರ್ಜುನರವರು ಡಿಪ್ಲೊಮೊ ಶಿಕ್ಷಣದ ನಂತರ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುವ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟು ಈ ಬೇಡಿಕೆಯನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ, ಹೋರಾಟವನ್ನು ಪ್ರಾರಂಭಿಸಲಾಯಿತು. ಶ್ರೀ ವಿ.ಎಸ್. ಮಲ್ಲಿಕಾರ್ಜುನರವರು ರಾಜ್ಯಾದ್ಯಂತ ಸಂಚರಿಸಿ “ರಾಜ್ಯ ಪಾಲಿಟೆಕ್ನಿಕ್ ವಿದ್ಯಾರ್ಥಿ ಕ್ರಿಯಾ ಸಮಿತಿ” ರಚಿಸಿ ಅದರ ಪ್ರಧಾನ ಕಾರ್ಯದರ್ಶಿಯಾಗಿ ಹೋರಾಟದ ರೂಪು ರೇಷೆಗಳನ್ನು ರಚಿಸಿ, ವಿದ್ಯಾರ್ಥಿಗಳನ್ನು ಹೋರಾಟದಲ್ಲಿ ತೊಡಗಿಸಿಕೊಂಡು ಚಳುವಳಿಯು ರಾಜ್ಯ ವ್ಯಾಪಿಯಾಗುವಂತೆ ಮಾಡಲಾಯಿತು. ಈ ಚಳುವಳಿಯು 1982ರ ಅಕ್ಟೋಬರ್ 2 ರಿಂದ 1983ರ ಮಾರ್ಚ್ 4ರ ವರೆಗೆ ದೀರ್ಘಕಾಲ ನಡೆಯಿತು.

ಶಾಲಾ ಬಹಿಷ್ಕಾರ, ಮೆರವಣಿಗೆಗಳ ಮೂಲಕ ಪ್ರಾರಂಭವಾದ ಚಳುವಳಿಯು ಪಂಜಿನ ಮೆರವಣಿಗೆ, ಸರದಿ ಉಪವಾಸ ಸತ್ಯಾಗ್ರಹ, ಕತ್ತೆ ಮೆರವಣಿಗೆ, ಶಿಕ್ಷಣ ಸಚಿವರ ಪ್ರತಿಕೃತಿ ದಹನಗಳಿಂದ ಮುನ್ನಡೆದು ಸರ್ಕಾರ ಬೇಡಿಕೆ ಈಡೇರಿಸಲು ವಿಳಂಬ ಮಾಡಿದ್ದನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಬಂದ್, ರೈಲ್ವೆ ರೋಕೋ ಗಳಿಂದ ಉಗ್ರವಾಗಿ ಪ್ರತಿಭಟಿಸಲಾಯಿತು. ವಿದ್ಯಾರ್ಥಿಗಳ ಸತ್ಯಾಗ್ರಹ ಶಿಬಿರಕ್ಕೆ ಆಗಿನ ಮಂತ್ರಿಗಳಾಗಿದ್ದ ದಿ| ಜೆ.ಹೆಚ್. ಪಟೇಲ್ ರವರು, ಪಂಚಾಯತ್‌ರಾಜ್ ಸಚಿವರಾಗಿದ್ದ ದಿ॥ ಅಬ್ದುಲ್ ನಜೀರ್‌ಸಾಬ್ ರವರು, ಶಾಸಕರುಗಳಾಗಿದ್ದ ದಿ| ಕಾಂ. ಪಂಪಾಪತಿಯವರು, ದಿ॥ ಕೆ. ಮಲ್ಲಪ್ಪ ರವರು, ದಿ॥ ಕೆ.ಜಿ. ಮಹೇಶ್ವರಪ್ಪನವರು, ಶ್ರೀಯುತ ಶಿವಮೂರ್ತಿ ನಾಯಕ್‌ರವರು ಭೇಟಿ ನೀಡಿ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಅಂದಿನ ಶಿಕ್ಷಣ ಸಚಿವರಾಗಿದ್ದ ದಿ॥ ಬಿ. ರಾಚಯ್ಯನವರು ವಿದ್ಯಾರ್ಥಿಗಳ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿಯೂ ಚಳುವಳಿಯನ್ನು ಕೈ ಬಿಡುವಂತೆ ಮನವಿ ಮಾಡಿಕೊಂಡರು. ಈ ಮನವಿಯನ್ನು ವಿದ್ಯಾರ್ಥಿ ನಾಯಕ ವಿ.ಎಸ್. ಮಲ್ಲಿಕಾರ್ಜುನರವರು ತಿರಸ್ಕರಿಸಿ, ಬೇಡಿಕೆ ಈಡೇರುವ ವರೆಗೂ ಹೋರಾಟವನ್ನು ಕೈ ಬಿಡುವುದಿಲ್ಲ ಎಂದು ಹೋರಾಟವನ್ನು ಮುಂದುವರೆಸಲಾಯಿತು. ಇದಕ್ಕೂ ಸರ್ಕಾರ ಬಗ್ಗದಾಗ ಬೆಂಗಳೂರು ಚಲೋ ಕಾರ್ಯಕ್ರಮ ನಡೆಸಲಾಯಿತು. ಅಂತಿಮವಾಗಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ “ಆಮರಣಾಂತರ ಉಪವಾಸ ಸತ್ಯಾಗ್ರಹ” ವನ್ನು ನಡೆಸಲಾಯಿತು. ಅಂತಿಮವಾಗಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಕೆಚ್ಚೆದೆಯ ಹೋರಾಟಕ್ಕೆ ಮಣಿದ ಸರ್ಕಾರವು ಮಾರ್ಚ್ 4 1983ರಂದು ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸಿ, 1983-84ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ ಪಾಲಿಟೆಕ್ನಿಕ್ ಗಳಲ್ಲಿ ಡಿಪ್ಲೊಮೊ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಲ್ಲದೇ ರಾಜ್ಯದ ಎಲ್ಲಾ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲು ತೀರ್ಮಾನವನ್ನು ತೆಗೆದುಕೊಂಡು ಆದೇಶವನ್ನು ಹೊರಡಿಸಿತು.
ವಿದ್ಯಾರ್ಥಿ ನಾಯಕ ಶ್ರೀ ವಿ.ಎಸ್. ಮಲ್ಲಿಕಾರ್ಜುನ ರವರು ರಾಜ್ಯಾದ್ಯಂತ ಪ್ರವಾಸ ಮಾಡಿ ವಿವಿಧ ಪಾಲಿಟೆಕ್ನಿಕ್‌ಗಳ ವಿದ್ಯಾರ್ಥಿಗಳನ್ನು ಸಂಘಟಿಸಿ, ತಮ್ಮ ಭಾಷಣಗಳಿಂದ ಪ್ರೇರೇಪಿಸಿ ಹೋರಾಟಕ್ಕೆ ಇಳಿಯುವಂತೆ ಮಾಡಿದ್ದು, ಚಳುವಳಿಯು ದೀರ್ಘಾವಧಿಯವರೆಗೆ ನಡೆದಿದ್ದರಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಚಳುವಳಿಯನ್ನು ಜೀವಂತವಾಗಿರುವಂತೆ ನೋಡಿಕೊಂಡಿದ್ದು,

