ದಾವಣಗೆರೆ ಜುಲೈ 9;– ಸಂಗೀತದಲ್ಲಿ ಅನೇಕ ಪ್ರಕಾರಗಳಿದ್ದು ಜಾನಪದ ಸಂಗೀತದಿಂದ ಹಿಡಿದು ಶಾಸ್ತ್ರೀಯ ಸಂಗೀತದ ವರೆಗೆ ವೈವಿಧ್ಯವಾದ ರೂಪವನ್ನು ತಾಳಿದೆ. ವಿಶ್ವದ ಪ್ರತಿಯೊಂದು ಜೀವರಾಶಿಗೂ ಅದಮ್ಯ ಚೇತನ ನೀಡುವ ಶಕ್ತಿ ಸಂಗೀತಕ್ಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ . ವಾಮದೇವಪ್ಪ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು. ಸಂಗೀತವನ್ನು ಮುಖ್ಯವಾಗಿ ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತವೆಂದು ವಿಭಾಗ ಮಾಡಿ ನೋಡಲಾಗುತ್ತಿದೆ .ಸಂಗೀತ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ನೀಡಿರುವ ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಶ್ರೀಮತಿ ಲತಾ ಮಂಗೇಶ್ಕರ್, ಭೀಮಸೇನ್ ಜೋಶಿ ಯವರಂತಹ ಹಾಗೂ ಶ್ರೀಮತಿ ಗಂಗೂಬಾಯ್ ಹಾನಗಲ್ ರವರನ್ನು ಈ ಸಂದರ್ಭದಲ್ಲಿ ಸ್ಮರಿಸಲೇ ಬೇಕು ಎಂದು ಹೇಳಿದರು.
ಶ್ರೀಯುತರು ದಾವಣಗೆರೆ ನಗರದ ಕುವೆಂಪು ಕನ್ನಡ ಭವನದಲ್ಲಿ ಅದಮ್ಯ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಏರ್ಪಡಿಸಿದ್ದ “ವಿಶ್ವ ಸಂಗೀತ ದಿನಾಚರಣೆ ಜೂನ್ 21″ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಂಗೀತವು ಯಾವುದೇ ಪ್ರದೇಶ ,ಭಾಷೆಗೂ ಮೀರಿ ತನ್ನ ಛಾಪನ್ನು ಮೂಡಿಸುವ ಶಕ್ತಿ ಇದೆ ಎಂಬುದಾಗಿ ತಿಳಿಸಿದರು .ಈ ನಿಟ್ಟಿನಲ್ಲಿ ದಾವಣಗೆರೆ ನಗರದಲ್ಲಿ ಅನೇಕ ಸಾಂಸ್ಕೃತಿಕ ಸಂಸ್ಥೆಗಳು ಸಂಗೀತದ ಅಭಿರುಚಿಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇಂತಹ ಕಾರ್ಯವನ್ನು ಅದಮ್ಯ ಕಲಾ ಸಂಸ್ಥೆಯು ಕೂಡ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾದದು ಎಂದು ಬಿ ವಾಮದೇವಪ್ಪ ತಿಳಿಸಿದರು. ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಬೆಂಗಳೂರಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಸದಸ್ಯರು ಆದ ಶ್ರೀ ವಿದ್ವಾನ್ ದ್ವಾರಕೀಶ್ ಎಂ ಅವರು ತಮ್ಮ ಸಂಗೀತವು ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ತುಂಬಾ ಪ್ರಭಾವ ಬೀರುತ್ತದೆ. ವಿಶ್ವ ಸಂಗೀತ ದಿನಾಚರಣೆ 1982 ರಲ್ಲಿ ಫ್ರಾನ್ ಸರ್ಕಾರದ ಸಚಿವರು ಪ್ರಥಮವಾಗಿ ಆರಂಭಿಸಿದರು ಇದು ಇಂದು ವಿಶ್ವದಾದ್ಯಂತ ಆಚರಿಸಲ್ಪಡುತ್ತಿದೆ. ಇದರಿಂದ ಸಂಗೀತಕ್ಕೆ ತನ್ನದೇ ಆದ ಮಹತ್ವ ಇದೆ ಎಂದು ತಿಳಿಸಿ ಸಂಗೀತದಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಉಲ್ಲಾಸ ನೆಮ್ಮದಿ ,ಏಕಾಗ್ರತೆ ಹಾಗೂ ಶ್ರದ್ಧೆ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಸ್ವಾರಸ್ಯಕರವಾದ ಉಪನ್ಯಾಸವನ್ನು ಶ್ರೀ ವಿದ್ವಾನ್ ದ್ವಾರಕೀಶ್ ನೀಡಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅದಮ್ಯ ಕಲಾ ಸಂಸ್ಥೆಯ ಕಾರ್ಯದರ್ಶಿಗಳಾದ ಗೌಡ್ರ ಚನಬಸಪ್ಪ ಅವರು ವಹಿಸಿದ್ದರು. ವೇದಿಕೆ ಮೇಲೆ ಅದಮ್ಯ ಕಲಾ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಗೀತಾ ಮಾಲತೇಶ್, ಮುಖ್ಯ ಅತಿಥಿಗಳಾದ ವೀರೇಶ್ವರ ಪುಣ್ಯಾಶ್ರಮದ ಸಹಕಾರ್ಯದರ್ಶಿಯಾದ ಜಾಲಿಮರದ ಕರಿಬಸಪ್ಪ, ಹಿರಿಯ ಸಾಹಿತಿಯಾದ ಬಾಮ ಬಸವರಾಜಯ್ಯ, ವಿಶ್ವನಾಥ್ ಮುದ್ದಜ್ಜಿ ಜಿಲ್ಲಾ ಕನ್ನಡ ಸಾಹಿತ್ಯ, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ, ಬಿ , ದಿಳ್ಳಪ್ಪ, ರೇವಣಸಿದ್ದಪ್ಪ ಅಂಗಡಿ ಅವರುಗಳು ಉಪಸ್ಥಿತರಿದ್ದರು.
ನಂತರ ವೈವಿಧ್ಯಮಮಯವಾದ ಸಂಗೀತ ಕಾರ್ಯಕ್ರಮಗಳು ಕಲಾ ರಸಿಕರನ್ನು ತಲೆದೂಗಿಸುವಂತೆ ಮಾಡಿದವು .
ವಿದುಷಿ ಶ್ರೀಮತಿ ಗೀತಾ ಮಹಾಂತೇಶ್ ರವರು ಪ್ರಾಸ್ತಾವಿಕ ನುಡಿಗಳನ್ನಾ ಡಿದರು . ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಡಾ. ಆಶಾ ಭಾನುಪ್ರಕಾಶ್ ಅವರು ನೆರವೇರಿಸಿದರು. ಅಂತ್ಯದಲ್ಲಿ ರಕ್ಷಿತಾ ಅವರು ಸರ್ವರಿಗೂ ವಂದಿಸಿದರು.