ಸರ್ಕಾರವು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಡ ಹಾಕಲು ಉಗ್ರ ಚಳುವಳಿಯನ್ನು ನಡೆಸಲು ಕೈಗೊಂಡ ದಿಟ್ಟ ನಿರ್ಧಾರಗಳು, ಚಳುವಳಿಯಿಂದ ಹಿಂದೆ ಸರಿಯುವಂತೆ ಮಾಡಲು ಹಲವಾರು ಬಾರಿ ತಮ್ಮ ಮೇಲೆ ನಡೆದ ಹಲ್ಲೆಗಳಿಂದ ಎದೆಗುಂದದೆ ತೋರಿದ ಧೈರ್ಯ, ಶಾಸಕರು, ಮಂತ್ರಿಗಳು ಭರವಸೆ ನೀಡಿ ಚಳುವಳಿಯನ್ನು ನಿಲ್ಲಿಸುವಂತೆ ಮಾಡಿದ ಮನವಿಗಳನ್ನು ತಿರಸ್ಕರಿಸಿ ತೋರಿದ ನಿಷ್ಠುರತೆ, ಯಾರ ಮುಲಾಜಿಗೂ ಒಳಗಾಗದೇ ಬಗ್ಗದೆ, ಜಗ್ಗದೆ, ಕುಗ್ಗದೆ ತಮ್ಮ ಹೋರಾಟಕ್ಕೆ ಸರ್ಕಾರವು ಮಣಿದು ತಮ್ಮ ಬೇಡಿಕೆ ಈಡೇರಿಸುವವರೆಗೂ ಚಳುವಳಿಯನ್ನು ಮುನ್ನಡೆಸಿದ್ದು ಉಲ್ಲೇಖನೀಯ.

ಅಲ್ಲಿಯವರೆಗೂ ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದ ಪ್ರತಿಭಾವಂತ ಡಿಪ್ಲೊಮೊದಾರರು ಉನ್ನತ ಶಿಕ್ಷಣ ಪಡೆಯುವ ಅವಕಾಶವು ದೊರೆಯಿತು. ಅಂದಿನಿಂದ ಡಿಪ್ಲೊಮೊ ಉತ್ತೀರ್ಣರಾಗಿ ಈ ಹೋರಾಟದ ಫಲಾನುಭವಿಗಳಾಗಿರುವ ರಾಜ್ಯ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ಪಾರ್ಶ್ವ ಪ್ರವೇಶ (ಲ್ಯಾಟರಲ್ ಎಂಟ್ರಿ) ಪಡೆದು ಹೆಚ್ಚಿನ ಶಿಕ್ಷಣ ಪಡೆದು ಉದ್ಯೋಗ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ, ಗೌರವಗಳನ್ನು ಪಡೆದಿರುವವರು ಹಾಗೂ ದಾವಣಗೆರೆ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಪ್ಲಾಟಿನಂ ಜ್ಯೂಬಿಲಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಲ್ಯಾಟರಲ್ ಎಂಟ್ರಿ ಮೂಲಕ ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದು ಈ ಐತಿಹಾಸಿಕ ಹೋರಾಟದಿಂದ ಉಪಕೃತರಾಗಿರುವವರು ತಮ್ಮ ಈ ಅವಕಾಶಕ್ಕೆ ಕಾರಣರಾದ 1982-83ರಲ್ಲಿ ಶ್ರೀ ವಿ.ಎಸ್. ಮಲ್ಲಿಕಾರ್ಜುನರವರ ನಾಯಕತ್ವದಲ್ಲಿ ಡಿ.ಅರ್.ಆರ್. ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಕೆಚ್ಚೆದೆಯ ಹೋರಾಟ ಮಾಡಿದ ತ್ಯಾಗ, ತೋರಿದ ಛಲಗಳನ್ನು ಸ್ಮರಿಸುವುದು ಕರ್ತವ್ಯವಾಗಿರುತ್ತದೆ.

